ಮಹಾರಾಣಿ ಟ್ರೋಫಿ ಟಿ20 ಟೂರ್ನಿಯ ಫೈನಲ್‌ನಲ್ಲಿ ಮೈಸೂರು ವಾರಿಯರ್ಸ್ ಹಾಗೂ ಹುಬ್ಬಳ್ಳಿ ಟೈಗರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಸೆಮಿಫೈನಲ್‌ನಲ್ಲಿ ಮೈಸೂರು ಶಿವಮೊಗ್ಗವನ್ನು ಮತ್ತು ಹುಬ್ಬಳ್ಳಿ ಮಂಗಳೂರು ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿವೆ.
ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಆಯೋಜಿಸುತ್ತಿರುವ ಚೊಚ್ಚಲ ಆವೃತ್ತಿಯ ಮಹಾರಾಣಿ ಟ್ರೋಫಿ ಟಿ20 ಟೂರ್ನಿಯ ಫೈನಲ್ ಹಣಾಹಣಿಗೆ ವೇದಿಕೆ ಸಜ್ಜುಗೊಂಡಿದೆ. ಮೈಸೂರು ವಾರಿಯರ್ಸ್ ಹಾಗೂ ಹುಬ್ಬಳ್ಳಿ ಟೈಗರ್ಸ್ ಫೈನಲ್‌ಗೇರಿದ್ದು, ಭಾನುವಾರ ಪ್ರಶಸ್ತಿಗಾಗಿ ಪರಸ್ಪರ ಸೆಣಸಾಡಲಿವೆ.
ಶನಿವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಶಿವಮೊಗ್ಗ ಲಯನ್ಸ್ ವಿರುದ್ಧ ಮೈಸೂರು 6 ವಿಕೆಟ್‌ಗಳಲ್ಲಿ ಜಯಗಳಿಸಿತು. ಮೊದಲು ಬ್ಯಾಟ್ ಮಾಡಿದ ಶಿವಮೊಗ್ಗ 9 ವಿಕೆಟ್‌ಗೆ 107 ರನ್ ಕಲೆಹಾಕಿತು. ಸೌಮ್ಯ ವರ್ಮಾ 31, ಅದ್ವಿಕ್ ಗೌಡ 18 ರನ್ ಗಳಿಸಿದರು. ವಂದಿತಾ ರಾವ್, ಪೂಜಾ ಕುಮಾರಿ, ಅಹ್ಲಮ್ ಸೈಯದ್ ತಲಾ 2 ವಿಕೆಟ್ ಕಿತ್ತರು.
ಸುಲಭ ಗುರಿ ಬೆನ್ನತ್ತಿದ ಮೈಸೂರಿಗೆ ರಚಿತಾ ಹತ್ವಾರ್, ಶಿಶಿರಾ ಗೌಡ ಆಸರೆಯಾದರು. ರಚಿತಾ 36, ಶಿಶಿರಾ ಔಟಾಗದೆ 29 ರನ್ ಗಳಿಸಿ ತಂಡವನ್ನು 19.3 ಓವರ್‌ಗಳಲ್ಲಿ ಗೆಲುವಿನ ದಡ ಸೇರಿಸಿದರು.
ಮಂಗಳೂರಿಗೆ ಸೋಲು: 2ನೇ ಸೆಮಿಫೈನಲ್‌ನಲ್ಲಿ ಮಂಗಳೂರು ವಿರುದ್ಧ ಹುಬ್ಬಳ್ಳಿ 51 ರನ್ ಗೆಲುವು ಸಾಧಿಸಿತು. ಹುಬ್ಬಳ್ಳಿ ಮೊದಲು ಬ್ಯಾಟ್ ಮಾಡಿ 5 ವಿಕೆಟ್‌ಗೆ 142 ರನ್ ಸೇರಿಸಿತು. ತೇಜಸ್ವಿನಿ 24 ಎಸೆತಕ್ಕೆ ಔಟಾಗದೆ 47, ಶ್ರೇಯಾ 26 ರನ್ ಗಳಿಸಿದರು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಮಂಗಳೂರು 9 ವಿಕೆಟ್‌ಗೆ 91 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಪ್ರಿಯಾ 3, ರಾಮೇಶ್ವರಿ, ತೇಜಸ್ವಿನಿ ತಲಾ 2 ವಿಕೆಟ್ ಕಿತ್ತರು.
ಚಿನ್ನಸ್ವಾಮಿ ಬದಲು ಆಲೂರಿನಲ್ಲೇ ಪಂದ್ಯ
ಲೀಗ್ ಹಂತದ ಎಲ್ಲಾ ಪಂದ್ಯಗಳು ನಗರದ ಹೊರವಲಯದ ಆಲೂರಿನಲ್ಲಿ ನಡೆದಿವೆ. ಆದರೆ ಫೈನಲ್ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿಗದಿಯಾಗಿತ್ತು. ಪೊಲೀಸ್ ಇಲಾಖೆ ಅನುಮತಿ ನೀಡದ ಕಾರಣ ಫೈನಲ್ ಪಂದ್ಯ ಕೂಡಾ ಆಲೂರಿನಲ್ಲೇ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಪಂದ್ಯ ಆರಂಭಗೊಳ್ಳಲಿದೆ.
‘ತಂಡದಿಂದ ಬಿಡುಗಡೆ ಮಾಡಿ’: ಚೆನ್ನೈ ತಂಡಕ್ಕೆ ಆರ್.ಅಶ್ವಿನ್ ಗುಡ್‌ಬೈ?
ಚೆನ್ನೈ: ಹಿರಿಯ ಸ್ಪಿನ್ನರ್ ಆರ್.ಅಶ್ವಿನ್ ಮುಂಬರುವ ಐಪಿಎಲ್‌ಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ತೊರೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಸಿಎಸ್‌ಕೆ ಫ್ರಾಂಚೈಸಿಯಲ್ಲಿ ಅಶ್ವಿನ್‌ಗೆ ತಮ್ಮ ಭವಿಷ್ಯದ ಬಗ್ಗೆ ಆತಂಕವಿದೆ. ಇದೇ ಕಾರಣಕ್ಕೆ ಫ್ರಾಂಚೈಸಿ ಜೊತೆ ಅಶ್ವಿನ್ ಮಾತುಕತೆಯಲ್ಲಿ ತೊಡಗಿಸಿಕೊಂಡಿದ್ದು, ತಮ್ಮನ್ನು ತಂಡದಿಂದ ಬಿಡುಗಡೆಗೊಳಿಸುವಂತೆ ಕೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ. ಕಳೆದ ಬಾರಿ ಅವರು ಚೆನ್ನೈ ಪರ 9 ಪಂದ್ಯಗಳನ್ನಾಗಿದ್ದು, ಕೇವಲ 7 ವಿಕೆಟ್ ಪಡೆದಿದ್ದರು. ಹೀಗಾಗಿ ಈ ವರ್ಷ ಅವರಿಗೆ ತಂಡದಲ್ಲಿ ಸೂಕ್ತ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
2009ರಿಂದ 2015ರ ವರೆಗೂ ಚೆನ್ನೈ ಪರ ಆಡಿದ್ದ ಅಶ್ವಿನ್, ಬಳಿಕ ವಿವಿಧ ತಂಡಗಳನ್ನು ಪ್ರತಿನಿಧಿಸಿದ್ದರು. ಕಳೆದ ಆವೃತ್ತಿ ಐಪಿಎಲ್‌ಗೂ ಮುನ್ನ ಅಶ್ವಿನ್‌ರನ್ನು ಚೆನ್ನೈ ತಂಡ 9.75 ಕೋಟಿ ರು. ನೀಡಿ ಮರಳಿ ತಂಡಕ್ಕೆ ಸೇರಿಸಿಕೊಂಡಿತ್ತು.
ಟಿ20: ಭಾರತ ಮಹಿಳಾ ‘ಎ’ಗೆ 114 ರನ್ ಸೋಲು
ಮಕಾಯ್(ಆಸ್ಟ್ರೇಲಿಯಾ): ಆಸ್ಟ್ರೇಲಿಯಾ ‘ಎ’ ವಿರುದ್ಧ 2ನೇ ಟಿ20 ಪಂದ್ಯದಲ್ಲಿ ಭಾರತ ‘ಎ’ ತಂಡ 114 ರನ್‌ಗಳ ಹೀನಾಯ ಸೋಲು ಕಂಡಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯನ್ನು ಆಸೀಸ್ 2-0 ಅಂತರದಲ್ಲಿ ಗೆದ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಆಸೀಸ್ 4 ವಿಕೆಟ್‌ಗೆ 187 ರನ್ ಕಲೆಹಾಕಿತು. ನಾಯಕಿ ಅಲೀಸಾ ಹೀಲಿ 44 ಎಸೆತಕ್ಕೆ 70 ರನ್ ಸಿಡಿಸಿದರು. ದೊಡ್ಡ ಗುರಿ ಬೆನ್ನತ್ತಿದ ರಾದಾ ಯಾದವ್ ನಾಯಕತ್ವದ ಭಾರತ 15.1 ಓವರ್‌ಗಳಲ್ಲಿ 73 ರನ್‌ಗೆ ಆಲೌಟಾಯಿತು. ಕಿಮ್ ಗಾರ್ಥ್ 7 ರನ್‌ಗೆ 4 ವಿಕೆಟ್ ಪಡೆದರು. 3ನೇ ಪಂದ್ಯ ಭಾನುವಾರ ನಡೆಯಲಿದೆ.
