ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ತಂಡದಿಂದ ಹೊರಬಂದು ಸಿಎಸ್‌ಕೆಗೆ ಸೇರಲಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ. ಋತುರಾಜ್ ಮತ್ತು ಜಡೇಜಾ ಅವರನ್ನು ಕೇಳುತ್ತಿರುವ ರಾಜಸ್ಥಾನ ತಂಡ.  

ಬೆಂಗಳೂರು: ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ತಂಡದಿಂದ ಹೊರಬಂದು ಸಿಎಸ್‌ಕೆಗೆ ಸೇರಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಮಿನಿ ಐಪಿಎಲ್ ಹರಾಜಿನ ಮೊದಲು, ಸಂಜು ಸ್ಯಾಮ್ಸನ್ ರಾಜಸ್ಥಾನ ರಾಯಲ್ಸ್ ತಂಡದ ಆಡಳಿತ ಮಂಡಳಿಗೆ ತಮ್ಮನ್ನು ತಂಡದಿಂದ ಬಿಡುಗಡೆ ಮಾಡಲು ಅಥವಾ ಮಿನಿ ಹರಾಜಿನಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಿ ಎಂದು ಕೇಳಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಆದರೆ ರಾಜಸ್ಥಾನ ತಂಡವು ಸಂಜು ಸ್ಯಾಮ್ಸನ್ ಅವರನ್ನು ಬಿಡಲು ನಿರಾಕರಿಸಿದೆ ಎಂದು ವರದಿಯಾಗಿದೆ.

ಋತುರಾಜ್ ಮತ್ತು ಜಡೇಜಾ ಅವರನ್ನು ಕೇಳುತ್ತಿರುವ ರಾಜಸ್ಥಾನ ತಂಡ

ಈ ಮಧ್ಯೆ, ಐಪಿಎಲ್‌ನಲ್ಲಿ ಸಂಜು ಸ್ಯಾಮ್ಸನ್‌ರನ್ನು ವಿನಿಮಯ ಮಾಡಿಕೊಳ್ಳಲು ಚೆನ್ನೈ ಸೂಪರ್ ಕಿಂಗ್ಸ್‌ನ ಇಬ್ಬರು ಪ್ರಮುಖ ಆಟಗಾರರನ್ನು ರಾಜಸ್ಥಾನ್ ರಾಯಲ್ಸ್ ಕೇಳಿದೆ ಎಂದು ವರದಿಯಾಗಿದೆ. ಅಂದರೆ, ಸಿಎಸ್‌ಕೆ ನಾಯಕ ಋತುರಾಜ್ ಗಾಯಕ್ವಾಡ್ ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜಾ ಅವರನ್ನು ನೀಡಿದರೆ ಮಾತ್ರ ಸಂಜು ಸ್ಯಾಮ್ಸನ್‌ರನ್ನು ನಿಮಗೆ ನೀಡುತ್ತೇವೆ ಎಂದು ರಾಜಸ್ಥಾನ ಆಡಳಿತವು ಚೆನ್ನೈ ತಂಡಕ್ಕೆ ತಿಳಿಸಿದೆ ಎಂದು ವರದಿಯಾಗಿದೆ.

ರಾಜಸ್ಥಾನ ಮಾಲೀಕರು ವಿಧಿಸಿದ ಷರತ್ತು

ಸಂಜು ಸ್ಯಾಮ್ಸನ್‌ರನ್ನು ಖರೀದಿಸಲು ಬಯಸುವ ತಂಡಗಳು ಯಾವ ಆಟಗಾರರನ್ನು ನೀಡಬೇಕೆಂದು ರಾಜಸ್ಥಾನ ತಂಡದ ಸಹ-ಮಾಲೀಕ ಸಂಜಯ್ ಬಡಾಲೆ ತಿಳಿಸಿದ್ದಾರೆ. ಸಿಎಸ್‌ಕೆಯ ಋತುರಾಜ್ ಮತ್ತು ಜಡೇಜಾ ಜೊತೆಗೆ ಆಲ್‌ರೌಂಡರ್ ಶಿವಂ ದುಬೆಯನ್ನೂ ರಾಜಸ್ಥಾನ ತಂಡ ಕೇಳಿದೆ ಎಂದು ವರದಿಗಳು ತಿಳಿಸಿವೆ. ಶಿವಂ ದುಬೆ ಈ ಹಿಂದೆ ರಾಜಸ್ಥಾನ ತಂಡಕ್ಕೆ ಆಡಿದ್ದರು ಎಂಬುದು ಗಮನಾರ್ಹ. ರಾಜಸ್ಥಾನ ರಾಯಲ್ಸ್ ತಂಡದ ಈ ಆಫರ್ ಕೇಳಿ ಚೆನ್ನೈ ಸೂಪರ್ ಕಿಂಗ್ಸ್ ಕಂಗಾಲಾಗಿದೆ ಎಂದು ವರದಿಯಾಗಿದೆ. ಹೀಗಾಗಿ ಸಿಎಸ್‌ಕೆ ಫ್ರಾಂಚೈಸಿಯು ಸಂಜು ಸ್ಯಾಮ್ಸನ್ ಅವರನ್ನು ಮಿನಿ ಹರಾಜಿಗೂ ಮುನ್ನ ಟ್ರೇಡಿಂಗ್ ಮಾಡಿಕೊಳ್ಳುವ ಆಸೆಯನ್ನೇ ಕೈಬಿಟ್ಟಿದೆ ಎಂದು ವರದಿಯಾಗಿದೆ

ರಾಜಸ್ಥಾನ ತಂಡದ ಬೆನ್ನೆಲುಬು ಸಂಜು ಸ್ಯಾಮ್ಸನ್

ಆದರೆ, ಜಡೇಜಾ ಮತ್ತು ನಾಯಕ ಋತುರಾಜ್ ಅವರನ್ನು ಬಿಟ್ಟುಕೊಟ್ಟು ಸಂಜು ಸ್ಯಾಮ್ಸನ್‌ರನ್ನು ಖರೀದಿಸಲು ಚೆನ್ನೈ ತಂಡ ಮುಂದೆ ಬರುವುದಿಲ್ಲ ಎಂದು ತೋರುತ್ತಿದೆ. ರಾಜಸ್ಥಾನ ಪರ 149 ಪಂದ್ಯಗಳನ್ನು ಆಡಿರುವ ಸಂಜು ಸ್ಯಾಮ್ಸನ್ ತಂಡದ ಪರ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಎರಡು ಶತಕಗಳು, 23 ಅರ್ಧಶತಕಗಳು ಸೇರಿದಂತೆ ಸಂಜು ಬರೋಬ್ಬರಿ 4,027 ರನ್ ಗಳಿಸಿದ್ದಾರೆ. ಕಳೆದ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಸಂಜು ಸ್ಯಾಮ್ಸನ್ ಅವರನ್ನು ರೂ.18 ಕೋಟಿಗೆ ರಾಜಸ್ಥಾನ ತಂಡ ರೀಟೈನ್ ಮಾಡಿಕೊಂಡಿತ್ತು.

ಸಂಜು ಸ್ಯಾಮ್ಸನ್ ಹೊರಡಲು ಕಾರಣವೇನು?

ಭಾರತ ತಂಡಕ್ಕಾಗಿ ಟಿ20 ಪಂದ್ಯಗಳಲ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವ ಸಂಜು ಸ್ಯಾಮ್ಸನ್ ರಾಜಸ್ಥಾನ ತಂಡಕ್ಕಾಗಿಯೂ ಆರಂಭಿಕ ಆಟಗಾರನಾಗಿಯೇ ಆಡುತ್ತಿದ್ದರು. ಆದರೆ, ಕಳೆದ ಋತುವಿನಲ್ಲಿ ಅವರಿಗೆ ಗಾಯವಾದಾಗ, ಯಶಸ್ವಿ ಜೈಸ್ವಾಲ್ ಜೊತೆಗೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ 14 ವರ್ಷದ ವೈಭವ್ ಸೂರ್ಯವಂಶಿ ಅದ್ಭುತವಾಗಿ ಆಡಿದ್ದರಿಂದ ಸಂಜು ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇತ್ತು. ಇದಲ್ಲದೆ, ಕಳೆದ ಋತುವಿನಲ್ಲಿ ರಾಜಸ್ಥಾನ ತಂಡದ ನಾಯಕರಾಗಿದ್ದ ಸಂಜು ಬದಲಿಗೆ ರಿಯಾನ್ ಪರಾಗ್ ಅವರನ್ನು ನಾಯಕರನ್ನಾಗಿ ನೇಮಿಸಿದ್ದು ಕೂಡ ಅವರು ತಂಡದಿಂದ ಹೊರಡಲು ಕಾರಣವಾಗಿರಬಹುದು ಎನ್ನಲಾಗಿದೆ.

ಇನ್ನೊಂದು ವರದಿಯ ಪ್ರಕಾರ, ರಾಜಸ್ಥಾನ ರಾಯಲ್ಸ್ ತಂಡದ ನಂಬಿಗಸ್ಥ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದ ಸಂಜು ಸ್ಯಾಮ್ಸನ್ ಆತ್ಮೀಯ ಗೆಳೆಯ ಜೋಸ್ ಬಟ್ಲರ್ ಅವರನ್ನು ತಂಡದಿಂದ ಕೈಬಿಟ್ಟಿದ್ದು ಕೇರಳ ಮೂಲದ ವಿಕೆಟ್ ಕೀಪರ್ ಬ್ಯಾಟರ್ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ. ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡವು ಕೇವಲ 4 ಪಂದ್ಯಗಳನ್ನು ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ 9ನೇ ಸ್ಥಾನ ಪಡೆದು ನಿರಾಸೆ ಅನುಭವಿಸಿತ್ತು.