ಕ್ಯಾನ್‌ಬೆರಾದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟಿ20 ಪಂದ್ಯವು ಮಳೆಯಿಂದಾಗಿ ರದ್ದಾಯಿತು. ಪಂದ್ಯ ರದ್ದಾಗುವ ಮುನ್ನ, ನಾಯಕ ಸೂರ್ಯಕುಮಾರ್ ಯಾದವ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 150 ಸಿಕ್ಸರ್‌ಗಳನ್ನು ಪೂರೈಸಿದ ವಿಶ್ವದ ಐದನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಕ್ಯಾನ್‌ಬೆರಾ(ಆಸ್ಟ್ರೇಲಿಯಾ): ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಬುಧವಾರ ನಡೆಯಬೇಕಿದ್ದ ಮೊದಲ ಟಿ20 ಪಂದ್ಯ ಮಳೆಗೆ ಬಲಿಯಾಗಿದೆ. ಇದರೊಂದಿಗೆ ಏಕದಿನ ಸರಣಿ ಬಳಿಕ 5 ಪಂದ್ಯಗಳ ಟಿ20 ಸರಣಿಗೂ ಮಳೆಯಿಂದಲೇ ಆರಂಭ ಸಿಕ್ಕಂತಾಗಿದೆ. ಮಳೆಯ ಹೊರತಾಗಿಯೂ ನಾಯಕ ಸೂರ್ಯಕುಮಾರ್ ಯಾದವ್ ಅಪರೂಪದ ದಾಖಲೆ ಬರೆದಿದ್ದಾರೆ.
ಅಂ.ರಾ. ಟಿ20ಯಲ್ಲಿ 150+ ಸಿಕ್ಸರ್: ಸೂರ್ಯ ವಿಶ್ವದ ಐದನೇ ಆಟಗಾರ
ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 150 ಸಿಕ್ಸರ್ ಗಳನ್ನು ಪೂರೈಸಿದ್ದು, ಈ ಸಾಧನೆ ಮಾಡಿದ ವಿಶ್ವದ 5ನೇ, ಭಾರತದ 2ನೇ ಬ್ಯಾಟರ್ ಎನಿಸಿಕೊಂಡರು. 205 ಸಿಕ್ಸರ್ ಬಾರಿಸಿರುವ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಅಂ.ರಾ. ಟಿ20ಯಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಟಾಪ್ 5 ಬ್ಯಾಟರ್ಸ್
1. ರೋಹಿತ್ ಶರ್ಮಾ-ಭಾರತ- 159 ಮ್ಯಾಚ್- 205 ಸಿಕ್ಸರ್
2. ವಸೀಂ - ಯುಎಇ- 91 ಮ್ಯಾಚ್ - 187 ಸಿಕ್ಸರ್
3. ಮಾರ್ಟಿನ್ ಗಪ್ಟಿಲ್ - 122 ಮ್ಯಾಚ್ - 173 ಸಿಕ್ಸರ್
4. ಜೋಸ್ ಬಟ್ಲರ್ - 144 ಮ್ಯಾಚ್ - 172 ಸಿಕ್ಸರ್
5. ಸೂರ್ಯಕುಮಾರ್ ಯಾದವ್ -91 ಮ್ಯಾಚ್ - 150 ಸಿಕ್ಸರ್
ಮೊದಲ ಪಂದ್ಯ ಮಳೆಯಿಂದ ರದ್ದು
ಇನ್ನು ಪಂದ್ಯದ ಬಗ್ಗೆ ಹೇಳುವುದಾದರೇ, ಟಾಸ್ ಗೆದ್ದ ಆಸೀಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ನಿಗದಿತ ಸಮಯಕ್ಕೇ ಪಂದ್ಯ ಆರಂಭಗೊಂಡಿತು. ಅಭಿಷೇಕ್ ಶರ್ಮಾ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ಆದರೆ 14 ಎಸೆತಕ್ಕೆ 19 ರನ್ ಗಳಿಸಿದ್ದ ಅಭಿಷೇಕ್ ಇನ್ನಿಂಗ್ಸ್‌ನ 4ನೇ ಓವರ್‌ನಲ್ಲಿ ನೇಥನ್ ಎಲ್ಲಿಸ್ ಬೌಲಿಂಗ್‌ನಲ್ಲಿ ಟಿಮ್ ಡೇವಿಡ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಭಾರತ 5 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 43 ರನ್ ಗಳಿಸಿದ್ದಾಗ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಹೀಗಾಗಿ ಪಂದ್ಯ ಸ್ಥಗಿತಗೊಂಡಿತು.
ಓವರ್ ಕಡಿತ: 45 ನಿಮಿಷಗಳ ನಿಮಿಷಗಳ ಬಳಿಕ ಅಂದರೆ ಭಾರತೀಯ ಕಾಲಮಾನ 3 ಗಂಟೆಗೆ ಪಂದ್ಯ ಪುನಾರಂಭಗೊಂಡಿತು. ಪಂದ್ಯವನ್ನು ತಲಾ 18 ಓವರ್‌ಗೆ ಇಳಿಸಲಾಯಿತು. ಪವರ್‌ಪ್ಲೇ ಓವರ್ 6ರಿಂದ 5.2ಗೆ ಕಡಿತಗೊಳಿಸಲಾಯಿತು. ಆಟ ಪುನಾರಂಭ ಬಳಿಕ ಭಾರತ ಸ್ಫೋಟಕ ಆಟವಾಡಿತು. ಶುಭ್ಮನ್ ಗಿಲ್ ಹಾಗೂ ನಾಯಕ ಸೂರ್ಯಕುಮಾರ್ ಯಾದವ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. 8 ಓವರ್‌ಗೆ 70 ರನ್ ಗಳಿಸಿದ್ದ ಭಾರತ ಮುಂದಿನ 10 ಎಸೆತಗಳಲ್ಲಿ 27 ರನ್ ದೋಚಿತು.
ಮತ್ತೆ ಮಳೆ: ಆದರೆ ಭಾರತ 9.4 ಓವರ್‌ಗಳಲ್ಲಿ 1 ವಿಕೆಟ್ ಗೆ 97 ರನ್ ಗಳಿಸಿದ್ದಾಗ ಪಂದ್ಯಕ್ಕೆ ಮತ್ತೆ ಮಳೆ ಅಡ್ಡಿಯಾಯಿತು. ಭಾರತೀಯ ಕಾಲಮಾನ ಮಧ್ಯಾಹ್ನ 3.20ಕ್ಕೆ ಆರಂಭಗೊಂಡ ಮಳೆ 1 ಗಂಟೆಗಳ ಕಾಲ ಸುರಿಯಿತು. ಆ ಬಳಿಕ ಪಂದ್ಯ ನಡೆಸಲು ಸಾಧ್ಯವಾಗದ ಕಾರಣ ಸಂಜೆ 4.30ರ ವೇಳೆಗೆ ಮಳೆಗೆ ಪಂದ್ಯ ರದ್ದುಗೊಳಿಸಲಾಯಿತು. ಗಿಲ್ 20 ಎಸೆತಗಳಲ್ಲಿ ಔಟಾಗದೆ 37, ಸೂರ್ಯಕುಮಾರ್24 ಎಸೆತಕ್ಕೆ ಔಟಾಗದೆ 39 ರನ್ ಸಿಡಿಸಿದರು.
