ದಕ್ಷಿಣ ಆಫ್ರಿಕಾ ಎ ವಿರುದ್ಧದ ಮೊದಲ ಚತುರ್ದಿನ ಟೆಸ್ಟ್‌ನಲ್ಲಿ ಭಾರತ ಎ ತಂಡ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ನಾಯಕ ರಿಷಭ್ ಪಂತ್ ಅವರ 90 ರನ್‌ಗಳ ಹೋರಾಟದ ನಂತರ, ಬಾಲಂಗೋಚಿಗಳಾದ ಅಂಶುಲ್ ಕಂಬೋಜ್ ಮತ್ತು ಮಾನವ್ ಸುತಾರ್ ಅವರ ಅಜೇಯ ಜೊತೆಯಾಟದಿಂದ ಭಾರತಕ್ಕೆ ಗೆಲುವು ದಕ್ಕಿತು.
ಬೆಂಗಳೂರು: ದಕ್ಷಿಣ ಆಫ್ರಿಕಾ ಎ ವಿರುದ್ಧದ ಮೊದಲ ಚತುರ್ದಿನ ಟೆಸ್ಟ್‌ನಲ್ಲಿ ಭಾರತ ಎ ತಂಡ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. 275 ರನ್‌ಗಳ ಗುರಿ ಬೆನ್ನತ್ತಿದ ಭಾರತ ಎ ಪರ ನಾಯಕ ರಿಷಭ್ ಪಂತ್ 90 ರನ್ ಗಳಿಸಿ ಹೋರಾಡಿದರೂ, ಗೆಲುವಿಗೆ 103 ರನ್ ಬಾಕಿ ಇರುವಾಗ ಔಟಾದರು. ಆದರೆ, ಬಾಲಂಗೋಚಿಗಳಾದ ಅಂಶುಲ್ ಕಂಬೋಜ್ (37*), ಮಾನವ್ ಸುತಾರ್ (20*) ಮತ್ತು ತನುಷ್ ಕೋಟ್ಯಾನ್ (23) ಅವರ ಹೋರಾಟದಿಂದ ಭಾರತಕ್ಕೆ ಸ್ಮರಣೀಯ ಜಯ ದಕ್ಕಿತು.
90 ರನ್ ಗಳಿಸಿದ ರಿಷಭ್ ಪಂತ್ ಜೊತೆಗೆ ಆಯುಷ್ ಬದೋನಿ 34 ರನ್ ಗಳಿಸಿ ತಂಡಕ್ಕೆ ನೆರವಾದರು. ಈ ಗೆಲುವಿನೊಂದಿಗೆ ಎರಡು ಪಂದ್ಯಗಳ ಸರಣಿಯಲ್ಲಿ ಭಾರತ ಎ 1-0 ಮುನ್ನಡೆ ಸಾಧಿಸಿದೆ. ಸರಣಿಯ ಎರಡನೇ ಪಂದ್ಯ ಗುರುವಾರ ಆರಂಭವಾಗಲಿದೆ. ಪಂದ್ಯದಲ್ಲಿ ನಿರ್ಣಾಯಕ ರನ್ ಗಳಿಸಿ 8 ವಿಕೆಟ್ ಪಡೆದ ತನುಷ್ ಕೋಟ್ಯಾನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಶತಕದ ಹೊಸ್ತಿಲಲ್ಲಿ ಎಡವಿದ ರಿಷಭ್ ಪಂತ್
ನಾಲ್ಕನೇ ದಿನದಾಟದ ಆರಂಭದಲ್ಲಿ 119 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಭಾರತ ಎ ಪರ ನಾಯಕ ರಿಷಭ್ ಪಂತ್ 90 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಆಯುಷ್ ಬದೋನಿ ಜೊತೆ 53 ರನ್‌ಗಳ ಜೊತೆಯಾಟವಾಡಿ ಭಾರತಕ್ಕೆ ಗೆಲುವಿನ ಭರವಸೆ ಮೂಡಿಸಿದರು. ಆದರೆ, ತಂಡದ ಮೊತ್ತ 172 ಆಗಿದ್ದಾಗ ಪಂತ್ ಔಟಾಗಿದ್ದು, ತಂಡಕ್ಕೆ ದೊಡ್ಡ ಹೊಡೆತ ನೀಡಿತು. 113 ಎಸೆತಗಳಲ್ಲಿ 11 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳೊಂದಿಗೆ 90 ರನ್ ಗಳಿಸಿದ್ದ ಪಂತ್ ಅವರನ್ನು ಟಿಯಾನ್ ವ್ಯಾನ್ ವೂರೆನ್ ಔಟ್ ಮಾಡಿದರು. ಇದರ ಬೆನ್ನಲ್ಲೇ 34 ರನ್ ಗಳಿಸಿದ್ದ ಆಯುಷ್ ಬದೋನಿ ಅವರನ್ನೂ ವೂರೆನ್ ಪೆವಿಲಿಯನ್‌ಗೆ ಕಳುಹಿಸಿದ್ದರಿಂದ ಭಾರತ ಸಂಕಷ್ಟಕ್ಕೆ ಸಿಲುಕಿತು.
ಗೆಲುವಿನ ರೂವಾರಿಗಳಾದ ಬಾಲಂಗೋಚಿಗಳು
ತನುಷ್ ಕೋಟ್ಯಾನ್ 23 ರನ್ ಗಳಿಸಿ ಭಾರತವನ್ನು ಗೆಲುವಿನ ಸನಿಹಕ್ಕೆ ತಂದರಾದರೂ, ಗೆಲುವಿಗೆ 60 ರನ್ ಬಾಕಿ ಇರುವಾಗ ಸಿಂಪಾಲ ಅವರ ಎಸೆತದಲ್ಲಿ ಔಟಾದರು. ಆದರೆ, ಎಂಟನೇ ವಿಕೆಟ್‌ಗೆ ಜೊತೆಯಾದ ಅಂಶುಲ್ ಕಂಬೋಜ್ ಮತ್ತು ಮಾನವ್ ಸುತಾರ್ 62 ರನ್‌ಗಳ ಮುರಿಯದ ಜೊತೆಯಾಟವಾಡಿ ಭಾರತವನ್ನು ಗೆಲುವಿನ ದಡ ಸೇರಿಸಿದರು. 46 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ ಅಂಶುಲ್ ಕಂಬೋಜ್ 37 ರನ್ ಗಳಿಸಿ ಅಜೇಯರಾಗಿ ಉಳಿದರು. ಮಾನವ್ ಸುತಾರ್ 56 ಎಸೆತಗಳಲ್ಲಿ 20 ರನ್ ಗಳಿಸಿ ಅಜೇಯರಾಗುಳಿದರು. ಸಾಯಿ ಸುದರ್ಶನ್ (12), ದೇವದತ್ ಪಡಿಕ್ಕಲ್ (5), ಆಯುಷ್ ಮಾತ್ರೆ (6), ರಜತ್ ಪಾಟಿದಾರ್ (28) ಅವರ ವಿಕೆಟ್‌ಗಳನ್ನು ಭಾರತ ಮೂರನೇ ದಿನವೇ ಕಳೆದುಕೊಂಡಿತ್ತು. 275 ರನ್‌ಗಳ ಗುರಿ ಬೆನ್ನತ್ತಿದ ಭಾರತ 'ಎ' ತಂಡವು ಒಂದು ಹಂತದಲ್ಲಿ 32-3 ಸ್ಕೋರ್‌ನೊಂದಿಗೆ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ರಜತ್ ಪಾಟಿದಾರ್ (28) ಮತ್ತು ರಿಷಭ್ ಪಂತ್ 87 ರನ್‌ಗಳ ಜೊತೆಯಾಟವಾಡಿ ತಂಡವನ್ನು ಮೇಲೆತ್ತಿದ್ದರು. ದಕ್ಷಿಣ ಆಫ್ರಿಕಾ ಎ ಪರ ಶೆಪ್ಪೊ ಮೊರೆಕಿ ಎರಡು ಮತ್ತು ಟಿಯಾನ್ ವ್ಯಾನ್ ವೂರೆನ್ ಮೂರು ವಿಕೆಟ್ ಪಡೆದರು.
ಸ್ಕೋರ್: ದಕ್ಷಿಣ ಆಫ್ರಿಕಾ ಎ 309 ಮತ್ತು 199, ಭಾರತ ಎ 234 ಮತ್ತು 277/7.
