ಮಹಿಳಾ ವಿಶ್ವಕಪ್‌ನಲ್ಲಿ ಹರ್ಮನ್‌ಪ್ರೀತ್ ವಿಶ್ವದಾಖಲೆ ನಡುವೆ ಭಾರತಕ್ಕೆ ಸೋಲು, ಪಂದ್ಯ ಕೈತಪ್ಪಿದ್ದೆಲ್ಲಿ? ಗೆಲುವಿನ ಹಾದಿಯಲ್ಲಿದ್ದ ಭಾರತ ಮಹಿಳಾ ತಂಡ ಕೊನೆಯ ಹಂತದಲ್ಲಿ ಕೇವಲ 4 ರನ್‌ಗಳಿಂದ ಸೋಲು ಕಂಡಿದ್ದು ಹೇಗೆ?

ಇಂದೋರ್ (ಅ.19) ಆಸ್ಟ್ರೇಲಿಯಾ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಮುಗ್ಗರಿಸಿದ್ದರೆ, ಇತ್ತ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಜ್ ವಿರುದ್ದ ಭಾರತ ಮಹಿಳಾ ತಂಡ ಸೋಲು ಕಂಡಿದೆ. ಇಂಗ್ಲೆಂಡ್ ನೀಡಿದ 289 ರನ್ ಟಾರ್ಗೆಟ್ ಚೇಸ್ ಮಾಡಿದ ಭಾರತ ತಂಡಕ್ಕೆ ಸ್ಮೃತಿ ಮಂಧನಾ ಹಾಗೂ ಹರ್ಮನ್‌ಪ್ರೀತ್ ಕೌರ್ ಉತ್ತಮ ಹೋರಾಟ ನೀಡಿದರು. ದೀಪ್ತಿ ಶರ್ಮಾ, ಹರ್ಲೀನ್ ಡಿಯೋಲ್ ಹೋರಾಟ ಸಾಕಾಗಲಿಲ್ಲ. ಗೆಲುವಿನ ಹಾದಿಯಲ್ಲಿ ಸಾಗುತ್ತಿದ್ದ ಭಾರತ ದಿಢೀರ್ ಯೂಟರ್ನ್ ಪಡೆದು ಸೋಲೋಪ್ಪಿಕೊಂಡಿತು.

ಭಾರತಕ್ಕೆ 289 ರನ್ ಟಾರ್ಗೆಟ್

ಭಾರತಕ್ಕೆ 289 ರನ್ ಬೃಹತ್ ಟಾರ್ಗೆಟ್ ನೀಡಲಾಗಿತ್ತು. ಚೇಸಿಂಗ್ ವೇಳೆ ಆರಂಭದಲ್ಲಿ ಭಾರತ ಮಹಿಳಾ ತಂಡ ಆಘಾತ ಅನುಭವಿಸಿತ್ತು. ಕಾರಣ ಪ್ರತಿಕಾ ರಾವಲ್ ಕೇವಲ 6 ರನ್ ಸಿಡಿಸಿ ನಿರ್ಗಮಿಸಿದ್ದರು. ಉತ್ತಮ ಆರಂಭ ನಿರೀಕ್ಷಿಸಿದ್ದ ಭಾರತಕ್ಕೆ ಹಿನ್ನಡೆಯಾಗಿತ್ತು. ಆದರೆ ಸ್ಮೃತಿ ಮಂಧನಾ ಹಾಗೂ ಹರ್ಲಿನ್ ಡಿಯೋಲ್ ಜೊತೆಯಾಟದಿಂದ ಭಾರತ ಮತ್ತೆ ಹೋರಾಟ ಮುಂದುವರಿಸಿತು. ಡಿಯೋಲ್ 24 ರನ್ ಸಿಡಿಸಿ ಔಟಾದರು.

ಸ್ಮೃತಿ-ಹರ್ಮನ್‌ಪ್ರೀತ್ ಕೌರ್ ಅಬ್ಬರ

ಆರಂಭಿಕ 2 ವಿಕೆಟ್ ಪತನದ ಬಳಿಕ ಸ್ಮೃತಿ ಮಂಧನಾ ಹಾಗೂ ನಾಯಕಿ ಹರ್ಮನ್ ಪ್ರೀತ್ ಕೌರ್ ಜೊತೆಯಾಟ ಆರಂಭಗೊಂಡಿತು. ಇವರಿಬ್ಬರ ಬ್ಯಾಟಿಂಗ್ ಪಂದ್ಯದ ಗತಿ ಬದಲಿಸಿತು. ಎಚ್ಚರಿಕೆಯ ಬ್ಯಾಟಿಂಗ್ ಜೊತೆಗೆ ಅಬ್ಬರವೂ ಆರಂಭಗೊಂಡಿತು. ಹೀಗಾಗಿ ಭಾರತ ಮಹಿಳಾ ತಂಡ ಬೃಹತ್ ಟಾರ್ಗೆಟ್ ಚೇಸಿಂಗ್ ಸ್ಪರ್ಧಿ ತೀವ್ರಗೊಂಡಿತು. ಸ್ಮೃತಿ ಹಾಗೂ ಹರ್ಮನ್‌ಪ್ರೀತ್ ಇಬ್ಬರು ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಹಾಫ್ ಸೆಂಚುರಿ ಬಳಿಕ ರನ್ ವೇಗ ಪಡೆದುಕೊಂಡಿತು. ಈ ವೇಳೆ ಹರ್ಮನ್‌ಪ್ರೀತ್ ಕೌರ್ 70 ರನ್ ಸಿಡಿಸಿ ಔಟಾದರು. ಇತ್ತ ಸ್ಮೃತಿ ಮಂಧನಾ ಬ್ಯಾಟಿಂಗ್ ಮುಂದುವರಿಸಿದರು. ಮಂಧನಾ 88 ರನ್ ಸಿಡಿಸಿ ಔಟಾದರು.

ಹರ್ಮನ್‌ಪ್ರೀತಿ ವಿಶ್ವದಾಖಲೆ

ಅದ್ಭುತ ಹೋರಾಟ ನೀಡಿದ ಹರ್ಮನ್‌ಪ್ರೀತ್ ಕೌರ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ 1,000 ರನ್ ಪೂರೈಸಿದ ಮೊದಲ ಹಾಗೂ ಏಕೈಕ ಆಟಗಾರ್ತಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಂಗ್ಲೆಂಡ್‌ನ ನ್ಯಾಟ್ ಸೀವಿಯರ್ ಬ್ರಂಟ್ 996 ರನ್ ಸಿಡಿಸಿ ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ರನ್ ದಾಖಲೆಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಇನ್ನು ಭಾರತದ ಮಿಥಾಲಿ ರಾಜ್ 709 ರನ್ ಸಿಡಿಸುವ ಮೂಲಕ 3ನೇ ಸ್ಥಾನದಲ್ಲಿದ್ದಾರೆ.

ದೀಪ್ತಿ ಶರ್ಮಾ ಹಾಗೂ ರಿಚಾ ಘೋಷ್ ಜೊತೆಯಾಟ

ಮಹತ್ವದ ಘಟ್ಟದಲ್ಲಿ ಸ್ಮೃತಿ ಮಂಧನಾ ಹಾಗೂ ಹರ್ಮನ್‌ಪ್ರೀತ್ ವಿಕೆಟ್ ಕಳೆದುಕೊಂಡಿತ್ತು. ಹೀಗಾಗಿ ಸಂಕಷ್ಟದ ಸಂದರ್ಭದಲ್ಲಿ ದೀಪ್ತಿ ಶರ್ಮಾ ಹಾಗೂ ರಿಚಾ ಘೋಷ್ ಜೊತೆಯಾಟ ಮತ್ತೆ ಹೋರಾಟ ತೀವ್ರಗೊಳಿಸಿತು. ಆದರೆ ರಿಚಾ ಘೋಷ್ ಕೇವಲ 8 ರನ್ ಸಿಡಿಸಿ ಔಟಾದರು. ಇತ್ತ ದೀಪ್ತಿ ಶರ್ಮಾ ಹಾಫ್ ಸೆಂಚುರಿ ಸಿಡಿಸಿದರು.ಆದರೆ ಮರುಕ್ಷಣದಲ್ಲಿ ದೀಪ್ತಿ ಶರ್ಮಾ ವಿಕೆಟ್ ಪತನಗೊಂಡಿತು.

ಸಂಕಷ್ಟಕ್ಕೆ ಸಿಲುಕಿದ ಭಾರತ

6 ವಿಕೆಟ್ ಪತನದಿಂದ ಭಾರತ ಸಂಕಷ್ಟಕ್ಕೆ ಸಿಲುಕಿತು. ಗೆಲುವಿನತ್ತ ಸಾಗುತ್ತಿದ್ದ ಮಹಿಳಾ ತಂಡ ಯೂಟರ್ನ್ ಪಡೆದುಕೊಂಡಿತು. ಭಾರತ 6 ವಿಕೆಟ್ ಕಳೆದುಕೊಂಡು 284 ರನ್ ಸಿಡಿಸಿತು. ಇದರೊಂದಿಗೆ ಇಂಗ್ಲೆಂಡ್ 4 ರನ್ ಸೋಲು ಕಂಡಿತು.