ಏಷ್ಯಾಕಪ್‌ನಲ್ಲಿ ಶುಭ್‌ಮನ್ ಗಿಲ್ ಅವರನ್ನು ಉಪನಾಯಕರನ್ನಾಗಿ ನೇಮಿಸಿರುವುದು ಅಚ್ಚರಿ ಮೂಡಿಸಿದೆ. ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್, ಗಿಲ್ ಆಯ್ಕೆಯ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಗಿಲ್ ಭವಿಷ್ಯದಲ್ಲಿ ಮೂರು ಮಾದರಿಯ ತಂಡದ ನಾಯಕರಾಗುವ ಸಾಧ್ಯತೆ ಇದೆಯೇ?

ಮುಂಬೈ: ಏಷ್ಯಾಕಪ್‌ನ 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದಾಗ, ಶುಭ್‌ಮನ್ ಗಿಲ್ ತಂಡಕ್ಕೆ ಮರಳಿದ್ದು ಅಚ್ಚರಿ ಮೂಡಿಸಿತು. ಕಳೆದ ವರ್ಷ ನಡೆದ ಟಿ20 ವಿಶ್ವಕಪ್ ನಂತರ, ಜುಲೈನಲ್ಲಿ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಶುಭ್‌ಮನ್ ಗಿಲ್ ಕೊನೆಯದಾಗಿ ಭಾರತಕ್ಕಾಗಿ ಆಡಿದ್ದರು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಾಲ್ಕು ಶತಕ ಸೇರಿದಂತೆ 754 ರನ್ ಗಳಿಸಿದ್ದ ಗಿಲ್‌ರನ್ನು ಟೆಸ್ಟ್ ಸರಣಿಯ ಪ್ರದರ್ಶನದ ಆಧಾರದ ಮೇಲೆ ಏಷ್ಯಾಕಪ್ ಟಿ20 ತಂಡಕ್ಕೆ ಆಯ್ಕೆ ಮಾಡಿದ್ದಕ್ಕೆ ಟೀಕೆ ವ್ಯಕ್ತವಾಗಿತ್ತು. ಇದೀಗ ಟೀಂ ಇಂಡಿಯಾ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್, ಗಿಲ್‌ ಅವರಿಗೆ ಉಪನಾಯಕ ಪಟ್ಟ ಕಟ್ಟಿದ್ದೇಕೆ ಎನ್ನುವ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

ಶುಭ್‌ಮನ್ ಗಿಲ್‌ರನ್ನು ಏಷ್ಯಾಕಪ್ ತಂಡಕ್ಕೆ ಆಯ್ಕೆ ಮಾಡಿದ್ದಲ್ಲದೆ ಉಪನಾಯಕರನ್ನಾಗಿಯೂ ನೇಮಿಸಲಾಗಿದೆ. ಮೂರು ಮಾದರಿಯಲ್ಲೂ ಒಬ್ಬ ನಾಯಕನೆಂಬ ಬಿಸಿಸಿಐ ನೀತಿಯ ಭಾಗವಾಗಿ ಗಿಲ್‌ರನ್ನು ಟಿ20 ತಂಡದ ಉಪನಾಯಕರನ್ನಾಗಿ ನೇಮಿಸಲಾಗಿದೆ. ಪ್ರಸ್ತುತ ಟೆಸ್ಟ್‌ನಲ್ಲಿ ಗಿಲ್, ಏಕದಿನದಲ್ಲಿ ರೋಹಿತ್ ಶರ್ಮಾ ಮತ್ತು ಟಿ20ಯಲ್ಲಿ ಸೂರ್ಯಕುಮಾರ್ ಯಾದವ್ ಭಾರತದ ನಾಯಕರಾಗಿದ್ದಾರೆ. ಮೂರು ಮಾದರಿಯಲ್ಲೂ ವಿಭಿನ್ನ ನಾಯಕರಿರುವುದು ಸಂವಹನವನ್ನು ಕಷ್ಟಕರವಾಗಿಸುತ್ತದೆ ಎಂದು ಕೋಚ್ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

2024ರ ಜುಲೈನಲ್ಲಿ ಶ್ರೀಲಂಕಾ ವಿರುದ್ಧದ ಕೊನೆಯ ಟಿ20 ಸರಣಿಯಲ್ಲಿ ಗಿಲ್ ಉಪನಾಯಕರಾಗಿದ್ದರು. ನಂತರ ಟಿ20 ತಂಡದಿಂದ ಹೊರಬಿದ್ದಿದ್ದ ಗಿಲ್, ಈ ಬಾರಿಯ ಐಪಿಎಲ್‌ನಲ್ಲಿ 15 ಪಂದ್ಯಗಳಲ್ಲಿ 650 ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದರು. ಈ ವರ್ಷದ ಜನವರಿಯಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅಕ್ಷರ್ ಪಟೇಲ್ ಅವರನ್ನು ಆಯ್ಕೆಗಾರರು ಉಪನಾಯಕರನ್ನಾಗಿ ನೇಮಿಸಿದ್ದರು. ಆದರೆ ಏಷ್ಯಾಕಪ್ ತಂಡವನ್ನು ಪ್ರಕಟಿಸಿದಾಗ, ಅಕ್ಷರ್ 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆದರೂ ಉಪನಾಯಕ ಸ್ಥಾನವನ್ನು ಗಿಲ್‌ಗೆ ಬಿಟ್ಟುಕೊಡಬೇಕಾಯಿತು. ಶುಭ್‌ಮನ್ ಗಿಲ್‌ರನ್ನು ಉಪನಾಯಕರನ್ನಾಗಿ ಏಕೆ ನೇಮಿಸಲಾಗಿದೆ ಎಂಬ ಪ್ರಶ್ನೆಗೆ ನಾಯಕ ಸೂರ್ಯಕುಮಾರ್ ಯಾದವ್ ಸುದ್ದಿಗೋಷ್ಠಿಯಲ್ಲಿ ಉತ್ತರಿಸಿದರು.

Scroll to load tweet…

ಕಳೆದ ವರ್ಷದ ಟಿ20 ವಿಶ್ವಕಪ್ ನಂತರ ಶ್ರೀಲಂಕಾ ವಿರುದ್ಧ ಭಾರತ ಟಿ20 ಸರಣಿ ಆಡಿದಾಗ ಗಿಲ್ ಉಪನಾಯಕರಾಗಿದ್ದರು ಎಂದು ಸೂರ್ಯಕುಮಾರ್ ಯಾದವ್ ಹೇಳಿದರು. ಮುಂದಿನ ಟಿ20 ವಿಶ್ವಕಪ್‌ಗೆ ತಂಡವನ್ನು ಸಜ್ಜುಗೊಳಿಸುವುದು ಅಲ್ಲಿಂದಲೇ ಆರಂಭವಾಗಿತ್ತು. ಅದರ ನಂತರ ಗಿಲ್ ಟೆಸ್ಟ್ ಸರಣಿಗಳು ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿ ನಿರತರಾಗಿದ್ದರಿಂದ ಭಾರತಕ್ಕಾಗಿ ಟಿ20 ಪಂದ್ಯಗಳನ್ನು ಆಡಲು ಅವಕಾಶ ಸಿಕ್ಕಿರಲಿಲ್ಲ. ಆದರೆ ಗಿಲ್ ಈಗ ತಂಡಕ್ಕೆ ಮರಳಿರುವುದು ಸಂತಸ ತಂದಿದೆ ಎಂದು ಸೂರ್ಯಕುಮಾರ್ ಹೇಳಿದ್ದಾರೆ.

ಭವಿಷ್ಯದಲ್ಲಿ 3 ಮಾದರಿಯ ತಂಡಕ್ಕೂ ಶುಭ್‌ಮನ್ ಗಿಲ್‌ ನಾಯಕ?

25 ವರ್ಷದ ಶುಭ್‌ಮನ್‌ ಗಿಲ್‌ ಮೇಲಿನ ವಿಶ್ವಾಸವನ್ನು ಬಿಸಿಸಿಐ ಮತ್ತಷ್ಟು ಹೆಚ್ಚಿಸಿದ್ದು, ಭವಿಷ್ಯದಲ್ಲಿ ಮೂರೂ ಮಾದರಿ ತಂಡಕ್ಕೂ ಅವರನ್ನೇ ನಾಯಕನಾಗಿ ನೇಮಿಸುವ ಸಾಧ್ಯತೆಯಿದೆ. ಇತ್ತೀಚೆಗೆ ಇಂಗ್ಲೆಂಡ್‌ ಟೆಸ್ಟ್‌ ಸರಣಿಯಲ್ಲಿ ತಮ್ಮ ಚೊಚ್ಚಲ ನಾಯಕತ್ವದಲ್ಲೇ ಗಿಲ್‌ ಮಿಂಚಿದ್ದರು. ಹೀಗಾಗಿ ಟೆಸ್ಟ್‌ನಲ್ಲಿ ಅವರ ನಾಯಕತ್ವ ಸ್ಥಾನ ಭದ್ರ. ಇನ್ನು ಏಕದಿನದಲ್ಲಿ ರೋಹಿತ್‌, ಟಿ20ಗೆ ಸೂರ್ಯಕುಮಾರ್‌ ನಾಯಕರಾಗಿದ್ದಾರೆ. ರೋಹಿತ್ 2027ರ ಏಕದಿನ ವಿಶ್ವಕಪ್‌ನಲ್ಲಿ ಆಡುವುದು ಅನುಮಾನ ಎನಿಸಿದ್ದು, ವರ್ಷಾಂತ್ಯಕ್ಕೆ ನಿವೃತ್ತಿ ಘೋಷಿಸುವ ಸಾಧ್ಯತೆಯಿದೆ. ಅತ್ತ ಸೂರ್ಯಗೆ ಈಗ 34 ವರ್ಷ. ತುಂಬಾ ವರ್ಷ ಆಡುವ ಸಾಧ್ಯತೆಯಿಲ್ಲ. ಈ ಎರಡೂ ಮಾದರಿಯಲ್ಲಿ ಉಪನಾಯಕರಾಗಿರುವ ಗಿಲ್‌, ಮುಂದೆ ನಾಯಕರಾಗಿ ನೇಮಕಗೊಳ್ಳಲಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.