2025ರ ಏಷ್ಯಾಕಪ್ ಸೂಪರ್-4 ಪಂದ್ಯಕ್ಕೂ ಮುನ್ನ, ಬಾಂಗ್ಲಾದೇಶದ ಕೋಚ್ ಫಿಲ್ ಸಿಮನ್ಸ್, ಭಾರತವನ್ನು ಸೋಲಿಸುವುದು ಕಷ್ಟವಲ್ಲ ಎಂದು ಹೇಳುವ ಮೂಲಕ ಮೈಂಡ್ ಗೇಮ್ ಆರಂಭಿಸಿದ್ದಾರೆ. ಭಾರತದ ದೌರ್ಬಲ್ಯಗಳನ್ನು ಬಳಸಿಕೊಂಡು ಪಂದ್ಯ ಗೆಲ್ಲಲು ಪ್ರಯತ್ನಿಸುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದುಬೈ: 2025ರ ಏಷ್ಯಾಕಪ್ ಟೂರ್ನಿಯ ಸೂಪರ್-4 ಹಂತ ದಿನದಿಂದ ರೋಚಕತೆ ಹೆಚ್ಚಿಸುತ್ತಿದ್ದು, ಫೈನಲ್ ಪ್ರವೇಶಿಸುವ ತಂಡಗಳು ಯಾವುವು ಎನ್ನುವ ಕುತೂಹಲ ಜೋರಾಗಿದೆ. ಇಂದು ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಹಾಲಿ ಚಾಂಪಿಯನ್ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿವೆ. ಇನ್ನು ಈ ಮ್ಯಾಚ್ ಆರಂಭಕ್ಕೂ ಮೊದಲೇ ಬಾಂಗ್ಲಾದೇಶ ತಂಡದ ಹೆಡ್‌ಕೋಚ್ ಫಿಲ್ ಸಿಮನ್ಸ್ ಆಡಿದ ಆತ್ಮವಿಶ್ವಾಸದ ಮಾತುಗಳು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿವೆ.
ಭಾರತ ಎದುರಿನ ಮ್ಯಾಚ್‌ಗೂ ಮೊದಲೇ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿ ಮಾತನಾಡಿದ ಸಿಮನ್ಸ್, ಸದ್ಯದ ಸಂದರ್ಭದಲ್ಲಿ ಭಾರತ ತಂಡವನ್ನು ಸೋಲಿಸುವುದು ಅಷ್ಟೇನೂ ಕಷ್ಟದ ಕೆಲಸವಲ್ಲ ಎಂದು ಹೇಳಿದ್ದಾರೆ. ಅವರಾಡಿದ ಈ ಮಾತುಗಳು ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿವೆ.
ಯಾವುದೇ ತಂಡ ಬೇಕಿದ್ದರೂ ಭಾರತವನ್ನು ಸೋಲಿಸಬಹುದು
ಟೀಂ ಇಂಡಿಯಾದಂತಹ ಬಲಿಷ್ಠ ತಂಡದ ಎದುರು ಕಣಕ್ಕಿಳಿಯುವ ಮುನ್ನ ಮೈಂಡ್ ಗೇಮ್ ಆರಂಭಿಸಿರುವ ಬಾಂಗ್ಲಾದೇಶ ಹೆಡ್‌ಕೋಚ್ ಸಿಮನ್ಸ್, 'ಯಾವುದೇ ತಂಡ ಬೇಕಿದ್ದರೂ ಭಾರತವನ್ನು ಸೋಲಿಸಬಹುದು. ಭಾರತ ಹಿಂದೆ ಏನು ಮಾಡಿದೆ, ಮುಂದೇ ಏನು ಮಾಡಲಿದೆ ಎನ್ನುವುದು ಮುಖ್ಯವಲ್ಲ. ಪಂದ್ಯ ನಡೆಯುವ ಮೂರ್ನಾಲ್ಕು ಗಂಟೆ ಏನು ನಡೆಯಲಿದೆ ಎನ್ನುವುದು ಮುಖ್ಯವಾಗುತ್ತದೆ. ನಾವು ಭಾರತವನ್ನು ಸೋಲಿಸಲು ಸಂಪೂರ್ಣ ಪ್ರಯತ್ನ ಮಾಡಲಿದ್ದೇವೆ. ಭಾರತದ ವೀಕ್ನೆಸ್ ಬಳಸಿಕೊಂಡು ಪಂದ್ಯ ಗೆಲ್ಲಲು ಪ್ರಯತ್ನಿಸುತ್ತೇವೆ. ಇದೇ ನಮಗೆ ಪಂದ್ಯ ಗೆಲ್ಲಲು ದಾರಿ ಎನಿಸಲಿದೆ. ಭಾರತ ವಿಶ್ವದ ನಂ.1 ಟಿ20 ತಂಡವಾಗಿರುವುದರಿಂದ ಇಡೀ ಜಗತ್ತು ಈ ಮ್ಯಾಚ್ ನೋಡುತ್ತಿರುತ್ತದೆ. ನಾವು ಈ ಮ್ಯಾಚ್ ಎಂಜಾಯ್ ಮಾಡುತ್ತೇವೆ ಎಂದು ಫಿಲ್ ಸಿಮನ್ಸ್ ಹೇಳಿದ್ದಾರೆ.
ಈ ವಿಚಾರದಲ್ಲಿ ಬೇಸರ ವ್ಯಕ್ತಪಡಿಸಿದ ಬಾಂಗ್ಲಾದೇಶ ಕೋಚ್
ಬಾಂಗ್ಲಾದೇಶ ಕ್ರಿಕೆಟ್ ತಂಡವು ಸೂಪರ್-4 ಹಂತದ ಪಂದ್ಯದಲ್ಲಿಂದು ಬಲಿಷ್ಠ ಭಾರತ ತಂಡವನ್ನು ಎದುರಿಸಲಿದೆ. ಇದಾದ ಮರು ದಿನವೆ ಅಂದರೆ ಸೆಪ್ಟೆಂಬರ್ 25ರಂದು ಪಾಕಿಸ್ತಾನ ವಿರುದ್ದ ಕಣಕ್ಕಿಳಿಯಲಿದೆ. ಈ ರೀತಿಯ ಟೈಟ್ ವೇಳಾಪಟ್ಟಿಯ ಬಗ್ಗೆ ಬಾಂಗ್ಲಾದೇಶ ಕೋಚ್ ಸಿಮನ್ಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸತತ ಎರಡು ದಿನ ಎರಡು ಏಕದಿನ ಅಥವಾ ಟಿ20 ಪಂದ್ಯವನ್ನಾಡುವುದು ಸುಲಭವಲ್ಲ. ಈ ರೀತಿ ವೇಳಾಪಟ್ಟಿ ಸರಿಯಲ್ಲ. ಆದರೆ ನಾವು ಈ ಸವಾಲಿಗೆ ರೆಡಿಯಾಗಿದ್ದೇವೆ. ನಾವು ಸಾಕಷ್ಟು ಕಷ್ಟಪಟ್ಟು ಟ್ರೈನಿಂಗ್ ಮಾಡಿದ್ದೇವೆ. ನಮ್ಮ ಆಟಗಾರರು ಎಷ್ಟು ಫಿಟ್ ಆಗಿದ್ದಾರೆ ಎಂದರೆ, ಎರಡು ದಿನದಲ್ಲಿ ಎರಡು ಮ್ಯಾಚ್ ಆಡಲು ರೆಡಿಯಿದ್ದಾರೆ. ಆದರೆ ಇದು ಯಾವುದೇ ತಂಡಕ್ಕೂ ಸುಲಭವಂತೂ ಅಲ್ಲ ಎಂದು ಹೇಳಿದ್ದಾರೆ.
ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಈಗಾಗಲೇ ಏಷ್ಯಾಕಪ್ ಟೂರ್ನಿಯ ಸೂಪರ್-4 ಹಂತದಲ್ಲಿ ತಲಾ ಒಂದೊಂದು ಪಂದ್ಯವನ್ನು ಜಯಿಸಿವೆ. ಇನ್ನೊಂದು ಪಂದ್ಯ ಗೆದ್ದರೇ ಫೈನಲ್ ಹಾದಿ ಸುಗಮವಾಗಲಿದೆ. ಹೀಗಾಗಿ ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಬಾಂಗ್ಲಾದೇಶ ತಂಡವು ಸೂಪರ್-4 ಹಂತದಲ್ಲಿ ಶ್ರೀಲಂಕಾ ವಿರುದ್ದ ಗೆಲುವು ಸಾಧಿಸಿದರೆ, ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ, ಪಾಕಿಸ್ತಾನ ಎದುರು 6 ವಿಕೆಟ್ ಅಂತರದ ಸುಲಭ ಗೆಲುವು ದಾಖಲಿಸಿದೆ. ಸದ್ಯದ ಉಭಯ ತಂಡಗಳ ಪ್ರದರ್ಶನ ಗಮನಿಸಿದರೆ, ಇಂದು ಭಾರತ ಮ್ಯಾಚ್ ಗೆಲ್ಲುವ ಫೇವರೇಟ್ ತಂಡವಾಗಿ ಗುರುತಿಸಿಕೊಂಡಿದೆ.
ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಪಂದ್ಯವು ಭಾರತೀಯ ಕಾಲಮಾನ ಇಂದು ಸಂಜೆ 8 ಗಂಟೆಗೆ ಆರಂಭವಾಗಲಿದೆ. ಈ ಪಂದ್ಯವು ಸೋನಿ ಸ್ಪೋರ್ಟ್ಸ್, ಸೋನಿ ಲಿವ್ ಹಾಗೂ ಫ್ಯಾನ್ ಕೋಡ್ ಮತ್ತು ಡಿಡಿ ಸ್ಪೋರ್ಟ್ಸ್‌ನಲ್ಲಿ ಪ್ರಸಾರವಾಗಲಿದೆ