ಭಾರತದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನದ ಸೋಲಿಗೆ ಪ್ರಮುಖವಾಗಿ ಕಾರಣರಾದ ಐದು ಆಟಗಾರರ ಬಗ್ಗೆ ಈ ಲೇಖನ ಚರ್ಚಿಸುತ್ತದೆ. ಸ್ಯಾಮ್ ಅಯೂಬ್, ಮೊಹಮ್ಮದ್ ಹ್ಯಾರಿಸ್, ಫಖರ್ ಜಮಾನ್, ಸಲ್ಮಾನ್ ಅಲಿ ಆಘಾ ಮತ್ತು ಮೊಹಮ್ಮದ್ ನವಾಜ್ ಅವರ ಕಳಪೆ ಪ್ರದರ್ಶನ ಪಾಕ್ ತಂಡದ ಮೇಲೆ ಹೇಗೆ ಪರಿಣಾಮ ಬೀರಿತು ನೋಡಿ

ದುಬೈ: ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಸೋಲಿಸಿ ಏಷ್ಯಾಕಪ್ 2025 ರಲ್ಲಿ ತನ್ನ ಎರಡನೇ ಗೆಲುವು ದಾಖಲಿಸಿದೆ. ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಿ 128 ರನ್ ಗಳಿಸಿತು. ಭಾರತ ಈ ಗುರಿಯನ್ನು 15.5 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ಗಳ ನಷ್ಟಕ್ಕೆ ತಲುಪಿತು. ಪಾಕಿಸ್ತಾನದ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ದುರ್ಬಲವಾಗಿತ್ತು. ಇದೀಗ ಪಾಕಿಸ್ತಾನ ತಾನೇ ತೋಡಿದ ಖೆಡ್ಡಾಗೆ ಬಿದ್ದಂತಾಗಿದೆ. ಪಾಕ್ ಪಾಲಿಗೆ ವಿಲನ್ ಆದ ಅವರದ್ದೇ ದೇಶದ ಟಾಪ್ 5 ಆಟಗಾರರು ಯಾರು ಎನ್ನುವುದನ್ನು ನೋಡೋಣ ಬನ್ನಿ

ಸ್ಯಾಮ್ ಅಯೂಬ್ ಮತ್ತೆ ಶೂನ್ಯ

ಭಾರತದ ವಿರುದ್ಧದ ಪಂದ್ಯಕ್ಕೂ ಮುನ್ನ ಈ ಆರಂಭಿಕ ಬ್ಯಾಟ್ಸ್‌ಮನ್ ಬಗ್ಗೆ ಜೋರಾದ ಚರ್ಚೆ ನಡೆಯುತ್ತಿತ್ತು. ಆದರೆ, ಹಾರ್ದಿಕ್ ಪಾಂಡ್ಯ ಅವರನ್ನು ಮೊದಲ ಓವರ್‌ನ ಮೊದಲ ಎಸೆತದಲ್ಲೇ ಔಟ್ ಮಾಡಿದರು. ಓಮನ್ ವಿರುದ್ಧವೂ ಅಯೂಬ್ ಶೂನ್ಯಕ್ಕೆ ಔಟಾಗಿದ್ದರು. ಇದು ಪಾಕ್‌ಗೆ ದೊಡ್ಡ ಹಿನ್ನಡೆಯನ್ನುಂಟು ಮಾಡಿತು. ಆಯೂಬ್ ಉತ್ತಮ ಆರಂಭ ಒದಗಿಸಿಕೊಟ್ಟಿದ್ದರೇ, ಪಾಕ್ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ಅನುಕೂಲವಾಗುತ್ತಿತ್ತು.

ಮೊಹಮ್ಮದ್ ಹ್ಯಾರಿಸ್ - ಓಮನ್ ವಿರುದ್ಧ ಹೀರೋ, ಭಾರತದ ವಿರುದ್ಧ ಝೀರೋ

ಓಮನ್ ವಿರುದ್ಧ 66 ರನ್ ಗಳಿಸಿದ್ದ ಮೊಹಮ್ಮದ್ ಹ್ಯಾರಿಸ್ ಭಾರತದ ವಿರುದ್ಧ ಕೇವಲ 3 ರನ್ ಗಳಿಸಿ ಬುಮ್ರಾ ಅವರ ಎಸೆತದಲ್ಲಿ, ಹಾರ್ದಿಕ್ ಪಾಂಡ್ಯಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇದು ಪಾಕ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು.

ಫಖರ್ ಜಮಾನ್ - ಪಾಕ್ ಮಧ್ಯಮ ಕ್ರಮಾಂಕವನ್ನು ದುರ್ಬಲಗೊಳಿಸಿದರು

ಪಾಕಿಸ್ತಾನದ ಅನುಭವಿ ಬ್ಯಾಟರ್ ಫಖರ್ ಜಮಾನ್ ಕೇವಲ 17 ರನ್ ಗಳಿಸಿ ಅಕ್ಷರ್ ಪಟೇಲ್‌ಗೆ ವಿಕೆಟ್ ಒಪ್ಪಿಸಿದರು. ನಿರ್ಣಾಯಕ ಘಟ್ಟದಲ್ಲಿ ಫಖರ್ ಜವಾಬ್ದಾರಿಯುತ ಆಟವಾಡದೇ ಹೋದದ್ದು ಪಾಕ್‌ಗೆ ಹಿನ್ನಡೆಯನ್ನುಂಟು ಮಾಡಿತು.

ಸಲ್ಮಾನ್ ಅಲಿ ಆಘಾ - ನಾಯಕನಾಗಿ ಫೇಲ್

ಪಾಕಿಸ್ತಾನದ ನಾಯಕ ಸಲ್ಮಾನ್ ಅಲಿ ಆಘಾ ಕೇವಲ 3 ರನ್ ಗಳಿಸಿದರು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದು ತಪ್ಪು ನಿರ್ಧಾರ ಎಂದು ಸಾಬೀತಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಬ್ಯಾಟರ್‌ ಆಗಿ ಹಾಗೂ ನಾಯಕನಾಗಿ ಸಲ್ಮಾನ್ ಪಾಕ್ ಪಾಲಿಗೆ ವಿಲನ್ ಎನಿಸಿಕೊಂಡರು.

ಮೊಹಮ್ಮದ್ ನವಾಜ್ - ಬ್ಯಾಟ್ ಮತ್ತು ಚೆಂಡಿನಿಂದ ವಿಫಲ

ಆಲ್‌ರೌಂಡರ್ ಮೊಹಮ್ಮದ್ ನವಾಜ್ ಬ್ಯಾಟಿಂಗ್‌ನಲ್ಲಿ 5 ರನ್ ಮತ್ತು ಬೌಲಿಂಗ್‌ನಲ್ಲಿ 3 ಓವರ್‌ಗಳಲ್ಲಿ 27 ರನ್ ನೀಡಿದರು. ಆದರೆ ಯಾವುದೇ ವಿಕೆಟ್ ಕಬಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ನವಾಜ್ ಮತ್ತೊಮ್ಮೆ ಭಾರತದ ಎದುರು ವೈಫಲ್ಯ ಅನುಭವಿಸಿದರು.