ಏಷ್ಯಾಕಪ್‌ನಲ್ಲಿ ಭಾರತ ವಿರುದ್ಧದ ಪಂದ್ಯಗಳಲ್ಲಿ ಪಾಕಿಸ್ತಾನ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದೆ. ಹ್ಯಾರಿಸ್ ರೌಫ್, ಪಾಕ್ ವೇಗಿ, ಎರಡೂ ಪಂದ್ಯಗಳನ್ನು ಗೆಲ್ಲುವುದಾಗಿ ಹೇಳಿದ್ದಾರೆ. ಟೂರ್ನಿಯು ಸೆಪ್ಟೆಂಬರ್ 9 ರಂದು ಪ್ರಾರಂಭವಾಗಲಿದೆ.
ಕರಾಚಿ: ಏಷ್ಯಾಕಪ್ ಕ್ರಿಕೆಟ್‌ನಲ್ಲಿ ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನ ಪಾಕ್ ವೇಗಿ ಹ್ಯಾರಿಸ್ ರೌಫ್ ಎಚ್ಚರಿಕೆ ನೀಡಿದ್ದಾರೆ. ಪಾಕ್ ತಂಡದ ಅಭ್ಯಾಸದ ವೇಳೆ ಏಷ್ಯಾಕಪ್‌ನಲ್ಲಿ ಭಾರತ ವಿರುದ್ಧ ಎರಡು ಪಂದ್ಯಗಳಿವೆಯಲ್ಲ ಎಂಬ ಪ್ರಶ್ನೆಗೆ ದೇವರ ದಯೆಯಿಂದ ಎರಡನ್ನೂ ನಾವು ಗೆಲ್ಲುತ್ತೇವೆ ಎಂದು ಹ್ಯಾರಿಸ್ ರೌಫ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಸೆಪ್ಟೆಂಬರ್ 09ರಂದು ಏಷ್ಯಾಕಪ್ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ. ಇನ್ನು ಕ್ರಿಕೆಟ್ ಜಗತ್ತಿನ ಬದ್ದ ಎದುರಾಳಿಗಳೆಂದು ಬಿಂಬಿಸಲ್ಪಟ್ಟಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವು ಸೆಪ್ಟೆಂಬರ್ 14ರಂದು ನಡೆಯಲಿದೆ.
ಕಳೆದ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಭಾರತ ತಂಡವು ದಾಖಲೆಯ 8 ಬಾರಿ ಏಷ್ಯಾಕಪ್ ಟ್ರೋಫಿ ಜಯಿಸಿದ್ದು, ಇದೀಗ ಮತ್ತೊಮ್ಮೆ ಕಪ್ ಗೆಲ್ಲುವ ವಿಶ್ವಾಸದಲ್ಲಿದೆ. ಹೀಗಿರುವಾಗಲೇ ಪಾಕ್ ವೇಗಿ, ನಾವು ಭಾರತ ಎದುರು ಎರಡೂ ಪಂದ್ಯಗಳನ್ನು ಗೆಲ್ಲುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ 'ಎ' ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಇದೇ ಗುಂಪಿನಲ್ಲಿ ಪಾಕಿಸ್ತಾನ, ಓಮನ್ ಹಾಗೂ ಯುಎಇ ತಂಡಗಳು ಸ್ಥಾನ ಪಡೆದಿವೆ. ಭಾರತ ತಂಡವು ಸೆಪ್ಟೆಂಬರ್ 10ರಂದು ಯುಎಇ ವಿರುದ್ದ ಕಣಕ್ಕಿಳಿಯುವ ಮೂಲಕ ಏಷ್ಯಾಕಪ್ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ. ಗುಂಪು ಹಂತದಲ್ಲಿ ಮುಂಚೂಣಿಯಲ್ಲಿರುವ ಎರಡು ತಂಡಗಳು ಸೂಪರ್ 4 ಹಂತಕ್ಕೆ ಅರ್ಹತೆ ಪಡೆಯುತ್ತವೆ. ಭಾರತ ಮತ್ತು ಪಾಕಿಸ್ತಾನವನ್ನು ಒಳಗೊಂಡಿರುವ ಗುಂಪಿನಲ್ಲಿ ಓಮನ್ ಮತ್ತು ಯುಎಇ ಇತರ ಎರಡು ತಂಡಗಳಾಗಿರುವುದರಿಂದ ಯಾವುದೇ ಅಚ್ಚರಿಗಳು ಸಂಭವಿಸದಿದ್ದರೆ ಭಾರತ ಮತ್ತು ಪಾಕಿಸ್ತಾನ ಸೂಪರ್ 4 ಹಂತಕ್ಕೆ ಅರ್ಹತೆ ಪಡೆಯುತ್ತವೆ ಎಂದು ನಿರೀಕ್ಷಿಸಲಾಗಿದೆ. ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಹಾಂಕಾಂಗ್ ಅನ್ನು ಒಳಗೊಂಡಿರುವ 'ಬಿ' ಗುಂಪಿನಲ್ಲಿ ಮುಂಚೂಣಿಯಲ್ಲಿರುವ ಎರಡು ತಂಡಗಳು ಸೂಪರ್ 4 ಹಂತಕ್ಕೆ ಅರ್ಹತೆ ಪಡೆಯುತ್ತವೆ.
ಸೂಪರ್ 4 ಹಂತದಲ್ಲಿ ನಾಲ್ಕು ತಂಡಗಳು ಪರಸ್ಪರ ಆಡುತ್ತವೆ. ಮುಂಚೂಣಿಯಲ್ಲಿರುವ ಎರಡು ತಂಡಗಳು ಫೈನಲ್‌ಗೆ ಅರ್ಹತೆ ಪಡೆಯುತ್ತವೆ. ಪ್ರಸ್ತುತ ವೇಳಾಪಟ್ಟಿಯ ಪ್ರಕಾರ ಗುಂಪು ಹಂತ ಮತ್ತು ಸೂಪರ್ 4 ಹಂತದಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯಗಳನ್ನು ಆಡುವ ಸಾಧ್ಯತೆಯಿದೆ. ಎರಡೂ ತಂಡಗಳು ಫೈನಲ್‌ಗೆ ಅರ್ಹತೆ ಪಡೆದರೆ ಮೂರನೇ ಭಾರತ-ಪಾಕಿಸ್ತಾನ ಪಂದ್ಯಕ್ಕೂ ದಾರಿ ಮಾಡಿಕೊಡುತ್ತದೆ.
ಏಷ್ಯಾ ಕಪ್ 2025 ವೇಳಾಪಟ್ಟಿ ಗುಂಪು ಹಂತ
ಸೆಪ್ಟೆಂಬರ್ 9 (ಮಂಗಳವಾರ): ಅಫ್ಘಾನಿಸ್ತಾನ vs ಹಾಂಗ್ ಕಾಂಗ್
ಸೆಪ್ಟೆಂಬರ್ 10 (ಬುಧವಾರ): ಭಾರತ vs ಯುಎಇ
ಸೆಪ್ಟೆಂಬರ್ 11 (ಗುರುವಾರ): ಬಾಂಗ್ಲಾದೇಶ vs ಹಾಂಗ್ ಕಾಂಗ್
ಸೆಪ್ಟೆಂಬರ್ 12 (ಶುಕ್ರವಾರ): ಪಾಕಿಸ್ತಾನ vs ಓಮನ್
ಸೆಪ್ಟೆಂಬರ್ 13 (ಶನಿವಾರ): ಬಾಂಗ್ಲಾದೇಶ vs ಶ್ರೀಲಂಕಾ
ಸೆಪ್ಟೆಂಬರ್ 14 (ಭಾನುವಾರ): ಭಾರತ vs ಪಾಕಿಸ್ತಾನ
ಸೆಪ್ಟೆಂಬರ್ 15 (ಸೋಮವಾರ): ಶ್ರೀಲಂಕಾ vs ಹಾಂಗ್ ಕಾಂಗ್
ಸೆಪ್ಟೆಂಬರ್ 16 (ಮಂಗಳವಾರ): ಬಾಂಗ್ಲಾದೇಶ vs ಅಫ್ಘಾನಿಸ್ತಾನ
ಸೆಪ್ಟೆಂಬರ್ 17 (ಬುಧವಾರ): ಪಾಕಿಸ್ತಾನ vs ಯುಎಇ
ಸೆಪ್ಟೆಂಬರ್ 18 (ಗುರುವಾರ): ಶ್ರೀಲಂಕಾ vs ಅಫ್ಘಾನಿಸ್ತಾನ
ಸೆಪ್ಟೆಂಬರ್ 19 (ಶುಕ್ರವಾರ): ಭಾರತ vs ಓಮನ್
ಸೂಪರ್ 4 ಹಂತ
ಸೆಪ್ಟೆಂಬರ್ 20 (ಶನಿವಾರ): ಗುಂಪು B ಅರ್ಹತೆ 1 vs ಗುಂಪು B ಅರ್ಹತೆ 2
ಸೆಪ್ಟೆಂಬರ್ 21 (ಭಾನುವಾರ): ಗುಂಪು A ಅರ್ಹತೆ 1 vs ಗುಂಪು A ಅರ್ಹತೆ 2
ಸೆಪ್ಟೆಂಬರ್ 23 (ಮಂಗಳವಾರ): ಗುಂಪು A ಅರ್ಹತೆ 1 vs ಗುಂಪು B ಅರ್ಹತೆ 2
ಸೆಪ್ಟೆಂಬರ್ 24 (ಬುಧವಾರ): ಗುಂಪು B ಅರ್ಹತೆ 1 vs ಗುಂಪು A ಅರ್ಹತೆ 2
ಸೆಪ್ಟೆಂಬರ್ 25 (ಗುರುವಾರ): ಗುಂಪು A ಅರ್ಹತೆ 2 vs ಗುಂಪು B ಅರ್ಹತೆ 2
ಸೆಪ್ಟೆಂಬರ್ 26 (ಶುಕ್ರವಾರ): ಗುಂಪು A ಅರ್ಹತೆ 1 vs ಗುಂಪು B ಅರ್ಹತೆ 1
ಫೈನಲ್: ಸೆಪ್ಟೆಂಬರ್ 28 (ಭಾನುವಾರ)
