ಏಷ್ಯಾಕಪ್ 2025ರ ಪಂದ್ಯದಲ್ಲಿ ಮೊಹಮ್ಮದ್ ನಬಿ, ಶ್ರೀಲಂಕಾದ ದುನಿತ್ ವೆಲ್ಲಾಲಗೆಗೆ ಒಂದೇ ಓವರ್‌ನಲ್ಲಿ 5 ಸಿಕ್ಸರ್ ಸಿಡಿಸಿದರು. ಆದರೆ, ಪಂದ್ಯದ ವೇಳೆ ವೆಲ್ಲಾಲಗೆಯವರ ತಂದೆ ಹೃದಯಾಘಾತದಿಂದ ನಿಧನರಾದ ವಿಷಯ ತಿಳಿದು ನಬಿ ಆಘಾತಕ್ಕೊಳಗಾಗಿ, ನಂತರ ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ಸೂಚಿಸಿದ್ದಾರೆ.
ಅಬುಧಾಬಿ: 2025ರ ಏಷ್ಯಾಕಪ್ ಟೂರ್ನಿಯಲ್ಲಿ ರಶೀದ್ ಖಾನ್ ನೇತೃತ್ವದ ಆಫ್ಘಾನಿಸ್ತಾನ ಕ್ರಿಕೆಟ್ ತಂಡದ ಅಭಿಯಾನ ಶ್ರೀಲಂಕಾ ಎದುರು ಮುಗ್ಗರಿಸುತ್ತಿದ್ದಂತೆಯೇ ಕೊನೆಗೊಂಡಿದೆ. ಆಫ್ಘಾನ್ ಅನುಭವಿ ಆಲ್ರೌಂಡರ್ ಮೊಹಮ್ಮದ್ ನಬಿ ಶ್ರೀಲಂಕಾ ಎದುರು ಕೇವಲ 22 ಎಸೆತಗಳಲ್ಲಿ 60 ರನ್‌ಗಳ ಸ್ಪೋಟಕ ಇನ್ನಿಂಗ್ಸ್ ವ್ಯರ್ಥವಾಯಿತು.
ದುನಿತ್ ತಂದೆ ಸಾವಿನ ಸುದ್ದಿ ಕೇಳಿ ನಬಿ ಶಾಕ್
40 ವರ್ಷದ ಮೊಹಮ್ಮದ್ ನಬಿ ವಯಸ್ಸು ಎನ್ನುವುದು ಬರೀ ನಂಬರ್ ಅಷ್ಟೇ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಲಂಕಾ ಪರ 20ನೇ ಓವರ್ ಬೌಲಿಂಗ್ ಮಾಡಿದ ಯುವ ಸ್ಪಿನ್ನರ್ ದುನಿತ್ ವೆಲ್ಲಾಲಗೆ ಅವರಿಗೆ ಒಂದೇ ಓವರ್‌ನಲ್ಲಿ ಸತತ 5 ಸಿಕ್ಸರ್ ಚಚ್ಚುವ ಮೂಲಕ ನಬಿ ತಾನೆಷ್ಟು ಅಪಾಯಕಾರಿ ಬ್ಯಾಟರ್ ಎನ್ನುವುದನ್ನು ಜಗತ್ತಿನ ಮುಂದೆ ಅನಾವರಣ ಮಾಡಿದ್ದಾರೆ. ಆದರೆ ಪಂದ್ಯ ಮುಕ್ತಾಯದ ಬಳಿಕ ಕೆಲವು ರಿಪೋರ್ಟರ್ಸ್ ವೆಲ್ಲಾಲಗೆ ಅವರ ತಂದೆ ಹೃದಯಾಘಾತದಿಂದ ಕೊನೆಯುಸಿರೆಳೆದರು ಎನ್ನುವ ಸುದ್ದಿ ಕೇಳಿ ನಬಿ ಅಕ್ಷರಶಃ ತಬ್ಬಿಬ್ಬಾಗಿ ಹೋಗಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆಫ್ಘಾನಿಸ್ತಾನ ಹಾಗೂ ಶ್ರೀಲಂಕಾ ನಡುವಿನ ಪಂದ್ಯ ನಡೆಯುತ್ತಿರುವ ಸಂದರ್ಭದಲ್ಲಿಯೇ ದುನಿತ್ ವೆಲ್ಲಾಲಗೆ ಅವರ ತಂದೆ ದುನಿತ್ ಸುರಂಗ ಅವರು ಕೊನೆಯುಸಿರೆಳೆದರು ಎಂದು ವರದಿಯಾಗಿದೆ. ಆದರೆ ಈ ವಿಚಾರವನ್ನು ಯಾರೂ ಮ್ಯಾಚ್ ನಡೆಯುವ ಸಂದರ್ಭದಲ್ಲಿ ದುನಿತ್ ಅವರಿಗೆ ತಿಳಿಸಿರಲಿಲ್ಲ. ಲಂಕಾ-ಆಫ್ಘಾನ್ ಮ್ಯಾಚ್ ಮುಗಿಯುವರೆಗೂ ಈ ವಿಷಯವನ್ನು ದುನಿತ್ ವೆಲ್ಲಾಲಗೆ ಅವರಿಗೆ ತಿಳಿಸಬಾರದು ಎಂದು ಟೀಂ ಮ್ಯಾನೇಜ್‌ಮೆಂಟ್ ತೀರ್ಮಾನಿಸಿತ್ತು. ಇನ್ನು ಪಂದ್ಯ ಮುಕ್ತಾಯದ ಬಳಿಕ ಶ್ರೀಲಂಕಾ ಕೋಚ್ ಸನತ್ ಜಯಸೂರ್ಯ, ವೆಲ್ಲಾಲಗೆ ಅವರ ತಂದೆ ಸುರಂಗ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದ ಸುದ್ದಿಯನ್ನು ತಿಳಿಸಿದರು ಹಾಗೂ ವೆಲ್ಲಾಲಗೆ ಅವರಿಗೆ ಸಾಂತ್ವನವನ್ನು ಹೇಳಿದರು. ಈ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಾಂತ್ವನ ಹೇಳಿದ ನಬಿ
ಇನ್ನು ವೆಲ್ಲಾಲಗೆ ಅವರಿಗೆ ಸತತ 5 ಎಸೆತಗಳಲ್ಲಿ 5 ಸಿಕ್ಸರ್ ಚಚ್ಚಿದ್ದ ನಬಿ ಕೂಡಾ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಮೂಲಕ ಕಂಬನಿ ಮಿಡಿದಿದ್ದು, ಧೈರ್ಯ ತೆಗೆದುಕೊಳ್ಳಿ ಎಂದು ಸಾಂತ್ವನ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ನಬಿ, 'ತಮ್ಮ ಪ್ರೀತಿಯ ತಂದೆಯನ್ನು ಕಳೆದುಕೊಂಡ ದುನಿತ್ ವೆಲ್ಲಾಲಗೆ ಹಾಗೂ ಅವರ ಕುಟುಂಬಕ್ಕೆ ನನ್ನ ಹೃದಯಾಂತರಾಳದಿಂದ ಸಂತಾಪ ಸೂಚಿಸುತ್ತಿದ್ದೇನೆ. ಧೈರ್ಯ ತಂದುಕೋ ಸಹೋದರ' ಎಂದು ನಬಿ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಆಫ್ಘಾನ್ ಎದುರು ಲಂಕಾಗೆ ಸುಲಭ ಜಯ
ಇನ್ನು ಆಫ್ಘಾನಿಸ್ತಾನ ಹಾಗೂ ಶ್ರೀಲಂಕಾ ನಡುವಿನ 'ಬಿ' ಗುಂಪಿನ ಕೊನೆಯ ಮ್ಯಾಚ್ ಬಗ್ಗೆ ಹೇಳುವುದಾರೇ, ಸೂಪರ್-4 ಪ್ರವೇಶಿಸುವ ನಿಟ್ಟಿನಲ್ಲಿ ಈ ಪಂದ್ಯವು ಆಫ್ಘಾನಿಸ್ತಾನ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಆಫ್ಘಾನಿಸ್ತಾನ, ನಬಿ ಸ್ಪೋಟಕ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 169 ರನ್ ಕಲೆಹಾಕಿತು.
ಈ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡವು ಇನ್ನೂ 8 ಎಸೆತ ಬಾಕಿ ಇರುವಂತೆ ಕೇವಲ 4 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಯಿತು. ಆರಂಭಿಕ ಬ್ಯಾಟರ್ ಕುಸಾಲ್ ಮೆಂಡಿಸ್ ಕೇವಲ 52 ಎಸೆತಗಳಲ್ಲಿ 10 ಬೌಂಡರಿ ಸಹಿತ ಅಜೇಯ 74 ರನ್ ಸಿಡಿಸುವ ಮೂಲಕ ತಂಡವನ್ನು ಅನಾಯಾಸವಾಗಿ ಗೆಲುವಿನ ದಡ ಸೇರಿಸಿದರು.
ಇನ್ನು ಈ ಗೆಲುವಿನೊಂದಿಗೆ 'ಬಿ' ಗುಂಪಿನಲ್ಲಿ ಸತತ ಮೂರು ಗೆಲುವುಗಳೊಂದಿಗೆ ಅಗ್ರಸ್ಥಾನಿಯಾಗಿಯೇ ಶ್ರೀಲಂಕಾ ಸೂಪರ್ 4 ಪ್ರವೇಶಿಸಿದೆ. ಇನ್ನು ಎರಡು ಗೆಲುವ ಹಾಗೂ ಒಂದು ಸೋಲಿನೊಂದಿಗೆ ಬಾಂಗ್ಲಾದೇಶ ಎರಡನೇ ಸ್ಥಾನಿಯಾಗಿ ಸೂಪರ್ 4 ಪ್ರವೇಶಿಸಿತು. ರಶೀದ್ ಖಾನ್ ನೇತೃತ್ವದ ಆಫ್ಘಾನಿಸ್ತಾನ ಒಂದು ಗೆಲುವು ಹಾಗೂ ಎರಡು ಸೋಲುಗಳಿಂದಿಗೆ ಗ್ರೂಪ್ ಹಂತದಲ್ಲೇ ಹೊರಬಿದ್ದು ನಿರಾಸೆ ಅನುಭವಿಸಿತು.
