ಏಷ್ಯಾಕಪ್ ಫೈನಲ್‌ನಲ್ಲಿ ಭಾರತ ಪಾಕಿಸ್ತಾನವನ್ನು ಸೋಲಿಸಿತು. ತಿಲಕ್ ವರ್ಮಾ ಟಾಪ್ ಸ್ಕೋರರ್ ಆಗಿದ್ದರೂ, ಕೊನೆಯಲ್ಲಿ ರಿಂಕು ಸಿಂಗ್ ಬೌಂಡರಿ ಬಾರಿಸಿ ಗೆಲುವು ತಂದುಕೊಟ್ಟರು. ಅಚ್ಚರಿಯೆಂದರೆ, ಟೂರ್ನಿಗೂ ಮುನ್ನವೇ ತಾನು 'ಗೆಲುವಿನ ರನ್' ಗಳಿಸುವುದಾಗಿ ರಿಂಕು ಭವಿಷ್ಯ ನುಡಿದಿದ್ದರು.
ದುಬೈ: ಏಷ್ಯಾಕಪ್‌ನಲ್ಲಿ ಭಾರತ ಪಾಕಿಸ್ತಾನವನ್ನು ಐದು ವಿಕೆಟ್‌ಗಳಿಂದ ಸೋಲಿಸಿ ಕಪ್ ಗೆದ್ದಾಗ, 69 ರನ್ ಗಳಿಸಿ ತಿಲಕ್ ವರ್ಮಾ ಟಾಪ್ ಸ್ಕೋರರ್ ಆಗಿದ್ದರೂ, ಗೆಲುವಿನ ರನ್ ಗಳಿಸುವ ಜವಾಬ್ದಾರಿ ರಿಂಕು ಸಿಂಗ್ ಅವರದ್ದಾಗಿತ್ತು. ಟೂರ್ನಿಯಲ್ಲಿ ಇದುವರೆಗೆ ಒಂದೇ ಒಂದು ಮ್ಯಾಚ್‌ನಲ್ಲೂ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಸಿಗದಿದ್ದ ರಿಂಕುಗೆ, ಫೈನಲ್‌ಗೂ ಸ್ವಲ್ಪ ಮುಂಚೆ ಹಾರ್ದಿಕ್ ಪಾಂಡ್ಯಗೆ ಗಾಯವಾದ ಕಾರಣ ಫೈನಲ್‌ನಲ್ಲಿ ಆಡಲು ಚಾನ್ಸ್ ಸಿಕ್ಕಿತು. 147 ರನ್‌ಗಳ ಗುರಿ ಬೆನ್ನಟ್ಟಿದ ಭಾರತ, ಆರಂಭದಲ್ಲಿ 20/3 ಕ್ಕೆ ಕುಸಿದರೂ, ಆ ಬಳಿಕ ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಅವರ ಅರ್ಧಶತಕದ ಜೊತೆಯಾಟ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿತು. ನಂತರ ತಿಲಕ್ ವರ್ಮಾ ಮತ್ತು ಶಿವಂ ದುಬೆ ಅವರ ಜೊತೆಯಾಟ ಭಾರತವನ್ನು ಗೆಲುವಿನ ಸನಿಹಕ್ಕೆ ತಂದಿತು.
ಆದರೆ, ಹತ್ತೊಂಬತ್ತನೇ ಓವರ್‌ನ ಕೊನೆಯ ಎಸೆತದಲ್ಲಿ ಶಿವಂ ದುಬೆ ಔಟಾದಾಗ, ಹ್ಯಾರಿಸ್ ರೌಫ್ ಬೌಲ್ ಮಾಡಿದ ಕೊನೆಯ ಓವರ್‌ನಲ್ಲಿ ಭಾರತಕ್ಕೆ ಗೆಲ್ಲಲು 10 ರನ್‌ಗಳು ಬೇಕಾಗಿದ್ದವು. ಈ ಸಮಯದಲ್ಲಿ ರಿಂಕು ಸಿಂಗ್ ಕ್ರೀಸ್‌ಗೆ ಬಂದರು. ಆದರೆ, ಸ್ಟ್ರೈಕ್‌ನಲ್ಲಿದ್ದುದು ತಿಲಕ್ ವರ್ಮಾ. ಮೊದಲ ಎಸೆತದಲ್ಲಿ ಎರಡು ರನ್ ಗಳಿಸಿದ ತಿಲಕ್, ಮುಂದಿನ ಎಸೆತವನ್ನು ಸಿಕ್ಸರ್‌ಗೆ ಬಾರಿಸಿ ಭಾರತವನ್ನು ಗೆಲುವಿನ ಹತ್ತಿರಕ್ಕೆ ತಂದರು. ಮುಂದಿನ ಎಸೆತದಲ್ಲಿ ತಿಲಕ್ ಸಿಂಗಲ್ ತೆಗೆದುಕೊಂಡಾಗ ಸ್ಕೋರ್ ಸಮವಾಯಿತು. ಇದರಿಂದಾಗಿ ಗೆಲುವಿನ ರನ್ ಗಳಿಸುವ ಜವಾಬ್ದಾರಿ ರಿಂಕು ಮೇಲೆ ಬಿತ್ತು. ಎದುರಿಸಿದ ಮೊದಲ ಎಸೆತವನ್ನೇ ಬೌಂಡರಿಗಟ್ಟಿ ರಿಂಕು ಭಾರತಕ್ಕೆ ಸ್ಮರಣೀಯ ಜಯ ತಂದುಕೊಟ್ಟರು.
ನಿಜವಾದ ರಿಂಕು ಸಿಂಗ್ ಭವಿಷ್ಯ
ಆದರೆ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದು ಭವಿಷ್ಯ. ಟೂರ್ನಿ ಶುರುವಾಗೋಕು ಮುಂಚೆ, ಭಾರತದ ಆಟಗಾರರಾದ ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಶಿವಂ ದುಬೆ ಮತ್ತು ರಿಂಕು ಸಿಂಗ್ ಅವರಿಗೆ ಟೂರ್ನಿಯ ಬಗ್ಗೆ ಭವಿಷ್ಯ ನುಡಿದು, ಅದನ್ನು ಒಂದು ಪೇಪರ್ ಮೇಲೆ ಬರೆದು ಕೊಡಲು ಬ್ರಾಡ್‌ಕಾಸ್ಟರ್‌ಗಳು ಕೇಳಿದ್ದರು. ಟೂರ್ನಿ ಆರಂಭಕ್ಕೂ ಮುನ್ನ ಸೆಪ್ಟೆಂಬರ್ 6 ರಂದು ಇದನ್ನು ಮಾಡಲಾಗಿತ್ತು. ರಿಂಕು ಅದರಲ್ಲಿ 'ವಿನ್ ರನ್' ಎಂದು ಬರೆದಿದ್ದರು. ತಂಡಕ್ಕಾಗಿ ವಿನ್ನಿಂಗ್ ರನ್ ಗಳಿಸುತ್ತೇನೆ ಎಂದು ರಿಂಕು ಹೇಳಲು ಬಯಸಿದ್ದರು. ಕೊನೆಗೆ, ಫೈನಲ್‌ನಲ್ಲಿ ಮಾತ್ರ ಆಡಲು ಅವಕಾಶ ಸಿಕ್ಕ ರಿಂಕುಗೆ, ವಿಧಿಯಾಟದಂತೆ ಗೆಲುವಿನ ರನ್ ಗಳಿಸುವ ಅವಕಾಶ ಸಿಕ್ಕಿತು.
ಭಾರತೀಯರ ಭವಿಷ್ಯ ನಿಜವಾಯ್ತು
ಪಂದ್ಯದ ನಂತರ ನಡೆದ ಚರ್ಚೆಯಲ್ಲಿ, ಜಸ್ಪ್ರೀತ್ ಬುಮ್ರಾ ಅವರ ಪತ್ನಿಯೂ ಆಗಿರುವ ನಿರೂಪಕಿ ಸಂಜನಾ ಗಣೇಶನ್, ಭಾರತೀಯ ಆಟಗಾರರ ಭವಿಷ್ಯವನ್ನು ಬಹಿರಂಗಪಡಿಸಿದರು. ತಿಲಕ್ ವರ್ಮಾ ಫೈನಲ್‌ನಲ್ಲಿ ತಂಡಕ್ಕಾಗಿ ಸ್ಕೋರ್ ಮಾಡುತ್ತೇನೆ ಎಂದು ಬರೆದಿದ್ದರು. ತಿಲಕ್ ಅವರ ಭವಿಷ್ಯವೂ ನಿಜವಾಯಿತು. ಫೈನಲ್‌ನಲ್ಲಿ ಭಾರತದ ಪರ ಟಾಪ್ ಸ್ಕೋರರ್ ಆಗಿದ್ದು ತಿಲಕ್ ವರ್ಮಾ. ಸಂಜು ಸ್ಯಾಮ್ಸನ್ ಮತ್ತು ಶಿವಂ ದುಬೆ ಭಾರತ ಚಾಂಪಿಯನ್ ಆಗಲಿದೆ ಎಂದು ಭವಿಷ್ಯ ನುಡಿದಿದ್ದರು. ಅದೂ ಕೂಡ ನಿಜವಾಯಿತು. ಭಾರತೀಯ ಆಟಗಾರರ ಭವಿಷ್ಯ ನಿಜವಾದಾಗ, ಚರ್ಚೆಯಲ್ಲಿ ಭಾಗವಹಿಸಿದ್ದ ರವಿಶಾಸ್ತ್ರಿ, ಇವರು ಬೇಕಿದ್ದರೆ ಜ್ಯೋತಿಷ್ಯದಲ್ಲೂ ಒಂದು ಕೈ ನೋಡಬಹುದು ಎಂದು ಹೇಳಿದರು.
ಒಟ್ಟಿನಲ್ಲಿ ಏಷ್ಯಾಕಪ್ ಫೈನಲ್ ಪಂದ್ಯವು ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದೆ. ಇಡೀ ಟೂರ್ನಿಯಲ್ಲಿ ಮೊದಲ ಬಾರಿಗೆ ಉಭಯ ತಂಡಗಳ ನಡುವೆ ಸಮಬಲದ ಹೋರಾಟ ನೋಡಲು ಸಿಕ್ಕಿತು.
