ಬಾಂಗ್ಲಾದೇಶವನ್ನು ಸೋಲಿಸಿ ಏಷ್ಯಾಕಪ್ ಫೈನಲ್‌ಗೆ ಪ್ರವೇಶಿಸಿದ ಪಾಕಿಸ್ತಾನ ತಂಡದ ವೇಗಿ ಹ್ಯಾರಿಸ್ ರೌಫ್‌ಗೆ ಅಭಿಮಾನಿಯೊಬ್ಬರು 'ಫೈನಲ್‌ನಲ್ಲಿ ಭಾರತವನ್ನು ಸುಮ್ಮನೆ ಬಿಡಬೇಡಿ' ಎಂದು ಭಾವುಕರಾಗಿ ಮನವಿ ಮಾಡಿದ್ದಾರೆ.  

ದುಬೈ: ಏಷ್ಯಾಕಪ್‌ನ ಪಾಕಿಸ್ತಾನ ಪಾಲಿನ ಕೊನೆಯ ಸೂಪರ್ ಫೋರ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸಿ ಫೈನಲ್‌ಗೆ ಪ್ರವೇಶಿಸಿದ ಪಾಕಿಸ್ತಾನ ತಂಡದ ಮುಂದೆ ಪಾಕಿಸ್ತಾನಿ ಅಭಿಮಾನಿಗಳು ಭಾವುಕರಾಗಿದ್ದಾರೆ. ಸೂಪರ್ ಫೋರ್‌ನ ರೋಚಕ ಪಂದ್ಯದಲ್ಲಿ ಪಾಕಿಸ್ತಾನ 11 ರನ್‌ಗಳಿಂದ ಬಾಂಗ್ಲಾದೇಶವನ್ನು ಸೋಲಿಸಿತು. 

ರೌಫ್‌ಗೆ ವಿಶೇಷ ಮನವಿ ಮಾಡಿದ ಪಾಕ್ ಅಭಿಮಾನಿ

ಪಂದ್ಯದಲ್ಲಿ ಮೂರು ವಿಕೆಟ್ ಪಡೆದು ಪಾಕ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಪಾಕ್ ವೇಗಿ ಹ್ಯಾರಿಸ್ ರೌಫ್ ಅವರನ್ನು ಪಂದ್ಯದ ನಂತರ ಪಾಕ್ ಅಭಿಮಾನಿಯೊಬ್ಬರು ಭಾವುಕರಾಗಿ ಗೋಳಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪಂದ್ಯದ ನಂತರ ಪಾಕ್ ಅಭಿಮಾನಿಗಳನ್ನು ಭೇಟಿಯಾದ ಹ್ಯಾರಿಸ್ ರೌಫ್‌ಗೆ ಕೈಕುಲುಕಿದ ಅಭಿಮಾನಿಯೊಬ್ಬರು, 'ಫೈನಲ್‌ನಲ್ಲಿ ಭಾರತವನ್ನು ಸುಮ್ಮನೆ ಬಿಡಬೇಡಿ' ಎಂದು ಅಂಗಲಾಚಿದ್ದಾನೆ. ಇದನ್ನೆಲ್ಲಾ ನೋಡಿದಾಗ ಆಪರೇಷನ್ ಸಿಂದೂರ್, ಪಾಕಿಸ್ತಾನ ಮೇಲೆ ಯಾವ ಪರಿಣಾಮ ಬೀರಿದೆ ಎನ್ನುವುದು ಅರಿವಾಗುತ್ತದೆ.

ಅಭಿಮಾನಿಯ ಕೋರಿಕೆಯನ್ನು ನಗುತ್ತಲೇ ಕೇಳಿದ ಹ್ಯಾರಿಸ್ ರೌಫ್, ಕೈಮುಗಿದು ಭಾರತವನ್ನು ಸೋಲಿಸಿ ಎಂದು ಹೇಳಿದ ಅಭಿಮಾನಿಗೆ ಫ್ಲೈಯಿಂಗ್ ಕಿಸ್ ನೀಡಿ ಉತ್ತರಿಸಿದರು. ಬಾಂಗ್ಲಾದೇಶ ಎದುರಿನ ಪಂದ್ಯದಲ್ಲಿ ನಾಲ್ಕು ಓವರ್‌ಗಳಲ್ಲಿ 33 ರನ್ ನೀಡಿ ಹ್ಯಾರಿಸ್ ರೌಫ್ ಮೂರು ವಿಕೆಟ್ ಪಡೆದು ಮಿಂಚಿದರು. ಭಾರತದ ವಿರುದ್ಧದ ಸೂಪರ್ ಫೋರ್ ಪಂದ್ಯದಲ್ಲಿ ಭಾರತೀಯ ಅಭಿಮಾನಿಗಳು 'ಕೊಹ್ಲಿ' ಎಂದು ಕೂಗಿ ರೌಫ್ ಅವರನ್ನು ಕೆರಳಿಸಿದಾಗ, ಅವರು ಭಾರತೀಯ ಅಭಿಮಾನಿಗಳತ್ತ ವಿವಾದಾತ್ಮಕ ಸನ್ನೆ ಮಾಡಿ ಗಮನ ಸೆಳೆದಿದ್ದರು.

Scroll to load tweet…

ಪಾಕ್ ಗಾಯದ ಮೇಲೆ ಬರೆ ಎಳೆದ ಸೂರ್ಯಕುಮಾರ್ ಯಾದವ್

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ನಡೆಸಿದ 'ಆಪರೇಷನ್ ಸಿಂದೂರ್' ಸೇನಾ ಕಾರ್ಯಾಚರಣೆಯ ವೇಳೆ ಭಾರತದ ಆರು ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂಬ ಪಾಕಿಸ್ತಾನದ ಹೇಳಿಕೆಯನ್ನು ಸೂಚಿಸಲು ಹ್ಯಾರಿಸ್ ರೌಫ್ ಆರು ಎಂದು ಕೈಬೆರಳು ತೋರಿಸಿ, ವಿಮಾನಗಳು ಹಾರುವ ಮತ್ತು ಹೊಡೆದುರುಳಿಸುವ ಸನ್ನೆ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದರ ವಿರುದ್ಧ ಭಾರತ ಐಸಿಸಿಗೆ ದೂರು ನೀಡಿತ್ತು. ಭಾರತ ತಂಡವು ಪಾಕ್ ಎದುರಿನ ಗೆಲುವನನ್ನು ದೇಶದ ಸೇನೆಗೆ ಹಾಗೂ ಪಹಲ್ಗಾಂ ಉಗ್ರದಾಳಿಯಲ್ಲಿ ಮಡಿದವರಿಗೆ ಅರ್ಪಿಸುವ ಮೂಲಕ ಪಾಕ್ ಗಾಯದ ಮೇಲೆ ಬರೆ ಎಳೆಯುವ ಕೆಲಸವನ್ನು ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಮಾಡಿದ್ದರು.

ಪಾಕಿಸ್ತಾನದ ಆರಂಭಿಕ ಆಟಗಾರ ಸಾಹಿಬ್‌ಜಾದಾ ಫರ್ಹಾನ್ ಅರ್ಧಶತಕದ ನಂತರ ಬ್ಯಾಟ್‌ನಿಂದ ಗುಂಡು ಹಾರಿಸುವಂತೆ ಸಂಭ್ರಮಿಸಿದ್ದು ಕೂಡ ಚರ್ಚೆಗೆ ಗ್ರಾಸವಾಗಿತ್ತು. ಇದರ ವಿರುದ್ಧವೂ ಭಾರತ ದೂರು ನೀಡಿದೆ. ಏಷ್ಯಾಕಪ್‌ನ ಗುಂಪು ಹಂತ ಮತ್ತು ಸೂಪರ್ ಫೋರ್ ಎರಡರಲ್ಲೂ ಭಾರತ ಪಾಕಿಸ್ತಾನದ ವಿರುದ್ಧ ಅಧಿಕಾರಯುತ ಜಯ ಸಾಧಿಸಿತ್ತು. ಏಷ್ಯಾಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿವೆ. ಫೈನಲ್ ಪಂದ್ಯ ಸೆಪ್ಟೆಂಬರ್ 28ರ ಭಾನುವಾರ ದುಬೈನಲ್ಲಿ ನಡೆಯಲಿದೆ.

ಒಂದು ಕಡೆ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ತಾನಾಡಿದ ಎಲ್ಲಾ ಪಂದ್ಯಗಳನ್ನು ಜಯಿಸುವ ಮೂಲಕ ಅಜೇಯವಾಗಿಯೇ ಫೈನಲ್ ಪ್ರವೇಶಿಸಿದ್ದು, 9ನೇ ಏಷ್ಯಾಕಪ್ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಇನ್ನೊಂದಡೆ ಪಾಕಿಸ್ತಾನ ಕ್ರಿಕೆಟ್‌ ತಂಡವು ಗ್ರೂಪ್ ಹಂತದಲ್ಲಿ ಒಮ್ಮೆ ಹಾಗೂ ಸೂಪರ್-4 ಹಂತದಲ್ಲಿ ಒಮ್ಮೆ ಭಾರತಕ್ಕೆ ಶರಣಾಗಿದೆಯಾದರೂ ಉಳಿದ ತಂಡಗಳನ್ನು ಸೋಲಿಸುವ ಮೂಲಕ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ. ಇದೀಗ ಭಾರತ ತಂಡವು ಪಾಕಿಸ್ತಾನ ಎದುರು ಹ್ಯಾಟ್ರಿಕ್ ಗೆಲುವು ದಾಖಲಿಸಿ ಟ್ರೋಫಿಗೆ ಮುತ್ತಿಕ್ಕಲು ತುದಿಗಾಲಿನಲ್ಲಿ ನಿಂತಿದೆ. ಇನ್ನೊಂದೆಡೆ ಪಾಕಿಸ್ತಾನ ತಂಡವು ಭಾರತ ಎದುರು ಫೈನಲ್‌ನಲ್ಲಿ ಸೇಡು ತೀರಿಸಿಕೊಳ್ಳಲು ಹಾತೊರೆಯುತ್ತಿದೆ. ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಇಡೀ ಕ್ರಿಕೆಟ್ ಜಗತ್ತು ತುದಿಗಾಲಿನಲ್ಲಿ ನಿಂತಿದೆ.