ಏಷ್ಯಾಕಪ್ ಸೂಪರ್-4 ಹಂತದಲ್ಲಿ, ಅಭಿಷೇಕ್ ಶರ್ಮಾ ಮತ್ತು ಶುಭ್‌ಮನ್ ಗಿಲ್ ಅವರ ಸ್ಪೋಟಕ ಆರಂಭಿಕ ಜತೆಯಾಟದ ನೆರವಿನಿಂದ ಭಾರತವು ಪಾಕಿಸ್ತಾನದ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. 172 ರನ್‌ಗಳ ಗುರಿ ಬೆನ್ನತ್ತಿದ ಭಾರತ, ಅಭಿಷೇಕ್ ಅವರ 74 ರನ್‌ಗಳ ನೆರವಿನಿಂದ ಗೆಲುವಿನ ದಡ ಸೇರಿತು.

ದುಬೈ: ಪಾಕ್‌ ಬೌಲರ್‌ಗಳಿಗೆ ಎಡಗೈ ಸ್ಪೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಅಕ್ಷರಶಃ ಸಿಂಹಸ್ವಪ್ನರಾಗಿ ಕಾಡಿದರು. ಶುಭ್‌ಮನ್ ಗಿಲ್ ಹಾಗೂ ಅಭಿಷೇಕ್ ಶರ್ಮಾ ವಿಸ್ಪೋಟಕ ಬ್ಯಾಟಿಂಗ್ ಹಾಗೂ ಕೊನೆಯಲ್ಲಿ ತಿಲಕ್ ವರ್ಮಾ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಏಷ್ಯಾಕಪ್ ಟೂರ್ನಿಯ ಸೂಪರ್-4 ಹಂತದಲ್ಲಿ ಮತ್ತೊಮ್ಮೆ ಪಾಕಿಸ್ತಾನವನ್ನು ಬಗ್ಗುಬಡಿದಿದೆ. ಕಳೆದ ಬಾರಿ 7 ವಿಕೆಟ್‌ನಿಂದ ಬದ್ದ ಎದುರಾಳಿ ಪಾಕ್ ಮಣಿಸಿದ್ದ ಭಾರತ, ಈ ಬಾರಿ ಇನ್ನೂ 7 ಎಸೆತ ಬಾರಿ ಇರುವಂತೆ 6 ವಿಕೆಟ್‌ಗಳ ಸುಲಭ ಗೆಲುವು ದಾಖಲಿಸುವ ಸಂಭ್ರಮಾಚರಣೆ ಮಾಡಿದೆ. ಭಾರತ ಎದುರು ಪಾಕ್ ಮತ್ತೊಮ್ಮೆ ಮಂಡಿಯೂರಿದೆ.

ಭರ್ಜರಿ ಆರಂಭ ಪಡೆದ ಭಾರತ

ಗೆಲ್ಲಲು 172 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಭಾರತ ತಂಡಕ್ಕೆ ಆರಂಭಿಕರಾದ ಶುಭ್‌ಮನ್ ಗಿಲ್ ಹಾಗೂ ಅಭಿಷೇಕ್ ಶರ್ಮಾ ಮತ್ತೊಮ್ಮೆ ವಿಸ್ಪೋಟಕ ಆರಂಭ ಒದಗಿಸಿಕೊಟ್ಟರು. ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದ ಈ ಜೋಡಿ ಪಾಕ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಪವರ್‌ಪ್ಲೇನಲ್ಲಿ ಭಾರತ 69 ರನ್ ಕಲೆಹಾಕಿತು. ಪವರ್‌ಪ್ಲೇ ಮುಗಿದ ಬಳಿಕ ಈ ಜೋಡಿ ಮತ್ತಷ್ಟು ಆಕ್ರಮಣಕಾರಿಯಾಟವಾಡಿತು. ತಮಗೆ ಸಿಕ್ಕ ಜೀವದಾನವನ್ನು ಸರಿಯಾಗಿಯೇ ಬಳಸಿಕೊಂಡ ಅಭಿಷೇಕ್ ಶರ್ಮಾ, ಕೇವಲ 24 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಏಷ್ಯಾಕಪ್‌ನಲ್ಲಿ ಮೊದಲ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು.ಮತ್ತೊಂದು ತುದಿಯಲ್ಲಿ ಶುಭ್‌ಮನ್ ಗಿಲ್ ಕೂಡಾ ಉತ್ತಮ ಸಾಥ್ ನೀಡಿದರು. ಪರಿಣಾಮ ಮೊದಲ 8.4 ಓವರ್‌ನಲ್ಲಿ ಭಾರತ ಶತಕದ ಜತೆಯಾಟವಾಡಿತು.

ಇನ್ನು ಏಷ್ಯಾಕಪ್ ಟೂರ್ನಿಯ ಗ್ರೂಪ್ ಹಂತದ ಮೊದಲ ಮೂರು ಪಂದ್ಯಗಳಲ್ಲಿ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದ ಶುಭ್‌ಮನ್ ಗಿಲ್ ನಿರ್ಣಾಯಕ ಘಟ್ಟದಲ್ಲಿ ಫಾರ್ಮ್‌ಗೆ ಮರಳುವ ಮೂಲಕ ತಂಡಕ್ಕೆ ಆಸರೆಯಾದರು. ಮೊದಲ ವಿಕೆಟ್‌ಗೆ ಗಿಲ್ ಹಾಗೂ ಅಭಿಷೇಕ್ ಶರ್ಮಾ ಕೇವಲ 9.5 ಓವರ್‌ಗಳಲ್ಲಿ 105 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಗಿಲ್ ಕೇವಲ 28 ಎಸೆತಗಳನ್ನು ಎದುರಿಸಿ 8 ಬೌಂಡರಿ ಸಹಿತ ಆಕರ್ಷಕ 47 ರನ್ ಸಿಡಿಸಿ ಅಶ್ರಫ್‌ಗೆ ವಿಕೆಟ್ ಒಪ್ಪಿಸಿದರು.

ದಿಢೀರ್ ವಿಕೆಟ್ ಪತನ

ಒಂದು ಹಂತದಲ್ಲಿ 105 ರನ್‌ಗಳವರೆಗೂ ಯಾವುದೇ ವಿಕೆಟ್ ಕಳೆದುಕೊಳ್ಳದ ಭಾರತ, ಇದಾದ ಬಳಿಕ 123 ರನ್ ಗಳಿಸುವಷ್ಟರಲ್ಲಿ ದಿಢೀರ್ ಎನ್ನುವಂತೆ ಮೂರು ವಿಕೆಟ್ ಕಳೆದುಕೊಂಡಿತು. ಗಿಲ್ ವಿಕೆಟ್ ಪತನದ ಬೆನ್ನಲ್ಲೇ ಹ್ಯಾರಿಸ್ ರೌಫ್ ಬೌಲಿಂಗ್‌ನಲ್ಲಿ ಸೂರ್ಯಕುಮಾರ್ ಯಾದವ್ ಖಾತೆ ತೆರೆಯದೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಇನ್ನು ಮೈಚಳಿ ಬಿಟ್ಟು ಬ್ಯಾಟ್ ಬೀಸುತ್ತಿದ್ದ ಅಭಿಷೇಕ್ ಶರ್ಮಾ ಕೇವಲ 39 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 5 ಮುಗಿಲೆತ್ತರದ ಸಿಕ್ಸರ್ ನೆರವಿನಿಂದ 74 ರನ್ ಸಿಡಿಸಿ ಅಬ್ರಾರ್ ಅಹಮದ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಕೇವಲ 13 ರನ್‌ಗಳಿಗೆ ಸೀಮಿತವಾಯಿತು. ಕೊನೆಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ತಿಲಕ್ ವರ್ಮಾ ಕೇವಲ 19 ಎಸೆತಗಳಲ್ಲಿ ತಲಾ 2 ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ ಅಜೇಯ 30 ರನ್ ಸಿಡಿಸುವ ಮೂಲಕ ಇನ್ನೂ 7 ಎಸೆತ ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿದರು.

Scroll to load tweet…

ಇಲ್ಲಿನ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಲಿಳಿದ ಪಾಕಿಸ್ತಾನ ತಂಡವು ಆರಂಭದಲ್ಲೇ ಅನುಭವಿ ಬ್ಯಾಟರ್ ಫಖರ್ ಜಮಾನ್ ವಿಕೆಟ್ ಕಳೆದುಕೊಂಡಿತು. ಫಖರ್ ಕೇವಲ 15 ರನ್ ಗಳಿಸಿ ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ ಸಂಜು ಸ್ಯಾಮ್ಸನ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇದಾದ ಬಳಿಕ ಆರಂಭಿಕ ಸ್ಥಾನದಿಂದ ಹಿಂಬಡ್ತಿ ಪಡೆದು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿಳಿದ ಸೈಮ್ ಆಯೂಬ್ ಹಾಗೂ ಸಾಹಿಬ್‌ಝಾದ್ ಫರ್ಹಾನ್ ಅರ್ಧಶತಕದ ಜತೆಯಾಟವಾಡುವ ಮೂಲಕ ಆಸರೆಯಾದರು. ಎರಡನೇ ವಿಕೆಟ್‌ಗೆ ಓ ಜೋಡಿ 72 ರನ್‌ಗಳ ಜತೆಯಾಟವಾಡಿತು. ಸಾಹಿಬ್‌ಝಾದ್ ಫರ್ಹಾನ್ 45 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 58 ರನ್ ಗಳಿಸಿ ಶಿವಂ ದುಬೆಗೆ ವಿಕೆಟ್ ಒಪ್ಪಿಸಿದರು.

ಇನ್ನುಳಿದಂತೆ ಸೈಮ್ ಆಯೂಬ್ ಹಾಗೂ ಮೊಹಮ್ಮದ್ ನವಾಜ್ ತಲಾ 21 ರನ್ ಬಾರಿಸಿದರೆ, ಕೊನೆಯಲ್ಲಿ ನಾಯಕ ಸಲ್ಮಾನ್ ಅಘಾ ಅಜೇಯ 17 ಹಾಗೂ ಫಾಹಿಮ್ ಅಶ್ರಫ್ ಕೊನೆಯ 8 ಎಸೆತಗಳಲ್ಲಿ ಅಜೇಯ 20 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 170ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.