ರಾಜ್ಯ ಸರ್ಕಾರ ಇದೀಗ ಏಕರೂಪದ ಟಿಕೆಟ್ ದರ ನಿಗದಿ ಮಾಡಿದೆ. ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ದರ 200 ರು. ಮೀರಬಾರದೆಂಬ ಆದೇಶ ಹೊರಡಿಸಿದೆ. ಇದರಿಂದ ದೊಡ್ಡ ಸಿನಿಮಾಗಳ ಅವಸರದ ಗಳಿಕೆಗೆ ಬ್ರೇಕ್ ಬೀಳುವಂತಾಗಿದೆ ಎಂಬುದು ತಜ್ಞರ ಅಭಿಪ್ರಾಯ.
ಬೆಂಗಳೂರು : ರಾಜ್ಯ ಸರ್ಕಾರ ಇದೀಗ ಏಕರೂಪದ ಟಿಕೆಟ್ ದರ ನಿಗದಿ ಮಾಡಿದೆ. ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ದರ 200 ರು. ಮೀರಬಾರದೆಂಬ ಆದೇಶ ಹೊರಡಿಸಿದೆ. ಇದರಿಂದ ದೊಡ್ಡ ಸಿನಿಮಾಗಳ ಅವಸರದ ಗಳಿಕೆಗೆ ಬ್ರೇಕ್ ಬೀಳುವಂತಾಗಿದೆ ಎಂಬುದು ತಜ್ಞರ ಅಭಿಪ್ರಾಯ.
ಸದ್ಯಕ್ಕೆ ಈ ವರ್ಷ ಕನ್ನಡದಲ್ಲಿ ಐದು ದೊಡ್ಡ ಬಜೆಟ್‌ನ ಚಿತ್ರಗಳು ತೆರೆಗೆ ಬರಲಿವೆ. ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಕಾಂತಾರ 1’, ದರ್ಶನ್ ನಟನೆಯ ‘ದಿ ಡೆವಿಲ್’, ಸುದೀಪ್ ಅಭಿನಯದ ‘ಮಾರ್ಕ್’, ಉಪೇಂದ್ರ, ಶಿವರಾಜ್‌ಕುಮಾರ್, ರಾಜ್ ಬಿ. ಶೆಟ್ಟಿ ನಟನೆಯ ‘45’ ಹಾಗೂ ಧ್ರುವ ಸರ್ಜಾ ನಟನೆಯ ‘ಕೆಡಿ’ ಚಿತ್ರಗಳು ಬಿಡುಗಡೆಯಾಗಲಿವೆ. ಈ ಪೈಕಿ ‘ಕಾಂತಾರ 1’, ‘45’ ಹಾಗೂ ‘ಕೆಡಿ’ ಪ್ಯಾನ್ ಇಂಡಿಯಾ ಚಿತ್ರಗಳು. ಈ ಚಿತ್ರಗಳ ಮೊದಲೆರಡು ದಿನಗಳ ಕಲೆಕ್ಷನ್‌ಗೆ ಸರ್ಕಾರದ ಈ ಅದೇಶ ತಡೆಯಾಗಬಹುದು ಎಂಬುದು ಸಿನಿಮಾ ವಿಶ್ಲೇಷಕರ ಅಭಿಪ್ರಾಯ.
ಕನ್ನಡದ ಬಿಗ್ ಬಜೆಟ್ ಚಿತ್ರಗಳು ಮಾತ್ರವಲ್ಲ, ರಾಜ್ಯದಲ್ಲಿ ತೆರೆಗೆ ಬರುವ ಪರಭಾಷೆಯ ಚಿತ್ರಗಳೂ ಮೊದಲ ವಾರ 500 ರು.ನಿಂದ ಶುರುವಾಗಿ 1000 ರು.ವರೆಗೂ ಟಿಕೆಟ್ ದರ ವಸೂಲಿ ಮಾಡುತ್ತಿದ್ದವು. ಈಗ ಹೊರಬಿದ್ದಿರುವ ಸರ್ಕಾರದ ಆದೇಶದಿಂದ ಐನೂರು, ಸಾವಿರದ ಲೆಕ್ಕದಲ್ಲಿ ಟಿಕೆಟ್ ಮಾರುವ ಚಿತ್ರಗಳಿಗೆ ಮೂಗುದಾರ ಹಾಕಿದಂತಾಗಿದೆ.
ಇನ್ನೊಂದೆಡೆ ಏಕರೂಪ ಟಿಕೆಟ್ ದರ ನಿಗದಿ ನೀತಿಯಿಂದ ಚಿತ್ರರಂಗಕ್ಕೆ ಸಾಕಷ್ಟು ಅನುಕೂಲ ಆಗಲಿದೆ. ಎಲ್ಲಾ ವರ್ಗದವರಿಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ನೋಡುವ ಸೌಲಭ್ಯ ದೊರೆಯಲಿದೆ. ಐನೂರು, ಸಾವಿರ ರುಪಾಯಿ ಕೊಟ್ಟು ಒಬ್ಬರೇ ಸಿನಿಮಾ ನೋಡುತ್ತಿದ್ದರು. ಈಗ ಅದೇ ಹಣದಲ್ಲಿ ಮೂರು, ನಾಲ್ಕು ಮಂದಿ ಸಿನಿಮಾ ನೋಡುವುದರಿಂದ ಸಿನಿಮಾಗಳು ಹೆಚ್ಚಿನ ಜನರಿಗೆ ತಲುಪಲಿವೆ ಎಂಬ ಮಾತುಗಳೂ ಕೇಳಿಬಂದಿವೆ.
ಸಿನಿಮಾ ಟಿಕೆಟ್‌ಗೆ ₹200 ದರ ಮಿತಿ - ಎಲ್ಲ ಭಾಷೆಗಳ ಸಿನಿಮಾಗಳಿಗೂ ಅನ್ವಯ
ಬೆಂಗಳೂರು : ಎಪ್ಪತ್ತೈದು ಮತ್ತು ಅದಕ್ಕಿಂತ ಕಡಿಮೆ ಆಸನ ಸಾಮರ್ಥ್ಯದ ಮಲ್ಟಿಪ್ಲೆಕ್ಸ್ ಚಿತ್ರ ಮಂದಿರಗಳನ್ನು ಹೊರತುಪಡಿಸಿ ರಾಜ್ಯದ ಉಳಿದೆಲ್ಲ ಚಿತ್ರ ಮಂದಿರಗಳಲ್ಲಿ ಎಲ್ಲಾ ಭಾಷೆಗಳ ಸಿನಿಮಾ ಪ್ರದರ್ಶನಕ್ಕೂ ಗರಿಷ್ಠ 200 ರು.ಗಳ ಏಕರೂಪದ ಟಿಕೆಟ್ ದರ(ತೆರಿಗೆ ಹೊರತುಪಡಿಸಿ) ಜಾರಿಗೊಳಿಸಿ ರಾಜ್ಯ ಸರ್ಕಾರ ಶುಕ್ರವಾರ ಅಧಿಸೂಚನೆ ಹೊರಡಿಸಿದೆ.
ಆದರೆ, 75 ಅಥವಾ ಅದಕ್ಕಿಂತ ಕಡಿಮೆ ಆಸನಗಳ ಪ್ರೀಮಿಯಂ ಸೌಲಭ್ಯವಿರುವ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳನ್ನು 200 ರು.ಗಳ ಗರಿಷ್ಠ ಟಿಕೆಟ್ ದರ ಮಿತಿಯಿಂದ ಹೊರಗಿಡಲಾಗಿದೆ.
ಮಲ್ಟಿಪ್ಲೆಕ್ಸ್‌ಗಳು ಸೇರಿ ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲಿ ಎಲ್ಲಾ ಭಾಷೆಗಳ ಸಿನಿಮಾ ಪ್ರದರ್ಶನಕ್ಕೆ ಏಕರೂಪ ಟಿಕೆಟ್ ದರ ಜಾರಿಗೊಳಿಸುವ ಸಂಬಂಧ ರಾಜ್ಯ ಸರ್ಕಾರ ಜು.15ರಂದು ಕರಡು ನಿಯಮಾವಳಿ ಪ್ರಕಟಿಸಿ, ಆಕ್ಷೇಪಣೆಗಳನ್ನು ಆಹ್ವಾನಿಸಿತ್ತು. ಕಾಲಮಿತಿಯಲ್ಲಿ ಸಲ್ಲಿಸಲಾದ ಎಲ್ಲಾ ಆಕ್ಷೇಪಣೆಗಳು ಹಾಗೂ ಸಲಹೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಬಳಿಕ ನಿಯಮಾವಳಿಗಳನ್ನು ಅಂತಿಮಗೊಳಿಸಿ ಶುಕ್ರವಾರದಿಂದಲೇ ಜಾರಿಗೆ ಬರುವಂತೆ ಅಧಿಸೂಚನೆ ಹೊರಡಿಸಲಾಗಿದೆ.
