Bison Movie: ತಮಿಳು ನಟ ವಿಕ್ರಮ್‌ ಅವರ ಮಗ ಧ್ರುವ ನಟನೆಯ ‘ಬೈಸನ್’‌ ಸಿನಿಮಾ ರಿಲೀಸ್‌ ಆಗಿದ್ದು, ಕಂಟೆಂಟ್‌ ವಿಚಾರವಾಗಿ ಅನೇಕರು ಈ ಸಿನಿಮಾವನ್ನು ಹೊಗಳಿದ್ದಾರೆ. ಈ ಸಿನಿಮಾ ನೋಡಿದ ವೀರೇಂದ್ರ ಮಲ್ಲಣ್ಣ ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ. 

ತಮಿಳು ನಟ ವಿಕ್ರಮ್‌ ಅವರ ಮಗ ಧ್ರುವ ಅವರು ‘ಬೈಸನ್’‌ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾವನ್ನು ನೋಡಿದ ವೀರೇಂದ್ರ ಮಲ್ಲಣ್ಣ ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೈಸನ್‌ ಸಿನಿಮಾ ಬಗ್ಗೆ ಹೇಳಿದ್ದೇನು?

ಇದು 'ಮಾರಿ ಸೆಲ್ವರಾಜ್' ಅವರ ನಿರ್ದೇಶನದ ಹಿಂದಿನ ಸಿನಿಮಾಗಳಿಗಿಂತ ಬಹಳ ವಿಭಿನ್ನ. ಆ ವಿಭಿನ್ನತೆ ಬರಲು ಸಿನಿಮಾದ ಗುಣ ಕಾರಣ. ಆಕ್ಷನ್ ಅಥವಾ ಸ್ಪೋರ್ಟ್ಸ್ ಮಾದರಿಯ ಸಿನಿಮಾಗಳನ್ನು ಬರೀ ಮನರಂಜನೆಗಾಗಿಯೇ ನೋಡುವ ಒಬ್ಬ ಪ್ರೇಕ್ಷಕನಿಗೆ ಇದು 'ಒಳ್ಳೆ ಪಾಪ್ಕಾರ್ನ್ ಎಂಟರ್ಟೈನರ್' ಸಿನಿಮಾ. ಸಂವೇದನೆ ಮತ್ತು ಅನುಭೂತಿಗೆ ಸಿನಿಮಾ ನೋಡುವ ಪ್ರೇಕ್ಷಕನಿಗೆ ಇದೊಂದು ಬಯೋಗ್ರಫಿ ಪುಸ್ತಕ ಓದಿದ ಅನುಭವ ಕೊಡಬಲ್ಲದು. ವಿಚಾರ ಸೂಕ್ಷ್ಮತೆಗಾಗಿ ಸಿನಿಮಾ ನೋಡುವವರಿಗೂ ಬೈಸನ್ ಕಾಲಮಾಡನ್ ಸೂಕ್ತವಾದ ಸಿನಿಮಾ. ಅಷ್ಟರ ನಡುವೆ ಬೈಸನ್ ಒಂದು 'ಫಾದರ್ ಸೆಂಟಿಮೆಂಟ್' ಕತೆಯಾಗಿಯೂ ನೋಡಿಸಿಕೊಳ್ಳುವ ಸಿನಿಮಾ. ಥಿಯೇಟರ್ ಅನುಭವದಲ್ಲೇ ನೋಡಬೇಕಾದ ಸಿನಿಮಾ.

ಒಬ್ಬ ಆಟಗಾರ ಅಥವ ತರಬೇತುದಾರನ ಕತೆ ಅಂದ್ರೆ 'ಕೊನೆಯಲ್ಲಿ ಹೀರೋ ಗೆಲ್ತಾನೆ ಅಥವ ಹೀರೋ ತರಬೇತಿ ನೀಡಿದ ತಂಡ ಗೆಲ್ಲುತ್ತದೆ' ಎಂಬುದು ಸಿದ್ದಸೂತ್ರ. ನಾಯಕ ಹೇಗೆ ಗೆಲ್ತಾನೆ, ಅವನ ದಾರಿಗೆ ಇರೋ ಅಡೆತಡೆಗಳು ಯಾವು ಎಂಬುದೆ ಅಂತಹ ಸಿನಿಮಾಗಳ ಕುತೂಹಲ ಹೆಚ್ಚಿಸುವುದು. ಕ್ರೀಡಾ ಮಾದರಿಯ ಸಿನಿಮಾವಾಗಿ ನೋಡಿದಾಗ ಬೈಸನ್ ಕೂಡ ಅಂತ್ಯದ ಸಿದ್ದಸೂತ್ರವನ್ನು ಮೀರಿಲ್ಲ. ಕತೆಯ ಹೀರೊ ಕಬಡ್ಡಿ ಆಟಗಾರ 'ಕಿಟ್ಟನ್' ಗೆಲ್ತಾನೆ ಎಂಬುದನ್ನು ಮೊದಲ ದೃಶ್ಯದಲ್ಲೇ ಊಹಿಸಬಹುದು. ಆದರೆ ಕಿಟ್ಟನ್ ಸಾಗುವ ದಾರಿ ಸಿನಿಮಾದ ಸಿದ್ದಸೂತ್ರಗಳು ಹಾಗೂ ಊಹೆಗಳಿಗೆ ದಕ್ಕುವಂತದ್ದಲ್ಲ. ನಾಯಕನ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿ, ಅವನ ವ್ಯಕ್ತಿತ್ವ, ಬೆಳೆದ ಮತ್ತು ಬದುಕಿರುವ ಪರಿಸರ, ಭಾವುಕ ಸಂಬಂಧಗಳ ಅಡ್ಡಿ-ಆತಂಕಗಳು, ರಾಜಕೀಯ, ಸಮುದಾಯ, ಇತ್ಯಾದಿ ಸೂಕ್ಷ್ಮಗಳು 'ಬೈಸನ್' ಸಿನಿಮಾದ ಚಿತ್ರಕತೆಯನ್ನು ಹೆಚ್ಚು ಗಟ್ಟಿಯಾಗಿಸಿದೆ.

ಅಪ್ಪನ ನೆರಳಿನಿಂದ ಹೊರಬಂದು ಚಿತ್ರರಂಗದಲ್ಲಿ 'ಧ್ರುವ್‌' ತಾನೊಬ್ಬ ಒಳ್ಳೆಯ ನಟನೆಂದು ಗುರುತಿಸಿಕೊಳ್ಳಲು ಮಾರಿ ಸೆಲ್ವರಾಜ್ ಅವರಂತಹ ನಿರ್ದೇಶಕ ಸಿಗಬೇಕಾಯ್ತು. ಕಿಟ್ಟನ್ ಪಾತ್ರವಾಗಲು ಧ್ರುವ್ ಸ್ಟೈಲ್, ಗ್ರೇಸ್, ಎನರ್ಜಿ ಹಾಗೂ ಅಭಿನಯ ಎಲ್ಲವೂ ತುಂಬಾ ಚೆನ್ನಾಗಿ ಹೊಂದಿಕೊಂಡಿದೆ. ತಂದೆಯಾಗಿ ಪಶುಪತಿ ಮತ್ತು ಅಕ್ಕನಾಗಿ ರಾಜೇಶ್ ವಿಜಯನ್ ಅದ್ಭುತವಾಗಿ ಅಭಿನಯಿಸಿದ್ದಾರೆ.

ಕೆಲವು ಅನಗತ್ಯ ಪುನಾರವರ್ತಿತ ದೃಶ್ಯಗಳ ಕಾರಣಕ್ಕೆ ಸಿನಿಮಾದ ಉದ್ದ ಸ್ವಲ್ಪ ಜಾಸ್ತಿ ಆಗಿರಬಹುದು. ಕ್ರೌರ್ಯ ಮತ್ತು ಹಿಂಸೆ ಬೈಸನ್ ಕಾಲಮಾಡನ್ ಕಥೆಯ ಭಾಗವೂ, ಅನಿವಾರ್ಯವೂ. ಆ ಕ್ರೌರ್ಯ ಮತ್ತು ಹಿಂಸೆಯನ್ನು ಬೇರೆ ರೀತಿಯಲ್ಲಿ ತೋರಿಸಬಹುದಿತ್ತೇನೋ; ಆದರೆ ಈಗ ತೋರಿಸಿರುವ ರೀತಿಗೆ ವಯಸ್ಕರು ಮಾತ್ರ ನೋಡಲು ಆಗುವಂತಹ 'ಎ' ಸೆನ್ಸಾರ್ ಸರ್ಟಿಫಿಕೇಟ್ ಸಿಗಬೇಕಿತ್ತು ಎಂಬುದು ನನ್ನ ವೈಯಕ್ತಿಕ ತಕರಾರು.‌

ಬೈಸನ್ ಕಾಲಮಾಡನ್ ಸಿನಿಮಾ ಇನ್ನೂ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕಿತ್ತು. ಹೆಚ್ಚು ಜನ ಈ ಸಿನಿಮಾ ಬಗ್ಗೆ ಮಾತನಾಡಬೇಕಿತ್ತು.