ಹ್ಯುಂಡೈ ಇಂಡಿಯಾ ಇದೀಗ ಅಧಿಕೃತ ಬೆಲೆ ಇಳಿಕೆ ಘೋಷಣೆ ಮಾಡಿದೆ. ಜಿಎಸ್‌ಟಿ ಇಳಿಕೆಯಿಂದ ಹ್ಯುಂಡೈ ಕಾರುಗಳ ಬೆಲೆಯಲ್ಲಿ ಗರಿಷ್ಠ 2.4 ಲಕ್ಷ ರೂ ವರೆಗೆ ಇಳಿಕೆಯಾಗುತ್ತಿದೆ.
ನವದೆಹಲಿ (ಸೆ.07) ಕೇಂದ್ರ ಸರ್ಕಾರ ಜಿಎಸ್‌ಟಿ ತೆರಿಗೆ ಕಡಿತ ಮಾಡಿದೆ. ಈ ನಿರ್ಧಾರ ಭಾರತದ ತೆರಿಗೆಯಲ್ಲೇ ಕ್ರಾಂತಿಕಾರ ನಿರ್ಧಾರ ಎಂದು ವಿಶ್ಲೇಷಿಸಲಾಗುತ್ತಿದೆ. 28ರಷ್ಟಿದ್ದ ಜಿಎಸ್‌ಟಿ ತೆರಿಗೆಯನ್ನು ಶೇಕಡಾ 18 ಹಾಗೂ ಶೇಕಡಾ 5ಕ್ಕೆ ಇಳಿಕೆ ಮಾಡಲಾಗಿದೆ. ಜೊತೆಗೆ ಔಷಧ ಸೇರಿದಂತೆ ಕೆಲ ಅಗತ್ಯ ವಸ್ತುಗಳನ ಮೇಲಿನ ಜಿಎಸ್‌ಟಿ ತೆರಿಗೆಗೆ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಕೇಂದ್ರದ ನಿರ್ಧಾರದಿಂದ ಜನರು ಫುಲ್ ಖುಷ್ ಆಗಿದ್ದಾರೆ. ಇದೀಗ ಈ ನಿರ್ಧಾರದಿಂದ ಕಾರುಗಳ ಬೆಲೆಯಲ್ಲಿ ಭಾರಿ ಇಳಿಕೆಯಾಗುತ್ತಿದೆ. ಇಂದು (ಸೆ.07) ಹ್ಯುಂಡೈ ಮೋಟಾರ್ ಇಂಡಿಯಾ ಅಧಿಕೃತವಾಗಿ ಬೆಲೆ ಇಳಿಕೆ ಘೋಷಣೆ ಮಾಡಿದೆ. ಕ್ರೆಟಾ, ಅಲ್ಕಜರ್ ಸೇರಿದಂತೆ ಹ್ಯುಂಡೈ ಕಾರುಗಳ ಬೆಲೆಯಲ್ಲಿ ಗರಿಷ್ಠ 2.4 ಲಕ್ಷ ರೂಪಾಯಿವರೆಗೆ ಇಳಿಕೆಯಾಗುತ್ತಿದೆ.
ಸೆಪ್ಟೆಂಬರ್ 22 ರಿಂದ ಹ್ಯುಂಡೈ ಕಾರು ಅಗ್ಗ
ಸೆಪ್ಟೆಂಬರ್ 22ರಿಂದ ಭಾರತದಲ್ಲಿ ಹೊಸ ಜಿಎಸ್‌ಟಿ ತೆರಿಗೆ ನೀತಿ ಜಾರಿಯಾಗುತ್ತಿದೆ. ಹೀಗಾಗಿ ಸೆಪ್ಟೆಂಬರ್ 22ರಿಂದ ಹೊಸ ಕಾರುಗಳ ಬೆಲೆಯಲ್ಲೂ ಬಾರಿ ಇಳಿಕೆಯಾಗುತ್ತಿದೆ. ಹ್ಯುಂಡೈ ಇದೀಗ ಅಧಿಕೃತ ಘೋಷಣೆಯೊಂದಿಗೆ ಬೆಲೆ ಇಳಿಕೆ ಮಾಡಿದೆ. ಜಿಎಸ್‌ಟಿ ಇಳಿಕೆ ಘೋಷಣೆ ಬೆನ್ನಲ್ಲೇ ಟಾಟಾ ಮೋಟಾರ್ಸ್ ಮಹೀಂದ್ರ, ರೆನಾಲ್ಟ್ ಸೇರಿದಂತೆ ಹಲವು ಕಂಪನಿಗಳು ಕಾರುಗಳ ಬೆಲೆ ಇಳಿಕೆ ಮಾಡಿದೆ. ಇದೀಗ ಹ್ಯುಂಡೈ ಇಂಡಿಯಾ ಬೆಲೆ ಇಳಿಕೆ ಘೋಷಣೆ ಮಾಡಿದೆ.
ಯಾವ ಕಾರಿಗೆ ಎಷ್ಟು ರೂಪಾಯಿ ಇಳಿಕೆ?
ಹ್ಯುಂಡೈ ತನ್ನ ಎಲ್ಲಾ ಕಾರುಗಳ ಮೇಲಿನ ಬೆಲೆ ಕಡಿತಗೊಳಿಸಿದೆ. ಕಾರುಗಳ ಮೇಲೆ ಶೇಕಡಾ 28ರಷ್ಟಿದ್ದ ಜಿಎಸ್‌ಟಿ ಇದೀಗ ಶೇಕಡಾ 18ಕ್ಕೆ ಇಳಿಕೆಯಾಗಿದೆ. ಹೀಗಾಗಿ ಬೆಲೆ ಅತೀ ಕಡಿಮೆಯಾಗಿದೆ. ಹ್ಯುಂಡೈ ಟಕ್ಸನ್ ಕಾರಿನ ಬೆಲೆ 2,40,303 ರೂಪಾಯಿ ಇಳಿಕೆ ಮಾಡಲಾಗಿದೆ. ಇನ್ನು ಹ್ಯುಂಡೈ ವರ್ನಾ ಕಾರಿನ ಬೆಲೆ 60,640 ರೂಪಾಯಿ ಇಳಿಕೆಯಾಗಲಿದೆ. ಹ್ಯುಂಡೈ ವೆನ್ಯೂ ಕಾರಿನ ಬೆಲೆ 1,23,650 ರೂಪಾಯಿ ಇಳಿಕೆಯಾಗುತ್ತಿದೆ. ಇಷ್ಟೇ ಅಲ್ಲ ಹ್ಯುಂಡೈ ಕ್ರೆಟಾ, ಹ್ಯುಂಡೈ ಐಟಿ20 ಸೇರಿದಂತೆ ಹ್ಯುಂಡೈ ತನ್ನ ಎಲ್ಲಾ ಕಾರುಗಳ ಮೇಲಿನ ಬೆಲೆ ಇಳಿಕೆ ಘೋಷಿಸಿದೆ.
ಬೆಲೆ ಇಳಿಕೆ ಪಟ್ಟಿ
- ಹ್ಯುಂಡೈ ಐ10 Nios; 73,808 ರೂಪಾಯಿ ಇಳಿಕೆ
- ಹ್ಯಂಡೈ ಔರಾ; 78,465 ರೂಪಾಯಿ ಇಳಿಕೆ
- ಹ್ಯುಂಡೈ ಐ20 ; 98,053 ರೂಪಾಯಿ
- ಹ್ಯುಂಡೈ ಎಕ್ಸ್‌ಟರ್; 89,209
- ಹ್ಯುಂಡೈ ಐ20 ಎನ್ ಲೈನ್ ;1,08,116 ರೂಪಾಯಿ ಇಳಿಕೆ
- ಹ್ಯುಂಡೈ ವೆನ್ಯೂ; 1,23,650 ರೂಪಾಯಿ ಇಳಿಕೆ
- ಹ್ಯುಂಡೈ ವೆನ್ಯೂ ಎನ್ ಲೈನ್, 1,19,390 ರೂಪಾಯಿ ಇಳಿಕೆ
- ಹ್ಯುಂಡೈ ಕ್ರೆಟಾ ; 72,145 ರೂಪಾಯಿ ಇಳಿಕೆ
- ಹ್ಯುಂಡೈ ಕ್ರೆಟಾ ಎನ್ ಲೈನ್; 71,762 ರೂಪಾಯಿ ಇಳಿಕೆ
- ಹ್ಯುಂಡೈ ವರ್ನಾ ; 60,640 ರೂಪಾಯಿ ಇಳಿಕೆ
- ಹ್ಯುಂಡೈ ಟಕ್ಸನ್ ; 2,40,303 ರೂಪಾಯಿ ಇಳಿಕೆ
- ಹ್ಯುಂಡೈ ಅಲ್ಕಜರ್; 75,376 ರೂಪಾಯಿ ಇಳಿಕೆ
ಸೆಪ್ಟೆಂಬರ್ 22ರಿಂದ ಕಾರು ಖರೀದಿಸುವ ಎಲ್ಲಾ ಗ್ರಾಹಕರಿಗೆ ಈ ಬೆಲೆ ಕಡಿತ ಅನ್ವಯವಾಗಲಿದೆ. ಭಾರಿ ಬೆಲೆ ಇಳಿಕೆಯಿಂದ ಈ ಬಾರಿಯ ದಸರಾ, ದೀಪಾವಳಿ ಹಬ್ಬಕ್ಕೆ ಕಾರು ಮಾರಾಟದಲ್ಲಿ ದಾಖಲೆ ಸೃಷ್ಟಿಯಾಗುವ ಸಾಧ್ಯತೆ ಇದೆ. ಟಾಟಾ ಮೋಟಾರ್ಸ್ ಕೂಡ ಕಾರುಗಳ ಬೆಲೆ ಇಳಿಕೆ ಮಾಡಿದೆ. 1.45 ಲಕ್ಷ ರೂಪಾಯಿ ವರೆಗೆ ಬೆಲೆ ಇಳಿಕೆ ಮಾಡಲಾಗಿದೆ. ಇದರಿಂದ ಕಾರು ಖರೀದಿಸುವ ಗ್ರಾಹಕರಿಗೆ ನೇರವಾಗಿ ಪ್ರಯೋಜನವಾಗಲಿದೆ.
