alternative app to WhatsApp: ಜೊಹೊ ಕಾರ್ಪೊರೇಷನ್ ನಿರ್ಮಿತ 'ಅರಟೈ' ಎಂಬ ಹೊಸ ದೇಶಿಯ ಮೆಸೇಜಿಂಗ್ ಆಪ್, ವಾಟ್ಸಾಪ್‌ಗೆ ಪರ್ಯಾಯವಾಗಿ ಅಪಾರ ಜನಪ್ರಿಯತೆ ಗಳಿಸುತ್ತಿದೆ. ಕೇವಲ ದಿನವೂ 3 ಲಕ್ಷಕ್ಕು ಅಧಿಕ ಜನ ಆಪ್ ಡೌನ್ಲೋಡ್ ಮಾಡುತ್ತಿದ್ದಾರೆ.

ಮೆಸೇಜಿಂಗ್ ಆಪ್‌ಗಳ ವಿಷಯಕ್ಕೆ ಬಂದರೆ, ಹಲವರಿಗೆ ಮೊದಲು ನೆನಪಿಗೆ ಬರುವುದು ವಾಟ್ಸಾಪ್. ವಾಟ್ಸಾಪ್ ವಿಶ್ವಾದ್ಯಂತ ಹೆಚ್ಚು ಬಳಸುವ ಮೆಸೇಜಿಂಗ್ ಆಪ್ ಎಂದು ಪ್ರಸಿದ್ಧವಾಗಿದೆ. ಆದರೆ, ಈ ಆಪ್‌ಗೆ ಪೈಪೋಟಿ ನೀಡಲು ಭಾರತದಲ್ಲಿ ದೇಶಿಯವಾಗಿ ನಿರ್ಮಿತವಾದ ಹೊಸ ಆಪ್ ಬರುತ್ತಿದ್ದು, ಚಾಟಿಂಗ್ ಪ್ರಿಯರಲ್ಲಿ ಹೊಸ ಕುತೂಹಲ ಸೃಷ್ಟಿಸಿದೆ. ಅದೇ ಅರಟೈ ಆಪ್.

ಅರಟ್ಟೈ ಅಪ್ಲಿಕೇಶನ್‌ ನಿರ್ಮಿಸಿದ್ದು ಯಾರು?

Arattai ಅಪ್ಲಿಕೇಶನ್ ಅಥವಾ ಮೆಸೇಜಿಂಗ್ ಆಪ್ ಅನ್ನು ಸ್ವದೇಶಿ ತಂತ್ರಜ್ಞಾನ ಸಂಸ್ಥೆಯಾದ ಜೊಹೊ ಕಾರ್ಪೊರೇಷನ್ ನಿರ್ಮಿಸಿದೆ. ಈ ಹೊಸ ಮೆಸೇಜಿಂಗ್ ಅಪ್ಲಿಕೇಶನ್ ಅರಟೈ ಈಗ ದೇಶಾದ್ಯಂತ ಚರ್ಚೆಯ ವಿಷಯವಾಗಿದೆ. ಕೇವಲ ಮೂರು ದಿನಗಳಲ್ಲಿ ಈ ಅಪ್ಲಿಕೇಶನ್‌ ಅನ್ನು ಗೂಗಲ್ ಪ್ಲೇ ಮೂಲಕ ಡೌನ್‌ಲೋಡ್‌ ಮಾಡುವವರ ಸಂಖ್ಯೆ ತೀವ್ರವಾಗಿ ಹೆಚ್ಚಾಗಿದೆ. ಆರಂಭದಲ್ಲಿ, ದಿನಕ್ಕೆ ಕೇವಲ 3,000 ಸೈನ್‌ಅಪ್‌ಗಳು ಮಾತ್ರ ಇದ್ದವು, ಆದರೆ ಈಗ ಅವು ಇದ್ದಕ್ಕಿದ್ದಂತೆ ದಿನಕ್ಕೆ 3.5 ಲಕ್ಷವನ್ನು ತಲುಪಿವೆ. ಈ ಮಾಹಿತಿಯನ್ನು ಜೊಹೊ ಸಂಸ್ಥಾಪಕ ಶ್ರೀಧರ್ ವೆಂಬು ಸಾಮಾಜಿಕ ಜಾಲತಾಣದಲ್ಲಿಬಹಿರಂಗಪಡಿಸಿದ್ದಾರೆ.

ಅರಟ್ಟೈ ಅಪ್ಲಿಕೇಶನ್‌ನ ವೈಶಿಷ್ಟ್ಯಗಳೇನು?

'ಅರಟ್ಟೈ' ಎಂದರೆ ತಮಿಳಿನಲ್ಲಿ ಮಾತನಾಡುವುದು ಎಂದರ್ಥ. ಈ ಅಪ್ಲಿಕೇಶನ್ 2021 ರಲ್ಲಿ ಬಿಡುಗಡೆಯಾದರೂ, ಇದು ಈಗ ಅಪಾರ ಜನಪ್ರಿಯತೆಯನ್ನು ಗಳಿಸುತ್ತಿದೆ. ಇದು ವಾಟ್ಸಾಪ್‌ನಂತೆಯೇ ವೈಯಕ್ತಿಕ ಚಾಟ್‌ಗಳು, ಗುಂಪು ಸಂಭಾಷಣೆಗಳು, ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುವ ಸೌಲಭ್ಯಗಳನ್ನು ಹೊಂದಿದೆ. ಇದರ ಜೊತೆಗೆ ವಾಯ್ಸ್ ಮೆಸೇಜ್, ಸ್ಟೋರಿಗಳನ್ನು ಹಾಗು ಚಾನೆಲ್‌ಗಳ ಸೇರ್ಪಡೆಯೂ ಆಗಿದ್ದು, ಒಂದು ಪೂರ್ಣ ಪ್ರಮಾಣದ ಸಂದೇಶ ಕಳುಹಿಸುವ ವೇದಿಕೆಯಾಗಿದೆ.

ಟೆಕ್ಟ್‌ ಮೀಡಿಯಾ ಹಾಗೂ ಫೈಲ್‌ಗಳನ್ನು ಅತ್ತಿಂದಿತ್ತ ಕಳುಹಿಸುವ ಮೂಲಭೂತ ವೈಶಿಷ್ಟ್ಯಗಳ ಜೊತೆಗೆ, ಅರಟ್ಟೈ ಅಪ್ಲಿಕೇಶನ್ ಆಡಿಯೊ, ವಿಡಿಯೋ ಕರೆಗಳ ಸೌಲಭ್ಯಗಳನ್ನು ಸಹ ತನ್ನ ಬಳಕೆದಾರರಿಗೆ ನೀಡುತ್ತದೆ (ಇದು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್‌ನೊಂದಿಗೆ). ಇದು ಡೆಸ್ಕ್‌ಟಾಪ್ ಮತ್ತು ಆಂಡ್ರಾಯ್ಡ್ ಟಿವಿಗಳಿಗೂ ಕನೆಕ್ಟ್ ಆಗುತ್ತದೆ. ಇದರ ಜೊತೆಗೆ ಇದು ಉದ್ಯಮಕ್ಕೆ ಅಗತ್ಯವಾದ ಪರಿಕರಗಳನ್ನು ಸಹ ಒಳಗೊಂಡಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಕಂಪನಿಯು ಗೌಪ್ಯತೆ ರಕ್ಷಣೆಗೆ ವಿಶೇಷ ಗಮನ ಹರಿಸುತ್ತಿದೆ. ಯಾವುದೇ ಸಂದರ್ಭದಲ್ಲೂ ಬಳಕೆದಾರರ ವೈಯಕ್ತಿಕ ಡೇಟಾದಿಂದ ಹಣ ಗಳಿಸುವುದಿಲ್ಲ ಎಂದು ಜೊಹೊ ಸ್ಪಷ್ಟಪಡಿಸಿದೆ.

ಡೌನ್‌ಲೋಡ್‌ಗಳ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವೇನು?

ಈ ಅಪ್ಲಿಕೇಶನ್ 2021 ರಿಂದ ಲಭ್ಯವಿದ್ದರೂ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಪ್ರಚಾರ ಮಾಡಿದ ನಂತರ ಇದು ಇತ್ತೀಚೆಗೆ ಜನಪ್ರಿಯತೆಯನ್ನು ಗಳಿಸಿತು. ಇದರೊಂದಿಗೆ, ಅರಟ್ಟೈ ಅಪ್ಲಿಕೇಶನ್‌ನ ಡೌನ್‌ಲೋಡ್‌ಗಳು ಕೇವಲ ಮೂರು ದಿನಗಳಲ್ಲಿ 100 ಪಟ್ಟು ಹೆಚ್ಚಾಗಿದೆ. ಇದು ಆಂಡ್ರಾಯ್ಡ್ ಮತ್ತು ಐಒಎಸ್ ಅಪ್ಲಿಕೇಶನ್ ಸ್ಟೋರ್‌ಗಳಲ್ಲಿ ನೆಟ್‌ವರ್ಕಿಂಗ್ ವಿಭಾಗದಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಆದಾಗ್ಯೂ, ಬಳಕೆದಾರರ ಹೆಚ್ಚಳದ ಜೊತೆಗೆ, ಕೆಲವು ತಾಂತ್ರಿಕ ಸಮಸ್ಯೆಗಳು ಒಟಿಪಿ ವಿಳಂಬಗಳು, ಕಾಂಟ್ಯಾಕ್ಟ್ ಸಿಂಕ್ ದೋಷಗಳು, ಕರೆ ವೈಫಲ್ಯಗಳನ್ನು ಇವು ಎದುರಿಸುತ್ತಿವೆ ಇವುಗಳನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಜೊಹೊ ಹೇಳಿದೆ.

ಇದು ವಾಟ್ಸಾಪ್ ಜೊತೆ ಸ್ಪರ್ಧಿಸುತ್ತದೆಯೇ?

ಪ್ರಸ್ತುತ, ಭಾರತದಲ್ಲಿ 500 ಮಿಲಿಯನ್‌ಗಿಂತಲೂ ಹೆಚ್ಚು ಜನ ವಾಟ್ಸಾಪ್ ಬಳಕೆದಾರರಿದ್ದಾರೆ. ಕುಟುಂಬ, ಕಚೇರಿ ಮತ್ತು ವ್ಯವಹಾರ ವಹಿವಾಟುಗಳಲ್ಲಿ ವಾಟ್ಸಾಪ್ ಪ್ರಮುಖ ಪಾತ್ರ ವಹಿಸುತ್ತದೆ. ಈ ಸಂದರ್ಭದಲ್ಲಿ ಅರಟ್ಟೈಗೆ ಇದು ದೊಡ್ಡ ಸವಾಲಾಗಿದೆ. ಪ್ರಸ್ತುತ, ಅರಟ್ಟೈನಲ್ಲಿ ಕರೆಗಳನ್ನು ಮಾತ್ರ ಎನ್‌ಕ್ರಿಪ್ಟ್ ಮಾಡಲಾಗುತ್ತದೆ, ಆದರೆ ಚಾಟ್‌ಗಳು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ಹೊಂದಿಲ್ಲ. ಇದು ವಾಟ್ಸಾಪ್‌ಗೆ ಪ್ಲಸ್ ಪಾಯಿಂಟ್ ಆಗಿದೆ. ಆದಾಗ್ಯೂ, ಜೊಹೊ ತನ್ನ ಗೌಪ್ಯತೆ ಭರವಸೆಯನ್ನು ತ್ವರಿತವಾಗಿ ಕಾರ್ಯಗತಗೊಳಿಸಿದರೆ ಮತ್ತು ಸರ್ವರ್ ಸಾಮರ್ಥ್ಯವನ್ನು ಹೆಚ್ಚಿಸಿದರೆ, ಭವಿಷ್ಯದಲ್ಲಿ ಭಾರತೀಯ ಅಪ್ಲಿಕೇಶನ್ ಅರಟ್ಟೈ ವಾಟ್ಸಾಪ್‌ಗೆ ಪ್ರಬಲ ಪ್ರತಿಸ್ಪರ್ಧಿಯಾಗುವ ಸಾಮರ್ಥ್ಯವನ್ನು ಹೊಂದಿದೆ ಎಂದು ತಜ್ಞರು ನಂಬುತ್ತಾರೆ.

ಇದನ್ನೂ ಓದಿ: ದಿನಾ ಮನೆ ಕೆಲಸಕ್ಕೆ ಸಹಾಯ ಮಾಡುವ ಮಕ್ಕಳು ಬದುಕಿನಲ್ಲಿ ಹೆಚ್ಚು ಯಶಸ್ವಿಯಾಗ್ತಾರೆ: ಅಧ್ಯಯನ ವರದಿ

ಇದನ್ನೂ ಓದಿ: ಗರ್ಭ ನಿರೋಧಕ ಕಾಪರ್‌ ಟಿಯನ್ನು ಕೈಯಲ್ಲಿ ಹಿಡಿದುಕೊಂಡೆ ಜನಿಸಿದ ಮಿರಾಕಲ್ ಬೇಬಿ!