ಅಮೆರಿಕದ ಚಿನ್ನದ ಮೀಸಲು ನಿಧಿಯ ಮೌಲ್ಯವು ಇತಿಹಾಸದಲ್ಲೇ ಮೊದಲ ಬಾರಿಗೆ 1 ಟ್ರಿಲಿಯನ್ ಡಾಲರ್ ತಲುಪಿದ್ದು, ಜಾಗತಿಕ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ. ಈ ಬೆಳವಣಿಗೆಯು ಚಿನ್ನದ ಪ್ರಮುಖ ಆಮದುದಾರ ದೇಶವಾದ ಭಾರತದ ಮೇಲೆ ನೇರ ಪರಿಣಾಮ ಬೀರಲಿದೆ.
ಅಮೆರಿಕ ಸರ್ಕಾರದ ಚಿನ್ನದ ಮೀಸಲು ನಿಧಿಯ ಮಾರುಕಟ್ಟೆ ಮೌಲ್ಯವು ಇತಿಹಾಸದಲ್ಲೇ ಪ್ರಥಮ ಬಾರಿಗೆ 1 ಟ್ರಿಲಿಯನ್ ಡಾಲರ್ ತಲುಪಿದೆ. ಈ ಬೆಳವಣಿಗೆ ಜಾಗತಿಕ ಮಟ್ಟದಲ್ಲಿ ಚಿನ್ನದ ಮೇಲಿನ ಹೆಚ್ಚುತ್ತಿರುವ ಬೇಡಿಕೆಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ. ದೇಶಗಳ ಚಿನ್ನದ ನಿಕ್ಷೇಪಗಳ ಮೌಲ್ಯವು ಸಹ ಏರಿಕೆಯಾಗುತ್ತಿದೆ. ಯುಎಸ್ ಖಜಾನೆಯ ಚಿನ್ನದ ನಿಕ್ಷೇಪಗಳು ಪ್ರಥಮ ಬಾರಿಗೆ $1 ಟ್ರಿಲಿಯನ್ ಮೌಲ್ಯ ದಾಟಿವೆ. ಸೆಪ್ಟೆಂಬರ್ 30, ಸೋಮವಾರದಂದು ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ $3,824.50 ತಲುಪಿದ್ದು, ಇದು ಈ ವರ್ಷ ಮಾತ್ರವೇ 45% ಏರಿಕೆ ದಾಖಲಿಸಿದೆ.
ಅಮೆರಿಕದ ಚಿನ್ನದ ಹೂಡಿಕೆ ಏರಿಕೆ
ಅಮೆರಿಕದಲ್ಲಿ ಚಿನ್ನದ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ ಅಲ್ಲಿ ಹೂಡಿಕೆದಾರರು ಮತ್ತು ಉದ್ಯಮಿಗಳು ಹೆಚ್ಚಾಗಿ ಚಿನ್ನವನ್ನು ಖರೀದಿಸುತ್ತಿದ್ದಾರೆ. ಹೂಡಿಕೆಯ ಪ್ರಮಾಣ ಏರಿದಂತೆ ಮಾರುಕಟ್ಟೆಯಲ್ಲಿನ ಚಿನ್ನದ ಬೆಲೆಯೂ ಮತ್ತಷ್ಟು ಏರುತ್ತದೆ. ಇದರಿಂದಾಗಿ ಚಿನ್ನವು ಆ ದೇಶದಲ್ಲಿ "ಸುರಕ್ಷಿತ ಹೂಡಿಕೆ" ಎಂದು ಮತ್ತಷ್ಟು ಬಲವಾದ ಸ್ಥಾನವನ್ನು ಪಡೆಯುತ್ತಿದೆ.
ಭಾರತದ ಮೇಲೆ ನೇರ ಪರಿಣಾಮ
ಭಾರತವು ಚಿನ್ನದ ಅತಿ ದೊಡ್ಡ ಆಮದುದಾರ ದೇಶಗಳಲ್ಲಿ ಒಂದಾಗಿದೆ. ಭಾರತೀಯ ಜನತೆ ವಿಶೇಷವಾಗಿ ಹಬ್ಬ-ಹರಿದಿನಗಳಲ್ಲಿ ಹಾಗೂ ಮದುವೆ ಸಮಾರಂಭಗಳಲ್ಲಿ ಚಿನ್ನವನ್ನು ಆಭರಣವಾಗಿ ಖರೀದಿಸುವ ಪ್ರವೃತ್ತಿ ಹೊಂದಿದ್ದಾರೆ. ಹೀಗಾಗಿ ಚಿನ್ನದ ಮೇಲೆ ಸದಾ ಉನ್ನತ ಮಟ್ಟದ ಬೇಡಿಕೆ ಇರುತ್ತದೆ. ಅಮೆರಿಕದಲ್ಲಿ ಬೆಲೆ ಏರಿದಂತೆ, ಭಾರತವು ಚಿನ್ನವನ್ನು ಆಮದು ಮಾಡಿಕೊಳ್ಳುವ ವೆಚ್ಚ ಹೆಚ್ಚುತ್ತದೆ. ಆಮದು ವೆಚ್ಚ ಏರಿದಷ್ಟೂ ಭಾರತದ ಮಾರುಕಟ್ಟೆಯಲ್ಲಿ ಚಿನ್ನದ ಗಟ್ಟಿಗಳು ಮತ್ತು ಚಿನ್ನಾಭರಣಗಳ ಬೆಲೆ ಗಗನಕ್ಕೇರುತ್ತದೆ.
ಸಾಮಾನ್ಯ ಜನರ ಸಂಕಷ್ಟ
ಮಾರುಕಟ್ಟೆ ತಜ್ಞರ ಅಭಿಪ್ರಾಯದಂತೆ, ಅಮೆರಿಕದಲ್ಲಿ ಹೂಡಿಕೆ ಹೆಚ್ಚಾಗುವುದರಿಂದ ಚಿನ್ನದ ಜಾಗತಿಕ ಬೆಲೆಗಳು ಏರಿಕೆಯಾಗುತ್ತವೆ. ಇದರ ದುಷ್ಪರಿಣಾಮವಾಗಿ ಭಾರತದಲ್ಲಿ ಚಿನ್ನದ ಬೆಲೆ ಯಾರೂ ಊಹಿಸದಷ್ಟು ಮಟ್ಟಿಗೆ ಏರಿ ಸಾಮಾನ್ಯ ಜನರಿಗೆ ಚಿನ್ನವನ್ನು ಖರೀದಿಸುವುದು ದಿನದಿಂದ ದಿನಕ್ಕೆ ಕಷ್ಟವಾಗಲಿದೆ. 1 ಗ್ರಾಂ ಅಥವಾ 1 ತೊಲೆಯ ಚಿನ್ನ ಕೊಳ್ಳುವುದು ಸಹ ಮಧ್ಯಮ ವರ್ಗ ಮತ್ತು ಬಡ ಕುಟುಂಬಗಳಿಗೆ ಆರ್ಥಿಕ ಭಾರವಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಚಿನ್ನದ ಬೆಲೆ ಏರಿಕೆಯ ಪ್ರಮುಖ ಕಾರಣಗಳು
ವಿಶ್ವದ ಅತಿದೊಡ್ಡ ಚಿನ್ನದ ನಿಕ್ಷೇಪಗಳನ್ನು ಹೊಂದಿರುವ ಅಮೆರಿಕದ ಈ ಬೆಳವಣಿಗೆ ಹಲವು ಜಾಗತಿಕ ಅಂಶಗಳು ಕಾರಣವಾಗಿವೆ.
- ವ್ಯಾಪಾರ ಯುದ್ಧಗಳು,
- ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು,
- ಯುಎಸ್ ಸರ್ಕಾರದ ಹಣಕಾಸು ಅಸ್ಥಿರತೆ ಕುರಿತು ಕಳವಳಗಳು,
- ಹೂಡಿಕೆದಾರರು ಸುರಕ್ಷಿತ ಸಂಪತ್ತಿನತ್ತ ಮುಖ ಮಾಡಿರುವುದು.
ಅದೇ ರೀತಿ, ವಿನಿಮಯ-ವಹಿವಾಟು ನಿಧಿಗಳಲ್ಲಿ (ETF) ಹೂಡಿಕೆ ಹೆಚ್ಚಳ ಮತ್ತು ಫೆಡರಲ್ ರಿಸರ್ವ್ ಬಡ್ಡಿದರ ಕಡಿತ ನಿರ್ಧಾರ ಕೂಡ ಚಿನ್ನದ ಬೆಲೆಯಲ್ಲಿ ಏರಿಕೆಗೆ ಕಾರಣವಾಗಿದೆ.
ಯುಎಸ್ ಚಿನ್ನದ ಮೀಸಲುಗಳ ವೈಶಿಷ್ಟ್ಯ
ಬ್ಲೂಂಬರ್ಗ್ ವರದಿ ಪ್ರಕಾರ, $1 ಟ್ರಿಲಿಯನ್ ಮೌಲ್ಯವು ಸರ್ಕಾರದ ಅಧಿಕೃತ ಬ್ಯಾಲೆನ್ಸ್ ಶೀಟ್‌ನಲ್ಲಿರುವ $11 ಬಿಲಿಯನ್ ಅಂಕಿ ಅಂಶಕ್ಕಿಂತ 90 ಪಟ್ಟು ಹೆಚ್ಚು. 1973ರಲ್ಲಿ ಕಾಂಗ್ರೆಸ್ ನಿಗದಿಪಡಿಸಿದ $42.22 ದರದಲ್ಲೇ ಅಧಿಕೃತ ಮೌಲ್ಯ ಇಂದಿಗೂ ಸ್ಥಿರವಾಗಿದೆ.
ಈ ವರ್ಷ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರು, ಚಿನ್ನದ ನಿಕ್ಷೇಪಗಳನ್ನು ಮಾರುಕಟ್ಟೆ ಬೆಲೆಯಲ್ಲಿ ಮರುಮೌಲ್ಯಮಾಪನ ಮಾಡಿದರೆ, ಸರ್ಕಾರಕ್ಕೆ $990 ಬಿಲಿಯನ್ ಅನಿರೀಕ್ಷಿತ ಲಾಭ ಸಾಧ್ಯವೆಂದು ಹೇಳಿದ್ದರು. ಆದರೆ ನಂತರ ಈ ಕಲ್ಪನೆಯನ್ನು ಅಳಿಸಲಾಯ್ತು.
ಅಮೆರಿಕವು ವಿಶಿಷ್ಟ ವ್ಯವಸ್ಥೆಯನ್ನು ಅನುಸರಿಸುತ್ತಿದ್ದು, ಚಿನ್ನವನ್ನು ಕೇಂದ್ರ ಬ್ಯಾಂಕ್‌ಗಿಂತಲೂ ಸರ್ಕಾರವೇ ನೇರವಾಗಿ ಹೊಂದಿದೆ. ಫೆಡರಲ್ ರಿಸರ್ವ್, ಖಜಾನೆಯ ಹಿಡುವಳಿಗಳಿಗೆ ಹೊಂದುವ ಪ್ರಮಾಣದ ಚಿನ್ನದ ಪ್ರಮಾಣಪತ್ರಗಳನ್ನು ಹೊಂದಿದೆ ಮತ್ತು ಸರ್ಕಾರಕ್ಕೆ ಅದಕ್ಕೆ ಸಮಾನವಾದ ಡಾಲರ್ ಕ್ರೆಡಿಟ್ ಒದಗಿಸುತ್ತದೆ.
ಬಜೆಟ್ ಕೊರತೆ ಮತ್ತು ಮರುಮೌಲ್ಯಮಾಪನದ ಪರಿಣಾಮ
ಪ್ರಸ್ತುತ ಮಾರುಕಟ್ಟೆ ದರದ ಆಧಾರದ ಮೇಲೆ ಚಿನ್ನವನ್ನು ಮರುಮೌಲ್ಯ ಮಾಡಿದರೆ, ಖಜಾನೆಗೆ ಸರಿಸುಮಾರು $990 ಬಿಲಿಯನ್ ಹೆಚ್ಚುವರಿ ಹಣ ಸೇರ್ಪಡೆಯಾಗುತ್ತದೆ. ಈ ಮೊತ್ತವು ಆಗಸ್ಟ್‌ವರೆಗೆ ದಾಖಲಾಗಿರುವ $1.973 ಟ್ರಿಲಿಯನ್ ಬಜೆಟ್ ಕೊರತೆಯ ಅರ್ಧ ಭಾಗವನ್ನು ಪೂರೈಸುವಷ್ಟು.
ಆದಾಗ್ಯೂ, ಚಿನ್ನದ ಮೌಲ್ಯಮಾಪನ ಬದಲಾವಣೆ ಹಣಕಾಸು ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ. ಇದರಿಂದ ದ್ರವ್ಯಪ್ರವಾಹ (Liquidity) ಹೆಚ್ಚಾಗುವುದು ಮತ್ತು ಫೆಡರಲ್ ರಿಸರ್ವ್ ಕೈಗೊಂಡಿರುವ ಬ್ಯಾಲೆನ್ಸ್ ಶೀಟ್ ಕಡಿತ ಪ್ರಕ್ರಿಯೆ ಇನ್ನಷ್ಟು ಸಂಕೀರ್ಣವಾಗಬಹುದು.
ಇತರ ದೇಶಗಳ ಅನುಭವ
ಅಮೆರಿಕ ಮಾತ್ರವಲ್ಲ, ಜರ್ಮನಿ, ಇಟಲಿ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ ಹಲವಾರು ರಾಷ್ಟ್ರಗಳು ಹಿಂದೆ ತಮ್ಮ ಚಿನ್ನದ ಮೀಸಲುಗಳನ್ನು ಮರುಮೌಲ್ಯಮಾಪನ ಮಾಡಿಕೊಂಡಿವೆ. ಫೆಡರಲ್ ರಿಸರ್ವ್ ಅರ್ಥಶಾಸ್ತ್ರಜ್ಞರ ಪ್ರಕಾರ, ಇಂತಹ ಕ್ರಮಗಳು ಹಲವು ದೇಶಗಳಲ್ಲಿ ಕಳೆದ ಕೆಲವು ದಶಕಗಳಲ್ಲಿ ಅನುಷ್ಠಾನಗೊಂಡಿವೆ. ಚಿನ್ನದ ಬೆಲೆಗಳ ಈ ಏರಿಕೆ, ಅಮೆರಿಕದ ಆರ್ಥಿಕ ನೀತಿ, ಜಾಗತಿಕ ಅಸ್ಥಿರತೆ ಮತ್ತು ಹೂಡಿಕೆದಾರರ ಮನೋಭಾವ ಎಲ್ಲ ಸೇರಿ ವಿಶ್ವ ಆರ್ಥಿಕತೆಯ ಭವಿಷ್ಯದ ದಿಕ್ಕು ತೋರಿಸುತ್ತಿವೆ.
