SSY account benefits ಹೆಣ್ಣು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಸುಕನ್ಯಾ ಸಮೃದ್ಧಿ ಯೋಜನೆ ಒಂದು ಸುವರ್ಣಾವಕಾಶ. ಕಡಿಮೆ ಹೂಡಿಕೆಯಲ್ಲಿ ಉತ್ತಮ ಲಾಭ ಪಡೆಯಲು ಇದೊಂದು ಸುಲಭ ಮಾರ್ಗ. ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ನೆಯಲ್ಲಿ ಹೆಣ್ಣು ಮಗು ಜನಿಸಿದ ತಕ್ಷಣ, ಪಾಲಕರಿಗೆ ಅದರ ಶಿಕ್ಷಣ ಮತ್ತು ಮದುವೆಯ ಕುರಿತು ಚಿಂತೆ ಶುರುವಾಗುತ್ತದೆ. ಇಂತಹ ಜವಾಬ್ದಾರಿಗಳನ್ನು ನಿಭಾಯಿಸಲು ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಅತ್ಯುತ್ತಮ ಯೋಜನೆಗಳಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ (SSY) ಕೂಡ ಒಂದು. ಈ ಯೋಜನೆ ಸಣ್ಣ ಉಳಿತಾಯ ಯೋಜನೆಗಳಲ್ಲಿ ಅತಿ ಹೆಚ್ಚು ಬಡ್ಡಿ ನೀಡುವ ಜೊತೆಗೆ ಆದಾಯ ತೆರಿಗೆ ವಿನಾಯಿತಿ ಸೌಲಭ್ಯವನ್ನೂ ಹೊಂದಿದೆ.

ಸುಕನ್ಯಾ ಸಮೃದ್ಧಿ ಯೋಜನೆ ಎಂದರೇನು?

ಹೆಣ್ಣುಮಕ್ಕಳ ಭವಿಷ್ಯವನ್ನು ಸುರಕ್ಷಿತಗೊಳಿಸಲು ಮತ್ತು ಅವರ ಮೇಲಿನ ಸಾಮಾಜಿಕ ತಾರತಮ್ಯವನ್ನು ಹೋಗಲಾಡಿಸಲು ಈ ಯೋಜನೆಯನ್ನು ರೂಪಿಸಲಾಗಿದೆ. 10 ವರ್ಷದೊಳಗಿನ ಹೆಣ್ಣುಮಗುವಿನ ಹೆಸರಿನಲ್ಲಿ ಪಾಲಕರು ಈ ಖಾತೆಯನ್ನು ತೆರೆಯಬಹುದು. ಒಂದು ಕುಟುಂಬದ ಇಬ್ಬರು ಹೆಣ್ಣುಮಕ್ಕಳಿಗೆ ಈ ಸೌಲಭ್ಯ ಲಭ್ಯವಿದೆ. ಒಂದು ವೇಳೆ ಮೊದಲ ಮಗು ಹೆಣ್ಣಾಗಿ, ನಂತರ ಅವಳಿ ಹೆಣ್ಣುಮಕ್ಕಳು ಜನಿಸಿದರೆ, ಮೂವರಿಗೂ ಪ್ರತ್ಯೇಕ ಖಾತೆ ತೆರೆಯಬಹುದು.

ಖಾತೆ ತೆರೆಯುವುದು ಹೇಗೆ?

ಸುಕನ್ಯಾ ಸಮೃದ್ಧಿ ಖಾತೆಯನ್ನು ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ತೆರೆಯಬಹುದು. ನಿಮಗೆ ಹಣ ಜಮಾ ಮಾಡಲು ಅನುಕೂಲವಾಗುವ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ.

ಅಗತ್ಯವಿರುವ ದಾಖಲೆಗಳು:

  • ಮಗುವಿನ ಜನನ ಪ್ರಮಾಣ ಪತ್ರ.
  • ಪಾಲಕರ ಗುರುತಿನ ಮತ್ತು ವಿಳಾಸದ ಪುರಾವೆಗಳಾದ ಆಧಾರ್ ಕಾರ್ಡ್, ಪಾನ್ ಕಾರ್ಡ್, ಪಾಸ್‌ಪೋರ್ಟ್, ರೇಷನ್ ಕಾರ್ಡ್ ಅಥವಾ ಡ್ರೈವಿಂಗ್ ಲೈಸೆನ್ಸ್.
  • SSY ಖಾತೆ ತೆರೆಯುವ ಫಾರ್ಮ್ (SSA-1). ಇದನ್ನು ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಪಡೆಯಬಹುದು, ಅಥವಾ ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
  • ಆರಂಭಿಕ ಠೇವಣಿಗಾಗಿ ಕನಿಷ್ಠ 250 ರೂ. (ನಗದು, ಚೆಕ್ ಅಥವಾ ಆನ್‌ಲೈನ್ ಪಾವತಿ ಮೂಲಕ).

ನಿಯಮಗಳು ಮತ್ತು ಲಾಭಗಳು:

ಠೇವಣಿ: ವಾರ್ಷಿಕ ಕನಿಷ್ಠ 250 ರೂ.ನಿಂದ ಗರಿಷ್ಠ 1.5 ಲಕ್ಷ ರೂ.ವರೆಗೆ ಜಮಾ ಮಾಡಬಹುದು. ಒಂದು ವರ್ಷ ಕನಿಷ್ಠ ಮೊತ್ತ ಜಮಾ ಮಾಡದಿದ್ದರೆ, ಖಾತೆ ನಿಷ್ಕ್ರಿಯಗೊಳ್ಳುತ್ತದೆ. ಅದನ್ನು 50 ರೂ. ದಂಡದೊಂದಿಗೆ ಮತ್ತೆ ಸಕ್ರಿಯಗೊಳಿಸಬಹುದು.

ಬಡ್ಡಿ ದರ: ಇದು ಸರ್ಕಾರದ ಸಣ್ಣ ಉಳಿತಾಯ ಯೋಜನೆಗಳಲ್ಲೇ ಅತಿ ಹೆಚ್ಚು ಬಡ್ಡಿ ದರ ಹೊಂದಿದೆ. ಪ್ರಸ್ತುತ, ಶೇ. 7.6 ರಷ್ಟು ಬಡ್ಡಿಯನ್ನು ನೀಡಲಾಗುತ್ತಿದೆ. ಈ ಬಡ್ಡಿ ದರವು ಪ್ರತಿ ವರ್ಷ ಬದಲಾಗಬಹುದು.

ಹಣ ಹಿಂಪಡೆಯುವಿಕೆ: ಮಗುವಿಗೆ 21 ವರ್ಷ ತುಂಬಿದ ನಂತರ ಸಂಪೂರ್ಣ ಮೊತ್ತವನ್ನು ಹಿಂಪಡೆಯಬಹುದು. ಆದರೆ, ಆಕೆಯ 18ನೇ ವಯಸ್ಸಿನಲ್ಲಿ ಉನ್ನತ ಶಿಕ್ಷಣಕ್ಕಾಗಿ ಶೇ. 50ರಷ್ಟು ಹಣವನ್ನು ಹಿಂಪಡೆಯಲು ಅವಕಾಶವಿದೆ.

ತೆರಿಗೆ ವಿನಾಯಿತಿ: ಸುಕನ್ಯಾ ಸಮೃದ್ಧಿ ಖಾತೆಗೆ ಜಮಾ ಮಾಡುವ ಹಣಕ್ಕೆ ಆದಾಯ ತೆರಿಗೆ ಕಾಯಿದೆ ಸೆಕ್ಷನ್ 80C ಅಡಿಯಲ್ಲಿ ವಾರ್ಷಿಕ 1.5 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು.

ಈ ಯೋಜನೆ ನಿಮ್ಮ ಮಗಳ ಭವಿಷ್ಯವನ್ನು ಆರ್ಥಿಕವಾಗಿ ಭದ್ರಗೊಳಿಸಲು ಒಂದು ಉತ್ತಮ ಮಾರ್ಗವಾಗಿದೆ. ಆದ್ದರಿಂದ, ಆದಷ್ಟು ಬೇಗ ಖಾತೆ ತೆರೆದು ಉಳಿತಾಯವನ್ನು ಪ್ರಾರಂಭಿಸಿ