ಪುರುಷರಿಗೆ ಶಾಕಿಂಗ್ ಆಗುವಂಥ ಘಟನೆಗಳು ಬೆಳಕಿಗೆ ಬಂದಿವೆ. ನಿಮ್ಮ ಹಿಂದೆ ಕೆಲವು ಬಾರ್ ಮತ್ತು ರೆಸ್ಟೋರೆಂಟ್ಗಳು ಹುಡುಗಿಯರನ್ನು ಛೂ ಬಿಡ್ತಿವೆ. ಅದೇನು ಸ್ಕ್ಯಾಮ್ ನೋಡಿ....
ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ ಎನ್ನುವ ಮಾತು ಕೇಳಿದ್ದೀರಲ್ಲವೆ? ಇಲ್ಲಿ ಮೋಸ ಮಾಡುವವರಿಗಿಂತಲೂ ಬಹುದೊಡ್ಡ ಅಪರಾಧಿಗಳು ಮೋಸ ಹೋಗುವವರೇ ಎನ್ನಲಾಗುತ್ತದೆ. ಅದರಲ್ಲಿಯೂ ಸುಂದರ ಹುಡುಗಿಯರನ್ನು ನೋಡಿ ಇಲ್ಲವೇ ಹೆಣ್ಣುಮಕ್ಕಳ ಸುಮಧುರ ದನಿಗೆ ಮಾರುಹೋಗಿ ಟೋಪಿ ಹಾಕಿಸಿಕೊಳ್ಳುವವರೇ ಹೆಚ್ಚುಮಂದಿ. ಕೊನೆಗೆ ಮೋಸ ಹೋದ ಮೇಲೆ ಅವರ ಮರ್ಯಾದೆಯ ಪ್ರಶ್ನೆ ಆಗಿರುತ್ತದೆ ಎನ್ನೋ ಕಾರಣಕ್ಕೆ ಯಾರ ಬಳಿಯೂ ಹೇಳಲು ಅಥವಾ ದೂರು ದಾಖಲಿಸಲು ಹೋಗುವುದಿಲ್ಲ ಎನ್ನುವುದು ಈ ಹುಡುಗಿಯರಿಗೆ ಅಥವಾ ಅವರನ್ನು ಬಳಸಿಕೊಳ್ತಿರೋ ಗ್ಯಾಂಗ್ಗೆ ಚೆನ್ನಾಗಿ ಗೊತ್ತಿರುತ್ತದೆ. ಮೋಸ ಹೋಗುವವರು ವಿವಾಹಿತರಾಗಿರೋ ಹೆಚ್ಚೇ ಇದೆ, ಇಲ್ಲವೇ ಮನೆಯಲ್ಲಿ ಹೇಳದೇ ಕೇಳದೇ ಹುಡುಗಿಯರ ಹಿಂದೆ ಹೋಗಿ ಮೋಸ ಹೋದರೆ ಹೇಳಿಕೊಳ್ಳಲು ನಾಚಿಕೆ ಅಲ್ವಾ?
ಆದ್ದರಿಂದ ಅಪರಿಚಿತ ಹುಡುಗಿಯರು ಮರಳು ಮಾಡಲು ಬಂದರೆ ಮೈಯೆಲ್ಲಾ ಕಣ್ಣಾಗಿ ಇರಬೇಕಾದುದು ಇಂದು ದಾಖಲಾಗ್ತಿರೋ ಪ್ರಕರಣಗಳನ್ನು ನೋಡಿದರೇನೇ ತಿಳಿಯುತ್ತದೆ. ಆದರೆ ಇಲ್ಲೊಂದು ಇನ್ನೂ ಕುತೂಹಲ ಎನ್ನುವ ಘಟನೆ ಬೆಂಗಳೂರಿನಲ್ಲಿಯೇ ನಡೆಯುತ್ತಿದೆ. ಅದೇನೆಂದರೆ, ಪುರುಷರನ್ನು ಮೋಸ ಮಾಡುವುದಕ್ಕಾಗಿಯೇ ಸುಂದರ ಕಾಲೇಜು ಹುಡುಗಿಯರನ್ನು ರೆಸ್ಟೋರೆಂಟ್ಗಳು, ಬಾರ್ಗಳು ಛೂ ಬಿಡುತ್ತಿರುವುದು ಬೆಳಕಿಗೆ ಬಂದಿದೆ. ಈಗಿನ ಹೈಫೈ ಹುಡುಗಿಯರಿಗೆ ಮಜಾ ಮಾಡಲು ದುಡ್ಡು ಸಿಕ್ಕರೆ ಸಾಕು, ಅವರು ಏನು ಕೆಲಸ ಮಾಡಲೂ ಹೇಸುವುದಿಲ್ಲ. ಅಂಥವರದ್ದೇ ರೆಸ್ಟೋರೆಂಟ್ಗಳು ಹೈಯರ್ ಮಾಡಿಕೊಳ್ಳುತ್ತಿವೆ. ಭಾರಿ ಸಂಪಾದನೆಯ ಆಮಿಷ ತೋರಿಸಲಾಗುತ್ತಿದೆ.
ಇಂಥ ಹುಡುಗಿಯರು ದೊಡ್ಡ ಕೆಲಸವನ್ನೇನೂ ಮಾಡಬೇಕಾಗಿಲ್ಲ. ಡೇಟಿಂಗ್ ಆ್ಯಪ್ನಲ್ಲಿ ತಮ್ಮ ಪ್ರೊಫೈಲ್ ಕ್ರಿಯೇಟ್ ಮಾಡಿಕೊಂಡು ಡೇಟಿಂಗ್ಗೆ ಆಸೆ ಪಡುವ ದೊಡ್ಡ ಕುಳಗಳನ್ನು ಇಲ್ಲವೇ ದುಡ್ಡು ಖರ್ಚು ಮಾಡಲು ರೆಡಿ ಇರುವ ಗಂಡುಮಕ್ಕಳನ್ನು ಬಲೆಗೆ ಬೀಳಿಸಿಕೊಳ್ಳುವುದು ಅಷ್ಟೇ. ಕೊನೆಗೆ ಡೇಟಿಂಗ್ ನೆಪದಲ್ಲಿ ಅವರನ್ನು ಆ ರೆಸ್ಟೋರೆಂಟ್ಗೆ ಕರೆದುಕೊಂಡು ಹೋಗುವುದು ಆ ಹುಡುಗಿಯರ ಕೆಲಸ ಅಷ್ಟೇ.
ಹೆಣ್ಣಿನ ಬಲೆಯಲ್ಲಿ ಬಿದ್ದ ಮೇಲೆ ಹುಡುಗರ ಸ್ಥಿತಿ ಏನು ಎನ್ನುವುದು ಬೇರೆ ಕೇಳಬೇಕಾಗಿಲ್ಲ. ಅವರ ಮೃದು ಮಾತಿನ ಮೋಡಿಯಲ್ಲಿ ಸಿಲುಕಿ ಅವರು ಹೇಳಿದ ರೆಸ್ಟೋರೆಂಟ್ಗೆ ಕರೆದುಕೊಂಡು ಹೋಗದೇ ಈ ಬಕ್ರಾಗಳಿಗೆ ವಿಧಿಯಿಲ್ಲ. ಕೊನೆಗೆ ಎಷ್ಟು ಸಾಧ್ಯವೋ ಅಷ್ಟು ಬಿಲ್ ಮಾಡುವುದು ಹುಡುಗಿಯರ ಕೆಲಸ. ಇದು ಕೂಡ ಹುಡುಗಿಯರಿಗೆ ದೊಡ್ಡ ವಿಷ್ಯವೇ ಅಲ್ಲ ಬಿಡಿ. ಹೆಚ್ಚೆಚ್ಚು ಬಿಲ್ ಮಾಡಿದ್ರೆ ಅವರಿಗೆ ಅಷ್ಟೇ ದೊಡ್ಡ ಆಫರ್ ಕೂಡ ಇದೆ. ಅವರು ಮಾಡುವ ಬಿಲ್ಗೆ ಅನುಗುಣವಾಗಿ ಶೇಕಡಾ 20ರಷ್ಟು ಟಿಪ್ಸ್ ಹುಡುಗಿಯರಿಗೆ ಕೊಡಲಾಗುತ್ತದೆ. ಅಂದರೆ 50 ಸಾವಿರ ಬಿಲ್ ಮಾಡಿದ್ರೆ, 20 ಸಾವಿರ ಹುಡುಗಿಯರಿಗೆ. ಇಂಥ ರೆಸ್ಟೋರೆಂಟ್ಗೆ ಹೋದ್ರೆ ಕನಿಷ್ಠ 50 ಸಾವಿರ ಬಿಲ್ ಆಗೇ ಆಗುತ್ತದೆ. ಆದ್ದರಿಂದ ಎಚ್ಚರ ಎಚ್ಚರ!
