Campa Sure ರಿಲಯನ್ಸ್ ಕಂಪನಿಯು ತನ್ನ ಜಿಯೋ ಮಾದರಿಯ ತಂತ್ರದೊಂದಿಗೆ ಬಾಟಲ್ ನೀರಿನ ಉದ್ಯಮಕ್ಕೆ ಕಾಲಿಡುತ್ತಿದೆ. 'ಕ್ಯಾಂಪಾ ಶ್ಯೂರ್' ಬ್ರ್ಯಾಂಡ್ ಅಡಿಯಲ್ಲಿ, ಬಿಸ್ಲೆರಿ ಮತ್ತು ಕಿನ್ಲೆಯಂತಹ ಪ್ರಮುಖ ಬ್ರ್ಯಾಂಡ್‌ಗಳಿಗಿಂತ ಕಡಿಮೆ ಬೆಲೆಗೆ ನೀರನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. 

ಬೆಂಗಳೂರು (ಸೆ.20): ರಿಲಯನ್ಸ್‌ ಇಂಡಸ್ಟ್ರಿಯ ಬಹುದೊಡ್ಡ ಆದಾಯದ ಮೂಲಗಳಲ್ಲಿ ಒಂದಾಗಿರುವ ರಿಲಯನ್ಸ್‌ ಜಿಯೋ ಮಾರುಕಟ್ಟೆಗೆ ಬಂದ ರೀತಿ ಎಲ್ಲರಿಗೂ ನೆನಪಿರಬಹುದು. ಸಿಮ್‌ ಫ್ರೀ, ಅತೀ ಕಡಿಮೆ ಬೆಲೆಗೆ ಪ್ರತಿದಿನ ಒಂದೊಂದು ಜಿಬಿ ಇಂಟರ್ನೆಟ್‌. ಲೆಕ್ಕವಿಲ್ಲದಷ್ಟು ಆಫರ್‌ಗಳು. ತಿಂಗಳ ರಿಚಾರ್ಜ್‌ ಅಂತೂ ಲೆಕ್ಕವೇ ಇಲ್ಲದಷ್ಟು ಕಡಿಮೆ ಇತ್ತು. ಇದರಿಂದಾಗಿ ಆರಂಭದಲ್ಲಿಯೇ ಜನರ ಗಮನಸೆಳೆದ ಜಿಯೋ ಇಂದು ದೇಶದ ನಂ.1 ಟೆಲಿಕಾಂ ಬ್ರ್ಯಾಂಡ್‌ ಆಗಿ ಹೊರಹೊಮ್ಮಿದೆ. ಜಿಯೋ ಎದುರಾಗಿ ನಿಂತಿರುವ ಖಾಸಗಿ ಟೆಲಿಕಾಂ ಕಂಪನಿಯೆಂದರೆ ಸದ್ಯ ಏರ್‌ಟೆಲ್‌ ಮಾತ್ರ. ವೊಡಾಫೋನ್‌ ಐಡಿಯಾ ಇದ್ದೂ ಇಲ್ಲದಂತಿದೆ. ಇನ್ನು ಬಿಎಸ್‌ಎನ್‌ಎಲ್‌ ಸರ್ಕಾರಿ ಸ್ವಾಮ್ಯದ ಕಂಪನಿ. ಟಾಟಾ ಡೊಕೊಮೋ, ಏರ್‌ಸೆಲ್‌ ಸೇರಿದಂತೆ ಹಲವು ಕಂಪನಿಗಳು ಹೇಳ ಹೆಸರಿಲ್ಲದಂತೆ ಮುಚ್ಚಿಹೋದವು.

ಈಗ ಅದೇ ಪ್ಲ್ಯಾನ್‌ಅನ್ನು ರಿಲಯನ್ಸ್‌ ಕಂಪನಿ ಬಾಟಲ್‌ ವಾಟರ್‌ ಉದ್ಯಮದಲ್ಲಿ ಮಾಡಲು ಹೊರಟಿದೆ. ಕ್ಯಾಂಪಾ ಕೋಲಾ ಮೂಲಕ ಕೊಕಾ ಕೋಲಾ ಹಾಗೂ ಪೆಪ್ಸಿಕೋ ಮಾರುಕಟ್ಟೆಯನ್ನು ದಮನ ಮಾಡಲು ಆರಂಭಿಸಿದ್ದ ರಿಲಯನ್ಸ್‌ ಈಗ 20 ಸಾವಿರ ಕೋಟಿ ರೂಪಾಯಿ ಮೌಲ್ಯದ ಬಾಟಲ್‌ ವಾಟರ್‌ ಉದ್ಯಮಕ್ಕೆ ಕಾಲಿಡಲು ಮುಂದಾಗಿದೆ.

Scroll to load tweet…

ಅಕ್ಟೋಬರ್‌ನಲ್ಲಿ ಬರಲಿದೆ ಕ್ಯಾಂಪಾ ಶ್ಯೂರ್‌ ವಾಟರ್‌ ಬಾಟಲ್‌!

ಪ್ರಸ್ತುತ ಬ್ಲ್ಯೂ ಕ್ಯಾಪ್‌ ಬಾಟಲ್‌ ವಾಟರ್‌ 1 ಲೀಟರ್‌ಗೆ 20 ರೂಪಾಯಿ, 2 ಲೀಟರ್‌ಗೆ 30 ರೂಪಾಯಿ ಬೆಲೆ ಇದೆ. ಪ್ರಖ್ಯಾತ ಹಾಗೂ ಹಲವು ವರ್ಷಗಳಿಂದ ಉದ್ಯಮದಲ್ಲಿರುವ ಬಿಸ್ಲೆರಿ ಹಾಗೂ ಕಿನ್ಲೆ, ಅಕ್ವಾಶ್ಯುರ್‌ ಕೂಡ ಇದೇ ಬೆಲೆಯನ್ನು ಪಾಲನೆ ಮಾಡಿಕೊಂಡು ಬರುತ್ತಿದೆ. ಸ್ಥಳೀಯವಾಗಿ ಬರುವ ಕೆಲವೊಂದು ವಾಟರ್‌ ಬಾಟಲ್‌ಗಳ ಬೆಲೆಗಳು ಕೂಡ ಇದೇ ರೀತಿಯಲ್ಲಿದೆ. ಇನ್ನು ಭಾರತೀಯ ರೈಲ್ವೇಸ್‌ನ ರೈಲ್‌ ನೀರ್‌ ಬೆಲೆಗಳು 1 ಲೀಟರ್‌ಗೆ 14 ರೂಪಾಯಿ ಹಾಗೂ ಅರ್ಧಲೀಟರ್‌ಗೆ 9 ರೂಪಾಯಿ ಇದೆ. ಆದರೆ,ಇದು ರೈಲುಗಳಲ್ಲಿ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಮಾತ್ರವೇ ಸಿಗುತ್ತದೆ.

ಆದರೆ, ಜಿಯೋ ರೀತಿಯಲ್ಲಿ ಬ್ಲ್ಯೂ ಕ್ಯಾಪ್‌ ವಾಟರ್‌ ಬಾಟಲ್‌ನ ಉದ್ಯಮವನ್ನು ದಮನ ಮಾಡಲು ನಿಂತಿರುವ ರಿಲಯನ್ಸ್‌ ಕಂಪನಿ ಅಕ್ಟೋಬರ್‌ನಲ್ಲಿ ಕ್ಯಾಂಪಾ ಶ್ಯುರ್‌ ವಾಟರ್‌ ಬಾಟಲ್‌ ಅನಾವರಣ ಮಾಡುವುದಾಗಿ ಈಗಾಗಲೇ ಜಾಹೀರಾತನ್ನು ನೀಡಿದೆ.ಭಾರೀ ಪ್ರಮಾಣದಲ್ಲಿ ದರ ಸಮರಕ್ಕೆ ಇಳಿದಿರುವ ರಿಲಯನ್ಸ್‌, ಒಂದು ಲೀಟರ್‌ ಬಾಟಲ್‌ಗೆ 15 ರೂಪಾಯಿ ದರ ಫಿಕ್ಸ್‌ ಮಾಡಿದೆ. ಇನ್ನು2 ಲೀಟರ್‌ನ ಬಾಟಲ್‌ಗೆ 25 ರೂಪಾಯಿ, ಅರ್ಧ ಲೀಟರ್‌ಗೆ 8 ರೂಪಾಯಿ ಹಾಗೂ 250 ಎಂಎಲ್‌ ಬಾಟಲ್‌ಗೆ 5 ರೂಪಾಯಿ ದರ ನಿಗದಿ ಮಾಡಿ ಜಾಹೀರಾತು ನೀಡಿದೆ.

ಇಳಿಕೆಯಾಗುತ್ತಾ ಬಿಸ್ಲೆರಿ, ಕಿನ್ಲೆ ದರ?

ಕ್ಯಾಂಪಾದ ಜಾಹೀರಾತು ಘೋಷಣೆ ಆದ ಬೆನ್ನಲ್ಲಿಯೇ ಬಿಸ್ಲೆರಿ, ಕಿನ್ಲೆ ಹಾಗೂ ಅಕ್ವಾಶ್ಯುರ್‌ ವಾಟರ್‌ ಬಾಟಲ್‌ ಕಂಪನಿಗಳಿಗೆ ತಳಮಳ ಶುರುವಾಗಿದೆ. ಬಿಸ್ಲೆರಿ ಭಾರತೀಯ ಮೂಲದ ಕಂಪನಿ ಆಗಿದ್ದರೆ, ಕಿನ್ಲೆ ವಾಟರ್‌ ಕೊಕಾಕೋಲಾದ ಬ್ರ್ಯಾಂಡ್‌.

ರಿಲಯನ್ಸ್ ತನ್ನ ಜಿಯೋ ಅನಾವರಣದ ವೇಳೆ ಆಡಿದ್ದ ಆಟವನ್ನೇ ಪುನರಾವರ್ತಿಸುತ್ತಿದೆ. ಈಗಾಗಲೇ ಉದ್ಯಮದ ಲೀಡರ್‌ ಆಗಿದ್ದವರನ್ನು ಸೋಲಿಸಲು ಸಾಧ್ಯವಿಲ್ಲದೆ ಇದ್ದಾಗ ಅವರ ಜೊತೆ ಹೋರಾಟ ಮಾಡಲು ತನ್ನ ಲಾಭವನ್ನು ಕುಗ್ಗಿಸುವ ಪ್ರಯತ್ನ ಮಾಡುತ್ತಿದೆ. ಬಾಟಲ್ ನೀರು ₹20,000 ಕೋಟಿ ಮಾರುಕಟ್ಟೆಯಾಗಿದ್ದು, ವಿಭಜಿತ ಮತ್ತು ಬ್ರಾಂಡ್-ಚಾಲಿತವಾಗಿದೆ.