Japanese Janitor With ₹2 Crore Income Still Cleans Toilets ಜಪಾನ್‌ನ ಟೋಕಿಯೊ ನಿವಾಸಿ 56 ವರ್ಷದ ಕೊಯಿಚಿ ಮತ್ಸುಬಾರ, ವಾರ್ಷಿಕ 2 ಕೋಟಿ ರೂ. ಆದಾಯವಿದ್ದರೂ ಅರೆಕಾಲಿಕ ಜಾನಿಟರ್ ಆಗಿ ಶೌಚಾಲಯ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದಾರೆ.
ನವದೆಹಲಿ (ಅ.2): ವರ್ಷಕ್ಕೆ 2 ಕೋಟಿ ಆದಾಯ ನಿಮಗೆ ಇದ್ದರೆ ನೀವೇನು ಮಾಡಬಹುದು. ಬಹುಶಃ ಇದ್ದ ಬದ್ದ ಎಲ್ಲಾ ಕೆಲಸಗಳನ್ನು ಬಿಟ್ಟು ವಿದೇಶ ಪ್ರವಾಸ, ದೇಶ ಸುತ್ತೋದು, ಒಂದೊಳ್ಳೆ ಬ್ಯುಸಿನೆಸ್ ಮಾಡಿಕೊಂಡು ಹಾಯಾಗಿ ಇರಬಹುದು. ಆದರೆ, ಜಪಾನ್‌ನ ಟೋಕಿಯೊ ನಿವಾಸಿ 56 ವರ್ಷದ ಕೊಯಿಚಿ ಮತ್ಸುಬಾರ ಅವರಿಗೆ ವರ್ಷಕ್ಕೆ 2 ಕೋಟಿ ಆದಾಯ ಇದ್ದರೂ, ಈಗಲೂ ಕೂಡ ಜಾನಿಟರ್ ಆಗಿ ಟಾಯ್ಲೆಟ್ ಕ್ಲೀನ್ ಮಾಡೋ ಕೆಲಸ ಮಾಡುತ್ತಿದ್ದಾರೆ. ಅವರ ವಿಚಾರ ಬೆಳಕಿಗೆ ಬಂದ ತಕ್ಷಣ ಅವರನ್ನು 'ಅಜ್ಞಾತ ಕೋಟ್ಯಧಿಪತಿ' ಎಂದೇ ಜಪಾನ್‌ನಲ್ಲಿ ಕರೆಯುತ್ತಿದ್ದಾರೆ. ಮತ್ಸುಬಾರ ಅವರು, ಮನೆಯ ಬಾಡಿಗೆ ಹಾಗೂ ತಮ್ಮ ಪೋರ್ಟ್‌ಪೋಲಿಯೋ ಮೂಲಕ ಪ್ರತಿ ವರ್ಷ 30 ಮಿಲಿಯನ್ ಯೆನ್‌ಗಳಿಗಿಂತ ಹೆಚ್ಚು (ಸುಮಾರು ರೂ. 1.81 ಕೋಟಿ) ಹಣ ಗಳಿಸುತ್ತಾರೆ ಎಂದು ವರದಿಯಾಗಿದೆ.
ವಾರಕ್ಕೆ ಮೂರು ದಿನ ಮಾತ್ರವೇ ಕೆಲಸ
ದಿ ಗೋಲ್ಡ್ ಆನ್‌ಲೈನ್ ವರದಿಯ ಪ್ರಕಾರ, ಅವರು ಅಪಾರ್ಟ್‌ಮೆಂಟ್‌ನ ಬ್ಲಾಕ್‌ನಲ್ಲಿ ಅರೆಕಾಲಿಕ ಉದ್ಯೋಗದಲ್ಲಿದ್ದಾರೆ. ಅಪಾರ್ಟ್‌ಮೆಂಟ್‌ನ ಆವರಣವನ್ನು ಸ್ವಚ್ಛ ಮಾಡುವುದು, ಅಲ್ಲಿನ ಶೌಚಾಲಯಗಳು ಹಾಗೂ ಮೂಲಭೂತ ಸೌಕರ್ಯಗಳ ನಿರ್ವಹಣೆಯನ್ನು ಮಾಡುತ್ತಾರೆ. ದಿನಕ್ಕೆ ನಾಲ್ಕು ಗಂಟೆಯ ಪಾಳಿಯಲ್ಲಿ ವಾರದಲ್ಲಿ ಮೂರು ದಿನ ಕೆಲಸ ಮಾಡುತ್ತಿದ್ದಾರೆ. ಇದರಿಂದ ಅವರಿಗೆ ತಿಂಗಳಿಗೆ ಸರಿಸುಮಾರು 100,000 ಯೆನ್ (ಸುಮಾರು 60,000 ರೂ.) ವೇತನ ಪಡೆಯುತ್ತಾರೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಉಲ್ಲೇಖಿಸಿದಂತೆ, ಟೋಕಿಯೊದಲ್ಲಿ ಸರಾಸರಿ ಮಾಸಿಕ ವೇತನ ಸುಮಾರು 350,000 ಯೆನ್ (ಸುಮಾರು 2,11,000 ರೂ.) ಆಗಿದೆ.
ದೈಹಿಕ ಕೆಲಸ ಮುಂದುವರಿಸುವ ನಿರ್ಧಾರವು ಆರ್ಥಿಕ ಅಗತ್ಯಕ್ಕಿಂತ ಹೆಚ್ಚಾಗಿ ಜೀವನಶೈಲಿಯ ಆದ್ಯತೆಗಳನ್ನು ಆಧರಿಸಿದೆ ಎಂದು ಮತ್ಸುಬಾರ ವಿವರಿಸಿದ್ದಾರೆ. ದಿನಚರಿಯು ತಾನು ಸಕ್ರಿಯವಾಗಿರಲು ಮತ್ತು ಉತ್ತಮ ಆರೋಗ್ಯದಿಂದಿರಲು ಸಹಾಯ ಮಾಡಿದೆ ಮತ್ತು ಆಸ್ತಿಯನ್ನು ಚೆನ್ನಾಗಿ ನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳುವುದರಿಂದ ತನಗೆ ತೃಪ್ತಿಯ ಭಾವನೆ ಸಿಕ್ಕಿದೆ ಎಂದು ಅವರು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ನಾನು ಸರಳವಾಗಿ ಬದುಕೋದನ್ನೇ ಇಷ್ಟಪಡುತ್ತೇನೆ. ಸರಳವಾಗಿ ಬದುಕುವುದು ನನಗೆ ನಿಜವಾಗಿಯೋ ಒಳ್ಳೆಯದನ್ನೇ ಮಾಡಿದೆ ಎಂದಿದ್ದಾರೆ.
ಹಣ ಪ್ರದರ್ಶನ ಮಾಡಲು ಹೋಗದ ಮತ್ಸುಬಾರ
ತಾವು ಕೆಲಸ ಮಾಡುವ ಅಪಾರ್ಟ್‌ಮೆಂಟ್‌ನಲ್ಲಿ ಇರುವ ಜನರಿಗಿಂತ ಅಗರ್ಭ ಶ್ರೀಮಂತರಾಗಿದ್ದರೂ,ಮತ್ಸುಬಾರ ಎಲ್ಲಿಯೂ ತಮ್ಮ ಸಂಪತ್ತನನ್ನು ಪ್ರದರ್ಶನ ಮಾಡುವ ಗೋಜಿಗೆ ಹೋಗೋದಿಲ್ಲ. ಇದರಿಂದ ಸರಳವಾಗಿ ಬದುಕೋದು ತಮಗೆ ಅಭ್ಯಾಸವಾಗಿದೆ ಎಂದಿದ್ದಾರೆ. "ನಾನು ಯಾವಾಗಲೂ ನನ್ನ ಸ್ವಂತ ಆಸ್ತಿಯಿಂದ ಬದುಕಲು ಆಶಿಸಿದ್ದೇನೆ" ಎಂದು ಅವರು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್‌ಗೆ ತಿಳಿಸಿದ್ದಾರೆ.
ಒಂಟು ಪೋಷಕರ ಕುಟುಂಬದಲ್ಲಿ ಮತ್ಸುಬಾರ ಬೆಳೆದಿದ್ದಾರೆ. ಅಲ್ಲದೆ, ಮಾಧ್ಯಮಿಕ ಶಾಲೆಯ ನಂತರ ತಕ್ಷಣವೇ ತಮ್ಮ ಕೆಲಸದ ಜೀವನವನ್ನು ಪ್ರಾರಂಭಿಸಿದರು. ಸುಮಾರು 180,000 ಯೆನ್ (ಸುಮಾರು ರೂ. 1,08,871) ಮಾಸಿಕ ವೇತನಕ್ಕೆ ಕಾರ್ಖಾನೆಯಲ್ಲಿ ಉದ್ಯೋಗವನ್ನು ಪಡೆದಿದ್ದರು. ತಮ್ಮ ಖರ್ಚಿನ ಮೇಲೆ ಕಟ್ಟುನಿಟ್ಟಿನ ನಿಯಂತ್ರಣವನ್ನು ಅನುಸರಿಸುವ ಮೂಲಕ, ಅವರು ಕೆಲವೇ ವರ್ಷಗಳಲ್ಲಿ ಸುಮಾರು ಮೂರು ಮಿಲಿಯನ್ ಯೆನ್ (ಸುಮಾರು ರೂ. 18,14,520) ಉಳಿಸಲು ಸಾಧ್ಯವಾಯಿತು. ಈ ಹಣದಲ್ಲಿ ಅವರು ತಮ್ಮ ಮೊದಲ ಆಸ್ತಿಯಾಗಿ ಸ್ಟುಡಿಯೋ ಫ್ಲಾಟ್‌ಅನ್ನು ಖರೀದಿ ಮಾಡಲು ಸಾಧ್ಯವಾಗಿತ್ತು.
"ಆ ಸಮಯದಲ್ಲಿ ವಸತಿ ಮಾರುಕಟ್ಟೆ ಕುಸಿದಿತ್ತು. ಖಾಲಿ ಹುದ್ದೆಗಳನ್ನು ತಪ್ಪಿಸಲು ನಾನು ಕ್ರಮಗಳನ್ನು ತೆಗೆದುಕೊಂಡೆ ಮತ್ತು ಅಡಮಾನವನ್ನು ಮೊದಲೇ ಪಾವತಿಸಿದೆ, ಕ್ರಮೇಣ ನನ್ನ ಆಸ್ತಿಗಳನ್ನು ಹೆಚ್ಚಿಸಿದೆ" ಎಂದು ಅವರು ಹೇಳಿದರು.
ಕಾಲಾನಂತರದಲ್ಲಿ, ಮತ್ಸುಬರಾ ತಮ್ಮ ಪೋರ್ಟ್‌ಫೋಲಿಯೋಗೆ ಇನ್ನಷ್ಟು ಫ್ಲಾಟ್‌ಗಳನ್ನು ಸೇರಿಸಿದರು. ಅಂತಿಮವಾಗಿ ಟೋಕಿಯೊ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಏಳು ಬಾಡಿಗೆ ಫ್ಲಾಟ್‌ಗಳನ್ನು ಖರೀದಿ ಮಾಡುವಲ್ಲಿ ಯಶ ಕಂಡಿದ್ದರು. ಆ ಬಳಿಕ ಷೇರುಗಳ ಖರೀದಿ, ಹೂಡಿಕೆ ನಿಧಿಗಳಲ್ಲಿಯೂ ಹಣ ಹೂಡಲು ಆರಂಭಿಸಿದರು. ಉತ್ತಮ ಆರ್ಥಿಕ ಸ್ಥಿತಿಯ ನಡುವೆಯೂ ಅವರು ಸಂಯಮದ ಮತ್ತು ಪ್ರಾಯೋಗಿಕ ಜೀವನಶೈಲಿಯನ್ನು ಬೆಂಬಲಿಸುವುದನ್ನು ಮುಂದುವರಿಸಿದ್ದರು. ಇದರಿಂದಾಗಿ ಅವರು ಕೋಟ್ಯಧಿಪತಿಯಾಗಲು ಸಾಧ್ಯವಾಗಿದೆ.
