ತುರ್ತು ಅವಶ್ಯಕತೆ ಯಾವಾಗ ಎದುರಾಗುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ.  ತುರ್ತು ಸಂದರ್ಭದಲ್ಲಿ ಆರ್ಥಿಕ ಹೊರೆ ಜೀವನವನ್ನು ಮತ್ತಷ್ಟು ದುಸ್ತರ ಮಾಡಲಿದೆ. ಈ ಸಮಸ್ಯೆಯಲ್ಲಿ ಸಿಲುಕದಂತೆ, ಪರಿಸ್ಥಿತಿ ನಿಭಾಯಿಸಲು ಎಮೆರ್ಜೆನ್ಸಿ ಫಂಡ್ ಅಗತ್ಯಗತ್ಯ. ನಿಮ್ಮ ನೆರವಿನ ಎಮರ್ಜೆನ್ಸಿ ಫಂಡ್ ಏನು?

ನವದೆಹಲಿ (ಆ.11) ಭಾರತದ ಬಹುತೇಕರು ತಿಂಗಳ ವೇತನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇತರ ಆದಾಯ ಮೂಲಗಳು ಇಲ್ಲದೆ ಪ್ರತಿ ತಿಂಗಳು ವೇತನಕ್ಕಾಗಿ ಕಾಯುವ ಕೋಟಿ ಕೋಟಿ ಜನರಿದ್ದಾರೆ. ಬರುವ ಸ್ಯಾಲರಿಯಲ್ಲಿ ಸಾಲ, ಕಂತು, ಖರ್ಚು ವೆಚ್ಚ, ಬಿಲ್ ಪಾವತಿಗಳನ್ನು ಮಾಡಿದ ಬಳಿಕ ಮುಂದಿನ ಸ್ಯಾಲರಿಗೆ ಕಾಯಬೇಕಾದ ಪರಿಸ್ಥಿತಿ ಬಹುತೇಕರದ್ದು. ಇದರ ನಡುವೆ ತುರ್ತು ಅವಶ್ಯಕತೆಗಳು ಬಂದಾಗ ಬಹುತೇಕರು ಕಂಗಾಲಾಗುತ್ತಾರೆ. ಆರೋಗ್ಯ ಸಮಸ್ಯೆಗಳು ಸೇರಿದಂತೆ ತುರ್ತು ಅವಶ್ಯಕತೆಗಳು ಸಾಲದ ಹೊರೆ ಹೆಚ್ಚಿಸುವುದು ಮಾತ್ರವಲ್ಲ, ಜೀವನ ಸಾಗಿಸುವುದೇ ಸವಾಲಾಗಲಿದೆ. ಹೀಗೆ ತುರ್ತು ಸಂದರ್ಭ ನಿಭಾಯಿಸಲು ತುರ್ತು ಹಣ ಅತ್ಯವಶ್ಯಕ. ಎಮರ್ಜೆನ್ಸಿ ಫಂಡ್ ಮೂಲಕ ಈ ಸವಾಲು ನಿಭಾಯಿಸುಲು ಸಾಧ್ಯ.

ಏನಿದು ಎಮರ್ಜೆನ್ಸಿ ಫಂಡ್

ತುರ್ತು ನಿಧಿ ಅಥವಾ ಎಮರ್ಜೆನ್ಸಿ ಫಂಡ್ ತುರ್ತು ಸಂದರ್ಭಕ್ಕಾಗಿ ಕೂಡಿಟ್ಟ ಹಣ. ಮೆಡಿಕಲ್ ಬಿಲ್, ಆರೋಗ್ಯ ಬಿಲ್, ದಿಢೀರ್ ಎದುರಾದ ವಾಹನ ರಿಪೇರಿ ಸೇರಿದಂತೆ ಯಾವುದೇ ತುರ್ತು ಸಂದರ್ಭಕ್ಕೆ ಬಳಕೆ ಮಾಡಲು ಕೂಡಿಡುವ ಹಣವೇ ತುರ್ಥು ನಿಧಿ. ಈ ನಿಧಿಯಿಂದ ತುರ್ತು ಸಂದರ್ಭದಲ್ಲಿ ಆರ್ಥಿಕಾಗಿ ಯಾವುದೇ ಸಮಸ್ಯೆಯಾಗದಂತೆ ನಿರ್ವಹಣೆ ಮಾಡಲು ಸಾಧ್ಯವಿದೆ. ಆರೋಗ್ಯದ ತುರ್ತು ಎದುರಾಗಿದ್ದರೆ, ಸೂಕ್ತ ಚಿಕಿತ್ಸೆ ನೀಡಲು ನರೆವಾಗುತ್ತದೆ. ಭಾರತದಲ್ಲಿ ಹಿಂದಿನ ಕಾಲದಿಂದಲೂ ತಾಯಂದಿರು ಒಂದಿಷ್ಟು ಹಣ ಕೂಡಿಟ್ಟಿರುತ್ತಾರೆ. ತುರ್ತು ಸಂದರ್ಭಕ್ಕಾಗಿ ಅಥವಾ ಆರ್ಥಿಕ ಸಂಕಷ್ಟ ಎದುರಾದಾಗ ಬಳಕೆ ಮಾಡಲು ಹಣ ಕೂಡಿಡುತ್ತಾರೆ.

ತುರ್ತು ನಿಧಿಗೆ ಹಣ ಕೂಡಿಡುವುದು ಹೇಗೆ?

ಪ್ರತಿಯೊಬ್ಬರು ತುರ್ತು ಹಣ ಕೂಡಿಡುವುದು ಅತ್ಯವಶ್ಯಕ. ಇದಕ್ಕಾಗಿ ಯೋಜನೆ ರೂಪಿಸಿಕೊಳ್ಳಬೇಕು. ನಿಮ್ಮ ಆದಾಯದಲ್ಲಿ ಪ್ರತಿ ತಿಂಗಳು ಇಂತಿಷ್ಟು ಹಣ ಅಥವಾ ವರ್ಷದಲ್ಲಿ ಇಂತಿಷ್ಟು ಹಣ ತುರ್ತು ಬಳಕೆಗಾಗಿ ಇಡಬೇಕು. ಇದು ಆದಾಯ, ಶಕ್ತಿ ಸಾಮರ್ಥ್ಯಕ್ಕೆ ಅನುಗುಣವಾಗಿ ಹಣ ಕೂಡಿಡುವುದು ಸರಳ ಹಾಗೂ ಸುಲಭ ವಿಧಾನವಾಗಿದೆ.

ತುರ್ತು ಹಣಕ್ಕಾಗಿ ಖಾತೆ ತೆರೆಯಿರಿ

ತುರ್ತು ನಿಧಿಯಲ್ಲಿ ಹಣ ಕೂಡಿಡಲು ಒಂದು ಖಾತೆ ತೆರೆಯಬೇಕು. ಈ ಖಾತೆಯ ಹಣ ಕೇವಲ ತುರ್ತು ಸಂದರ್ಭಕ್ಕಾಗಿ ಮಾತ್ರ ಬಳಕೆ ಮಾಡಬೇಕು. ಈ ಖಾತೆಯನ್ನು ನಿಮ್ಮ ಸಾಮಾನ್ಯ ಖಾತೆಯಂತೆ ಬಳಕೆ ಮಾಡಬೇಡಿ.

ಹಂತ ಹಂತವಾಗಿ ತುರ್ತು ಖಾತೆಗೆ ಹಣ ವರ್ಗಾವಣೆ ಮಾಡಿ

ತುರ್ತು ನಿಧಿ ಖಾತೆಗೆ ಪ್ರತಿ ತಿಂಗಳು ಅಥವಾ ನಿಮ್ಮ ಅನಕೂಲತಗೆ ತಕ್ಕಂತೆ ಹಣ ವರ್ಗಾವಣೆ ಮಾಡಿ. ಇದರಿಂದ ತುರ್ತು ನಿಧಿಯಲ್ಲಿ ಪರಿಸ್ಥಿತಿ ನಿಭಾಯಿಸುವ ಮೊತ್ತ ಇರುವಂತೆ ಮಾಡಿಕೊಳ್ಳಿ. ತುರ್ತು ಸಂದರ್ಭಕ್ಕೆ ಬಳಕೆ ಮಾಡಿದರೆ , ಮತ್ತೆ ಅದೇ ರೀತಿ ಹಣ ಕೂಡಿಟ್ಟು ಆರ್ಥಿಕ ಸಂಕಷ್ಟವನ್ನು ನಿಭಾಯಿಸಲು ಬೇಕಾದ ತಯಾರಿ ಮಾಡಿಕೊಳ್ಳಿ.