Gold Selling Tips : ತುರ್ತು ಪರಿಸ್ಥಿತಿಯಲ್ಲಿ ಜನರು ಹಣಕ್ಕಾಗಿ ಬಂಗಾರ ಮಾರಾಟ ಮಾಡ್ತಾರೆ. ಚಿನ್ನದಂಗಡಿಯಲ್ಲಿ ಆಭರಣ ಮಾರಾಟ ಮಾಡೋದು ಎಷ್ಟು ಸರಿ? ಅದಕ್ಕಿರುವ ಉತ್ತಮ ಆಯ್ಕೆ ಯಾವ್ದು?
ಭಾರತೀಯ ಸಂಪ್ರದಾಯದಲ್ಲಿ, ಚಿನ್ನ (gold)ವನ್ನು ಶುದ್ಧತೆ ಮತ್ತು ಸಮೃದ್ಧಿಯ ಸಂಕೇತ ಅಂತ ಪರಿಗಣಿಸ್ತಾರೆ. ಇದು ಕೇವಲ ಹೂಡಿಕೆಯಲ್ಲ, ಇದೊಂದು ಭಾವನೆ. ಭಾರತೀಯರು ಪ್ರತಿಯೊಂದು ಶುಭ ಕಾರ್ಯದಲ್ಲೂ ಚಿನ್ನವನ್ನು ಖರೀದಿ ಮಾಡ್ತಾರೆ, ಬಳಸ್ತಾರೆ. ಮಹಿಳೆಯರ ಅಲಂಕಾರಿಕ ವಸ್ತುಗಳಲ್ಲಿ ಇದು ಮುಖ್ಯ ಪಾತ್ರವಹಿಸುತ್ತೆ. ಬಂಗಾರವನ್ನು ಮಹಾಲಕ್ಷ್ಮಿ ಆಶೀರ್ವಾದ, ಮನೆಯ ಆಸ್ತಿ ಅಂತ ನಂಬ್ತಾರೆ. ಆಪತ್ತಿನ ಸಮಯದಲ್ಲಿ ಇದೇ ಬಂಗಾರ ನೆರವಿಗೆ ಬರುತ್ತೆ. ತುರ್ತು ಪರಿಸ್ಥಿತಿಗಳಲ್ಲಿ ಇದನ್ನು ಮಾರಾಟ ಮಾಡಿ, ನಗದು ಪಡೆಯುವ ಜನರಿದ್ದಾರೆ.
ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನವನ್ನು ಖರೀದಿಸೋಕೆ ಮತ್ತೆ ಮಾರಾಟ ಮಾಡೋಕೆ ಅನೇಕ ಆಯ್ಕೆ ಇದೆ. ಬ್ಯಾಂಕ್, ಇತರ ಹಣಕಾಸು ಸಂಸ್ಥೆಗಳು ಚಿನ್ನದ ಮೇಲೆ ಸಾಲ ನೀಡ್ತವೆ. ಇಷ್ಟೆಲ್ಲ ಆಯ್ಕೆ ಇದ್ರೂ ಜನರು ತಕ್ಷಣಕ್ಕೆ ಹಣ ಬೇಕು ಎನ್ನುವ ಕಾರಣಕ್ಕೆ, ಚಿನ್ನ ಅಂಗಡಿಗೆ ಹೋಗಿ ತಮ್ಮ ಆಭರಣಗಳನ್ನು ಮಾರಾಟ ಮಾಡಿ ನಗದು ಪಡೀತಾರೆ. ಇದ್ರಲ್ಲಿ ನಮಗೆ ತಕ್ಷಣ ಹಣ ಸಿಗೋದು ಸತ್ಯ. ಆದ್ರೆ ಅನೇಕ ಬಾರಿ ನಾವು ವಂಚನೆಗೆ ಒಳಗಾಗ್ತೇವೆ.
ಕ್ಯಾಶ್ ಫಾರ್ ಗೋಲ್ಡ್ (Cash for Gold) ಅಂಗಡಿಗೆ ಹೋದಾಗೆಲ್ಲ, ಅವ್ರು ನಿಮ್ಮ ಅಸಹಾಯಕತೆ ಲಾಭ ಪಡೆಯುವ ಸಾಧ್ಯತೆ ಹೆಚ್ಚಿರುತ್ತೆ. ತನ್ನ ಲಾಭವನ್ನು ಅಂಗಡಿಯಾತ ಯೋಚಿಸ್ತಾನೆ. ಒಂದಿಷ್ಟು ನಿಯಮ ಹೇಳಿ, ಹೆಚ್ಚಿನ ಶುಲ್ಕ ವಿಧಿಸಿ, ನಿಮಗೆ ಸಿಗಬೇಕಾಗಿದ್ದ ಪೂರ್ಣ ಹಣವನ್ನು ನೀಡೋದಿಲ್ಲ. ನಿಮ್ಮ ಚಿನ್ನದ ಬೆಲೆಯ ಸಂಪೂರ್ಣ ಹಣ ನಿಮಗೆ ಸಿಗೋದಿಲ್ಲ. ಶೇಕಡಾ 60 ರಿಂದ 65ರಷ್ಟು ಹಣವನ್ನು ಮಾತ್ರ ಆತ ನೀಡ್ತಾನೆ.
ಹೇಗೆ ಮಾರಾಟ ಮಾಡಿದ್ರೆ ಹೆಚ್ಚು ಲಾಭ? : ಚಿನ್ನದ ಅಂಗಡಿಯಲ್ಲಿ ಆಗುವ ಮೋಸಕ್ಕೆ ನೀವು ಬಲಿಯಾಗ್ಬಾರದು ಎಂದಾದ್ರೆ ಕೆಲ ಎಚ್ಚರಿಕೆಯನ್ನು ತೆಗೆದುಕೊಳ್ಬೇಕು. ಆಭರಣ ಖರೀದಿಸಿದ ಸ್ಲಿಪ್ ಭದ್ರವಾಗಿಟ್ಟುಕೊಂಡಿರಿ. ಚಿನ್ನದ ಶುದ್ಧತೆ ಮತ್ತು ಬೆಲೆಯ ದಾಖಲೆಯಾಗಿ ಇದು ಕೆಲ್ಸ ಮಾಡುತ್ತೆ. ಬಿಲ್ ಇಲ್ಲದಿದ್ದರೆ, ಆಭರಣ ವ್ಯಾಪಾರಿಯು ಅನಿಯಂತ್ರಿತವಾಗಿ ಚಿನ್ನವನ್ನು ಖರೀದಿಸುವ ಸಾಧ್ಯತೆ ಇರುತ್ತೆ.
ಹಾಗೆಯೇ ಚಿನ್ನದ ಬೆಲೆ ಪ್ರತಿದಿನ ಬದಲಾಗುತ್ತೆ. ಚಿನ್ನ ಮಾರಾಟ ಮಾಡುವ ಮೊದಲು, ಇಂದಿನ ಮಾರುಕಟ್ಟೆ ಬೆಲೆ ತಿಳಿದಿರಿ. ಇದ್ರ ಜೊತೆ ಚಿನ್ನದ ಶುದ್ಧತೆಯ ಮೇಲೆ ನಿಗಾ ಇರಿಸಬೇಕು. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ವೆಬ್ಸೈಟ್ ಪ್ರಕಾರ, ಚಿನ್ನದ ಆಭರಣಗಳನ್ನು 6 ವಿಭಾಗಗಳಲ್ಲಿ ಮಾತ್ರ ಹಾಲ್ಮಾರ್ಕ್ ಮಾಡಲಾಗಿದೆ. ಈ ವರ್ಗಗಳು- 14K, 18K, 20K, 22K, 23K, 24K. ಜನರು 91.6 ಪ್ರತಿಶತದಷ್ಟು ಪ್ರಮಾಣದಲ್ಲಿ 22 ಕ್ಯಾರೆಟ್ ಚಿನ್ನವನ್ನು ಖರೀದಿಸಲು ಬಯಸುತ್ತಾರೆ. ನಿಮ್ಮ ಚಿನ್ನವನ್ನು ಮಾರಾಟ ಮಾಡುವ ಮೊದಲು, ನೀವು ಹೆಸರಾಂತ ಆಭರಣ ಅಂಗಡಿಗೆ ಹೋಗಿ ಅದರ ಶುದ್ಧತೆಯನ್ನು ಪರಿಶೀಲಿಸಬೇಕು, ಸರ್ಟಿಫಿಕೆಟ್ ಪಡೀಬೇಕು.
ಸಾಧ್ಯವಾದಷ್ಟು ನೀವು ಖರೀದಿ ಮಾಡಿದ ಜಾಗದಲ್ಲಿಯೇ ಆಭರಣವನ್ನು ಮಾರಾಟ ಮಾಡ. ಇದು ಚಿನ್ನಕ್ಕೆ ಉತ್ತಮ ಬೆಲೆ ನೀಡಲು ಸಹಕಾರಿ. ಇಲ್ಲಿ ವಂಚನೆ ಭಯ ಕಡಿಮೆ. ಚಿನ್ನ ಅಥವಾ ಚಿನ್ನದ ಆಭರಣಗಳನ್ನು ಮಾರಾಟ ಮಾಡಲು, ನಿಮ್ಮ ಬಳಿ ಆಭರಣಗಳ ಬಿಲ್, ಆಧಾರ್ ಕಾರ್ಡ್, ವಿಳಾಸದ ದಾಖಲೆ, ಪ್ಯಾನ್ ಕಾರ್ಡ್ ಮತ್ತು ಪಾಸ್ಪೋರ್ಟ್ ಗಾತ್ರದ ಫೋಟೋ ಇರ್ಬೇಕು. ನೀವು ಚಿನ್ನವನ್ನು ಮಾರಾಟ ಮಾಡುವ ಬದಲು ಚಿನ್ನದ ಮೇಲೆ ಸಾಲ ತೆಗೆದುಕೊಳ್ಳೋದು ಉತ್ತಮ ಮಾರ್ಗವಾಗಿದೆ. ಬ್ಯಾಂಕಿನಲ್ಲಿ ಚಿನ್ನವನ್ನಿಟ್ಟು ಸಾಲ ತೆಗೆದುಕೊಳ್ಳೋದ್ರಿಂದ ನಿಮ್ಮ ಆಭರಣ ಸುರಕ್ಷಿತವಾಗಿರುತ್ತದೆ.
