Adar Poonawalla RCB sale ಕೋವಿಶೀಲ್ಡ್ ಲಸಿಕೆ ಖ್ಯಾತಿಯ ಸೀರಮ್ ಇನ್ಸ್‌ಟಿಟ್ಯೂಟ್ ಸಿಇಒ ಆದರ್ ಪೂನಾವಾಲಾ, ಐಪಿಎಲ್‌ನ ಆರ್‌ಸಿಬಿ ಫ್ರಾಂಚೈಸಿ ಖರೀದಿಗೆ ಆಸಕ್ತಿ ತೋರಿದ್ದಾರೆ ಎಂದು ವರದಿಯಾಗಿದೆ. ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿಯವರ ಪೋಸ್ಟ್ ಈ ಊಹಾಪೋಹ ನೀಡಿದೆ.
ಬೆಂಗಳೂರು (ಸೆ.30): ಕೋವಿಡ್-19 ಸಮಯದಲ್ಲಿ ಕೋವಿಶೀಲ್ಡ್ ಲಸಿಕೆಯನ್ನು ಭಾರತದಲ್ಲೇ ಉತ್ಪಾದನೆ ಮಾಡಿ ಜನರ ಜೀವ ಉಳಿಸಿದ್ದ ಸೀರಮ್ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಹಾಗೂ ಕೋಟ್ಯಧಿಪತಿ ಆದರ್ ಪೂನಾವಾಲಾ ಐಪಿಎಲ್‌ನ ಆರ್‌ಸಿಬಿ ಫ್ರಾಂಚೈಸಿಯನ್ನು ಖರೀದಿ ಮಾಡಲು ಆಸಕ್ತಿ ತೋರಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಮಾತುಕತೆಗಳು ಮುಂದುವರೆದಿದ್ದು, ಹಲವಾರು ಬಿಡ್ಡರ್‌ಗಳು ಆಸಕ್ತಿ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಬೆಂಗಳೂರು ಮೂಲದ ಐಪಿಎಲ್ ತಂಡವು ಫ್ರಾಂಚೈಸಿಗೆ ಒಂದೇ ಬಾರಿಯ ಪೇಮೆಂಟ್‌ಅನ್ನು ಬಯಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಆರ್‌ಸಿಬಿಯಲ್ಲಿ ಪೂನವಾಲಾ ಅವರ ಆಸಕ್ತಿಯು ಅವರ ಕಂಪನಿಯ ವೈವಿಧ್ಯೀಕರಣ ಯೋಜನೆಗಳೊಂದಿಗೆ ಹೊಂದಿಕೆಯಾಗುತ್ತದೆ. ಆರ್‌ಸಿಬಿ ಪ್ರಸ್ತುತ ಡಯಾಜಿಯೊ ಗ್ರೂಪ್ ಕಂಪನಿಯಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್‌ನ ಒಡೆತನದಲ್ಲಿದೆ. ಜೂನ್‌ನಲ್ಲಿ, ಡಿಯಾಜಿಯೊ ಪಿಎಲ್‌ಸಿ. ಆರ್‌ಸಿಬಿ ಮಾಲೀಕತ್ವಕ್ಕಾಗಿ ಆಯ್ಕೆಗಳನ್ನು ಅನ್ವೇಷಿಸುತ್ತಿತ್ತು. ಬ್ಲೂಮ್‌ಬರ್ಗ್ ಪ್ರಕಾರ, ಬ್ರಿಟಿಷ್ ಡಿಸ್ಟಿಲರ್ ಸಂಭಾವ್ಯ ಸಲಹೆಗಾರರೊಂದಿಗೆ ಚರ್ಚೆ ನಡೆಸಿದೆ ಮತ್ತು $2 ಬಿಲಿಯನ್ ಮೌಲ್ಯವನ್ನು ಬಯಸುತ್ತಿದೆ ಎಂದು ವರದಿಯಾಗಿದೆ.
ಜೂನ್‌ನಲ್ಲಿ ನಡೆದ ವಿನಿಮಯ ಫೈಲಿಂಗ್‌ನಲ್ಲಿ ಯುನೈಟೆಡ್ ಸ್ಪಿರಿಟ್ಸ್, ಸಂಭಾವ್ಯ ಷೇರು ಮಾರಾಟಕ್ಕೆ ಸಂಬಂಧಿಸಿದ ವರದಿಗಳು "ಸ್ವಭಾವತಃ ಊಹಾತ್ಮಕ" ಮತ್ತು "ಅದು ಅಂತಹ ಯಾವುದೇ ಚರ್ಚೆಗಳನ್ನು ಮುಂದುವರಿಸುತ್ತಿಲ್ಲ" ಎಂದು ಹೇಳಿತ್ತು. ಆ ಬಳಿಕ ಈ ಸುದ್ದಿಗಳು ತಣ್ಣಗಾಗಿದ್ದವು.

ಲಲಿತ್ ಮೋದಿಯಿಂದ ಹುಟ್ಟಿಕೊಂಡ ಊಹಾಪೋಹಗಳು
ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಸೋಮವಾರ ಇನ್ಸ್ಟಾಗ್ರಾಮ್ ನಲ್ಲಿ ಸಂಭಾವ್ಯ ಮಾರಾಟದ ಬಗ್ಗೆ ಪೋಸ್ಟ್ ಮಾಡಿದ ನಂತರ ಊಹಾಪೋಹಗಳಿಗೆ ಮತ್ತಷ್ಟು ಬಲ ತುಂಬಿದ್ದಾರೆ "ಐಪಿಎಲ್ ಟಿ20 ಫ್ರಾಂಚೈಸಿಯ ಮಾರಾಟದ ಬಗ್ಗೆ, ವಿಶೇಷವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಬಗ್ಗೆ ಸಾಕಷ್ಟು ವದಂತಿಗಳಿವೆ - ಹಿಂದೆ ಅವುಗಳನ್ನು ನಿರಾಕರಿಸಲಾಗಿತ್ತು. ಆದರೆ ಮಾಲೀಕರು ಅಂತಿಮವಾಗಿ ಅದನ್ನು ತಮ್ಮ ಬ್ಯಾಲೆನ್ಸ್ ಶೀಟ್‌ನಿಂದ ತೆಗೆದು ಮಾರಾಟ ಮಾಡಲು ನಿರ್ಧರಿಸಿದ್ದಾರೆ ಎಂದು ತೋರುತ್ತದೆ" ಎಂದು ಅವರು ಬರೆದಿದ್ದಾರೆ.
"ತಂಡವನ್ನು ಖರೀದಿ ಮಾಡಲು ಸಾಧ್ಯವಿರುವ ಎಲ್ಲರಿಗೂ ಶುಭವಾಗಲಿ. ಇದು ಖಂಡಿತವಾಗಿಯೂ ಹೊಸ ದಾಖಲೆಯ ಮೌಲ್ಯಮಾಪನವನ್ನು ಸ್ಥಾಪಿಸುತ್ತದೆ, ಇದು ಐಪಿಎಲ್ ವೇಗವಾಗಿ ಬೆಳೆಯುತ್ತಿರುವ ಜಾಗತಿಕ ಕ್ರೀಡಾ ಲೀಗ್ ಮಾತ್ರವಲ್ಲದೆ ಅತ್ಯಂತ ಮೌಲ್ಯಯುತವಾಗಿದೆ ಎಂಬುದನ್ನು ತೋರಿಸುತ್ತದೆ" ಎಂದು ಮೋದಿ ಬಿಡ್ಡರ್‌ಗಳಿಗೆ ಶುಭ ಹಾರೈಸಿದರು ಮತ್ತು ಹೂಡಿಕೆ ಸಾಮರ್ಥ್ಯವನ್ನು ಎತ್ತಿ ತೋರಿಸಿದರು.
