ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ತಿಪಟೂರಿನಲ್ಲಿ ನಡೆದ ಎಬಿವಿಪಿ ರಾಣಿ ಅಬ್ಬಕ್ಕ ರಥಯಾತ್ರೆಗೆ ಪುಷ್ಪಾರ್ಚನೆ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ. ಈ ಘಟನೆ ಡಿ.ಕೆ.ಶಿವಕುಮಾರ್ ಅವರ ಆರ್‌ಎಸ್‌ಎಸ್‌ ಗೀತೆ ಹಾಡಿದ ವಿವಾದದ ಬೆನ್ನಲ್ಲೇ ನಡೆದಿದೆ.

ತಿಪಟೂರು (ಸೆ.12): ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಆರ್‌ಎಸ್‌ಎಸ್‌ ಗೀತೆ ‘ನಮಸ್ತೆ ಸದಾ ವತ್ಸಲೆ’ ಎಂದು ಹಾಡಿದ್ದರಿಂದ ಉಂಟಾದ ವಿವಾದ ತಣ್ಣಗಾಗುವ ಮೊದಲೇ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ತುಮಕೂರು ಜಿಲ್ಲೆ ತಿಪಟೂರಿನಲ್ಲಿ ನಡೆದ ಎಬಿವಿಪಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ದಕ್ಷಿಣ ಪ್ರಾಂತ ವಿಭಾಗದಿಂದ ತಿಪಟೂರಿನಲ್ಲಿ ವೀರರಾಣಿ ಅಬ್ಬಕ್ಕ ಅವರ 500ನೇ ಜನ್ಮದಿನದ ಪ್ರಯುಕ್ತ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆ ತಿಪಟೂರು ತಾಲೂಕು ಪ್ರಗತಿ ಪರಿಶೀಲನಾ ಸಭೆ ಮುಗಿಸಿಕೊಂಡು ತುಮಕೂರಿಗೆ ಹೋಗುವ ಮಾರ್ಗ ಮಧ್ಯೆ ರಾಣಿ ಅಬ್ಬಕ್ಕ ರಥಯಾತ್ರೆ ಎದುರಾಗಿದೆ. 

ಆಗ ಕಾರಿನಿಂದ ಇಳಿದ ಪರಮೇಶ್ವರ್ ಅವರು, ಅಬ್ಬಕ್ಕ ದೇವಿಗೆ ಪುಷ್ಪಾರ್ಚನೆ ನೆರವೇರಿಸಿ ರಥಯಾತ್ರೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ಪರಮೇಶ್ವರ್ ಅವರು ಪುಷ್ಪಾರ್ಷನೆ ನೆರವೇರಿಸಿದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.