Fake Baba Dadapir Arrested for Gold Theft ಮನೆಯಲ್ಲಿನ ದುಷ್ಟ ಶಕ್ತಿಗಳನ್ನು ಓಡಿಸುವುದಾಗಿ ನಂಬಿಸಿ ವಿಶೇಷ ಪೂಜೆಯ ನೆಪದಲ್ಲಿ ಚಿನ್ನಾಭರಣಗಳನ್ನು ಕದಿಯುತ್ತಿದ್ದ ದಾದಾಪೀರ್ ಎಂಬ ನಕಲಿ ಬಾಬಾನನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ. 

ಬೆಂಗಳೂರು (ಅ.14): ವಿಶೇಷ ಪೂಜೆ ಮಾಡಿ ಮನೆಯಲ್ಲಿರುವ ಭೂತ ಪ್ರೇತಗಳನ್ನು ಓಡಿಸುತ್ತೇನೆ ಎಂದಿದ್ದ ಫೇಕ್‌ ಬಾಬಾನ್ನು ಚಿನ್ನಾಭರಣ ಕದ್ದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ. ಮೂಲತಃ ಸೈಕಲ್‌ ರಿಪೇರಿ ಅಂಗಡಿ ಮಾಲೀಕನಾಗಿದ್ದ ವ್ಯಕ್ತಿ, ಬಾಬಾ ಅವತಾರ ತಾಳಿ ಚಿನ್ನಾಭರಣ ಕದಿಯುವ ಕೆಲಸ ಮಾಡುತ್ತಿದ್ದ ಈತನನ್ನು ಮಂಗಳವಾರ ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.ಕೋಲಾರದ ನಿವಾಸಿ 49 ವರ್ಷದ ದಾದಾಪೀರ್ ಎಂದು ಗುರುತಿಸಲಾದ ಆರೋಪಿ, ಬೆಂಗಳೂರು ಮತ್ತು ಇತರ ನಗರಗಳ ಮಧ್ಯಮ ವರ್ಗದ ಕುಟುಂಬಗಳನ್ನು ಗುರಿಯಾಗಿಸಿಕೊಂಡು ಈ ಕೃತ್ಯ ಎಸಗುತ್ತಿದ್ದ. ನಿಮ್ಮ ಮನೆಯಲ್ಲಿ ದುಷ್ಟ ಶಕ್ತಿ ಇದೆ. ಇದರಿಂದಾಗಿಯೇ ನಿಮ್ಮ ಮನೆಯಲ್ಲಿ ಕೌಟುಂಬಿಕ ಸಮಸ್ಯೆಗಳು ಆಗುತ್ತಿವೆ. ವಿಶೇಷ ಪೂಜೆ ಮಾಡುವ ಮೂಲಕ ಇದನ್ನು ಪರಿಹಾರ ಮಾಡಬಹುದು ಎಂದು ಹೇಳಿ ಜನರನ್ನು ಮರಳು ಮಾಡುತ್ತಿದ್ದ ಎಂದು ಪೊಲೀಸರು ಆರೋಪಿಸಿದ್ದಾರೆ.

ಸಂತ್ರಸ್ಥರ ವಿಶ್ವಾಸ ಗಳಿಸಿದ ನಂತರ, ಅವನು "ವಿಶೇಷ ಪೂಜೆ" ಗಾಗಿ ತಮ್ಮ ಆಭರಣಗಳನ್ನು ತರಲು ಹೇಳುತ್ತಿದ್ದ. ಆಚರಣೆಯ ಸಮಯದಲ್ಲಿ, ಅವನು ಆಭರಣಗಳನ್ನು ಒಂದು ಪೆಟ್ಟಿಗೆಯಲ್ಲಿ ಇರಿಸಿ, ಅರಿಶಿನ ಮತ್ತು ಹೂವುಗಳನ್ನು ಸಿಂಪಡಿಸಿ, ಕುಟುಂಬ ಸದಸ್ಯರಿಗೆ ಹೊರಗೆ ಹೋಗಲು ಹೇಳುತ್ತಿದ್ದ. ಕೆಲವು ಪೂಜೆಗಳನ್ನು ನಾನು ಏಕಾಂಗಿಯಾಗಿ ಮಾಡಬೇಕು ಎಂದು ಹೇಳಿ ಅವರನ್ನು ಹೊರಕ್ಕೆ ಕಳಿಸಿದ ಬಳಿಕ ಬೆಲೆಬಾಳುವ ಚಿನ್ನಾಭರಣದೊಂದಿಗೆ ಕಣ್ಮರೆಯಾಗುತ್ತಿದ್ದ. ಮನೆಯಿಂದ ಹೋಗುವ ಮೊದಲು, 21 ದಿನಗಳ ಕಾಲ ಈ ಪೆಟ್ಟಿಗೆಯನ್ನು ಯಾವುದೇ ಕಾರಣಕ್ಕೂ ತೆರೆಯಬಾರದು ಎಂದು ಸಂತ್ರಸ್ಥರಿಗೆ ಹೇಳುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

10 ಮಕ್ಕಳು, 3 ಹೆಂಡ್ತಿಯರ ಸಾಕಲು ಕಳ್ಳತನ

ದಾದಾಪೀರ್ ವಿವಿಧ ಸಮುದಾಯಗಳ ಕುಟುಂಬಗಳನ್ನು ಸಂಪರ್ಕಿಸಿ, ಅವರವರ ನಂಬಿಕೆಗೆ ಸರಿಹೊಂದುವ ರೀತಿಯಲ್ಲಿ ಮಾತನಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪತ್ತೆಯಾಗದಂತೆ ತಡೆಯಲು ಅವನು ಆಗಾಗ್ಗೆ ಸಿಮ್ ಕಾರ್ಡ್‌ಗಳು ಮತ್ತು ಹೆಸರುಗಳನ್ನು ಬದಲಾಯಿಸುತ್ತಿದ್ದ. ತನಿಖೆಯಿಂದ ಅವನಿಗೆ ಮೂವರು ಹೆಂಡತಿಯರು, 10 ಮಕ್ಕಳು ಮತ್ತು ಹಲವಾರು ವಿವಾಹೇತರ ಸಂಬಂಧಗಳಿವೆ ಎಂದು ತಿಳಿದುಬಂದಿದೆ. ಕದ್ದ ಹಣವನ್ನು ಅವನು ತನ್ನ ಪಾಲುದಾರರು ಮತ್ತು ವೈಯಕ್ತಿಕ ಐಷಾರಾಮಿಗಳಿಗಾಗಿ ಖರ್ಚು ಮಾಡಿದ್ದನು ಎಂದು ಆರೋಪಿಸಲಾಗಿದೆ.

ಆತನ ಬಂಧನದೊಂದಿಗೆ, ಪೊಲೀಸರು ಕನಿಷ್ಠ ಮೂರು ಪ್ರಕರಣಗಳನ್ನು ಭೇದಿಸಿದ್ದಾರೆ ಮತ್ತು 53 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಲ್ಲೂ ಆತ ಇದೇ ರೀತಿಯ ಅಪರಾಧಗಳನ್ನು ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.