Ex BPCL CFO K Shivakumar Exposes Systemic Corruption in Bengaluru After Daughter Tragic Death ಬಿಪಿಸಿಎಲ್‌ನ ಮಾಜಿ ಸಿಎಫ್‌ಒ ಕೆ. ಶಿವಕುಮಾರ್, ತಮ್ಮ ಮಗಳು ಅಕ್ಷಯಾ ಸಾವಿನ ನಂತರ ಬೆಂಗಳೂರಿನಲ್ಲಿ ಎದುರಿಸಿದ ಭ್ರಷ್ಟಾಚಾರದ ಬಗ್ಗೆ ಲಿಂಕ್ಡ್‌ಇನ್‌ನಲ್ಲಿ ಬರೆದುಕೊಂಡಿದ್ದಾರೆ. 

ಬೆಂಗಳೂರು (ಅ.29): ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ ಕೆ. ಶಿವಕುಮಾರ್ ಅವರು ತಮ್ಮ ಏಕೈಕ ಪುತ್ರಿ ಅಕ್ಷಯಾ ಶಿವಕುಮಾರ್ ಅವರ ಸಾವಿನ ಬಳಿಕ ತಮ್ಮ ಭಾವನಾತ್ಮಕ ಹಾಗೂ ಆಕ್ರೋಶದ ವಿಚಾರವನ್ನು ತಮ್ಮ ಸೋಶಿಯಲ್‌ ಮೀಡಿಯಾ ಅಕೌಂಟ್‌ನಲ್ಲಿ ಹಂಚಿಕೊಂಡಿದ್ದಾರೆ. ಲಿಂಕ್ಡ್‌ಇನ್‌ನಲ್ಲಿ ಅವರು ಮಾಡಿರುವ ಪೋಸ್ಟ್‌ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದ್ದು, ಬೆಂಗಳೂರಿನ ಆಡಳಿತಶಾಹಿ ವರ್ಗದಲ್ಲಿರುವ ವ್ಯವಸ್ಥಿತ ಭ್ರಷ್ಟಾಚಾರ, ಮಾನವೀಯತೆಯ ಕೊರತೆಯ ಬಗ್ಗೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

34 ವರ್ಷದ ಅಕ್ಷಯಾ, ಐಐಟಿ ಮದ್ರಾಸ್‌ನಿಂದ ಬಿ.ಟೆಕ್‌ ಪದವೀಧರೆ ಮತ್ತೆ ಐಐಎಂ ಅಹಮದಾಬಾದ್‌ನಿಂದ ಎಂಬಿಎ ಪದವಿ ಪಡೆದವರು. ಬೆಂಗಳೂರಿನ ಗೋಲ್ಡ್‌ಮನ್‌ ಸ್ಯಾಚ್ಸ್‌ನಲ್ಲಿ ಎಂಟು ವರ್ಷ ಸೇರಿದಂತೆ ಒಟ್ಟು 11 ವರ್ಷಗಳ ಕಾಲ ಕೆಲಸ ಮಾಡಿದ್ದರು. 2025ರ ಸೆಪ್ಟೆಂಬರ್‌ 18 ರಂದು ಅವರು ತಮ್ಮ ಪೋಷಕರ ಕಣ್ಣೆದುರು ಮೆದುಳಿನ ರಕ್ತಸ್ರಾವದಿಂದಾಗಿ ಮನೆಯಲ್ಲಿಯೇ ದುರಂತ ರೀತಿಯಲ್ಲಿ ಸಾವು ಕಂಡರು. ಪೋಷಕರು ಮಗಳ ಸಾವನ್ನು ಕಣ್ಣಾರೆ ನೋಡುವುದು ಬಿಟ್ಟು ಅವರಿಗೆ ಬೇರೆ ಯಾವುದೇ ಮಾರ್ಗಗಳೂ ಇದ್ದಿರಲಿಲ್ಲ.

ಲಿಂಕ್ಡಿಂನ್‌ನಲ್ಲಿ ಬರೆದುಕೊಂಡ ವಿವರವಾದ ಪೋಸ್ಟ್‌ನಲ್ಲಿ ಶಿವಕುಮಾರ್‌, ಮಗಳ ಸಾವಿನ ಬಳಿಕ ಆದ ಆಘಾತಕಾರಿ ಘಟನೆಗಳ ಸರಣಿಗಳನ್ನು ವಿವರಿಸಿದ್ದಾರೆ. ಆಂಬ್ಯುಲೆನ್ಸ್ ಚಾಲಕನೊಂದಿಗೆ ವ್ಯವಹರಿಸುವುದರಿಂದ ಹಿಡಿದು ಪೊಲೀಸರು, ಸ್ಮಶಾನ ಸಿಬ್ಬಂದಿ ಮತ್ತು ಬಿಬಿಎಂಪಿ ಅಧಿಕಾರಿಗಳವರೆಗೆ ಎಲ್ಲಾ ಕಡೆಯಲ್ಲೂ ಇದ್ದಿದ್ದು ಭ್ರಷ್ಟಾಚಾರ ಮಾತ್ರ ಎಂದಿದ್ದಾರೆ. ನನ್ನ ಮಗಳ ಸಾವಿನ ವೈಯಕ್ತಿಕ ನಷ್ಟದ ಕ್ಷಣಗಳಲ್ಲಿಯೂ ಸಹ ಭ್ರಷ್ಟಾಚಾರ ಮತ್ತು ನಿರಾಸಕ್ತಿಯಿಂದ ಪೀಡಿತ ವ್ಯವಸ್ಥೆಯ ಕರಾಳ ಚಿತ್ರವನ್ನು ಕಂಡು ಬೇಸರ ವ್ಯಕ್ತಪಡಿಸಿದ್ದಾರೆ.

ಲಂಚ, ಅಧಿಕಾರಶಾಹಿ ಮತ್ತು ಹೃದಯ ವಿದ್ರಾವಕತೆ

ಶಿವಕುಮಾರ್‌ ಬರೆದುಕೊಂಡಿದ್ದು, "ಆಂಬುಲೆನ್ಸ್ ಸಿಬ್ಬಂದಿ ಕಸವನಹಳ್ಳಿಯ ಒಂದು ಆಸ್ಪತ್ರೆಯಿಂದ ಕೋರಮಂಗಲದ ಸೇಂಟ್ ಜಾನ್ಸ್‌ಗೆ ಅವಳನ್ನು ಕರೆದೊಯ್ಯಲು ₹5,000 ಪಾವತಿಸಲು ಹೇಳಿದರು. ಪೊಲೀಸರು ತುಂಬಾ ಅಸಭ್ಯವಾಗಿ ವರ್ತಿಸಿದರು ಅದರಲ್ಲೂ ವಿಶೇಷವಾಗಿ ಇನ್ಸ್‌ಪೆಕ್ಟರ್. ಅವರ ಕಿರಿಯರು ನಾವು ಮರಣೋತ್ತರ ಪರೀಕ್ಷೆಯೊಂದಿಗೆ ಮುಂದುವರಿಯಬಹುದು ಎಂದು ಹೇಳಿದಾಗಲೂ ಅತ್ಯಂತ ಕೆಟ್ಟದಾಗಿ ವರ್ತಿಸಿದರು' ಎಂದು ಬರೆದುಕೊಂಡಿದ್ದಾರೆ.

ಅವರ ಮಾಜಿ ಉದ್ಯೋಗದಾತ "ಸರಿಯಾದ ಕ್ರಮ ತೆಗೆದುಕೊಂಡ ನಂತರವೇ" ಪೊಲೀಸ್ ಅಧಿಕಾರಿ ತಮ್ಮ ಸ್ವರವನ್ನು ಬದಲಾಯಿಸಿದರು ಎಂದು ಅವರು ಹೇಳಿದರು. ಮರಣೋತ್ತರ ಪರೀಕ್ಷೆಯ ನಂತರ, ಕುಟುಂಬವು ಅಂತ್ಯಕ್ರಿಯೆಗೆ ಮೊದಲು ಅಕ್ಷಯ ಅವರ ಕಣ್ಣುಗಳನ್ನು ದಾನ ಮಾಡಿತು.

"ಸ್ಮಶಾನದಲ್ಲೂ ಅವರು ಹಣ ಕೇಳಿದರು, ನಾವು ಅದನ್ನು ಪಾವತಿಸಿದೆವು. ನಂತರ, ಪೊಲೀಸರು ಎಫ್‌ಐಆರ್ ಮತ್ತು ಮರಣೋತ್ತರ ಪರೀಕ್ಷೆಯ ವರದಿಯ ಪ್ರತಿಯನ್ನು ನೀಡಬೇಕಾಗಿದ್ದರಿಂದ, ನಾವು ನಾಲ್ಕು ದಿನಗಳ ನಂತರ ಭೇಟಿಯಾದೆವು, ಮತ್ತು ಅವರು ಪೊಲೀಸ್ ಠಾಣೆಯಲ್ಲಿ ಬಹಿರಂಗವಾಗಿ ಹಣ ಕೇಳಿದರು, ಅದನ್ನು ನಾನು ಪಾವತಿಸಿದೆ" ಎಂದಿದ್ದಾರೆ.

ಲಂಚ ಸಂಗ್ರಹಿಸುತ್ತಿದ್ದ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾಗಳಿಲ್ಲ, ಇದರಿಂದಾಗಿ ಹೊಣೆಗಾರಿಕೆ ಅಸಾಧ್ಯವಾಯಿತು ಎಂದು ಶಿವಕುಮಾರ್ ಆರೋಪಿಸಿದರು. ಸಬ್-ಇನ್ಸ್‌ಪೆಕ್ಟರ್ ಗೌರವಯುತವಾಗಿ ವರ್ತಿಸಿದರೂ, ಸಹಾಯಕ ಅಧಿಕಾರಿಯೇ ಹಣ ಕೇಳುತ್ತಿದ್ದರು ಎಂದು ಅವರು ಬರೆದಿದ್ದಾರೆ.

ಹೆಣದ ಮೇಲೂ ಭ್ರಷ್ಟಾಚಾರ

ಆ ಬಳಿಕ ಬಿಬಿಎಂಪಿ ಕಚೇರಿಯಲ್ಲಿ ತನ್ನ ಸಂಕಷ್ಟ ಮುಂದುವರೆದಿದ್ದು, ಮಗಳ ಮರಣ ಪ್ರಮಾಣಪತ್ರಕ್ಕಾಗಿ ಸತತ ಐದು ದಿನಗಳ ಕಾಲ ಕಚೇರಿಗೆ ಭೇಟಿ ನೀಡಬೇಕಾಯಿತು ಎಂದು ದುಃಖಿತ ತಂದೆ ಬರೆದುಕೊಂಡಿದ್ದಾರೆ. "ಜಾತಿ ಸಮೀಕ್ಷೆಯಿಂದಾಗಿ ಯಾರೂ ಕಚೇರಿಯಲ್ಲಿಲ್ಲ ಎಂದು ನನಗೆ ತಿಳಿಸಲಾಯಿತು. ನಂತರ ನಾನು ಬಿಬಿಎಂಪಿಯ ಉನ್ನತ ಅಧಿಕಾರಿಯನ್ನು ಸಂಪರ್ಕಿಸಿದೆ, ಮತ್ತು ಅಧಿಕೃತ ಶುಲ್ಕಕ್ಕಿಂತ ಹೆಚ್ಚಿನ ಹಣವನ್ನು ಪಡೆದ ನಂತರ ಡಿಸಿ ನೀಡಲಾಯಿತು' ಎಂದಿದ್ದಾರೆ.

ನಮ್ಮ ಸ್ಥಿತಿಯೇ ಹೀಗಾದರೆ ಬಡವರ ಪರಿಸ್ಥಿತಿ ಏನು? ವ್ಯಕ್ತಿಯೊಬ್ಬ ಈಗಾಗಲೇ ಕುಟುಂಬದ ಆತ್ಮೀಯರನ್ನು ಕಳೆದುಕೊಂಡು ಶೋಕದಲ್ಲಿರುವಾಗ, ಪೊಲೀಸರಿಗೆ ಲಂಚ ಕೇಳಲು ಮತ್ತು ಅಸಭ್ಯವಾಗಿ ಮಾತನಾಡಲು ಶುರುವಾದಾಗ ನಮಗೆ ಅನಿಸೋದು ಒಂದೇ ಅವರು ಮಾನವರಾ ಅಥವಾ ಅವರಿಗೂ ಕುಟುಂಬ ಇದೆಯಾ ಅನ್ನೋದು.

ಕೆಲವರು ನೀವು ಈ ವಿಚಾರವನ್ನು ಪೊಲೀಸರು, ರಾಜಕಾರಣಿ ಹಾಗೂ ಬಿಬಿಎಂಪಿಯ ಮೇಲಿನ ಅಧಿಕಾರಿಗಳಿಗೆ ಪತ್ರಮುಖೇನ ತಿಳಿಸಬೇಕು ಎಂದರು. ಆದರೆ, ನನಗೆ ಇದ್ಯಾವುದು ಪ್ರಯೋಜನಕ್ಕೆ ಬರೋದಿಲ್ಲ ಎನಿಸಿದೆ. ನನಗೆ 64 ವರ್ಷ. ಬೆಂಗಳೂರನ್ನು ಈ ಅರಾಜಕತೆಯಿಂದ ಉಳಿಸಬಹುದೇ ಎನ್ನುವ ಪ್ರಶ್ನೆ ನನ್ನ ಎದುರಲ್ಲಿದೆ.

ನಾರಾಯಣಮೂರ್ತಿ, ಅಜೀಮ್‌ ಪ್ರೇಮ್‌ಜೀ, ಕಿರಣ್‌ ಮಜುಂದಾರ್‌ ಶಾರಂಥ ದೊಡ್ಡ ವ್ಯಕ್ತಿ, ಕೋಟ್ಯಧಿಪತಿಗಳು ಈ ನಗರವನ್ನು ಕಾಪಾಡಬಲ್ಲರೆ? ಅವರು ನಗರದ ಬಗ್ಗೆ ತುಂಬಾ ಮಾತನಾಡುತ್ತಾರೆ..ಆದರೇ...' ಎಂದು ಪೋಸ್ಟ್‌ ಮುಗಿಸಿದ್ದಾರೆ.

ಜನರ ಆಕ್ರೋಶ

ಈ ಪೋಸ್ಟ್ ಆನ್‌ಲೈನ್‌ನಲ್ಲಿ ಸಾವಿರಾರು ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ, ಅನೇಕ ಯೂಸರ್‌ಗಳು ಭಾರತದ ಸಾರ್ವಜನಿಕ ಆಡಳಿತದ ಸ್ಥಿತಿಗೆ ಸಂತಾಪ ಮತ್ತು ಕೋಪವನ್ನು ವ್ಯಕ್ತಪಡಿಸಿದ್ದಾರೆ.

ಸೋಶಿಯಲ್‌ ಮೀಡಿಯಾ ಪ್ರತಿಕ್ರಿಯೆ ಹೇಗಿದೆ?

"ಥರ್ಡ್‌ ಕ್ಲಾಸ್‌ ವ್ಯಕ್ತಿಗಳು ಇಡೀ ವ್ಯವಸ್ಥೆಯನ್ನು ನಡೆಸಿದಾಗ, ನಮಗೆ ಸಿಗುವ ಫಲಿತಾಂಶಗಳು ಇವು. ನಿಮ್ಮ ನಷ್ಟಕ್ಕೆ ವಿಷಾದಿಸುತ್ತೇವೆ" ಎಂದು ಒಬ್ಬ ಯೂಸರ್‌ ಕಾಮೆಂಟ್ ಮಾಡಿದ್ದಾರೆ.

"ಸಾವಿನ ಆಘಾತದಲ್ಲಿರುವ ಯಾರಾದರೂ ಸರ್ಕಾರಿ ಆಡಳಿತದ ಭ್ರಷ್ಟ ಅಧಿಕಾರಿಗಳಿಗೆ ಹಣ ನೀಡುವಂತೆ ಒತ್ತಾಯಿಸಿದಾಗ ಅದಕ್ಕಿಂತ ಕ್ರೂರತೆ ಇನ್ನೊಂದಿಲ್ಲ. ದೇವರು ನಮ್ಮ ದೇಶದಲ್ಲಿ ಆಳವಾಗಿ ಬೇರೂರಿರುವ ಈ ಭ್ರಷ್ಟಾಚಾರದಿಂದ ನಮ್ಮನ್ನು ರಕ್ಷಿಸಲಿ" ಎಂದು ಮತ್ತೊಬ್ಬರು ಬರೆದಿದ್ದಾರೆ.

"ಇದಕ್ಕಾಗಿಯೇ ಅನೇಕ ಭಾರತೀಯರು ವಿದೇಶಗಳಿಗೆ ತೆರಳುತ್ತಾರೆ, ತಮ್ಮ ಭಾರತೀಯ ಪೌರತ್ವವನ್ನು ತ್ಯಜಿಸುತ್ತಾರೆ ಮತ್ತು ಭಾರತಕ್ಕೆ ಹಿಂತಿರುಗುವುದಿಲ್ಲ" ಎಂದು ಮೂರನೇ ಯೂಸರ್‌ ಒಬ್ಬರು ಬರೆದಿದ್ದಾರೆ.

"ಭಾರತದಾದ್ಯಂತ ಇದೇ ಪರಿಸ್ಥಿತಿ ಇದೆ - ಹಳ್ಳಿಗಳು, ಪಟ್ಟಣಗಳು, ನಗರಗಳು ಎಲ್ಲೆಡೆ. ಭ್ರಷ್ಟಾಚಾರ ಈಗ ಭಾರತೀಯ ಆತ್ಮಸಾಕ್ಷಿಯ ಭಾಗವಾಗಿದೆ, ಮತ್ತು ಅದಕ್ಕೆ ನಾವೇ ಕಾರಣರು" ಎಂದು ಮತ್ತೊಬ್ಬರು ಹೇಳಿದ್ದಾರೆ.

ಬೆಂಗಳೂರಿನ ಅಧಿಕಾರಶಾಹಿ ಬಿಕ್ಕಟ್ಟಿಗೆ ಒಂದು ಕನ್ನಡಿ

ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಕೆ ಶಿವಕುಮಾರ್ 1987 ರಿಂದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ನೊಂದಿಗೆ ಸಂಬಂಧ ಹೊಂದಿದ್ದಾರೆ, ಹಣಕಾಸು ಇಲಾಖೆಯಲ್ಲಿ ಹಲವಾರು ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಅವರ ಜವಾಬ್ದಾರಿಗಳಲ್ಲಿ ಆಂತರಿಕ ಲೆಕ್ಕಪರಿಶೋಧನೆ, ಉದ್ಯಮ ಸಂಪನ್ಮೂಲ ಯೋಜನೆ ಮತ್ತು ಕಾರ್ಯದರ್ಶಿ ಕಾರ್ಯಗಳು ಸೇರಿವೆ. ಹಣಕಾಸು ನಿರ್ದೇಶಕ ಮತ್ತು ಸಿಎಫ್‌ಒ ಆಗಿ ಸೇವೆ ಸಲ್ಲಿಸಿದ ನಂತರ, ಅವರು ಸಲಹೆಗಾರರಾಗಿ ಬಿಪಿಸಿಎಲ್‌ನೊಂದಿಗೆ ಸಂಪರ್ಕದಲ್ಲಿದ್ದಾರೆ.

ಶಿವಕುಮಾರ್ ಅವರ ಭಾವನಾತ್ಮಕ ಪೋಸ್ಟ್ ಭಾರತದ ಸಾರ್ವಜನಿಕ ಕಚೇರಿಗಳಲ್ಲಿ ಭ್ರಷ್ಟಾಚಾರ, ಹೊಣೆಗಾರಿಕೆ ಮತ್ತು ಸಹಾನುಭೂತಿಯ ಬಗ್ಗೆ ಸಂಭಾಷಣೆಗಳನ್ನು ಮತ್ತೆ ಹುಟ್ಟುಹಾಕಿದೆ. ಅನೇಕರಿಗೆ, ಅವರ ಮಾತುಗಳು ಸಾಮಾನ್ಯ ನಾಗರಿಕರು ಪ್ರತಿದಿನ ಎದುರಿಸುತ್ತಿರುವ ಅದಕ್ಷತೆ ಮತ್ತು ಶೋಷಣೆಯಿಂದ ವಿದ್ಯಾವಂತರು ಮತ್ತು ಉತ್ತಮ ಸಂಪರ್ಕ ಹೊಂದಿರುವವರು ಸಹ ಹೊರತಾಗಿಲ್ಲ ಎಂಬುದನ್ನು ನೋವಿನಿಂದ ನೆನಪಿಸುತ್ತವೆ.