ನೇಪಾಳದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಂದಾಗಿ ಕಾಠ್ಮಂಡುವಿನಲ್ಲಿ ಸಿಲುಕಿರುವ 39 ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬೆಂಗಳೂರು (ಸೆ.10): ನೇಪಾಳದಲ್ಲಿ ಭಾರೀ ಪ್ರತಿಭಟನೆ ಹಾಗೂ ಪ್ರಕ್ಷುಬ್ದ ವಾತಾವರಣ ನಡುವೆ ಕಾಠ್ಮಂಡುವಿನಲ್ಲಿ ಸಿಲುಕಿರುವ 39 ಮಂದಿ ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲು ಅಗತ್ಯ ಕ್ರಮ ವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚಿಸಿದ್ದಾರೆ.
ನೇಪಾಳ ಸರ್ಕಾರದ ಭ್ರಷ್ಟಾಚಾರ ಮತ್ತು ಸಾಮಾಜಿಕ ಮಾಧ್ಯಮಗಳನ್ನು ನಿಷೇಧಿಸಿರುವ ಕ್ರಮ ವಿರೋಧಿಸಿ ರಾಜಧಾನಿ ಕಾಠ್ಮಂಡುವಿನಲ್ಲಿ ಭಾರೀ ಪ್ರತಿಭಟನೆ ಭುಗಿಲೆದ್ದಿದೆ. ವಿದ್ಯಾರ್ಥಿಗಳು-ಯುವಜನರು ಭಾರೀ ಪ್ರತಿಭಟನೆ ನಡೆಸುತ್ತಿರುವುದರಿಂದ ದೇಶಾದ್ಯಂತ ಪ್ರಕ್ಷುಬ್ದ ವಾತಾವರಣ ಸೃಷ್ಟಿಯಾಗಿದೆ. ಪರಿಣಾಮ ಕಾಠ್ಮಂಡು ವಿಮಾನ ನಿಲ್ದಾಣದಲ್ಲಿ 39 ಮಂದಿ ಕನ್ನಡಿಗರು ರಾಜ್ಯಕ್ಕೆ ಹಿಂತಿರುಗಲಾಗದೆ ಸಿಲುಕಿಕೊಂಡಿದ್ದಾರೆ. ಅವರೆಲ್ಲರನ್ನೂ ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲು ಸಂಬಂಧಪಟ್ಟವರ ಜತೆ ಚರ್ಚಿಸಿ ಅಗತ್ಯ ಕ್ರಮ ವಹಿಸುವಂತೆ ಮುಖ್ಯಮಂತ್ರಿ ಅವರು ಮುಖ್ಯಕಾರ್ಯದರ್ಶಿ ಅವರಿಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ವಿಶ್ವದ ಏಕೈಕ ಹಿಂದೂ ರಾಷ್ಟ್ರವಾಗಿದ್ದ ನೇಪಾಳದಲ್ಲೀಗ ಮುಸ್ಲಿಂರ ಜನಸಂಖ್ಯೆ ಎಷ್ಟು?
ಮುಖ್ಯಮಂತ್ರಿ ಸೂಚನೆ ಬೆನ್ನಲ್ಲೇ ಮುಖ್ಯ ಕಾರ್ಯದರ್ಶಿ ಅವರು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ರಾಜತಾಂತ್ರಿಕ ಪ್ರತಿನಿಧಿಗಳ ಜೊತೆ ಚರ್ಚಿಸಿ ಅಗತ್ಯ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ನೇಪಾಳ ಸರ್ಕಾರ 26 ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಿದ ನಂತರ ಬೀದಿಗಿಳಿದ ‘ಜೆನ್-ಝೆಡ್’ ಯುವಕರು ಭಾರೀ ಪ್ರತಿಭಟನೆ ನಡೆಸುತ್ತಿದ್ದಾರೆ. ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಸಂಘರ್ಷ ಏರ್ಪಟ್ಟಿದೆ. ಹಿಂಸಾ ಪ್ರತಿಭಟನೆಯಲ್ಲಿ ಕನಿಷ್ಠ 14 ಸಾವು, ನೂರಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದೆ. ಪರಿಸ್ಥಿತಿ ನಿಯಂತ್ರಿಸಲು ರಾಜಧಾನಿಯಲ್ಲಿ ಸೇನೆ ನಿಯೋಜಿಸಲಾಗಿದ್ದು, ಪ್ರಮುಖ ಪ್ರದೇಶಗಳಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ.
