ಆನೆ ಬೇಕು ಅಂತಾ ಬಂದಿದ್ದಲ್ಲ ದಾರಿ ತಪ್ಪಿ ಬಂದಿದ್ದು, ಆದ್ರೆ ಹೊಸೂರು ಜನ ದಾರಿ ಮಾಡಿಕೊಡಲೇ ಇಲ್ಲ, ಆನೆ ಮರಿಯನ್ನು ಆಟ್ಟಾಡಿಸಿಕೊಂಡು ಹೋದ ಅತ್ಯಂತ ನೀಚ ಘಟನೆ ನಡೆದಿದೆ. ಸ್ಥಳೀಯರು ಇದಕ್ಕೆ ಸಾಥ್ ನೀಡುವುದು ಮತ್ತೊಂದು ದುರಂತ.

ಹೊಸೂರು (ಅ.26) ಆನೆ ಬೇಕು ಅಂತಾ ಬಂದಿದ್ದಲ್ಲ, ದಾರಿ ತಪ್ಪಿ ಬಂದಿದ್ದು, ಹೋಗ್ಲಿಕೆ ಮನಸ್ಸುಂಟು, ಆದರೆ ಹೂಸೂರಿನ ಜನ ದಾರಿ ಮಾಡಿಕೊಡಲೇ ಇಲ್ಲ. ಮರಿ ಆನೆಯನ್ನು ಕೋಲು, ದೊಣ್ಣೆಗಳಿಂದ ಹೊಡೆದು ವಿಕೃತಿ ಮೆರೆದಿದ್ದಾರೆ. ಕಾಡಂಚು ಮಾತ್ರವಲ್ಲ, ಪಟ್ಟಣ, ನಗರಗಳಿಗೂ ಕಾಡು ಪ್ರಾಣಿಗಳು ನುಗ್ಗಿದ ಸಾಕಷ್ಟು ಉದಾಹರಣೆಗಳಿವೆ. ಆಹಾರ ಅರಸಿ ಬರುವ ಕಾಡು ಪ್ರಾಣಿಗಳಿಂದ ಮರಿಗಳು ಬೇರ್ಪಟ್ಟ ಘಟನೆಗಳು ನಡೆದಿದೆ. ಹೀಗೆ ಹೊಸೂರು ಸಮೀಪದಲ್ಲಿ ಆನೆಗಳ ಗುಂಪಿನಿಂದ ಮರಿ ಆನೆಯೊಂದು ಬೇರ್ಪಟ್ಟಿದೆ. ಗುಂಪಿನಿಂದ ಬೇರ್ಪಟ್ಟು ಗ್ರಾಮಕ್ಕೆ ಬಂದ ಮರಿ ಆನೆಯನ್ನು ಊರಿನ ಹುಡುಗರ ಗುಂಪು ಮರಿ ಆನೆ ಮೇಲೆ ದಾಳಿ ಮಾಡಿ ವಿಕೃತಿ ಮೆರೆದ ಘಟನೆ ನಡೆದಿದೆ.

ದಾರಿ ತಪ್ಪಿ ನಾಡಿನತ್ತ ಬಂದ ಪುಟಾಣಿ ಆನೆ ಮರಿ

ಹೊಸೂರು ಸಮೀಪದ ಡೆಂಕಣಿ ಕೋಟೆಯ ಮಾರಸಂದ್ರ ಗ್ರಾಮದಲ್ಲಿ ಮರಿ ಆನೆಯೊಂದು ಕಾಣಿಸಿಕೊಂಡಿದೆ. ತಾಯಿ ಆನೆಯಿಂದ ಬೇರ್ಪಟ್ಟ ಆನೆ, ದಿಕ್ಕು ತೋಚದೆ ಗ್ರಾಮಕ್ಕೆ ಬಂದಿದೆ. ತಕ್ಷಣವೇ ಅರಣ್ಯ ಸಿಬ್ಬಂದಿಗಳು, ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕಿದ್ದ ಸ್ಥಳೀಯರು ಆನೆ ಮರಿಯನ್ನು ಕೋಲು ದೊಣ್ಣೆ ಹಿಡಿದು ಅಟ್ಟಾಡಿಸಿದ್ದಾರೆ. ಮರಿ ಆನೆ ಮೇಲೆ ದಾಳಿ ಮಾಡಿ ವಿಕೃತಿ ಮೆರೆದಿದ್ದಾರೆ. ಊರಿನ ಹುಡುಗರ ವಿಕೃತಿಗೆ ಕೆಲ ಸ್ಥಳೀಯರು ಸಾಥ್ ನೀಡಿದ್ದಾರೆ. ಅಮಾಯಕ ಮರಿ ಆನೆ ಮೇಲೆ ದಾಳಿ ಮಾಡಿ ನೀಚವಾಗಿ ವರ್ತಿಸಿದ್ದಾರೆ.

ಮರಿ ಆನೆಯನ್ನು ಅಟ್ಟಾಡಿಸಿ ಹೊಡೆಯುತ್ತಿರುವ ಕೆಲ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಯ ಹಾಗೂ ದೊಣ್ಮೆಗಳ ಹೊಡೆತಕ್ಕೆ ಬಿಚ್ಚಿ ಬಿದ್ದ ಮರಿ ಆನೆ ದಿಕ್ಕಾಪಾಲಾಗಿ ಓಡಿದೆ. ಮರಿ ಆನೆ ಓಡುತ್ತಿದ್ದಂತೆ ಅದರ ಹಿಂದೆ ಯುವಕರ ಗುಂಪು ಕೂಡ ಕೋಲು, ಬಡಿಗೆ ಹಿಡಿದು ದಾಳಿ ಮಾಡುತ್ತಾ ಸಾಗಿದೆ. ಇತ್ತ ಸ್ಥಳೀಯರು ಕಲ್ಲುಗಳನ್ನು ಎಸೆದಿದ್ದಾರೆ. ಹುಡುಗರಿಗೆ ತಿಳಿ ಹೇಳುವ ಮನಸ್ಸನ್ನು ಸ್ಥಳೀಯರು ತೋರಲಿಲ್ಲ. ಹುಡುಗರ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆನೆ ಮರಿ ನಾಡಿಗೆ ಬಂದಿರುವ ಮಾಹಿತಿಯನ್ನು ಅರಣ್ಯ ಇಲಾಖೆಗೆ ನೀಡುವ ಬದಲು ತಾವೇ ಮರಿ ಆನೆಯನ್ನು ಬಡಿಗೆಗಳಿಂದ, ಕಲ್ಲುಗಳಿಂದ ಓಡಿಸಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು

ಮರ ಆನೆಯೊಂದು ಗ್ರಾಮಕ್ಕೆ ಬಂದಿರುವ ಮಾಹಿತಿ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಸತತ ಕಾರ್ಯಾಚರಣೆ ನಡೆಸಿ ಮರಿ ಆನೆ ಹಿಡಿದಿದ್ದಾರೆ. ಬಳಿಕ ಬೇರ್ಪಟ್ಟ ಆನೆಗಳ ಗುಂಪು ಪತ್ತೆ ಹಚ್ಚಿದ್ದಾರೆ. ತಾಯಿಯಿಂದ ಬೇರ್ಪಟ್ಟು ನಾಡಿಗೆ ಬಂದ ಮರಿ ಆನೆಯನ್ನು ಆನೆಗಳ ಗುಂಪಿನ ಜೊತೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.