ಭಾರತದಲ್ಲಿ ಇವಿ ಎಲೆಕ್ಟ್ರಿಕ್ ವಾಹನಗಳ ಅಬ್ಬರ ಹೆಚ್ಚಾಗಿದೆ. ದಿನ ದಿನಕ್ಕೂ ರಸ್ತೆಗೆ ಇಳಿಯುತ್ತಿರುವ ವಾಹನಗಳ ಸಂಖ್ಯೆ ಏರ್ತಾನೆ ಇದೆ. ಈ ಅವಕಾಶವನ್ನು ಕೈಬಿಡದೆ ಬ್ಯುಸಿನೆಸ್ ಮಾಡ್ಕೊಂಡ್ರೆ ಲಾಭವೋ ಲಾಭ
ಎಲೆಕ್ಟ್ರಿಕ್ ವಾಹನಗಳ (EV) ಮಾರ್ಕೆಟ್ ವೇಗವಾಗಿ ಬೆಳೆಯುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮತ್ತು ಸರ್ಕಾರದ ಗ್ರೀನ್ ಎನರ್ಜಿ ಪಾಲಿಸಿ (Green Energy Policy)ಯಿಂದ ಜನರು ಎಲೆಕ್ಟ್ರಿಕ್ ವಾಹನಗಳತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ಆಟೋಮೊಬೈಲ್ ಉದ್ಯಮ ಈಗ ಎಲೆಕ್ಟ್ರಿಕ್ ಕಾರು, ಬೈಕ್ ಮತ್ತು ಎಲೆಕ್ಟ್ರಿಕ್ ಸ್ಕೂಟರ್ಗಳ ಮೇಲೆ ಹೆಚ್ಚು ಗಮನ ಹರಿಸುತ್ತಿದೆ. ಮುಂಬರುವ ವರ್ಷಗಳಲ್ಲಿ ಈ ಪ್ರವೃತ್ತಿ ಇನ್ನಷ್ಟು ವೇಗವಾಗಿ ಬೆಳೆಯಲಿದೆ. ಹೊಸದಾಗಿ ಬ್ಯುಸಿನೆಸ್ ಶುರು ಮಾಡ್ಬೇಕು ಎನ್ನುವವರಿಗೆ ಇವಿ ಕೈ ಹಿಡಿಯಲಿದೆ. ನೀವು ಇವಿ ಎಲೆಕ್ಟ್ರಿಕ್ ವಾಹನಗಳಿಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ಬ್ಯುಸಿನೆಸ್ ಶುರು ಮಾಡ್ಬಹುದು.
ಚಾರ್ಜಿಂಗ್ ಪಾಯಿಂಟ್ (Charging Point) : 2030ರ ಸುಮಾರಿಗೆ ಭಾರತದಲ್ಲಿ ಶೇಕಡಾ 30ರಷ್ಟು ಇವಿ ವಾಹನಗಳಿರಬೇಕು ಅಂತ ಸರ್ಕಾರ ಬಯಸಿದೆ. ಅಂದ್ರೆ ಸುಮಾರು 80 ಮಿಲಿಯನ್ ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಪಾಯಿಂಟ್ ಅಗತ್ಯ ಬೀಳಲಿದೆ. ಇವಿ ವಾಹನಗಳ ಚಾರ್ಜಿಂಗ್ ಸದ್ಯ ದೊಡ್ಡ ಸವಾಲಾಗಿ ಉಳಿದಿದೆ. ಜನರಿಗೆ ಇವಿ ಚಾರ್ಜ್ ಮಾಡಲು ಸರಿಯಾದ ಸ್ಥಳ ಸಿಗ್ತಿಲ್ಲ. ಈಗ 12 ಸಾವಿರ ಚಾರ್ಜಿಂಗ್ ಪಾಯಿಂಟ್ ಮಾತ್ರ ಭಾರತದಲ್ಲಿದೆ. ಭಾರತಕ್ಕೆ ಸುಮಾರು 2 ಮಿಲಿಯನ್ ಚಾರ್ಜಿಂಗ್ ಪಾಯಿಂಟ್ ಅಗತ್ಯವಿದೆ. ನೀವು ಇವಿ ಚಾರ್ಜಿಂಗ್ ಸ್ಟೇಷನ್ ಬ್ಯುಸಿನೆಸ್ ಶುರು ಮಾಡ್ಬಹುದು.
ಇವಿ ಚಾರ್ಜಿಂಗ್ ಸ್ಟೇಷನ್ ವ್ಯವಹಾರವನ್ನು ಹೇಗೆ ಪ್ರಾರಂಭಿಸುವುದು? : ಇದು ಲಾಭದಾಯಕ ಬ್ಯುಸಿನೆಸ್. ಇದನ್ನು ಪ್ರಾರಂಭಿಸಲು, ಸರಿಯಾದ ಯೋಜನೆ, ಹೂಡಿಕೆ ಮತ್ತು ಸರ್ಕಾರದ ಮಾರ್ಗಸೂಚಿ ಅಗತ್ಯ. ಸರಿಯಾದ ಸ್ಥಳವನ್ನು ನೀವು ಆಯ್ಕೆ ಮಾಡಿಕೊಳ್ಬೇಕು. ಹೆದ್ದಾರಿ, ಮಾಲ್ ಮತ್ತು ಶಾಪಿಂಗ್ ಸಂಕೀರ್ಣ,ಅಪಾರ್ಟ್ಮೆಂಟ್ ಬಳಿ, ಜನಸಂದಣಿ ಹೆಚ್ಚಿರುವ ಜಾಗದಲ್ಲಿ ನೀವು ಇದನ್ನು ಶುರು ಮಾಡ್ಬೇಕು.
ಭಾರತದಲ್ಲಿ ಇವಿ ಚಾರ್ಜಿಂಗ್ ಸ್ಟೇಷನ್ ಸ್ಥಾಪಿಸಲು ಯಾವುದೇ ವಿಶೇಷ ಪರವಾನಗಿ ಇಲ್ಲವಾದ್ರೂ ಕೆಲ ನಿಯಮ ಪಾಲಿಸೋದು ಅಗತ್ಯ. ಎಲ್ಲಾ ಚಾರ್ಜಿಂಗ್ ಸಾಧನಗಳು BIS ಅನುಮೋದನೆಯನ್ನು ಹೊಂದಿರಬೇಕು. ಸ್ಥಳೀಯ ಪುರಸಭೆ ಮತ್ತು ವಿದ್ಯುತ್ ಮಂಡಳಿಯ ಒಪ್ಪಿಗೆ ಪತ್ರ ಇರ್ಬೇಕು. ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮೋದನೆ ಅಗತ್ಯ. ಅಗ್ನಿ ಸುರಕ್ಷತಾ ಪ್ರಮಾಣಪತ್ರವನ್ನು ನೀವು ಹೊಂದಿರಬೇಕು. ಭಾರತ ಸರ್ಕಾರವು ವಿದ್ಯುತ್ ವಾಹನ ಚಾರ್ಜಿಂಗ್ ಸ್ಟೇಷನ್ಗಳನ್ನು ತೆರೆಯುವುದನ್ನು ಉತ್ತೇಜಿಸಲು ಹಲವಾರು ಯೋಜನೆಗಳನ್ನು ನಡೆಸುತ್ತಿದೆ. FAME II ಯೋಜನೆ ಅಡಿ ಹಣಕಾಸಿನ ನೆರವು ಸಿಗುತ್ತದೆ. ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್ ಸ್ಥಾಪಿಸಲು ಶೇಕಡಾ 50ರವರೆಗೆ ಸಬ್ಸಿಡಿ ನೀಡಲಾಗುತ್ತದೆ. ರಾಜ್ಯ ಸರ್ಕಾರಗಳಿಂದ ಹೆಚ್ಚುವರಿ ಸಬ್ಸಿಡಿ ಕೂಡ ಲಭ್ಯವಿದೆ. FAME II ಪೋರ್ಟಲ್ ಗೆ ಹೋಗಿ ನೀವು ಸಬ್ಸಿಡಿ ಪಡೆಯಬಹುದು. ಅಲ್ಲದೆ ರಾಜ್ಯ ಸರ್ಕಾರಗಳ ಪೋರ್ಟಲ್ನಲ್ಲಿ ನೀವು ಸಬ್ಸಿಡಿ ಚೆಕ್ ಮಾಡಿ, ಅಪ್ಲೈ ಮಾಡ್ಬಹುದು.
ಚಾರ್ಜಿಂಗ್ ಪಾಯಿಂಟ್ ಶುರು ಮಾಡಲು ವೆಚ್ಚ : ಭಾರತದಲ್ಲಿ ಇವಿ ಚಾರ್ಜಿಂಗ್ ಸ್ಟೇಷನ್ ಸ್ಥಾಪಿಸುವ 5 ಲಕ್ಷದಿಂದ 30 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಖರ್ಚು ಬರುತ್ತದೆ. ನೀವು ಡಿಸಿ ಫಾಸ್ಟ್ ಚಾರ್ಜಿಂಗ್ ಇಲ್ಲ ಎಸಿ ನಿಧಾನ ಚಾರ್ಜಿಂಗ್ ಇದ್ರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ತೀರಿ ಎನ್ನುವುದು ಮುಖ್ಯವಾಗುತ್ತದೆ.
ಎಷ್ಟು ಲಾಭ ? : EV ಚಾರ್ಜಿಂಗ್ ಸ್ಟೇಷನ್ನ ಆದಾಯ ಮುಖ್ಯವಾಗಿ ಚಾರ್ಜಿಂಗ್ ಶುಲ್ಕದಿಂದ ಬರುತ್ತೆ. ಪ್ರತಿ ಯೂನಿಟ್ಗೆ 10 ರಿಂದ 25 ರೂಪಾಯಿ ವಿಧಿಸಲಾಗುತ್ತದೆ. ಸ್ಟೇಷನ್ನಲ್ಲಿ ಪ್ರತಿದಿನ 50-100 ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಿದ್ರೆ ಪ್ರತಿ ವಾಹನಕ್ಕೆ ಸರಾಸರಿ 20 ಯೂನಿಟ್ ವಿದ್ಯುತ್ ಬಳಸಿದರೆ, ದಿನದ ಗಳಿಕೆ 10,000 ರಿಂದ 50,000 ರೂಪಾಯಿ ಆಗುತ್ತೆ. ತಿಂಗಳಿಗೆ ನೀವು 3 ರಿಂದ 5 ಲಕ್ಷದವರೆಗೆ ಆದಾಯ ಗಳಿಸ್ಬಹುದು.
ಈ ಬ್ಯುಸಿನೆಸ್ ಗೂ ಇದೆ ಅವಕಾಶ : ನೀವು ಬರೀ ಚಾರ್ಜಿಂಗ್ ಸ್ಟೇಷನ್ ಮಾತ್ರವಲ್ಲ ಬ್ಯಾಟರಿ ಸ್ವಾಪ್ ಸ್ಟೇಷನ್ ಶುರು ಮಾಡ್ಬಹುದು. EV ನಿರ್ವಹಣಾ ಕೇಂದ್ರ ಅಥವಾ ಇವಿ ಪಾರ್ಕಿಂಗ್ ಹಾಗೂ ಚಾರ್ಜಿಂಗ್ ಮಾಡಲು ಜಾಗ ನೀಡಿಯೋ ಹಣ ಸಂಪಾದನೆ ಮಾಡ್ಬಹುದು.