ಕಾಶ್ಮೀರ ವಿವಾದವನ್ನು ವಿಶ್ವಸಂಸ್ಥೆಯ ಗೊತ್ತುವಳಿಗಳ ಪ್ರಕಾರ ಪರಿಹರಿಸಬೇಕು ಎಂದು ಅದು ಆಗ್ರಹಿಸಿದೆ. ಯಾವುದೇ ಏಕಪಕ್ಷೀಯ ಕ್ರಮವನ್ನು ತಪ್ಪಿಸುವ ಸಲುವಾಗಿ ವಿಶ್ವಸಂಸ್ಥೆಯ ನಿರ್ಣಯಗಳ ಅನುಸಾರ ಇತ್ಯರ್ಥ ಆಗಬೇಕು ಎಂದು ಪ್ರತಿಪಾಸಿಸಿದೆ.
ಇಸ್ಲಾಮಾಬಾದ್ (ಮೇ 8, 2023): ‘ಕಾಶ್ಮೀರ ವಿಷಯವು ದ್ವಿಪಕ್ಷೀಯವಾದದ್ದು. ಇದರಲ್ಲಿ ಯಾರ ಮಧ್ಯಪ್ರವೇಶವೂ ಅಗತ್ಯವಿಲ್ಲ’ ಎಂದು ಭಾರತ ಪ್ರತಿಪಾದಿಸುತ್ತಿದ್ದರೂ, ಇದಕ್ಕೆ ಗಮನ ಕೊಡದ ಚೀನಾ, ಹಸ್ತಕ್ಷೇಪ ಮಾಡಿದೆ. ಕಾಶ್ಮೀರ ವಿವಾದವನ್ನು ವಿಶ್ವಸಂಸ್ಥೆಯ ಗೊತ್ತುವಳಿಗಳ ಪ್ರಕಾರ ಪರಿಹರಿಸಬೇಕು ಎಂದು ಅದು ಆಗ್ರಹಿಸಿದೆ. ಯಾವುದೇ ಏಕಪಕ್ಷೀಯ ಕ್ರಮವನ್ನು ತಪ್ಪಿಸುವ ಸಲುವಾಗಿ ವಿಶ್ವಸಂಸ್ಥೆಯ ನಿರ್ಣಯಗಳ ಅನುಸಾರ ಇತ್ಯರ್ಥ ಆಗಬೇಕು ಎಂದು ಪ್ರತಿಪಾಸಿಸಿದೆ.
ಗೋವಾದಲ್ಲಿ ಎರಡು ದಿನಗಳ ಹಿಂದೆ ಆಯೋಜನೆಗೊಂಡಿದ್ದ ಶಾಂಘೈ ಸಹಕಾರ ಶೃಂಗ ಸಭೆಗೆ ಆಗಮಿಸಿದ್ದ ವೇಳೆ ಗಡಿವಿವಾದ ಪ್ರಸ್ತಾಪಿಸುವ ಯತ್ನ ಮಾಡಿದ ಪಾಕ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋಗೆ ತಿರುಗೇಟು ನೀಡಿದ್ದ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್, ನಾವು ಪಾಕಿಸ್ತಾನದ ಜೊತೆ ಮಾತುಕತೆ ನಡೆಸಲು ಉಳಿದಿರುವುದು ಒಂದೇ ವಿಷಯ. ಅದು ನೀವು ಆಕ್ರಮಿಸಿಕೊಂಡಿರುವ ಕಾಶ್ಮೀರವನ್ನು ಎಂದು ತೆರವು ಮಾಡುತ್ತೀರಿ ಎಂಬುದರ ಬಗ್ಗೆ ಎಂದಿದ್ದರು. ಈ ಸಭೆಯ ಬಳಿಕ ಚೀನಾದ ವಿದೇಶಾಂಗ ಸಚಿವ ಕ್ವಿನ್ ಗಾಂಗ್ ಅವರು ಎರಡು ದಿನಗಳ ಭೇಟಿಗಾಗಿ ಶುಕ್ರವಾರ ಪಾಕಿಸ್ತಾನಕ್ಕೆ ಆಗಮಿಸಿದ್ದು, ಈ ನಿಮಿತ್ತ ಅವರು ಶನಿವಾರ ತಮ್ಮ ಪಾಕಿಸ್ತಾನಿ ಸಹವರ್ತಿ ಬಿಲಾವಲ್ ಭುಟ್ಟೋ ಜರ್ದಾರಿ ಅವರೊಂದಿಗೆ ಸಭೆ ನಡೆಸಿದರು.
ಇದನ್ನು ಓದಿ: ಭುಟ್ಟೋ ಉಗ್ರರ ವಕ್ತಾರ; ಬಲಿಪಶುಗಳು, ಅಪರಾಧಿಗಳ ಜತೆ ಕೂರಲಾಗುವುದಿಲ್ಲ: ಜೈಶಂಕರ್ ಪ್ರಹಾರ
ಆಗ, ‘ಕಾಶ್ಮೀರ ವಿವಾದವು ಭಾರತ ಮತ್ತು ಪಾಕಿಸ್ತಾನದ ನಡುವೆ ಅನೇಕ ದಿನಗಳಿಂದ ಹಾಗೇ ಬಾಕಿ ಉಳಿದಿದೆ. ಅದನ್ನು ವಿಶ್ವಸಂಸ್ಥೆಯ ಚಾರ್ಟರ್, ಸಂಬಂಧಿತ ಭದ್ರತಾ ಮಂಡಳಿಯ ನಿರ್ಣಯಗಳು ಮತ್ತು ದ್ವಿಪಕ್ಷೀಯ ಒಪ್ಪಂದಗಳಿಗೆ ಅನುಗುಣವಾಗಿ ಸೂಕ್ತ ರೀತಿಯಲ್ಲಿ ಹಾಗೂ ಶಾಂತಿಯುತವಾಗಿ ಪರಿಹರಿಸಬೇಕು’ ಎಂದು ಕ್ವಿನ್ ಗಾಂಗ್ ಪ್ರತಿಪಾದಿಸಿದರು. ಈ ನಡುವೆ, ಅಸ್ಥಿರ ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸುವ ಯಾವುದೇ ಏಕಪಕ್ಷೀಯ ಕ್ರಮಗಳನ್ನು ಎರಡೂ ಕಡೆಯವರು ವಿರೋಧಿಸಿದರು. ಈ ಹಿಂದೆ ಜಮ್ಮು ಮತ್ತು ಕಾಶ್ಮೀರವನ್ನು ಅನಗತ್ಯವಾಗಿ ಉಲ್ಲೇಖಿಸಿದ್ದಕ್ಕಾಗಿ ಭಾರತವು ಚೀನಾ ಮತ್ತು ಪಾಕಿಸ್ತಾನವನ್ನು ಟೀಕಿಸಿತ್ತು.
ತಾಲಿಬಾನ್ ಚೀನಾ ಒಪ್ಪಂದ: ಭಾರತಕ್ಕೆ ಮತ್ತೊಂದು ಆತಂಕ
ಚೀನಾದ ಪ್ರಮುಖ ಆರ್ಥಿಕ ಯೋಜನೆಯಾದ ಒನ್‌ಬೆಲ್ಟ್, ಒನ್‌ರೋಡ್ ಯೋಜನೆಯ ವಿಸ್ತರಣೆಗೆ ಅಷ್ಘಾನಿಸ್ತಾನದ ತಾಲಿಬಾನ್ ಆಡಳಿತ ಒಪ್ಪಿಗೆ ಸೂಚಿಸಿದೆ. ತಾಲಿಬಾನ್ ಆಡಳಿತಕ್ಕೆ ಬಂದ ಬಳಿಕ ಅಂತಾರಾಷ್ಟ್ರೀಯವಾಗಿ ಆರ್ಥಿಕ ನಿರ್ಬಂಧಕ್ಕೊಳಪಟ್ಟಿರುವ ಅಷ್ಘಾನಿಸ್ತಾನ, ಈ ಯೋಜನೆಯ ಮೂಲಕ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ. ದೇಶಕ್ಕೆ ಹರಿದುಬರುವಂತೆ ಮಾಡಲು ನಿರ್ಧರಿಸಿದೆ.
ಇದನ್ನೂ ಓದಿ: ಕ್ರಿಕೆಟ್ ಟೀಂ ಸ್ಟೈಲಲ್ಲಿ ಕ್ಯಾಪ್ಟನ್ ಮೋದಿ ಕೆಲಸ: ವಿದೇಶಾಂಗ ಸಚಿವ ಜೈಶಂಕರ್ ವಿವರಿಸಿದ್ದು ಹೀಗೆ..
ಇದಕ್ಕೆ ಸಂಬಂಧಿಸಿದಂತೆ ಚೀನಾದ ವಿದೇಶಾಂಗ ಸಚಿವ ಕ್ವಿನ್ ಗಾಂಗ್, ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಹಾಗೂ ತಾಲಿಬಾನ್‌ನ ಪ್ರಮುಖ ಅಧಿಕಾರಿ ಅಮೀರ್ ಖಾನ್ ಮುಟ್ಟಾಕಿ ಶನಿವಾರ ಇಸ್ಲಾಮಾಬಾದ್‌ನಲ್ಲಿ ಸಭೆ ನಡೆಸಿದ್ದಾರೆ. ಚೀನಾ-ಪಾಕಿಸ್ತಾನ್ ಎಕಾನಿಮಿಕ್ ಕಾರಿಡಾರ್ ಅನ್ನು ಅಫ್ಘಾನಿಸ್ತಾನಕ್ಕೂ ವಿಸ್ತರಿಸಲು ಈ ವೇಳೆ ನಿರ್ಣಯ ಕೈಗೊಳ್ಳಲಾಗಿದೆ. ಇದಕ್ಕಾಗಿ 4 ಲಕ್ಷ ಕೋಟಿ ರೂ. ಹೂಡಿಕೆ ಮಾಡಲು ಉಭಯ ದೇಶಗಳು ಒಪ್ಪಂದ ಮಾಡಿಕೊಂಡಿವೆ.
ಆದರೆ ಈಗಾಗಲೇ ಭಾರತದ ನೆರೆಯ ಪಾಕಿಸ್ತಾನ ಮತ್ತು ಚೀನಾಗಳು ಭಾರತಕ್ಕೆ ಮಗ್ಗುಲಿನ ಮುಳ್ಳಾಗಿದ್ದು, ಈ ಎರಡೂ ದೇಶಗಳ ಜೊತೆ ತಾಲಿಬಾನ್ ಉಗ್ರರ ಸಖ್ಯವು, ಭಾರತಕ್ಕೆ ಮುಂದಿನ ದಿನಗಳಲ್ಲಿ ಗಡಿಯಲ್ಲಿ ಮತ್ತು ದೇಶದ ಒಳಗೆ ಭಧ್ರತಾ ಸವಾಲುಗಳನ್ನು ಮುಂದೊಡ್ಡುವ ಸಾಧ್ಯತೆ ಇಲ್ಲದಿಲ್ಲ. ಹೀಗಾಗಿ ಮೂರೂ ದೇಶಗಳ ಒಪ್ಪಂದ ಸಹಜವಾಗಿಯೇ ಭಾರತದ ಕಳವಳಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ನಾನು ಭಾರತದ ದೊಡ್ಡ ಅಭಿಮಾನಿ ಎಂದ China ಉನ್ನತ ಅಧಿಕಾರಿ..!