ಹಲವಾರು ಬಿರುದುಗಳಿಂದ ಕರೆಯುವ ಹೆಣ್ಣಿನ ಜೀವನದಲ್ಲಿ ನಿಜಕ್ಕೂ ಸೋಲು ಇದೆಯೆ? ಹೆಣ್ಣು ಸೋತು ಗೆದ್ದವಳೇ? ಏನದು ಸೋಲುಗಳು? ಈ ಭಗವಂತ ಹೇಳಿದ್ದೇನು ನೋಡಿ...
ಹೆಣ್ಣಿಗೆ (Women) ಇರುವಷ್ಟು ಬಿರುದು, ನಾಮಾವಳಿಗಳು ಬಹುಶಃ ಈ ಭೂಮಿಯ ಮೇಲೆ ಬೇರೆ ಯಾರಿಗೂ ಇರಲಿಕ್ಕಿಲ್ಲ. ಸಹನಾಮೂರ್ತಿ, ಮಾತೃ ಸ್ವರೂಪಿಣಿ, ಕ್ಷಮಯಾಧರಿತ್ರಿ, ಸಹನೆಯ ಪ್ರತೀಕ, ಸಂಸಾರದ ಕಣ್ಣು... ಅಬ್ಬಬ್ಬಾ ಎಷ್ಟೊಂದು ಬಿರುದುಗಳು. ಹಲವು ಬಾರಿ ಈ ಬಿರುದುಗಳೇ ಹೆಣ್ಣಿಗೆ ಭಾರವಾಗುವುದೂ ಇದೆ. ಇಂದಿನ ಬಹಳಷ್ಟು ಹೆಣ್ಣುಮಕ್ಕಳು ಇದನ್ನೆಲ್ಲಾ ಮೀರಿ ನಿಂತಿದ್ದರೂ, ಮದುವೆಯಾದ ಮೇಲೆ ಅದರಲ್ಲಿಯೂ ಅಮ್ಮನಾದ ಮೇಲೆ ಹೆಣ್ಣಾದವಳು ಕೆಲವೊಂದು ತನ್ನತನವನ್ನು ತ್ಯಾಗ ಮಾಡಬೇಕು ಎನ್ನುವುದೂ ಅಷ್ಟೇ ದಿಟ. ಆಕೆ ಎಷ್ಟೇ ಉನ್ನತ ಸ್ಥಾನಕ್ಕೆ ಹೋಗಿದ್ದರೂ, ಮನೆಯನ್ನೇ ನಿಭಾಯಿಸುವಷ್ಟು ದುಡಿಮೆ ಮಾಡುತ್ತಿದ್ದರೂ ಅದರ ಜೊತೆಗೇನೇ ಗಂಡ, ಮಕ್ಕಳು, ಕುಟುಂಬದ ಜವಾಬ್ದಾರಿಗಾಗಿ ತನ್ನ ತನವನ್ನು ಬಿಡುವ ಅನಿವಾರ್ಯತೆ ಇದ್ದೇ ಇದೆ. ಮಹಿಳಾ ವಾದ, ಹೋರಾಟ, ಪ್ರತಿಭಟನೆ ಏನೇ ಇದ್ದರೂ ತಮ್ಮ ಕುಟುಂಬದ ವಿಷಯ ಬಂದಾಗ ಪುರುಷನಿಗೆ ಹೋಲಿಸಿದರೆ ಮಹಿಳೆಯರ ತ್ಯಾಗವೇ ಹೆಚ್ಚಿನ ಸಂದರ್ಭದಲ್ಲಿ ಕಂಡುಬರುವುದು ಎಲ್ಲರೂ ಒಪ್ಪಬೇಕಾದದ್ದೇ. ಗಂಡಿಗೆ ಹೋಲಿಸಿದರೆ ಸಹನೆಯ ಸಾಮರ್ಥ್ಯ ಹೆಣ್ಣಿನಲ್ಲಿಯೇ ಹೆಚ್ಚು ಎನ್ನುವುದು ಪ್ರಕೃತಿ ಆಕೆಗೆ ನೀಡಿರುವ ವರದಾನವೂ ಹೌದು.
ಹಾಗಿದ್ದರೆ ತನ್ನ ಕುಟುಂಬಕ್ಕಾಗಿ, ಗಂಡ-ಮನೆ ಎಂದೆಲ್ಲಾ ಜೀವನಪೂರ್ತಿ ಮೀಸಲು ಇರಿಸುವ ಹಲವು ಮಹಿಳೆಯರಿಗೆ ಅದೇ ಅವರ ಜೀವನದ ಸೋಲಾಗ್ತಿದೆಯಾ? ತವರು ಬಿಟ್ಟು ಗಂಡನ ಮನೆಗೆ ಬಂದು ಎಲ್ಲವನ್ನೂ ತ್ಯಾಗ ಮಾಡುವ ಮಹಿಳೆಗೆ ಅದು ಆಕೆಗೆ ಉಂಟಾಗುವ ಸೋಲಾ? ತನ್ನ ಆಸೆ ಆಕಾಂಕ್ಷೆಗಳನ್ನು ಆಕೆ ಗಂಡ, ಮಕ್ಕಳು ಮತ್ತು ಆತನ ಕುಟುಂಬಕ್ಕಾಗಿ ಮೀಸಲು ಇಟ್ಟರೆ ಅದು ಆಕೆಗಾಗ್ತಿರೋ ಸೋಲಾ? ಇದೇನಿದು ಪ್ರಶ್ನೆ ಎಂದು ಕೇಳಬೇಡಿ. ಇವೆಲ್ಲವೂ ಆಕೆಗೆ ಒಂದರ್ಥದಲ್ಲಿ ಆಗ್ತಿರೋ ಸೋಲು ಎಂದು ಒಂದು ವರ್ಗ ಒಪ್ಪಿಕೊಂಡರೆ, ಇನ್ನೊಂದಿಷ್ಟು ಮಂದಿ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಹಾಗಿದ್ದರೆ ಇವೆಲ್ಲಾ ಇಷ್ಟು ಪ್ರಶ್ನೆಗಳು ಇಲ್ಯಾಕೆ ಎಂದರೆ, ಜೀ ಟಿ.ವಿಯಲ್ಲಿ ಪ್ರಸಾರ ಆಗ್ತಿರೋ ಭೂಮಿಗೆ ಬಂದ ಭಗವಂತ (Bhumige Banda Bhagavanta) ಧಾರಾವಾಹಿಯಲ್ಲಿ ಭಗವಂತನೇ ಹೇಳಿರುವ ಹೆಣ್ಣಿನ ಸೋಲುಗಳು. ಇದರ ವಿಡಿಯೋ ವೈರಲ್ ಆಗಿದ್ದು, ಪರ-ವಿರೋಧದಗಳ ಚರ್ಚೆ ಶುರುವಾಗಿದೆ. ಹಲವು ಹೆಣ್ಣುಮಕ್ಕಳು ಈ ಮಾತುಗಳು ಅಕ್ಷರಶಃ ನಿಜ ಎನ್ನುತ್ತಿದ್ದರೆ ಇನ್ನು ಕೆಲವರು ಇದನ್ನು ಒಪ್ಪುತ್ತಿಲ್ಲ. ಹೆಣ್ಣಿನಷ್ಟೇ ಕಷ್ಟ-ಕಾರ್ಪಣ್ಯ ಗಂಡಿಗೂ ಇದೆ, ಎಷ್ಟೋ ಗಂಡಸರು ಕುಟುಂಬಕ್ಕಾಗಿ ಜೀವ ಸವೆಸುವುದು ಇದೆ, ಅವೆಲ್ಲವೂ ನಗಣ್ಯ ಮಾಡಿ ಹೆಣ್ಣನ್ನೇ ಶ್ರೇಷ್ಠ ಮಾಡುವುದು ಸರಿಯಲ್ಲ ಎನ್ನುತ್ತಿದ್ದಾರೆ.
ಮದುಮಗಳು ಅಕ್ಕಿ ಸೇರು ಒದ್ದು, ಮನೆಯೊಳಗೆ ಬರೋದ್ಯಾಕೆ? ಸಂಬಂಧ, ಸಮೃದ್ಧಿ ಪ್ರತೀಕವೆಂದ ಸೀರಿಯಲ್
ಹಾಗಿದ್ದರೆ ಈ ಧಾರಾವಾಹಿಯ ಭಗವಂತನ ಪ್ರಕಾರ ಹೆಣ್ಣಿನ ಸೋಲುಗಳು ಯಾವುವು ಎಂದು ನೋಡೋಣ. ಇದನ್ನು ಭಗವಂತ ಧಾರಾವಾಹಿಯ ನಾಯಕನಿಗೆ ಹೇಳಿದ್ದು, ಆ ಭಗವಂತನ ಮಾತಿನಲ್ಲೇ ಕೇಳೋಣ:
1) ತುತ್ತು ಕೊಟ್ಟ ತವರನ್ನು ಬಿಟ್ಟು ಮೂರು ಗಂಟು ಹಾಕಿರೋ ನಿನಗೋಸ್ಕರ ಗಂಟುಮೂಟೆ ಕಟ್ಟಿಕೊಂಡು ಬಂದಾಗ ಅದು ಹೆಣ್ಣಿನ ಮೊದಲ ಸೋಲು... (Women's defeats)
2) ತನ್ನ ಸೌಂದರ್ಯವನ್ನು ನಿನ್ನ ವಂಶದ ಕುಡಿಗಾಗಿ ಮೀಸಲು ಇಡುತ್ತಾಳಲ್ಲ... ಇದು ಹೆಣ್ಣಿನ ಎರಡನೆಯ ಸೋಲು...
3) ತನ್ನ ಸಮಯವನ್ನು ನಿನ್ನ ಮನೆಗಾಗಿ ಮೀಸಲಿಡುತ್ತಾಳಲ್ಲ, ಅದು ಆಕೆಯ ಮೂರನೆಯ ಸೋಲು...
4) ತನ್ನ ಆಸೆ ಆಕಾಂಕ್ಷೆಗಳನ್ನು ನಿನಗಾಗಿ ತ್ಯಾಗ ಮಾಡ್ತಾಳೆ, ಅದು ನಾಲ್ಕನೆಯ ಸೋಲು...
5) ತಾನು ಹಸಿವೆಯಲ್ಲಿದ್ದು, ನಿನ್ನ ಹಸಿವೆಯನ್ನೆಲ್ಲಾ ನೀಗಿಸ್ತಾಳಲ್ಲ, ಅದು ಆಕೆಯ ಐದನೆಯ ಸೋಲು...
ಅವಳು ಕೈಲಾಗದೇ ಸೋತಿಲ್ಲ... ಗೆಲ್ಲುವ ಸಾಮರ್ಥ್ಯವಿದೆ... ಅವಳು ಸೋತಿದ್ದು ಪ್ರೀತಿಗಾಗಿ. ಹೆಣ್ಣು ಸೋತು ಗೆದ್ದವಳು. ಅವಳಿಗೆ ಈ ಸೋಲೆಲ್ಲಾ ಒಂದು ಲೆಕ್ಕವೇ ಅಲ್ಲ ಎನ್ನುವ ಧಾರಾವಾಹಿಯ ಭಗವಂತ... ಕೊನೆಗೆ ಒಂದು ಮಾತು ಹೇಳುತ್ತಾನೆ. ಅದೇನೆಂದರೆ... ರಕ್ತ ಸಂಬಂಧ ಇಲ್ಲದಿದ್ದರೂ ನಿನಗಾಗಿ ಸ್ಪಂದಿಸೋರು ಇಬ್ಬರೇ ಇಬ್ಬರು ಜೀವ. ಒಬ್ಬ ಸ್ನೇಹಿತ, ಇನ್ನೊಬ್ಬಳು ಮಡದಿ ಎಂದು. ಮಡದಿ ದೇವರು ನಿನಗಾಗಿ, ಮಡದಿ ಮಡಿಯುವುದೂ ನಿನಗಾಗಿ... ಎನ್ನುತ್ತಾನೆ.
ಇದಕ್ಕೆ ನಿಮ್ಮ ಅಭಿಪ್ರಾಯವೇನು?
ಕಾವಾಲಯ್ಯ ಹಾಡಿಗೆ 'ಪುಟ್ಟಕ್ಕನ ಮಕ್ಕಳು' ಸ್ನೇಹಾ ಮಿನಿ ಸ್ಕರ್ಟ್ನಲ್ಲಿ ಭರ್ಜರಿ ಸ್ಟೆಪ್: ಉಫ್ ಎಂದ ಫ್ಯಾನ್ಸ್!