
ಡೇಟಿಂಗ್ ಮಾಡೋಲ್ಲ. ಮಾಡಿದರೆ ದೈಹಿಕ ಸಂಬಂಧ, ಮದುವೆ, ಮಕ್ಕಳು ಎಲ್ಲವೂ ಒಂದರ ಹಿಂದೆ ಒಂದರಂತೆ ಆಗ್ತವೆ. ಅದ್ಯಾವ್ದೂ ಬೇಕಿಲ್ಲ. ಮದುವೆ ಬೇಡ. ಮಕ್ಕಳು ಬೇಡ. ಹೀಗಾಗಿ ದೈಹಿಕ ಸಂಬಂಧವೂ ಮಾಡೋಲ್ಲ. ಗಂಡಿನ ಸಂಗವೇ ಬೇಡ. ಮಾಡಿದರೂ ನನ್ನಿಷ್ಟದಂತೆ. ನನ್ನ ದೇಹ- ನನ್ನ ಆಯ್ಕೆ. ಇನ್ನೊಬ್ರು ಹೇಳಿದಂತೆ, ಸಮಾಜ ಹೇಳಿದಂತೆ ಇರೋಕಲ್ಲ ನನ್ನ ದೇಹ ಇರೋದು.
ಇದು ಜೆನ್ ಝೀ ಹುಡುಗಿಯರ ಹೊಸ ವರಸೆ. ದಕ್ಷಿಣ ಕೊರಿಯಾದಲ್ಲಿ ಹುಟ್ಟಿದ ಈ ಒಂದು ಮೌನ ಚಳುವಳಿ ಈಗ ಚೀನಾ, ಅಮೆರಿಕ, ಯುರೋಪ್ ಕಡೆಗೆಲ್ಲಾ ಹಬ್ಬುತ್ತಿದೆ. ಭಾರತಕ್ಕೂ ಕಾಲಿಡುತ್ತಿದೆ. ಇದೇ 4B ಮೂವ್ಮೆಂಟ್. ಗಲಾಟೆ ಇಲ್ಲ, ಘೋಷಣೆ ಇಲ್ಲ, ಬೀದಿಗಿಳಿದು ಪ್ರತಿಭಟನೆ ಕೂಡ ಇಲ್ಲ. ಆದರೆ ಈ ಮೌನ ನಿರ್ಧಾರವೇ ಪುರುಷಪ್ರಧಾನ ವ್ಯವಸ್ಥೆಯನ್ನು ಗಂಭೀರವಾಗಿ ಕಾಡತೊಡಗಿದೆ.
4B ಅನ್ನೋದರ ಹಿಂದೆ ನಾಲ್ಕು ‘ಬಿ’ಗಳಿವೆ. ಇವೆಲ್ಲವೂ ಕೊರಿಯನ್ ಮೂಲದ ಪದಗಳು. ಕೊರಿಯನ್ ಭಾಷೆಯಲ್ಲಿ ‘ಬಿ’ ಅಂದ್ರೆ ‘ನೋ’. ಅಂದರೆ ನಾಲ್ಕು ವಿಷಯಗಳಿಗೆ ನೇರವಾಗಿ ‘ಇಲ್ಲ’ ಅನ್ನೋ ತೀರ್ಮಾನ.
ಬಿಹೋನ್ – ಮದುವೆ ಆಗಲ್ಲ.
ಬಿಚುಲ್ಸಾನ್ – ಮಕ್ಕಳನ್ನು ಹೆರುವುದಿಲ್ಲ.
ಬಿಯೇಯೆ – ಪ್ರೇಮ ಸಂಬಂಧ ಬೇಡ.
ಬಿಸೆಕ್ಸು – ಲೈಂಗಿಕ ಸಂಬಂಧಕ್ಕೂ ನಿರಾಕರಣೆ.
ಇದರಿಂದ ಏನು ಸಿಗುತ್ತೆ ಅನ್ನೋ ಪ್ರಶ್ನೆ ಬರುತ್ತೆ. ಉತ್ತರ ಸರಳ. ತಮ್ಮ ಜೀವನದ ಮೇಲೆ ಸಂಪೂರ್ಣ ಹಿಡಿತ. ಮದುವೆ, ಮಕ್ಕಳು, ಮನೆ, ಸಮಾಜ ಅಂತ ಹೆಣ್ಣುಮಕ್ಕಳ ಮೇಲೆ ಹಾಕಿರುವ ಎಲ್ಲಾ ಕಟ್ಟುಪಾಡುಗಳಿಂದ ಹೊರಬಂದು, ತಮ್ಮದೇ ನಿಯಮಗಳಲ್ಲಿ ಬದುಕೋದೇ ಈ ಚಳುವಳಿಯ ಮೂಲ ಆಲೋಚನೆ.
“ನಾವು ಮಕ್ಕಳನ್ನು ಹೆರುವ ಮಷೀನ್ ಅಲ್ಲ” ಅನ್ನೋ ಸ್ಲೋಗನ್ ಈ ರೆಬೆಲ್ ಯುವತಿಯರ ನೆಚ್ಚಿನ ಮಾತು. ಗಮನಿಸಿದ್ರೆ, ಇದು ಕೊರಿಯಾ ಒಂದರ ಸಮಸ್ಯೆ ಅಲ್ಲ. ದಕ್ಷಿಣ ಕೊರಿಯಾದಿಂದ ಶುರುವಾದ 4B ಮೂವ್ಮೆಂಟ್ ಈಗ ಚೀನಾ, ಅಮೆರಿಕಾ ಹೀಗೆ ಬೇರೆ ಬೇರೆ ದೇಶಗಳಿಗೆ ಹರಡುತ್ತಿದೆ. ಎಲ್ಲ ಕಡೆ ರೂಪ ಒಂದೇ – ಮಹಿಳೆಯರ ಮೌನ ನಿರ್ಧಾರ. ಆದರೆ ಇದೇ ಮೌನ ಪಿತೃಪ್ರಧಾನ ವ್ಯವಸ್ಥೆಯನ್ನು ಅಲುಗಾಡಿಸತೊಡಗಿದೆ ಅನ್ನೋದು ಸತ್ಯ.
ಈ ಚಳುವಳಿಯ ಬೀಜ 2010ರ ಸುಮಾರಿಗೆ ಕೊರಿಯಾದಲ್ಲೇ ಬಿತ್ತು. ಮದುವೆ ಆದ್ಮೇಲೆ ಮಹಿಳೆಯ ಜೀವನ ತನ್ನದಾಗಿಯೇ ಉಳಿಯಲ್ಲ ಅನ್ನೋ ಅನುಭವ ಅನೇಕರಿಗೆ ಎದುರಾಯಿತು. ಮನೆ ಕೆಲಸ, ಮಕ್ಕಳು, ಅತ್ತೆ-ಮಾವ, ಸಮಾಜದ ನಿರೀಕ್ಷೆ – ಎಲ್ಲಕ್ಕೂ ಮಹಿಳೆಯೇ ಹೊಣೆ. ಕಚೇರಿಗೆ ಹೋದ್ರೆ ಸಮಾನ ವೇತನ ಇಲ್ಲ, ಗೌರವ ಕಡಿಮೆ. ಇದರ ಜೊತೆ ಮನೆಯೊಳಗಿನ ಹಿಂಸೆ, ಕೆಲಸದ ಜಾಗದಲ್ಲೂ ಮಾನಸಿಕ-ಲೈಂಗಿಕ ಕಿರುಕುಳ. ಎಷ್ಟು ಪ್ರಯತ್ನಿಸಿದ್ರೂ ಮೇಲಕ್ಕೆ ಬರಲಾಗದ ಗ್ಲಾಸ್ ಸೀಲಿಂಗ್. ಇವೆಲ್ಲದ್ರಿಂದ ಬೇಸತ್ತು ಯುವತಿಯರು ಒಂದು ನಿರ್ಧಾರಕ್ಕೆ ಬಂದರು – “ಈ ವ್ಯವಸ್ಥೆಯಲ್ಲೇ ನಾವು ಭಾಗಿಯಾಗಲ್ಲ.”
ಇದು ಫೆಮಿನಿಸಂನಾ ಅಂತ ಕೇಳಿದ್ರೆ, ಒಂದು ರೀತಿಯಲ್ಲಿ ಹೌದು. ಆದರೆ ಸಾಂಪ್ರದಾಯಿಕ ಮಹಿಳಾವಾದದಂತಲ್ಲ. 4B ಮೊದಲಿಗೆ ಒಂದು ಮೌನ ಪ್ರತಿಕ್ರಿಯೆ ಮಾತ್ರ. ನಂತರ ಫೆಮಿನಿಸ್ಟ್ ಚಳುವಳಿಗಳು ಇದಕ್ಕೆ ದಿಕ್ಕು, ಭಾಷೆ ಕೊಟ್ಟವು. 2016ರಲ್ಲಿ ಕೊರಿಯಾದಲ್ಲಿ ಟ್ರೇನ್ ಟಾಯ್ಲೆಟ್‌ನಲ್ಲಿ ಮಹಿಳೆಯೊಬ್ಬಳನ್ನು ಬರ್ಬರವಾಗಿ ಕೊಂದ ಘಟನೆ ಈ ಚಳುವಳಿಗೆ ಇನ್ನಷ್ಟು ಬೆಂಕಿ ಹಚ್ಚಿತು. ಜೊತೆಗೆ ಪುರುಷರು ರೂಪಿಸಿದ ಸೌಂದರ್ಯದ ಮಾನದಂಡಗಳು – ಮೇಕಪ್, ಬ್ಯೂಟಿ ಟ್ರೀಟ್‌ಮೆಂಟ್, ಪ್ಲಾಸ್ಟಿಕ್ ಸರ್ಜರಿ – ಇವೆಲ್ಲವನ್ನೂ ಪ್ರಶ್ನಿಸಿ, ತಿರಸ್ಕರಿಸುವ ಹಾದಿಗೆ ಈ ಚಳುವಳಿ ಹೋಯಿತು.
ಇಂಥ ಚಳುವಳಿಗಳು ಸರ್ಕಾರಗಳಿಗೂ ದೊಡ್ಡ ತಲೆನೋವು. ದಕ್ಷಿಣ ಕೊರಿಯಾದಲ್ಲಿ ಈಗಾಗಲೇ ಜನನ ಪ್ರಮಾಣ ತುಂಬಾ ಕಡಿಮೆ. ಅದರ ಮೇಲೆ ಯುವತಿಯರೇ “ಮದುವೆ ಬೇಡ, ಮಕ್ಕಳು ಬೇಡ” ಅಂತ ಹೇಳಿದ್ರೆ ಮುಂದೇನು ಅನ್ನೋ ಆತಂಕ ಆಡಳಿತ ವರ್ಗದಲ್ಲಿದೆ. ಚೀನಾದಲ್ಲೂ ಇದೇ ಪರಿಸ್ಥಿತಿ. ಮಹಿಳೆಯರು ಕೇಳ್ತಿರುವ ಪ್ರಶ್ನೆ ಒಂದೇ – “ನಮ್ಮ ಜೀವನವನ್ನು ನಾವು ತೀರ್ಮಾನಿಸೋದ್ರಲ್ಲಿ ತಪ್ಪೇನು?” ಆದರೆ ವ್ಯವಸ್ಥೆ ಹೇಳೋದು – “ಇದರಿಂದ ಕುಟುಂಬ ವ್ಯವಸ್ಥೆ ಹಾಳಾಗುತ್ತೆ”, “ದೇಶದ ಜನಸಂಖ್ಯೆ ಕಡಿಮೆಯಾಗುತ್ತೆ”, “ಇದು ಸ್ವಾರ್ಥ”.
ಆದ್ರೆ 4B ಚಳುವಳಿಯ ಪರವಾಗಿರುವ ತಜ್ಞರು ಹೇಳೋದು ಬೇರೆ. ಇದು ಮಹಿಳೆಯರು ಸದಾ ಒಂಟಿಯಾಗಿರಬೇಕು ಅನ್ನೋ ಕರೆ ಅಲ್ಲ. ಆಯ್ಕೆ ಇರಬೇಕು ಅನ್ನೋ ಬೇಡಿಕೆ. ಮದುವೆ ಮಾಡಿಕೊಳ್ಳೋದು, ಮಕ್ಕಳು ಬೇಕೋ ಬೇಡವೋ – ಅದು ಮಹಿಳೆಯ ನಿರ್ಧಾರ ಆಗಬೇಕು. ಸಮಾಜದ ಒತ್ತಡ ಇರಬಾರದು ಅನ್ನೋದೇ ಈ ಚಳುವಳಿಯ ಅರ್ಥ.
ಅಮೆರಿಕಾದಲ್ಲೂ 4B ಆಲೋಚನೆಗಳು ಚರ್ಚೆಗೆ ಬಂದಿವೆ. ಡೊನಾಲ್ಡ್ ಟ್ರಂಪ್ ಅವರ ಮಹಿಳಾ ವಿರೋಧಿ ನಿಲುವುಗಳು, ಗರ್ಭಪಾತದ ಹಕ್ಕಿನ ಮೇಲಿನ ನಿರ್ಬಂಧಗಳು ಮಹಿಳೆಯರನ್ನು ಇನ್ನಷ್ಟು ರೊಚ್ಚಿಗೆಬ್ಬಿಸಿವೆ. “ನಮ್ಮದೇ ದೇಹ, ನಮ್ಮದೇ ಹಕ್ಕು” ಅನ್ನೋ ಮಾತು ಮತ್ತೆ ಬಲವಾಗಿ ಕೇಳಿಸುತ್ತಿದೆ. ಚೀನಾದಲ್ಲಿ 4Bಗೆ ಮುಂದುವರಿದಂತೆ 6B4T ಅನ್ನೋ ಹೊಸ ರೂಪಾಂತರವೂ ಕಾಣಿಸಿಕೊಂಡಿದೆ. ಇದರಲ್ಲಿ ಅತಿಯಾದ ಉಪಭೋಗ ಸಂಸ್ಕೃತಿಗೆ ತಿರಸ್ಕಾರ, ಮದುವೆಯಾಗದ ಮಹಿಳೆಯರು ಪರಸ್ಪರ ಸಹಾಯ ಮಾಡಿಕೊಳ್ಳೋದು, ಬೆಂಬಲದ ನೆಟ್ವರ್ಕ್ ನಿರ್ಮಾಣ ಇವೆಲ್ಲ ಸೇರಿವೆ.
ತಳಮಟ್ಟದಲ್ಲಿ ನೋಡಿದ್ರೆ, ಯುವತಿಯರ ಆಲೋಚನೆ ಇನ್ನೂ ಸರಳ. ಲವ್ ಅಂದ್ರೆ ಲೈಂಗಿಕ ಸಂಬಂಧ, ಮದುವೆ, ಸಂಸಾರದ ಹೊಣೆ, ಮಕ್ಕಳ ಜವಾಬ್ದಾರಿ – ಇವೆಲ್ಲ ಯಾಕೆ ಬೇಕು ಅನ್ನೋ ಪ್ರಶ್ನೆ. ಈ ವಯೋಸಹಜ ರೆಬೆಲ್‌ತನಕ್ಕೆ 4B ಚಳುವಳಿ ಸೈದ್ಧಾಂತಿಕ ಬೆಂಬಲ ಕೊಡ್ತಾ ಇದೆ. ಸಾಮಾನ್ಯವಾಗಿ ಒಂದು ತಲೆಮಾರು ಒಂದೇ ರೀತಿ ಯೋಚನೆ ಮಾಡುತ್ತೆ. ಹೀಗಾಗಿ ಜೆನ್ ಝೀ ಮತ್ತು ಜೆನ್ ಆಲ್ಫಾ ತಲೆಮಾರು ಈ ಚಳುವಳಿಗೆ ಇನ್ನಷ್ಟು ಬಲ ತುಂಬಿದ್ರೆ ಆಶ್ಚರ್ಯವಿಲ್ಲ.
ಒಟ್ಟಾರೆ 4B ಮೂವ್ಮೆಂಟ್ ಒಂದು ಎಚ್ಚರಿಕೆಯ ಗಂಟೆ. ಮಹಿಳೆಯರಿಗೆ ಸಮಾನತೆ, ಗೌರವ ಮತ್ತು ಸುರಕ್ಷತೆ ಸಿಗದಿದ್ರೆ, ಅವರು ಹೊಸ ದಾರಿಗಳನ್ನು ಹುಡುಕುತ್ತಾರೆ ಅನ್ನೋ ಸ್ಪಷ್ಟ ಸಂದೇಶ ಇದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.