Kitchen Hacks: ತರಕಾರಿಗಳ ರಾಜ ಆಲೂಗಡ್ಡೆ ಖರೀದಿ ಹೀಗಿರಲಿ

By Suvarna News  |  First Published Aug 29, 2022, 1:25 PM IST

ಸಮೀಪದ ಮಾರ್ಕೆಟ್ ಗೆ ಹೋಗಿ ಒಂದಿಷ್ಟು ತರಕಾರಿ ತಂದ್ರೆ ಆಗ್ಲಿಲ್ಲ. ತಂದ ತರಕಾರಿ ಅಡುಗೆಗೆ ಯೋಗ್ಯವಾಗಿರಬೇಕು. ಹಾಗಾಗಿ ನಾವು ತರಕಾರಿ ಖರೀದಿ ಮಾಡುವಾಗ ಮತ್ತು ಅದನ್ನು ಸಂಗ್ರಹಿಸಿ ಇಡುವಾಗ ಕೆಲ ವಿಷ್ಯಗಳನ್ನು ನೆನಪಿನಲ್ಲಿಟ್ಟುಕೊಳ್ಬೇಕು. 
 


ಎಲ್ಲರ ಅಡುಗೆ ಮನೆಯಲ್ಲಿ ಆಲೂಗಡ್ಡೆಗೆ ಪ್ರತ್ಯೇಕ ಜಾಗವಿದೆ. ಆಪದ್ಬಾಂದವ ಆಲೂಗಡ್ಡೆ ಅಂದ್ರೆ ತಪ್ಪಾಗೋದಿಲ್ಲ. ಯಾಕೆಂದ್ರೆ ಆಲೂಗಡ್ಡೆಯಿಂದ ವೆರೈಟಿ ಅಡುಗೆ ಮಾಡ್ಬಹುದು. ಸಡನ್ ಆಗಿ ಅತಿಥಿಗಳು ಬಂದ್ರೆ ನೆರವಿಗೆ ಬರೋದೇ ಆಲೂಗಡ್ಡೆ. ಸಾಂಬಾರ್ ನಿಂದ ಹಿಡಿದು ಬಜ್ಜಿಯವರೆಗೆ ಸಾಕಷ್ಟು ಅಡುಗೆಗೆ ನೆರವಾಗಬಲ್ಲ ಈ ಆಲೂಗಡ್ಡೆ ಖರೀದಿಸುವಾಗ ಸ್ವಲ್ಪ ಎಚ್ಚರಿಕೆ ವಹಿಸ್ಬೇಕು. ಅನೇಕರು ಮೂಟೆಗಟ್ಟಲೆ ಆಲೂಗಡ್ಡೆಯನ್ನು ಖರೀದಿಸ್ತಾರೆ. ಆದ್ರೆ ಖರೀದಿಸಿದ ಮನೆಗೆ ತಂದ ನಾಲ್ಕೈದು ದಿನಗಳಲ್ಲಿಯೇ ಅದು ಬಾಡಿ ಹೋಗುತ್ತದೆ. ಹಾಗಾಗಿ ಅಡುಗೆಯಲ್ಲಿ ಇಂಟರೆಸ್ಟ್ ಇದೆ ಎನ್ನುವವರು ಆಲೂಗಡ್ಡೆ ಬಗ್ಗೆಯೂ ಸ್ವಲ್ಪ ತಿಳಿದಿರಬೇಕು. ಎಂಥ ಆಲೂಗಡ್ಡೆ ತರಬೇಕು, ಆಲೂಗಡ್ಡೆಯನ್ನು ಹೇಗೆ ಸಂಗ್ರಹಿಸಿ ಇಡ್ಬೇಕು ಎಂಬುದನ್ನು ತಿಳಿದಿರಬೇಕು.

ಮೊದಲನೇಯದಾಗಿ ಆಲೂಗಡ್ಡೆ ಖರೀದಿ. ಮಾರುಕಟ್ಟೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಲೂಗಡ್ಡೆ ಸಿಗುತ್ತದೆ. ಹಾಗಂತ ಎಲ್ಲವನ್ನೂ ಖರೀದಿಸಲು ಯೋಗ್ಯವಲ್ಲ. ಅದನ್ನು ಖರೀದಿ ಮಾಡುವಾಗ ಏನೆಲ್ಲ ಗಮನಿಸಬೇಕು ಎಂಬುದನ್ನು ಇಲ್ಲಿ ಹೇಳ್ತೇವೆ.

Tap to resize

Latest Videos

ಆಲೂಗಡ್ಡೆ ಮೃದುವಾಗಿರಬಾರದು : ಆಲೂಗಡ್ಡೆ ಖರೀದಿಸುವಾಗ ಆಲೂಗಡ್ಡೆಯನ್ನು ಕೈನಲ್ಲಿ ಮುಟ್ಟಿ ನೋಡ್ಬೇಕು. ಗಟ್ಟಿಯಾಗಿರುವ ಆಲೂಗಡ್ಡೆಯನ್ನು ಮಾತ್ರ ಖರೀದಿ ಮಾಡ್ಬೇಕು. ಮೃದುವಾಗಿರುವ ಆಲೂಗಡ್ಡೆಯನ್ನು ಖರೀದಿಸಬೇಡಿ. ಮೃದುವಾದ ಆಲೂಗಡ್ಡೆ ಬೇಗ ಹಾಳಾಗುತ್ತದೆ. 

ಮೊಳಕೆಯೊಡೆದ ಆಲೂಗಡ್ಡೆ ತರ್ಬೇಡಿ : ನ್ಯಾಷನಲ್ ಕ್ಯಾಪಿಟಲ್ ಪಾಯಿಸನ್ ಸೆಂಟರ್ ಪ್ರಕಾರ, ಮೊಳಕೆಯೊಡೆದ ಆಲೂಗಡ್ಡೆಯನ್ನು ತಿನ್ನಬಾರದು. ಅಧ್ಯಯನಗಳ ಪ್ರಕಾರ, ಆಲೂಗಡ್ಡೆ ಮೊಳಕೆಯೊಡೆದಾಗ ಅದರ ಗ್ಲೈಕೋಲ್ಕಲಾಯ್ಡ್ ಅಂಶವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಎಂದೂ ಮೊಳಕೆಯೊಡೆದ ಆಲೂಗಡ್ಡೆಯನ್ನು ಖರೀದಿ ಮಾಡ್ಬೇಡಿ. ಹಾಗೆಯೇ ಮನೆಗೆ ತಂದ ಆಲೂಗಡ್ಡೆ ಮೊಳಕೆಯೊಡೆದ್ರೆ ಅದನ್ನೂ ಸೇವನೆ ಮಾಡಲು ಹೋಗ್ಬೇಡಿ.

ಆಲೂಗಡ್ಡೆ ಬಣ್ಣ ಗಮನಿಸಿ : ಆಲೂಗಡ್ಡೆ ಖರೀದಿಸುವಾಗ ನೀವು ಅದ್ರ ಬಣ್ಣದ ಬಗ್ಗೆಯೂ ಗಮನ ನೀಡ್ಬೇಕು. ಹಸಿರಾಗಿರುವ ಆಲೂಗಡ್ಡೆಯನ್ನು ಖರೀದಿಸಲು ಹೋಗ್ಬಾರದು. ಹಸಿರು ಚುಕ್ಕೆಗಳಿರುವ ಆಲೂಗಡ್ಡೆ ರುಚಿಯಲ್ಲಿ ಚೆನ್ನಾಗಿರುವುದಿಲ್ಲ. ಹಾಗೆ ಇದು ಆರೋಗ್ಯಕ್ಕೂ ಒಳ್ಳೆಯದಲ್ಲ. ಕಲೆಯಾಗಿರುವ ಆಲೂಗಡ್ಡೆಯನ್ನು ಖರೀದಿಸಬೇಡಿ.

ಈ ಆಲೂಗಡ್ಡೆ ಖರೀದಿಸಬೇಡಿ : ಅನೇಕ ಕಡೆ ಸ್ವಚ್ಛತೆ ಹೆಸರಿನಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಆಲೂಗಡ್ಡೆ ಹಾಕಿರ್ತಾರೆ. ಅದು ನೋಡಲು ಸುಂದರವಾಗಿ ಕಾಣುತ್ತದೆ. ಹಾಗಾಗಿ ಅನೇಕರು ಇದನ್ನು ಖರೀದಿ ಮಾಡ್ತಾರೆ. ಆದ್ರೆ ಪ್ಲಾಸ್ಟಿಕ್ ಚೀಲದಲ್ಲಿರುವ ಆಲೂಗಡ್ಡೆಯಲ್ಲಿ ತೇವಾಂಶ ಸಂಗ್ರಹವಾಗಿರುವ ಸಾಧ್ಯತೆಯಿದೆ. ಇದ್ರಿಂದ ಆಲೂಗಡ್ಡೆ ಬೇಗ ಕೆಡುವ ಸಂಭವವಿರುತ್ತದೆ.

Kitchen Tips : ಆಲೂಗಡ್ಡೆ ಸಿಹಿ ತೆಗೆಯೋದು ಸುಲಭ, ನಾವು ಹೇಳ್ತೇವೆ ಇಲ್ ಕೇಳಿ!

ಉತ್ತಮ ಗುಣಮಟ್ಟದ ಆಲೂಗಡ್ಡೆ ಖರೀದಿಸಿದ್ರೆ ಸಾಲದು, ಅದನ್ನು ಸಂಗ್ರಹಿಸುವುದು (Storage) ಹೇಗೆ ಎಂಬುದು ತಿಳಿದಿರಬೇಕು. ಅನೇಕ ಬಾರಿ ಆಲೂಗಡ್ಡೆಯನ್ನು ಹಾಗೆಯೇ ಹೊರಗೆ ಇಟ್ಟಿರ್ತೇವೆ. ಅದು ಬೇಗ ಹಾಳಾಗುತ್ತದೆ. ಹಾಗಾಗಿ ಆಲೂಗಡ್ಡೆಯನ್ನು ಸೂಕ್ತ ರೀತಿಯಲ್ಲಿ ಸ್ಟೋರ್ ಮಾಡ್ಬೇಕು. ಅನೇಕರು ಆಲೂಗಡ್ಡೆ ಖರೀದಿಸಿ ನಂತ್ರ ಅದನ್ನು ಸ್ವಚ್ಛವಾಗಿ ತೊಳೆದು ಸಂಗ್ರಹಿಸ್ತಾರೆ. ಇದು ಒಳ್ಳೆ ವಿಧಾನವಲ್ಲ. ನೀರಿನಲ್ಲಿ ಸ್ವಚ್ಛಗೊಳಿಸಿದಾಗ ತೇವಾಂಶ ಸೇರಿ ಆಲೂಗಡ್ಡೆ ಬೇಗ ಹಾಳಾಗುತ್ತದೆ. 

ಹಳೆ ವಾರ್ಡೋಬ್ ಗೆ ನೀಡಿ ಹೊಸ ಮೆರಗು, ಮನೆ ಚೆಂದವಾಗಿಸಲು ಇಲ್ಲಿವೆ ಸೂಪರ್ ಟಿಪ್ಸ್

ಹಾಗೆಯೇ ಆಲೂಗಡ್ಡೆಯನ್ನು ಯಾವುದೇ ಬಾಕ್ಸ್ ಅಥವಾ ಕವರ್ (Cover) ನಲ್ಲಿ ಮುಚ್ಚಿ ಇಡಬಾರದು. ಅದನ್ನು ತೆರೆದ ಜಾಗದಲ್ಲಿ ಇಡುವುದು ಸೂಕ್ತ.ಆಲೂಗಡ್ಡೆಯನ್ನು ಎಂದಿಗೂ ಫ್ರಿಜ್ (Fridge) ನಲ್ಲಿ ಇಡಬೇಡಿ. ಆಲೂಗಡ್ಡೆಯನ್ನು ದೀರ್ಘಕಾಲದವರೆಗೆ  ಇಡಲು ಬಯಸಿದರೆ  ಅದನ್ನು ಬಿಸಿಲಿರುವ ಸ್ಥಳದಲ್ಲಿ ಇಡಬೇಡಿ. ಹಾಗೆಯೇ ನೀರು ಬರುವ ಅಥವಾ ತೇವ ಇರುವ ಜಾಗದಲ್ಲಿ ಇಡಬೇಡಿ. ಆಲೂಗಡ್ಡೆಯನ್ನು ಯಾವಾಗಲೂ  ಶುಷ್ಕ ಸ್ಥಳದಲ್ಲಿ ಇರಿಸಿ.  ಆಲೂಗಡ್ಡೆಯನ್ನು ಇತರ ತರಕಾರಿಗಳೊಂದಿಗೆ ಎಂದಿಗೂ ಇಡಬೇಡಿ. ಉದಾಹರಣೆಗೆ, ಟೊಮ್ಯಾಟೊ, ಈರುಳ್ಳಿ (Onion) ಸೇರಿದಂತೆ ಯಾವುದೇ ತರಕಾರಿ ಜೊತೆ ಇಡಬೇಡಿ. ಹೀಗೆ ಮಾಡಿದ್ರೆ ಆಲೂಗಡ್ಡೆ ಬೇಗ ಕೆಡುವ ಸಾಧ್ಯತೆಯಿರುತ್ತದೆ.  
 

click me!