ಕೆಲಸ ಮಾಡುವ ಮಹಿಳೆಯರಿಗೆ ಬೆಂಗಳೂರು ಭಾರತದ ಅತ್ಯುತ್ತಮ ನಗರ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. TCWI ನಡೆಸಿದ ಸರ್ವೆಯಲ್ಲಿ 2024ರಲ್ಲಿ ಬೆಂಗಳೂರು ಪ್ರಮುಖ ನಗರವನ್ನು ಹಿಂದಿಕ್ಕಿ ಈ ಸ್ಥಾನ ಪಡೆದುಕೊಂಡಿದೆ.
ಬೆಂಗಳೂರು(ಜ.10) ಸಿಲಿಕಾನ್ ಸಿಟಿ ಬೆಂಗಳೂರು ಹಲವು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ಐಟಿ ಕ್ಷೇತ್ರ, ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಉದ್ಯೋಗ, ವೇತನ ಸೇರಿದಂತೆ ಹಲವು ವಿಚಾರಗಳಲ್ಲಿ ಭಾರತದ ಇತರ ನಗರಗಳಿಗಿಂತ ಮುಂದಿದೆ. ಉದ್ಯೋಗ ಅರಸಿಕೊಂಡು ಬೆಂಗಳೂರುಗೆ ಪ್ರತಿನಿತ್ಯ ಸಾವಿರಾರು ಮಂದಿ ಆಗಮಿಸುತ್ತಾರೆ. ಬದುಕು ಕಟ್ಟಿಕೊಳ್ಳಲು ಬೆಂಗಳೂರು ಉತ್ತಮ ನಗರ ಅನ್ನೋದು ಎಲ್ಲರಿಗೂ ತಿಳಿದಿದೆ. ಇದೀಗ ಬೆಂಗಳೂರಿನ ಹಿರಿಮೆಗೆ ಮತ್ತೊಂದು ಗರಿ ಸೇರಿಕೊಂಡಿದೆ. 2024ರಲ್ಲಿ ಅವತಾರ್ ಗ್ರೂಪ್ ನಡೆಸಿದ ಟಾಪ್ ಸಿಟಿಸ್ ಫಾರ್ ವುಮೆನ್ ಇನ್ ಇಂಡಿಯಾ(TCWI ) ಸಮೀಕ್ಷೆಯಲ್ಲಿ ಬೆಂಗಳೂರು ನಂ.1 ಸ್ಥಾನ ಪಡೆದುಕೊಂಡಿದೆ. ಚೆನ್ನೈ ಹಿಂದಿಕ್ಕಿರುವ ಬೆಂಗಳೂರು ಇದೀಗ ನಂಬರ್ 1 ಪಟ್ಟಕ್ಕೇರಿದೆ.
ಮಹಿಳಾ ವವೃತ್ತಿಪರರಿಗೆ ಬೆಂಗಳೂರು ಭಾರತದ ಅತ್ಯುತ್ತಮ ನಗರ ಅನ್ನೋ ಸಾಧನೆ ಮಾಡಿದೆ. ಭಾರತದ ಪ್ರಮುಖ 120 ನಗರಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. ವಿಶೇಷ ಅಂದರೆ ದಕ್ಷಿಣ ಭಾರತದ ಬಹುತೇಕ ನಗರಗಳು ಲಿಂಗ ಸಮಾನತೆ, ಮಹಿಳೆಯರ ಸುರಕ್ಷತೆಯಲ್ಲಿ ಮುಂದಿದೆ ಎಂದು TCWI ಸಮೀಕ್ಷೆ ಬಹಿರಂಗಪಡಿಸಿದೆ. ಮಹಿಳಾ ಕೌಶಲ್ಯ ಅಭಿವೃದ್ಧಿ, ಮಹಿಳೆಯರಿಗೆ ಉದ್ಯೋಗವಕಾಶ, ಮೂಲಭೂತ ಸೌಕರ್ಯ, ಮಹಿಳೆಯರ ಪ್ರೋತ್ಸಾಹ ವಿಚಾರದಲ್ಲಿ ಬೆಂಗಳೂರು ಇತರ ಎಲ್ಲಾ ನಗರಗಳಿಗಿಂತ ಮುಂದಿದೆ. ಕೆಲಸದ ಕಚೇರಿಗಳಲ್ಲಿ ಮಹಿಳೆಯರಿಗೆ ಉತ್ತಮ ವಾತಾವರಣ ಕಲ್ಪಿಸಿರುವುದರಲ್ಲೂ ಬೆಂಗಳೂರು ಮುಂಚೂಣಿಯಲ್ಲಿದೆ. ಬೆಂಗಳೂರು ಹಾಗೂ ಮುಂಬೈ ಮಹಿಳೆಯರಿಗೆ ಉದ್ಯೋಗ ನೀಡುವುದರಲ್ಲಿ, ಅವರ ಕೌಶಲ್ಯಕ್ಕೆ ತಕ್ಕಂತೆ ಉತ್ತಮ ವೇತನ ನೀಡುವುದರಲ್ಲಿ ಮುಂದಿದೆ.
ಬೆಂಗಳೂರು: ಕೆಂಪೇಗೌಡ ಏರ್‌ಪೋರ್ಟ್‌ನಿಂದ ಒಂದೇ ವರ್ಷದಲ್ಲಿ 4 ಕೋಟಿ ಮಂದಿ ಪ್ರಯಾಣ, ದಾಖಲೆ!
ಮಹಿಳೆಯರಿಗೆ ಉದ್ಯೋಗ, ಉತ್ತಮ ವೇತನ, ಸುರಕ್ಷತೆ, ಕೌಶಲ್ಯ ಅಭಿವೃದ್ಧಿ ಸೇರಿದಂತೆ ಒಟ್ಟಾರೆ ಬೆಂಗಳೂರು ನಂ.1 ಸ್ಥಾನದಲ್ಲಿದೆ. ಈ ಮೂಲಕ ಬೆಂಗಳೂರು ಮತ್ತೊಂದು ಮಹತ್ವದ ಸಾಧನೆ ಮಾಡಿದೆ.
ಕೆಲಸ ಮಾಡುವ ಮಹಿಳೆಯರಿಗೆ ಭಾರತದ ಅತ್ಯುತ್ತಮ ನಗರ
ನಂ.1, ಬಂಗಳೂರು
ನಂ.2, ಚೆನ್ನೈ
ನಂ.3, ಮುಂಬೈ
ನಂ.8, ದೆಹಲಿ
ಮಹಿಳೆಯ ಸುರಕ್ಷತೆ ವಿಚಾರವನ್ನು ಮಾತ್ರ ಪರಿಗಣನೆ ಮಾಡಿದರೆ ಮುಂಬೈ ಹಾಗೂ ಹೈದರಾಬಾದ್ ಅಗ್ರಸ್ಥಾನದಲ್ಲಿದೆ. ಕೇರಳದ ತಿರುವನಂತಪುರಂ ನಗರ ಕೂಡ ಮಹಿಳೆಯ ಸುರಕ್ಷತೆ ವಿಚಾರದಲ್ಲಿ ಸ್ಥಾನ ಪಡೆದಿದೆ. ಆದರೆ ಗುರುಗಾಂವ್ ನಗರ ಮಹಿಳೆ ಸುರಕ್ಷತೆ ವಿಚಾರದಲ್ಲಿ ಕೊನೆಯ ಸ್ಥಾನದಲ್ಲಿದೆ. ಮಹಿಳಾ ಸುರಕ್ಷತೆಯಲ್ಲಿ ಪ್ರತಿ ನಗರದಲ್ಲಿ ದಾಖಲಾಗಿರುವ ಪ್ರಕರಣ, ಕಿರುಕುಳ, ಮಹಿಳೆಯರ ದೂರಿಗೆ ಸಿಕ್ಕ ಪರಿಹಾರ ಹಾಗೂ ನ್ಯಾಯ ಸೇರಿದಂತೆ ಹಲವು ಮಾನದಂಡಗಳನ್ನು ಮುಂದಿಟ್ಟು ಸರ್ವೆ ನಡೆಸಲಾಗಿದೆ.
ಮೂಲಭೂತ ಸೌಕರ್ಯದಲ್ಲಿ ಹೈದರಾಬಾದ್ ಮೊದಲ ಸ್ಥಾನದಲ್ಲಿದೆ. ಸಾರಿಗೆ ವ್ಯವಸ್ಥೆ, ನೀರು, ವಿದ್ಯುತ್ ಸೇರಿದಂತೆ ಎಲ್ಲವನ್ನು ಹೈದರಾಬಾದ್ ನಗರ ಅಚ್ಚುಕಟ್ಟಾಗಿ ನಿರ್ವಹಿಸಿದೆ ಎಂದು ಸಮೀಕ್ಷೆ ಹೇಳಿದೆ. ನಾಗರೀಕರಿಗೆ ಅತ್ಯವಶ್ಯಕ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಹೈದರಾಬಾದ್ ಅಗ್ರಸ್ಥಾನದಲ್ಲಿದೆ. ಇನ್ನು ಮುಂಬೈ ಎರಡನೇ ಸ್ಥಾನದಲ್ಲಿದೆ. ಕೈಗಾರಿಕೆಗಳಲ್ಲಿ ಮಹಿಳೆಯರಿಗೆ ಅವಕಾಶ, ಕೈಗಾರಿಗಳಲ್ಲಿ ಉದ್ಯೋಗ, ವೇತನ, ಮಹಿಳೆಯರ ಕೆಲಸ ವಾತಾವರಣದಲ್ಲಿ ದೆಹಲಿ ಹಾಗೂ ಗುರುಗ್ರಾಂ ಅಗ್ರಸ್ಥಾನದಲ್ಲಿದೆ.
ಒಟ್ಟಾರೆ ರ್ಯಾಕಿಂಗ್‌ನಲ್ಲಿ 2023ರ ಸಾಲಿನಲ್ಲಿ ಚೆನ್ನೈ ಮೊದಲ ಸ್ಥಾನದಲ್ಲಿತ್ತು. ಆದರೆ 2024ರಲ್ಲಿ ಚೆನ್ನೈ ಹಿಂದಿಕ್ಕಿದ ಬೆಂಗಳೂರು ಮೊದಲ ಸ್ಥಾನಕ್ಕೇರಿದೆ. ಬೆಂಗಳೂರು ಪ್ರತಿ ದಿನ ಬೆಳೆಯುತ್ತಿದೆ. ಇಲ್ಲಿ ಮಹಿಳಾ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಅನ್ನೋ ಮಾತುಗಳು ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಬೆಂಗಳೂರನ್ನು ಸುರಕ್ಷಿತ ತಾಣವಾಗಿ ಮಾಡುವುದರಲ್ಲಿ ಅವಿರತ ಪ್ರಯತ್ನಗಳು ನಡೆಯುತ್ತಿದೆ. ಮಹಿಳಾ ಸುರಕ್ಷತೆಯಲ್ಲಿ ಹೆಚ್ಚಿನ ಮುತುವರ್ಜಿ ವಹಿಸಲಾಗುತ್ತಿದೆ. ಆದರೂ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಸವಾಲುಗಳು ಇದೀಗ ಬೆಂಗಳೂರು ನಗರದ ಮುಂದಿದೆ.
ಬೆಂಗಳೂರಿನ ಈ ಮನೆಗಳೂ ಸೇರಿ ₹4754 ಕೋಟಿಗೆ ಮಾರಾಟವಾದ 59 ಅಲ್ಟ್ರಾ ಐಷಾರಾಮಿ ಮನೆಗಳು!