ನಾನು ಹೆಣ್ಣಾಗಿ ಹುಟ್ಟಿದ್ದು ನನ್ನ ಚಾಯ್ಸ್ ಅಲ್ಲ, ಮತ್ಯಾಕೆ ಈ ಸೆಲೆಬ್ರೇಶನ್ ? ಅಂತಾಳಪ್ಪ ಇವ್ಳು. ಹೆಣ್ಣಾಗಿರೋದೇ ಒಂದು ಸಮಭ್ರಮ.
ಸಂಡೇ ಅಲ್ವಾ, ವಾರವಿಡೀ ಟೆನ್ಶನ್, ಫ್ರಸ್ಟ್ರೇಶನ್ ಗಳಲ್ಲಿ ಒದ್ದಾಡೋದು ಇದ್ದಿದ್ದೇ. ಇವತ್ತೊಂದು ದಿನ ಆದ್ರೂ ಯಾರ ಕಾಟವೂ ಇಲ್ಲದೇ ಹಾಯಾಗಿ ನಿದ್ದೆ ಮಾಡಬೇಕು ಅಂದುಕೊಂಡು ಮಲಗಿದ್ದೆ. ಮುಂಜಾವದ ತಂಪು ಹವೆಗೆ ಗಾಢ ನಿದ್ದೆ ಬಂದಿತ್ತು. ಮೊಬೈಲ್ ವೈಬ್ರೇಟ್ ಆದ ಹಾಗಾಯ್ತು. ಅರೆ ಕಣ್ಣು ತೆರೆದು ನೋಡಿದರೆ ಯಾವುದೋ ಸಂದೇಶ. ಗಂಟೆ ಇನ್ನೂ ಏಳಷ್ಟೇ ಆಗಿತ್ತು. ಮೋಡ ಮೋಡ ಹವೆ ಇದ್ದದ್ದಕ್ಕೋ ಏನೋ ಸರಿಯಾಗಿ ಬೆಳಕಾಗಿರಲಿಲ್ಲ. ಗಟ್ಟಿ ನಿದ್ದೆ ಹೊಡೆಯಲು ಹೇಳಿ ಮಾಡಿಸಿದಂಥಾ ವಾತಾವರಣ. ಇಂಥ ಟೈಮ್ ನಲ್ಲಿ ಕ್ಷುಲ್ಲಕ ಮೆಸೇಜ್ ಬಂದು ನಿದ್ದೆ ಹಾಳು ಮಾಡಿದರೆ ಸಿಟ್ಟು ಬರದೇ ಇರುತ್ತಾ? ಧುಮು ಧಮುಗುಟ್ಟುತ್ತಲೇ ಮೆಸೇಜ್ ನೋಡಿದರೆ ಮತ್ತೇನಿಲ್ಲ, ಹ್ಯಾಪಿ ವುಮೆನ್ಸ್ ಡೇ ಅಂತ ಒಂದು ಮೆಸೇಜ್. ಮೊಬೈಲ್ ಒಡೆದು ಹಾಕುವಷ್ಟು ಸಿಟ್ಟು ಬಂತು. ಮತ್ತೆ ಬೆಡ್ ಶೀಟ್ ಮೇಲಕ್ಕೆಳೆದು ಕಟ್ ಆದ ಕನಸನ್ನೂ ನಿದ್ದೆಯನ್ನೂ ಮತ್ತೆ ಆವಾಹಿಸಿಕೊಳ್ಳಲು ಟ್ರೈ ಮಾಡಿದೆ. ಕಣ್ಣು ಮುಚ್ಚಿದ್ದಷ್ಟೇ, ನಿದ್ರೆ ಅನ್ನೋ ಮಾಯಗಾರ ಹತ್ತಿರವೂ ಸುಳಿಯಲಿಲ್ಲ. ಇದರ ಜನ್ಮಕ್ಕಿಷ್ಟು ಅಂತ ಬೈಕೊಳ್ಳುತ್ತಲೇ ಎದ್ದೆ.
ಈ ವುಮೆನ್ಸ್ ಡೇ ಮೆಸೇಜ್ ಗಳ ಹಾವಳಿ ನನ್ನನ್ನು ಖಂಡಿತಾ ನಿದ್ದೆ ಮಾಡಲು ಬಿಡಲ್ಲ ಅಂದುಕೊಂಡು ನಿನ್ನೆಯೇ ಮೊಬೈಲ್ ನೆಟ್ ಆಫ್ ಮಾಡಿ ಮಲಗಿದ್ದೆ. ವಿಘ್ನ ಸಂತೋಷಿಗಳು ಮೆಸೇಜ್ ಮಾಡಿ ಮೂಡ್ ಆಫ್ ಮಾಡಿದ್ರು.
ಅಲ್ಲಾ ಕಣ್ರೀ, ನಾನು ಹೆಣ್ಣಾಗಿ ಹುಟ್ಟಬೇಕು ಅಂತ ನೂರಾರು ವರ್ಷ ತಪಸ್ಸು ಮಾಡಿ ಈ ಜನ್ಮ ಪಡೆದುಕೊಂಡಿದ್ರೆ, ನೀವು ನನ್ನಂಥವರ ನಿದ್ದೆ ಕೆಡಿಸಿ ಮಾಡುವ ಶುಭ ಹಾರೈಕೆಗಳಿಗೆ ಒಂದು ಬೆಲೆಯಾದ್ರೂ ಇರ್ತಿತ್ತು. ಆದರೆ ಈ ಹೆಣ್ಣು ಜನ್ಮ ನನ್ನ ಚಾಯ್ಸೇ ಆಗಿರಲಿಲ್ಲ.
ಮಹಿಳಾ ದಿನ: ನನ್ನ ದಿನ ನನ್ನ ಹೆಮ್ಮೆ ಎಂದು ಬೀಗುತ್ತಿದ್ದಾರೆ ನಟಿಮಣಿಯರು!...
ಇಪ್ಪತ್ತೇಳು ವರ್ಷಗಳ ಹಿಂದೆ ನಾನು ಹುಟ್ಟಿದಾಗ, ಅಪ್ಪ ಒಬ್ಬರನ್ನು ಬಿಟ್ಟು ಮತ್ತೆಲ್ಲರೂ, 'ಹೆಣ್ಣಾದ್ರೂ ಪರ್ವಾಗಿಲ್ಲ. ಈ ಕಾಲದಲ್ಲಿ ಎರಡೂ ಒಂದೇ' ಅಂತ ಕನಿಕರ ತೋರಿಸಿದವರೇ. ಇಪ್ಪತ್ತೇಳು ವರ್ಷಗಳ ಬಳಿಕ ಈ ಕಾಲಕ್ಕೂ ಅದು ಮುಂದುವರಿದಿದೆ. ಅಪ್ಪ ಒಬ್ಬರು ಮಾತ್ರ ನನಗೆ ಮಗಳು ಹುಟ್ಟಿದ್ದಾಳೆ ಅಂತ ಊರೆಲ್ಲ ಸಿಹಿ ಹಂಚಿ ಖುಷಿ ಪಟ್ಟರಂತೆ.
ಇತ್ತೀಚೆಗೆ ಫ್ರೆಂಡ್ ಗೆ ಹೆಣ್ಣು ಮಗುವಾಯ್ತು. ಮಗಳು ಬಂದಳು ಅಂತ ಅವನು ಫುಲ್ ಖುಷಿಯಲ್ಲಿದ್ದಾಗ, ಬಂಧುಗಳೆಲ್ಲ ಹೇಳಿದ್ದು ಅದೇ ಮಾತು. 'ಬಿಡಯ್ಯ, ನೆಕ್ಸ್ಟ್ ಗ್ಯಾರೆಂಟಿ ಗಂಡೇ ಹುಟ್ಟುತ್ತೆ. ಈ ಕಾಲದಲ್ಲಿ ಗಂಡು, ಹೆಣ್ಣು ಎಲ್ಲ ಒಂದೇ ಬಿಡು' ಅಂತ.. ಅವನು ಉರಿದುಕೊಳ್ಳೂತ್ತಾ ಹೇಳಿದ. 'ಅಲ್ಲಾ ಕಣೆ ಅಷ್ಟು ಮುದ್ದಾದ ಮಗಳು ಬಂದಳು ಅಂತ ಖುಷಿಯಲ್ಲಿದ್ರೆ, ಇವರು ಏನೋ ಆದವರ ಥರ ಸಮಾಧಾನ ಮಾಡೋದಕ್ಕೆ ಬರ್ತಾರೆ. ನಂಗಿದೆಲ್ಲ ಅರ್ಥನೇ ಆಗಲ್ಲ. ನಾನು ಬಯಸಿದ ಮಗು ಅದು.' ಅಂದ. ' ತಲೆ ಕೆಡಿಸ್ಕೋ ಬೇಡ. ಜಗತ್ತಿರೋದೇ ಹೀಗೆ. ನಿನ್ನ ಪಾಡಿಗೆ ನೀನು ಪಾಪು ಬಾಲ್ಯವನ್ನ ಎನ್ ಜಾಯ್ ಮಾಡು' ಅಂದೆ. ಅವನು ಅಸಮಾಧಾನದಲ್ಲೆ ತಲೆಯಾಡಿಸಿದ.
ಬ್ರಾ ಕೇವಲ ಒಳ ಉಡುಪಲ್ಲ, ವಿಶ್ವಾಸ ಹೆಚ್ಚಿಸೋ ವಸ್ತ್ರ
ನಾನು ಇಂಥದ್ದನ್ನು ಚಿಕ್ಕವಳಿಂದಲೇ ನೋಡುತ್ತಿದ್ದೆ. ಹೆಣ್ಣು ಆದ ಕಾರಣಕ್ಕೆ ನೀನು ಹೀಗೇ ಇರಬೇಕು. ಗಂಡು ಆದ್ರೆ ಹೀಗೇ ಇರಬೇಕು ಅಂತೆಲ್ಲ ರೂಲ್ಸು. ಅಪ್ಪ ಇದೆಲ್ಲದಕ್ಕೆ ಕ್ಯಾರೇ ಅಂದವನಲ್ಲ. 'ನಿನ್ನ ಲೈಫು ನಿನ್ನಿಷ್ಟ. ಬೇಕಾದಂಗೆ ಬದುಕು ಮಗಳೇ' ಅಂದ. ಅಪ್ಪಿತಪ್ಪಿಯೂ ನೀನು ಹುಡುಗನಿಗೆ ಸರಿ ಸಮ. ಅವನ ಹಾಗೆ ನಿನಗೆ ಸ್ವಾತಂತ್ರ್ಯ ಕೊಟ್ಟಿದ್ದೀನಿ ಅಂತೆಲ್ಲ ಅದದೇ ಸವಕಲು ಡೈಲಾಗ್ ಹೊಡೀಲಿಲ್ಲ. ಏಕೆಂದರೆ ನಾನು ಹುಡುಗರಿಗಿಂತ ಡಿಫರೆಂಟ್ ಅಂತ ಅವನಿಗೆ ಗೊತ್ತಿತ್ತು. ಯಾವ ಹುಡುಗನೂ ನನ್ನ ಮಗಳ ಲೆವೆಲ್ ಬಿಡಿ, ಹತ್ತಿರಕ್ಕೂ ಬರಲಾರ ಅಂತ.
ಮುಂದೆ ದೊಡ್ಡವಳಾದ ಮೇಲೆ ಕಾಲೇಜ್ ಗೆ ಹೋಗುವಾಗ ಉದ್ಯೋಗಕ್ಕೆ ಸೇರಿದಾಗ ವುಮೆನ್ಸ್ ಡೇ ಬಂದರೆ ಶುಭಾಷಯಗಳ ಸುರಿಮಳೆ. ನಾನು ಪ್ರತೀ ಸಲ ಇದನ್ನು ವಿಚಿತ್ರವಾಗಿಯೇ ನೋಡುತ್ತೇನೆ.
ಏಕೆಂದರೆ ನಾನು ವಿಶೇಷ ಅನ್ನೋದೆ ನನಗೆ ಆಕ್ವರ್ಡ್ ಆಗಿ ಕಾಣುತ್ತದೆ. ನಾನು ಒಬ್ಬ ಸಾಮಾನ್ಯ ಮನುಷ್ಯ ಜೀವಿ. ಅಪ್ಪನಿಗೆ ಮಾತ್ರ ಇವತ್ತಿಗೂ ಮುದ್ದಿನ ಪಾಪು. ಉಳಿದ ಜಗತ್ತಿಗೂ, ಅವರು ಮಾಡುವ ವಿಶ್ ಗಳಿಗೂ ನನಗೂ ಸಂಬಂಧ ಇಲ್ಲ ಅಂತಲೇ ಅನಿಸುತ್ತೆ.
ಹೀಗೆಲ್ಲ ಯೋಚಿಸುತ್ತಿರುವಾಗಲೇ ಮನೆಯ ಗೇಟ್ ತೆರೆದ ಶಬ್ದ. ನೋಡಿದ್ರೆ ಪಕ್ಕದ ಮನೆ ಪಾಪು. ಅದರ ಕೈ ಯಲ್ಲೊಂದು ಮುದ್ದಾದ ಪಿಂಕ್ ಬಣ್ಣದ ಗ್ರೀಟಿಂಗ್ಸ್. 'ಹ್ಯಾಪಿ ವುಮೆನ್ಸ್ ಡೇ ಆಂಟಿ' ಅಂದು ಆ ಗ್ರೀಟಿಂಗ್ಸ್ ಕೈಯಲ್ಲಿಟ್ಟು ಹೋಯ್ತು. ಅವಳ ಮುಖದ ಮೇಲಿನ ಪ್ರೀತಿಗೆ ಏನೂ ಹೇಳಲಿಕ್ಕಾಗದೇ ಗ್ರೀಟಿಂಗ್ಸ್ ಇಸ್ಕೊಂಡು, 'ಥ್ಯಾಂಕ್ಸ್ ಮಗಳೇ' ಅನ್ನದೇ ಬೇರೇನೋ ಹೇಳಲಿಕ್ಕಾಗಲಿಲ್ಲ ನನ್ ಕೈಲಿ.