Feb 24, 2022, 6:46 PM IST
ಬೆಂಗಳೂರು (ಫೆ.24): ದೇಶದ ಮೇಲೆ ರಷ್ಯಾದ (Russia) ಆಕ್ರಮಣವನ್ನು ಕಟು ಶಬ್ದಗಳಲ್ಲಿ ಟೀಕೆ ಮಾಡಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelensk), ಯಾವುದೇ ಕಾರಣಕ್ಕೂ ರಷ್ಯಾಗೆ ಶರಣಾಗೋದಿಲ್ಲ. ಕೊನೇ ತನಕ ಹೋರಾಟ ಮಾಡುತ್ತೇವೆ ಎಂದು ಗುಡುಗಿದ್ದಾರೆ.
ಗುರುವಾರ ಮುಂಜಾನೆ ಉಕ್ರೇನ್ (Ukraine) ದೇಶದ ವಿರುದ್ಧ ವಿಶೇಷ ಮಿಲಿಟರಿ ಕಾರ್ಯಾಚರಣೆ ಎನ್ನುವ ಹೆಸರಿನಲ್ಲಿ ರಷ್ಯಾ ಯುದ್ಧ ಘೋಷಣೆ ಮಾಡಿದ ಬೆನ್ನಲ್ಲಿಯೇ ವಿಶ್ವಸಂಸ್ಥೆ ಸೇರಿದಂತೆ ವಿಶ್ವದ ಬಲಾಢ್ಯ ದೇಶಗಳ ನೆರವು ಕೇಳಿದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಇದರ ನಡುವೆ ದೇಶದ ಜನರ ಆತ್ಮವಿಶ್ವಾಸ ತುಂಬುವ ಮಾತುಗಳನ್ನಾಡಿದರು. ನಮ್ಮ ರಕ್ಷಣೆ ಮಾಡಿಕೊಳ್ಳಲು ನಾವು ಸಮರ್ಥರಿದ್ದೇವೆ. ಯಾವುದೇ ಕಾರಣಕ್ಕೂ ರಷ್ಯಾಗೆ ಶರಣಾಗೋದಿಲ್ಲ. ನಾಜಿ, ಜರ್ಮನಿ ರೀತಿ ರಷ್ಯಾ ದಾಳಿ ಮಾಡುತ್ತಿದೆ. ಇತಿಹಾಸದ ಪುಟಗಳನ್ನು ಅಳಿಸಿ ಹಾಕಲು ರಷ್ಯಾಗೆ ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.
ಯುದ್ಧಕ್ಕೆ ಕರೆ ಕೊಟ್ಟ ಅಧ್ಯಕ್ಷ, ಉಕ್ರೇನ್‌ನ ಒಂದೊಂದೇ ಪ್ರದೇಶ ವಶಕ್ಕೆ ಪಡೆಯುತ್ತಿರುವ ರಷ್ಯಾ
ಪರೋಕ್ಷವಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರನ್ನು ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಗೆ ಹೋಲಿಸಿದ ಝೆಲೆನ್ಸ್ಕಿ, ಬಲಿಷ್ಠ ರಷ್ಯಾದ ವಿರುದ್ಧ ಎಲ್ಲಾ ರೀತಿಯ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡಿರುವುದಾಗಿ ಘೋಷಣೆ ಮಾಡಿದರು.