May 4, 2022, 2:04 PM IST
ಕರ್ನಾಟಕದ ಏಳು ಅದ್ಭುತಗಳು (Seven Wonders Campaign) ಅಭಿಯಾನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಚಾಲನೆ ನೀಡಿದ್ದಾರೆ. ಕನ್ನಡ ಪ್ರಭ, ಏಷ್ಯಾನೆಟ್ ನ್ಯೂಸ್, ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಅಭಿಯಾನದ ಲೋಗೋ, ವೆಬ್‌ಸೈಟ್ ಅನಾವರಣ ಮಾಡಿದರು. ಖ್ಯಾತ ನಟ ರಮೇಶ್ ಅರವಿಂದ್ (Ramesh Aravind) ಕರ್ನಾಟಕದ ಏಳು ಅದ್ಭುತಗಳು ಅಭಿಯಾನಕ್ಕೆ ರಾಯಭಾರಿಯಾಗಿದ್ದಾರೆ. ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್ ಛೇರ್ಮನ್ ರಾಜೇಶ್ ಕಾಲ್ರಾ, ಕನ್ನಡ ಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ, ನಟ ರಮೇಶ್ ಅರವಿಂದ್, ಕನ್ನಡಪ್ರಭ ಪುರವಣಿ ಸಂಪಾದಕ ಜೋಗಿ, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕನ್ನಡಪ್ರಭ ಐವತ್ತನೇ ವರ್ಷದ ಸಂಭ್ರಮದಲ್ಲಿರುವ ಹೊತ್ತಲ್ಲಿ ಆರಂಭಿಸಿರುವ ಹೊಸ ಅಭಿಯಾನ – ಕರ್ನಾಟಕದ ಏಳು ಅದ್ಭುತಗಳ ಆಯ್ಕೆ. ಅದಕ್ಕಿಂದು ಸಿಎಂ ಬಸವರಾಜ ಬೊಮ್ಮಾಯಿಯವರು ಚಾಲನೆ ನೀಡಿದ್ದು, ಅಭಿಯಾನದ ಲೋಗೋ (Logo), ವೆಬ್‌ಸೈಟ್ (Website) ಅನಾವರಣ ಮಾಡಿದರು.
ಲೋಗೋ ಅನಾವರಣ ಮಾಡಿ ಮಾತನಾಡಿದ ಸಿಎಂ ಬೊಮ್ಮಾಯಿ, ಹಲವಾರು ವಿಚಾರಗಳಲ್ಲಿ ಕರ್ನಾಟಕ ಮುಂದಿದೆ. ಆದ್ರೆ ಟೂರಿಸಂ ವಿಚಾರಕ್ಕೆ ಬಂದಾಗ, ನಮ್ಮಲ್ಲಿ ಹಲವಾರು ಆಸ್ತಿಗಳಿದ್ದರೂ ಸಹ, ಅವುಗಳನ್ನು ಬ್ರ್ಯಾಂಡ್ ನೇಮ್ ಮಾಡಿ ಮಾರ್ಕೆಟ್ ಮಾಡೋದ್ರಲ್ಲಿ ಇನ್ನೂ ಬಹಳಷ್ಟು ಕೆಲಸಗಳಿದೆ. ಅದ್ರಲ್ಲಿ ಈ ಅಭಿಯಾನ ತುಂಬಾ ಪ್ರಮುಖವಾಗಿದೆ ಎಂದು ಹೇಳಿದರು.
ಅಷ್ಟೇ ಅಲ್ಲ, ಯಾವುದಾದರೂ ಒಂದು ಹುಡುಕಾಟವಿದೆಯಲ್ಲ. ಅದುವೇ ದೊಡ್ಡ ಪ್ರಯತ್ನ. ಈ ಹುಡುಕಾಟದಲ್ಲಿ ಮುತ್ತುಗಳು, ರತ್ನಗಳು ಸಿಗಬಹುದು. ಅವೆಲ್ಲವನ್ನೂ ಕರ್ನಾಟಕದ ಆಸ್ತಿಯಾಗಿ ನಾವು ಬ್ರ್ಯಾಂಡ್ ಮಾಡಬೇಕು. ಇತಿಹಾಸವನ್ನು ಪುನರ್ ಸೃಷ್ಟಿ ಮಾಡುವ ಕಲ್ಪನೆ ಅದ್ಭುತವಾದುದು. ಅಂಥಾ ಹಲವಾರು ಮಾನ್ಯುಮೆಂಟ್ಸ್ ಕರ್ನಾಟಕದಲ್ಲಿದೆ. ಕರ್ನಾಟಕದ ಏಳು ಅದ್ಭುತಗಳು ಅಭಿಯಾನಕ್ಕೆ ಜನರಿಂದ ರೆಸ್ಪಾನ್ಸ್ ನಿರೀಕ್ಷೆ ಮೀರಿ ಸಿಗುತ್ತಿದೆ ಎಂದು ತಿಳಿಸಿದರು.