Apr 17, 2022, 12:55 PM IST
ಒಂದೆಡೆ ದಟ್ಟಾರಣ್ಯ.. ಇದೇ ಅರಣ್ಯದ ಮಧ್ಯೆ ಕೈಲಿ ಕ್ಯಾಮೆರಾ, ದುರ್ಬೀನು ಹಿಡಿದು ತಾಳ್ಮೆಯಿಂದ ಪರಿಸರದತ್ತ ದೃಷ್ಟಿ ನೆಟ್ಟಿರೋ ಸಮೂಹ.. ಇದು ಕೊಡಗು(Kodagu) ಜಿಲ್ಲೆಯ ಮಡಿಕೇರಿಯಲ್ಲಿ ನಡೆದ ಹಕ್ಕಿ ಹಬ್ಬದ(Bird festival) ದೃಶ್ಯ.. ಈ ಬಾರಿ ಪ್ರಕೃತಿಯ ತವರು ಕೊಡಗು ಜಿಲ್ಲೆಯ ಮಡಿಕೇರಿ ನಗರದಲ್ಲಿ ಬರ್ಡ್ ಫೆಸ್ಟಿವಲ್ ನಡೆಯಿತು. ಪಕ್ಷಿಗಳ ಬಗ್ಗೆ ತಿಳಿದವರು, ಪಕ್ಷಿಗಳ ಬಗ್ಗೆ ಆಸಕ್ತಿಯಿರುವವರು ಹಾಗೂ ಪಕ್ಷಿಗಳನ್ನು ಪ್ರೀತಿಸುವವರನ್ನ ಒಂದೇ ವೇದಿಕೆಯಲ್ಲಿ ತರುವುದು ಹಬ್ಬದ ಉದ್ದೇಶ.
ಪಕ್ಷಿ ತಜ್ಞರು, ಪ್ರೊಫೆಸರ್‌ಗಳು, ವಿಶೇಷ ಅತಿಥಿಗಳು ಹಬ್ಬಕ್ಕೆ ಆಗಮಿಸಿ ವಿಶೇಷ ಉಪನ್ಯಾಸವನ್ನು ನೀಡಿದರು. ಕರ್ನಾಟಕ ಸರ್ಕಾರದ 8ನೇ ಆವೃತ್ತಿಯ ಹಕ್ಕಿ ಹಬ್ಬ ಬಹಳ ವಿಶೇಷತೆಯಿಂದ ಕೂಡಿತ್ತು. ಈ ಬಾರಿ ಜಿಲ್ಲೆಯ ವನ್ಯ ಛಾಯಾಗ್ರಾಹಕರು(Wildlife Photographers) ಸೆರೆ ಹಿಡಿದಿದ್ದ ಪಕ್ಷಿಗಳ ಚಿತ್ರಗಳ ಪ್ರದರ್ಶನ ಕೂಡ ನಡೆಯಿತು. ಹಬ್ಬ ನಡೆಯುವ ಸುತ್ತ ಮುತ್ತಲಿನ ಪ್ರದೇಶಕ್ಕೆ ಪಕ್ಷಿ ವೀಕ್ಷಣೆಗೆ ಕರೆದುಕೊಂಡು ಹೋಗಲಾಗುತ್ತದೆ. ಅವುಗಳ ಚಲನವಲನಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಈ ಮೂಲಕ ಪರಿಸರ ಸಮತೋಲನದಲ್ಲಿ ಹಕ್ಕಿ ಪಕ್ಷಿಗಳ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ.
ನಿಮ್ಮ ಹುಡ್ಗಿ ಮುಂದೆ ಹೀಗೆಲ್ಲ ಮಾತಾಡ್ಬೇಡಿ ಸ್ವಾಮೀ.. ಬಿಟ್ ಹೋದಾಳು!
ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳಿಗೆ ಸಿಗುವ ಪ್ರಾಮುಖ್ಯತೆ ಪಕ್ಷಿಗಳಿಗೆ ಸಿಗುತ್ತಿಲ್ಲ. ಪಕ್ಷಿಗಳ ಬಗ್ಗೆ ಒಂದು ಸೀಮಿತ ವರ್ಗ ಮಾತ್ರ ಆಸಕ್ತಿ ಕಾಳಜಿ ವಹಿಸಿಕೊಂಡು ಬರುತ್ತಿದೆ. ಇದು ಬದಲಾಗಬೇಕು. ಪರಿಸರ(nature)ದ ಸಮತೋಲನದಲ್ಲಿ ಪ್ರಾಣಿಗಳಷ್ಟೇ ಪಕ್ಷಿಗಳು ಸಹಾ ಮಹತ್ವದ ಪಾತ್ರ ವಹಿಸುತ್ತವೆ. ಹಕ್ಕಿ ಹಬ್ಬ ಇದಕ್ಕೊಂದು ಉತ್ತಮ ವೇದಿಕೆಯಾಗಿದೆ. ಹೀಗಾಗಿ ಕೊಡಗು ಜಿಲ್ಲೆಯಲ್ಲಿ ರಾಜ್ಯದ ವಿವಿಧೆಡೆಗಳಿಂದ ಪಕ್ಷಿಪ್ರೇಮಿಗಳು ಬಂದು ಪಕ್ಷಿಗಳ ಚಟುವಟಿಕೆಗಳಲ್ಲಿ ಭಾಗಿಯಾದರು. ಈ ಬಾರಿಯ ಹಬ್ಬಕ್ಕೆ ಮೆರಗು ನೀಡಿದ್ದು ಬರ್ಡ್ ವಾಕ್(bird walk). ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಪಕ್ಷಿ ವೀಕ್ಷಣೆ ನಡಿಗೆಯಲ್ಲಿ 80ಕ್ಕೂ ಹೆಚ್ಚು ಮಂದಿ ಪಕ್ಷಿ ಪ್ರಿಯರು ಉತ್ಸಾಹದಿಂದ ಭಾಗಿಯಾಗಿದ್ದರು. ಮಡಿಕೇರಿ ಸುತ್ತಲಿನ ಆಯ್ದ ಜಾಗಗಳಲ್ಲಿ ಏಳು ತಂಡವಾಗಿ ಮಾಡಿ ಪಕ್ಷಿ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು.. ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ದುರ್ಬೀನು, ಕ್ಯಾಮೆರಾ ಹಿಡಿದು ಬಣ್ಣ ಬಣ್ಣದ ಹಕ್ಕಿಗಳನ್ನ ಕಣ್ತುಂಬಿಕೊಂಡರು.
ಮಲಗುವ ಮುನ್ನ ನೀರು ಕುಡಿಯೋದು ಒಳ್ಳೇದೋ ಅಲ್ವೋ?
ಒಟ್ನಲ್ಲಿ, ಇತರೆ ಹಬ್ಬಗಳಿಗೆ ಹೋಲಿಸಿದರೆ ಹಕ್ಕಿ ಹಬ್ಬ ನಿಜಕ್ಕೂ ಅರ್ಥಪೂರ್ಣವಾಗಿತ್ತು. ಹಕ್ಕಿಗಳ ಮಹತ್ವ ಹೇಳಲು ಕೇವಲ ಒಂದೆರಡು ದಿನದ ಆಚರಣೆ ಸಾಂಕೇತಿಕ ಆಗದೆ ಅದನ್ನು ವರ್ಷಪೂರ್ತಿ ಆಚರಿಸುವುದು ನಮ್ಮ ಜವಾಬ್ದಾರಿ. ಇಂತಹ ಕೆಲಸ ಮುಂದಿನ ದಿನಗಳಲ್ಲಿ ಆಗಲಿ. ಜನ ಸಾಮಾನ್ಯರು ಪ್ರಕೃತಿಯಲ್ಲಿ ಹಕ್ಕಿ ಪಕ್ಷಿಗಳ ಮಹತ್ವ ಅರಿಯಲಿ ಅನ್ನೋದೆ ಅರಣ್ಯ ಇಲಾಖೆಯ ಆಶಯವಾಗಿದೆ.