Aug 6, 2021, 2:36 PM IST
ನವದೆಹಲಿ(ಆ.06): ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ಮಹಿಳಾ ಹಾಕಿ ಕ್ರೀಡೆಯಲ್ಲಿ ರಾಣಿ ರಾಂಪಾಲ್ ನೇತೃತ್ವದ ಭಾರತೀಯ ಮಹಿಳಾ ಹಾಕಿ ತಂಡವು ಕೂದಲೆಳೆ ಅಂತರದಲ್ಲಿ ಕಂಚಿನ ಪದಕ ಗೆಲ್ಲುವಲ್ಲಿ ವಿಫಲವಾಗಿದೆ. ಸೋಲಿನ ಬೆನ್ನಲ್ಲೇ ಕಣ್ಣೀರಾಗಿದ್ದ ಭಾರತೀಯ ಮಹಿಳಾ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಕರೆ ಮಾಡಿ ಸಾಂತ್ವನ ಹೇಳಿದ್ದಲ್ಲದೇ ನಿಮ್ಮ ಸಾಧನೆಯ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ ಎಂದು ಹುರಿದುಂಬಿಸಿದ್ದಾರೆ.
ಗ್ರೇಟ್ ಬ್ರಿಟನ್ ಎದುರಿನ ಪಂದ್ಯದಲ್ಲಿ ಭಾರತ ಮಹಿಳಾ ಹಾಕಿ ತಂಡವು 4-3 ಗೋಲುಗಳ ಅಂತರದ ರೋಚಕ ಸೋಲು ಅನುಭವಿಸಿತ್ತು. ಗ್ರೂಪ್ ಹಂತದಲ್ಲಿ ಹ್ಯಾಟ್ರಿಕ್ ಸೋಲು ಕಂಡಿದ್ದ ರಾಣಿ ಪಡೆ, ಆ ಬಳಿಕ ಫಿನಿಕ್ಸ್‌ನಂತೆ ಎದ್ದು ಬಂದು ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಸೆಮಿಫೈನಲ್‌ಗೇರಿದ ಸಾಧನೆ ಮಾಡಿತ್ತು.
ಸೋಲಿನ ಬಳಿಕ ಮೈದಾನದಲ್ಲಿ ಭಾರತ ಹಾಕಿ ತಂಡದ ಆಟಗಾರ್ತಿಯರು ಕಣ್ಣೀರು ಹಾಕಿದ್ದರು. ಹಾಕಿ ಆಟಗಾರ್ತಿಯರು ಮೈದಾನದಿಂದ ಹೊರಬರುತ್ತಿದ್ದಂತೆ ದೂರವಾಣಿ ಕರೆ ಮಾಡಿದ ಮೋದಿ, ಮೈದಾನದಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಹಾಕಿ ಗತವೈಭವ ಮರುಕಳಿಸುವಂತೆ ಮಾಡಿದ್ದೀರ. ನೀವು ಕಣ್ಣೀರು ಹಾಕಬೇಡಿ. ನಿಮ್ಮ ಸಾಧನೆಯ ಬಗ್ಗೆ ಇಡೀ ದೇಶವೇ ಹೆಮ್ಮೆಪಡುತ್ತಿದೆ ಎಂದು ಹಾಕಿ ತಂಡವನ್ನು ಪ್ರಧಾನಿ ಮೋದಿ ಸಂತೈಸಿದ್ದಾರೆ.