Aug 5, 2022, 4:50 PM IST
ಜೂನ್ ಅಂತ್ಯದ ವೇಳೆ 10ಕ್ಕೂ ಹೆಚ್ಚು ಬಾರಿ ಕೊಡಗು- ಮಡಿಕೇರಿಯಲ್ಲಿ ಭೂಕಂಪವಾಗಿದೆ. ಈಗ ಅತಿವೃಷ್ಟಿಯಿಂದ ಗುಡ್ಡ ಕುಸಿತ, ಮನೆ ಮೇಲೆ ಗುಡ್ಡ ಬಂದು ಎರಗುವುದು, ಮನೆಗಳಿಗೆ ನೀರು ನುಗ್ಗುತ್ತಿದೆ. ಇಲ್ಲಿನ ಜನರು ಪ್ರಾಕೃತಿಕ ವಿಕೋಪದಿಂದ ನಲುಗಿ ಹೋಗಿದ್ದಾರೆ. ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಈ ಗಡಿಪ್ರದೇಶದಲ್ಲಿ ಸುರಿದ ಭಾರಿ ಮಳೆಗೆ ಗುಡ್ಡದಿಂದ ಭಾರೀ ಸದ್ದಿನೊಂದಿಗೆ ಏಕಾಏಕಿ ಕೆಸರು ಮಿಶ್ರಿತ ಜಲರಾಶಿ ನುಗ್ಗಿ ಅಪಾರ ಹಾನಿಯಾಗಿದೆ. ಈ ಭಾಗದಲ್ಲಿ ಅರ್ಧ ಎಕರೆಯಷ್ಟುವಿಶಾಲ ಪ್ರದೇಶದಲ್ಲಿ ಭಾರೀ ಭೂಪ್ರದೇಶ ಕುಸಿತವಾಗಿದೆ. ಭೂಮಿ ಕೆಸರಿನಂತಾಗಿ ಹರಿದು ಹೋಗಿದೆ. ಕೆಸರು ನೀರಿನಿಂದ 150 ರಬ್ಬರ್ ಮರಗಳು, 150 ಕಾಫಿ ಗಿಡ, 40ಕ್ಕೂ ಅಧಿಕ ಅಡಕೆ ಮರಗಳು ಸಂಪೂರ್ಣ ನಾಶವಾಗಿವೆ.
‘ನಾವು ಇಲ್ಲಿ ಹುಟ್ಟಿ, ಬೆಳೆದು ಇಷ್ಟುವರ್ಷವಾದರೂ ಇಂಥ ಅನುಭವ ಯಾವತ್ತೂ ಆಗಿಲ್ಲ. ಸ್ಫೋಟದ ಸದ್ದಿನೊಂದಿಗೆ ಪ್ರವಾಹದ ರೀತಿಯಲ್ಲಿ ಬೆಟ್ಟದಿಂದ ಕೆಸರು ನೀರು ಹರಿದು ಬರುವ ಇಂಥ ಕಂಡು ಕೇಳರಿಯದ ವಿದ್ಯಮಾನ ನಾವು ಈವರೆಗೆ ನೋಡೇ ಇಲ್ಲ. ವಿಚಿತ್ರವಾದ ಈ ಬೆಳವಣಿಗೆ ಕಾರಣ ಏನು? ಈ ರೀತಿ ನೀರು ಎಲ್ಲಿಂದ ಬರುತ್ತಿದೆ? ಆ ರೀತಿ ಸದ್ದು ಯಾಕಾಗುತ್ತಿದೆ ಎಂಬುದನ್ನು ವಿಜ್ಞಾನಿಗಳೇ ಹೇಳಬೇಕು’
- ಇದು ಕೊಡಗು ಜಿಲ್ಲೆಯ ಮಡಿಕೇರಿ ಜಿಲ್ಲೆಯ ಚೆಂಬು ಗ್ರಾಮದ ಸಮೀಪದ ದಬ್ಬಡ್ಕದಲ್ಲಿ ಉಂಟಾಗಿರುವ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾಗಿರುವ ಬಾಲಕೃಷ್ಣ ಮತ್ತು ದೇವಕಿ ದಂಪತಿ ಮಾತು. ಕಂಡು ಕೇಳರಿಯದ ಮೇಘಸ್ಪೋಟಕ್ಕೆ ಸಾಕ್ಷಿಯಾಗುತ್ತಿದೆ ಕೊಡಗು- ಮಡಿಕೇರಿ. ಇದಕ್ಕೆ ಕಾರಣವೇನು..?