
ಬೆಂಗಳೂರು (ಆ.20): ಧರ್ಮಸ್ಥಳದಲ್ಲಿ ನನ್ನ ಮಗಳು 'ಅನನ್ಯಾ ಭಟ್' ಕಾಣೆಯಾಗಿದ್ದಾಳೆ ಹುಡುಕಿಕೊಡಿ ಎಂದು ಕಟ್ಟುಕಥೆ ಹೇಳಿದ ಸುಜಾತಾ ಭಟ್ ಅವರ ಸುಳ್ಳುಗಳ ಸರಣಿ ಬಯಲಾಗಿದೆ. ಧೂತ ಯೂಟ್ಯೂಬರ್ ಸಮೀರ್‌ನೊಂದಿಗೆ ಸೇರಿಕೊಂಡು, 'ನಿಗೂಢ ಸಾವು' ಎಂದು ಹೇಳಿ ಒಂದು ನಕಲಿ ಫೋಟೋವನ್ನು ಬಿಡುಗಡೆ ಮಾಡಿರುವುದು ಈ ಪ್ರಕರಣಕ್ಕೆ ಮತ್ತಷ್ಟು ಗಂಭೀರ ತಿರುವು ನೀಡಿದೆ.
ಸುಜಾತಾ ಭಟ್ ಬಿಡುಗಡೆ ಮಾಡಿದ 'ಅನನ್ಯಾ' ಎಂಬ ಫೋಟೋ, ರಂಗಪ್ರಸಾದ್ ಅವರ ಸೊಸೆ ವಾಸಂತಿ ಅವರ ಫೋಟೋ ಎಂದು ಬಯಲಾಗಿದೆ. ವಾಸಂತಿ ಅವರು 2007ರಲ್ಲಿಯೇ ನಿಧನರಾಗಿದ್ದು, ಸಂಬಂಧಿಕರು ಇಲ್ಲದಿರುವ ಈ ಫೋಟೋವನ್ನು ಬಳಸಿಕೊಳ್ಳಲು ಯೂಟ್ಯೂಬರ್ ಸಮೀರ್ ತಂತ್ರ ರೂಪಿಸಿದ್ದ ಎನ್ನಲಾಗಿದೆ.
ಷಡ್ಯಂತ್ರದ ರೂವಾರಿ ಯೂಟ್ಯೂಬರ್ ಸಮೀರ್?
'ಅನನ್ಯಾ' ಎಂಬ ಯುವತಿಯೇ ಇಲ್ಲ ಎಂದು ಸುವರ್ಣ ನ್ಯೂಸ್ ವರದಿ ಮಾಡಿದ ನಂತರ, ಧರ್ಮಸ್ಥಳ ವಿರೋಧಿ ಗ್ಯಾಂಗ್ ವಿಚಲಿತಗೊಂಡಿತ್ತು. ಈ ಹಂತದಲ್ಲಿ, ಫೋಟೋಗಾಗಿ ಇಂಟರ್‌ನೆಟ್‌ನಲ್ಲಿ ಹುಡುಕಾಟ ನಡೆಸಿದ ಗ್ಯಾಂಗ್, ಸುಲಭವಾಗಿ ಸಿಕ್ಕಿಬೀಳುವ ಭಯದಿಂದ ಹಳೆಯ, ಮೃತಪಟ್ಟ ಹುಡುಗಿಯ ಫೋಟೋ ಬಳಸುವ ನಿರ್ಧಾರಕ್ಕೆ ಬಂದಿತು. ಆಗ, ಸುಜಾತಾ ಭಟ್ ಅವರು ರಂಗಪ್ರಸಾದ್ ಅವರ ಸೊಸೆ ವಾಸಂತಿ ಅವರ ಫೋಟೋ ನೀಡಿದ್ದಾರೆ. ಈ ಫೋಟೋ ಸತ್ತ ಮಹಿಳೆಯದಾಗಿರುವುದರಿಂದ ಯಾರೂ ಪತ್ತೆಹಚ್ಚಲು ಸಾಧ್ಯವಿಲ್ಲ ಎಂಬುದು ಈ ಗ್ಯಾಂಗ್‌ನ ಲೆಕ್ಕಾಚಾರವಾಗಿತ್ತು.