ವಿವಿಧ ಕ್ಷೇತ್ರಗಳಲ್ಲಿ ಮೇರು ಸಾಧನೆ ಮಾಡಿದ 9 ಮಂದಿ ಕನ್ನಡಿಗರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಈ ಸಾಲಿನ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಗೌರವಿಸಿದರು.
ಬೆಂಗಳೂರು (ನ. 13): ವಿವಿಧ ಕ್ಷೇತ್ರಗಳಲ್ಲಿ ಮೇರು ಸಾಧನೆ ಮಾಡಿದ 9 ಮಂದಿ ಕನ್ನಡಿಗರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ (Ramnath Kovind) ಅವರು ಈ ಸಾಲಿನ ಪದ್ಮ ಪ್ರಶಸ್ತಿಗಳನ್ನು (Padma Award) ಪ್ರದಾನ ಮಾಡಿ ಗೌರವಿಸಿದರು.
ಖ್ಯಾತ ವೈದ್ಯ ಹಾಗೂ ಶಿಕ್ಷಣ ತಜ್ಞ ಬಿ.ಎಂ. ಹೆಗಡೆ ಅವರಿಗೆ ಶಿಕ್ಷಣ ಹಾಗೂ ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಮನ್ನಿಸಿ ಪದ್ಮವಿಭೂಷಣ ಗೌರವ ಸಮರ್ಪಿಸಲಾಯಿತು. ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಪರಿಗಣಿಸಿ ಖ್ಯಾತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರಿಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಡಾ. ಮಂಜಮ್ಮ ಜೋಗಿತಿ ಅವರಿಗೆ ಕರ್ನಾಟಕ ಜಾನಪದ ಕ್ಷೇತ್ರಕ್ಕೆ ನೀಡಿದ ಕೊಡುಗೆ ಪರಿಗಣಿಸಿ ಪದ್ಮಶ್ರೀ ಪುರಸ್ಕಾರವನ್ನು ರಾಷ್ಟ್ರಪತಿಗಳು ನೀಡಿದರು.
ಕರ್ನಾಟಕದ ಖ್ಯಾತ ಅಂಗವಿಕಲ ಕ್ರೀಡಾಪಟು ಹಾಗೂ 2009 ರ ಅಂಗವಿಕಲರ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಮುನ್ನಡೆಸಿದ್ದ ಕೆ.ವೈ. ವೆಂಕಟೇಶ್ ಅವರಿಗೆ ಪದ್ಮಶ್ರೀ ನೀಡಲಾಯಿತು. ಸಾಹಿತ್ಯ ಹಾಗೂ ವೇದ ಶಿಕ್ಷಣಕ್ಕೆ ನೀಡಿದ ಕೊಡುಗೆಗಾಗಿ ಪ್ರೊ. ಆರ್.ಎಲ್. ಕಶ್ಯಪ್ ಅವರಿಗೆ ಪದ್ಮಶ್ರೀ ಗೌರವ ನೀಡಲಾಯಿತು. ಇನ್ನು ‘ಕನ್ನಡಪ್ರಭ’ ವರ್ಷದ ವ್ಯಕ್ತಿ, ಕಿತ್ತಳೆ ಹಣ್ಣು ಮಾರಿ ಉಳಿಸಿದ ಹಣದಲ್ಲಿ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಹಾಜಬ್ಬ ಅವರಿಗೆ ಪದ್ಮಶ್ರೀ ನೀಡಿ ಗೌರವಿಸಲಾಯಿತು. ಇನ್ನು ಹಾಲಕ್ಕಿ ಒಕ್ಕಲಿಗ ಸಮುದಾಯದ ತುಳಸಿ ಗೌಡ ಅವರಿಗೆ 3 ಲಕ್ಷ ಗಿಡ ನೆಟ್ಟು ಪರಿಸರ ಉಳಿಸಲು ಶ್ರಮಿಸಿದ್ದಕ್ಕಾಗಿ ಪದ್ಮಶ್ರೀ ನೀಡಲಾಯಿತು.