
ನೇತ್ರಾವತಿ ತೀರದಲ್ಲಿ ಮತ್ತಷ್ಟು ರಹಸ್ಯ ಅಡಗಿದ್ಯಾ? ಅನಾಮಿಕ ಹೇಳಿದ್ದೇ ಸತ್ಯವೇ? ಮುಂದೇನು?
ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಈಗ ಮತ್ತೊಮ್ಮೆ ರಾಜ್ಯದ ಗಮನ ಸೆಳೆಯುತ್ತಿದೆ. ಪವಿತ್ರ ನೆಲವೆಂದು ಪರಿಗಣಿಸಲ್ಪಡುವ ನೇತ್ರಾವತಿ ತೀರದಲ್ಲಿ ಈ ಬಾರಿ ಭಕ್ತಿ ಧ್ವನಿಗಳ ಬದಲು ಪೊಲೀಸರು ನಡೆಸುತ್ತಿರುವ ಅಗೆತೆಯ ಶಬ್ದವೇ ಹೆಚ್ಚು ಕೇಳಿಸುತ್ತಿದೆ. ಎಸ್‌ಐಟಿ ತಂಡ ನೇತ್ರಾವತಿ ನದಿತೀರದ ಸಮಾಧಿ ಪ್ರದೇಶಗಳಲ್ಲಿ ಶೋಧ ಕಾರ್ಯ ಆರಂಭಿಸಿದೆ.
ಇತ್ತೀಚೆಗೆ ಒಬ್ಬ ಅನಾಮಿಕ ವ್ಯಕ್ತಿ ಅಧಿಕಾರಿಗಳಿಗೆ ನೀಡಿದ ಸುಳಿವಿನ ಆಧಾರದ ಮೇಲೆ, ಧರ್ಮಸ್ಥಳದಲ್ಲಿ ಅನೇಕ ಶವಗಳನ್ನು ಹೂತು ಹಾಕಲಾಗಿದೆ ಎಂಬ ಗಂಭೀರ ಆರೋಪ ಹೊರಬಿದ್ದಿತ್ತು. ಆ ಆರೋಪದ ಆಧಾರದಲ್ಲಿ ಎಸ್‌ಐಟಿ 13 ಸ್ಥಳಗಳನ್ನು ಗುರುತಿಸಿ ಶೋಧ ಕಾರ್ಯ ಪ್ರಾರಂಭಿಸಿದೆ. ಶೋಧದ ಮೊದಲ ದಿನ ನೇತ್ರಾವತಿ ತೀರದಲ್ಲಿ ಗುರುತಿಸಲ್ಪಟ್ಟ ಮೊದಲ ಸ್ಥಳದಲ್ಲಿ ಅಗೆತ ನಡೆಸಿದರೂ, ಯಾವುದೇ ಅಸ್ಥಿಪಂಜರ ಅಥವಾ ಶವದ ಕುರುಹುಗಳು ಪತ್ತೆಯಾಗಿಲ್ಲ. ಇನ್ನುಳಿದ 12 ಸ್ಥಳಗಳಲ್ಲಿ ಶೋಧ ಮುಂದುವರೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂದೇನು?
ಮೊದಲ ಸ್ಥಳದಲ್ಲಿ ಅಸ್ಥಿಪಂಜರ ಪತ್ತೆಯಾಗದಿದ್ದರೂ ತನಿಖಾಧಿಕಾರಿಗಳು ಕೈಚೆಲ್ಲಿಲ್ಲ. ಉಳಿದ ಸ್ಥಳಗಳಲ್ಲೂ ಅಗೆಯುವ ಕಾರ್ಯ ಮುಂದುವರಿಯಲಿದ್ದು, ಅಲ್ಲಿ ಯಾವುದೇ ಸಾಕ್ಷ್ಯ ಸಿಕ್ಕರೆ ತನಿಖೆ ಮತ್ತಷ್ಟು ಗಂಭೀರ ಹಂತ ತಲುಪಲಿದೆ. ಒಂದು ವೇಳೆ ಕಳೆಬರ ಪತ್ತೆಯಾದರೆ ಫರೆನ್ಸಿಕ್ ತಂಡದ ಸಹಕಾರದೊಂದಿಗೆ ಅಸ್ಥಿಪಂಜರಗಳ ಪರಿಶೀಲನೆ ನಡೆಯಲಿದೆ. ಡಿಎನ್‌ಎ ಪರೀಕ್ಷೆ, ಮರಣೋತ್ತರ ವಿಶ್ಲೇಷಣೆಗಳ ಮೂಲಕ ಮೃತರ ಗುರುತಿನ ಪತ್ತೆ ಹಚ್ಚುವ ಪ್ರಕ್ರಿಯೆ ಕೈಗೊಳ್ಳಲಾಗುವುದು.
ಎಸ್‌ಐಟಿ ಎಚ್ಚರಿಕೆ ಮೋಡ್‌ನಲ್ಲಿ
ಯಾರು ಏನೇ ಹೇಳಿದರೂ ನಾವು ನಮ್ಮ ಕೆಲಸವನ್ನು ಮಾಡುತ್ತೇವೆ” ಎಂದು ಎಸ್‌ಐಟಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ತನಿಖೆಯ ಸಮಯದಲ್ಲಿ ಅನಗತ್ಯ ಊಹಾಪೋಹಗಳನ್ನು ಹರಡದಂತೆ ಎಚ್ಚರಿಕೆ ನೀಡಿದ್ದಾರೆ. ಧರ್ಮಸ್ಥಳದ ನೇತ್ರಾವತಿ ತೀರದಲ್ಲಿ ಇನ್ನೂ 12 ಸ್ಥಳಗಳಲ್ಲಿ ಶೋಧ ಕಾರ್ಯ ಬಾಕಿಯಿದೆ. ಈ ಬಾರಿ ಅಲ್ಲಿ ಏನಾದರೂ ಪತ್ತೆಯಾದರೆ ರಾಜ್ಯದ ರಾಜಕೀಯದಿಂದ ಹಿಡಿದು ಸಾಮಾಜಿಕ ವಲಯವರೆಗೂ ಭಾರೀ ಚರ್ಚೆಗೆ ಕಾರಣವಾಗಲಿದೆ ಎನ್ನುವುದು ಸ್ಪಷ್ಟ.
ಈ ತನಿಖೆ ಒಂದೆರಡು ದಿನಗಳಲ್ಲಿ ಮುಗಿಯುವಂತದ್ದೇ ಅಲ್ಲ. ಶೋಧ ಮುಂದುವರಿಯುತ್ತಿದ್ದು, ಪ್ರತಿ ಬೆಳವಣಿಗೆಯೂ ಕುತೂಹಲ ಹೆಚ್ಚಿಸುತ್ತಿದೆ. ನೇತ್ರಾವತಿ ತೀರದಲ್ಲಿ ಇನ್ನೂ ಎಷ್ಟು ರಹಸ್ಯಗಳು ಅಡಗಿವೆ ಎಂಬುದು ಈಗ ಎಲ್ಲರಿಗೂ ದೊಡ್ಡ ಪ್ರಶ್ನೆಯಾಗಿದೆ.