
ಬೆಂಗಳೂರು (ಡಿ.25): ರಾಜ್ಯ ರಾಜಕೀಯದ 'ಕೈ' ಕೋಟೆಯೊಳಗೆ ಪಟ್ಟಕ್ಕಾಗಿ ನಡೆಯುತ್ತಿರುವ ಪಗಡೆಯಾಟ ಈಗ ರೋಚಕ ಹಂತಕ್ಕೆ ಬಂದು ತಲುಪಿದೆ. ಇಂದ್ರಪ್ರಸ್ಥದ (ದೆಹಲಿ) ದಂಡಯಾತ್ರೆಯ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಡಿರುವ 'ವೈರಾಗ್ಯ'ದ ನುಡಿಗಳು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ. 'ಪದವಿ ನಶ್ವರ, ಆ ಸ್ಥಾನವೇ ಅಮರ' ಎಂಬ ಡಿಕೆಶಿ ಮಾತಿನ ಮರ್ಮವೇನು? ಇದು ಅನಿವಾರ್ಯದ ಶರಣಾಗತಿಯೋ ಅಥವಾ ಅಸಲಿ ಆಟದ ಮುನ್ಸೂಚನೆಯೋ ಎಂಬ ಪ್ರಶ್ನೆ ಎದ್ದಿದೆ.
ಸಿದ್ದು ಬತ್ತಳಿಕೆಯ 'ಅಹಿಂದ' ಬ್ರಹ್ಮಾಸ್ತ್ರ
ಮತ್ತೊಂದೆಡೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕುರ್ಚಿ ಉಳಿಸಿಕೊಳ್ಳಲು 'ಅಹಿಂದ' ಎಂಬ ಪರೀಕ್ಷಿತ ಬ್ರಹ್ಮಾಸ್ತ್ರವನ್ನೇ ಮತ್ತೆ ಝಳಪಿಸಿದ್ದಾರೆ. ರಾಜಕೀಯವಾಗಿ ಸಂಕಷ್ಟ ಎದುರಾದಾಗಲೆಲ್ಲಾ ಸಿದ್ದರಾಮಯ್ಯ ಅವರಿಗೆ ಶ್ರೀರಕ್ಷೆಯಾಗಿ ನಿಂತಿರುವುದು ಇದೇ ಅಹಿಂದ ಶಕ್ತಿ. ಇದೀಗ ಹೈಕಮಾಂಡ್ ಮಟ್ಟದಲ್ಲಿ ಪಟ್ಟ ಬದಲಾವಣೆಯ ಗಾಳಿ ಬೀಸುತ್ತಿರುವಾಗಲೇ, ಸಿದ್ದರಾಮಯ್ಯ ಅವರು ಅಹಿಂದ ಸಮಾವೇಶಗಳ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಇದು ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವವರಿಗೆ 'ಅಷ್ಟ ದಿಗ್ಬಂಧನ' ಹಾಕುವ ತಂತ್ರ ಎಂದೇ ವಿಶ್ಲೇಷಿಸಲಾಗುತ್ತಿದೆ.
ಡಿಕೆಶಿ ನಿಗೂಢ ನಡೆ - ಸಿದ್ದು ರಣಬೇಟೆ
ದೆಹಲಿಯ ನಾಲ್ಕು ಗೋಡೆಗಳ ನಡುವೆ ಹೈಕಮಾಂಡ್ ನಾಯಕರನ್ನು ಭೇಟಿಯಾದ ಬಳಿಕ ಡಿಕೆ ಶಿವಕುಮಾರ್ ಅವರ ಧಾಟಿಯಲ್ಲಿ ಬದಲಾವಣೆ ಕಂಡಿದೆ. ಕನಕಪುರದ ಕಲಿ ಹೆಜ್ಜೆ ಹಿಂದಿಟ್ಟಂತೆ ಕಂಡರೂ, ಅವರ ನಿಗೂಢ ದಾಳಗಳು ಯಾವುದೋ ದೊಡ್ಡ ಮಟ್ಟದ ರಾಜಕೀಯ ಸ್ಫೋಟಕ್ಕೆ ಸಜ್ಜಾದಂತೆ ಭಾಸವಾಗುತ್ತಿದೆ. ಆದರೆ, ವರುಣಾಧಿಪತಿ ಸಿದ್ದರಾಮಯ್ಯ ಅವರು ಪಟ್ಟ ಬಿಟ್ಟುಕೊಡಲು ಸಿದ್ಧರಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಈಗಾಗಲೇ ರವಾನಿಸಿದ್ದಾರೆ. ಹೈಕಮಾಂಡ್ 'ಯಾರೂ ಪಟ್ಟದ ಬಗ್ಗೆ ಮಾತನಾಡಬೇಡಿ' ಎಂದು ಹುಕುಂ ಹೊರಡಿಸಿದರೂ, ತೆರೆಮರೆಯ ಕಸರತ್ತುಗಳು ಮಾತ್ರ ನಿಂತಿಲ್ಲ.
ಒಟ್ಟಾರೆಯಾಗಿ, ಕಾಂಗ್ರೆಸ್ ಸಾಮ್ರಾಜ್ಯದ ಸಿಂಹಾಸನ ಸಂಘರ್ಷ ಸದ್ಯಕ್ಕೆ ಅಂತ್ಯಗೊಳ್ಳುವ ಲಕ್ಷಣಗಳಿಲ್ಲ. ಈ 'ಹಾವು ಏಣಿ ಆಟ'ದಲ್ಲಿ ಅಂತಿಮವಾಗಿ ಯಾರು ಗೆಲ್ಲುತ್ತಾರೆ? ಸಿದ್ದರಾಮಯ್ಯ ಅವರ ಅಹಿಂದ ಶಕ್ತಿ ಕುರ್ಚಿ ಉಳಿಸಿಕೊಡುತ್ತದೆಯೇ ಅಥವಾ ಡಿಕೆಶಿ ಅವರ ತಾಳ್ಮೆ ಅವರಿಗೆ ಪಟ್ಟ ಕಟ್ಟುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.