Dec 11, 2024, 1:47 PM IST
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಮೃತದೇಹಕ್ಕೆ ಸ್ವತಃ ಅವರ ಮೊಮ್ಮಗ ಅಮರ್ಥ್ಯ ಸಿದ್ದಾರ್ಥ್ ಅವರೇ ಚಿತೆಗೆ ಅಗ್ನಿಸ್ಪರ್ಶ ಮಾಡಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿಕುಮಾರ್ ಅವರ ಅಳಿಯನಾಗಿರುವ ಅಮರ್ಥ್ಯ ಸಿದ್ದಾರ್ಥ್ ಕಳೆದ ಕೆಲವು ವರ್ಷಗಳ ಹಿಂದೆ ತಮ್ಮ ತಂದೆ ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ ಅವರ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಿದ್ದರು. ಇದೀಗ ಪುನಃ ತಾತ ಕೃಷ್ಣ ಅವರ ದೇಹಕ್ಕೆ ಅಗ್ನಿ ಸ್ಪರ್ಶ್ ಮಾಡಲಿದ್ದಾರೆ ಎಂದು ಕೃಷ್ಣ ಅವರ ಸಹೋದರನ ಪುತ್ರ ಗುರುಚರಣ್ ಮಾಹಿತಿ ನೀಡಿದರು.
ಹೇಗೆ ನಡೆಯಲಿದೆ ಅಂತ್ಯಕ್ರಿಯೆ: ಎಸ್.ಎಂ. ಕೃಷ್ಣ ಅವರ ಅಂತ್ಯಕ್ರಿಯೆಗಾಗಿ ರೈತ ದೇವರಾಜು ಅವರು ಶ್ರೀಗಂಧದ ತುಂಡು ತಂದಿದ್ದಾರೆ. ಮದ್ದೂರು ತಾಲೂಕಿನ ಡಿ.ಹೊಸೂರು ಗ್ರಾಮದ ದೇವರಾಜು ಅವರು ತಾನೇ ಬೆಳೆದ ಶ್ರೀಗಂಧದ ಮರದ ತುಂಡು ತಂದು ಚಿತೆಗೆ ಹಾಕಿ ಸುಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಕಾರಣ ರಾಜ್ಯದಲ್ಲಿ ರೈತರು ಕೂಡ ಶ್ರೀಗಂಧ ಬೆಳೆಯನ್ನು ಬೆಳೆಯಲು ಅವಕಾಶ ನೀಡಿದ್ದು ಎಸ್.ಎಂ.ಕೃಷ್ಣ ಅವರೇ. ಕೃಷ್ಣ ಅವರ ಯೋಜನೆಯಿಂದ ನಾನು ಗಂಧ ಬೆಳೆದಿದ್ದೆ. ನಾನು ಬೆಳೆದ ಗಂಧವನ್ನು ಅವರ ಚಿತೆಗೆ ಸಮರ್ಪಣೆ ಮಾಡಲು ಬಂದಿದ್ದೇನೆ. ಎಸ್.ಎಂ. ಕೃಷ್ಣ ಅವರು ನನ್ನ ತಂದೆಯೊಂದಿಗೆ ಉತ್ತಮ ಒಡನಾಟ ಹೊಂದಿದ್ದರು ಎಂದು ರೈತ ದೇವರಾಜು ಹೇಳಿದರು.