Mar 4, 2022, 10:49 PM IST
ಬೆಂಗಳೂರು (ಮಾ.4): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಶುಕ್ರವಾರ 2022-23ರ ಸಾಲಿನ ರಾಜ್ಯ ಬಜೆಟ್ (Karnataka Budget) ಮಂಡನೆ ಮಾಡಿದ್ದಾರೆ. ನೀರಾವರಿ (Irrigation) ಹಾಗೂ ಕೃಷಿ ಕ್ಷೇತ್ರಕ್ಕೆ (Agriculture) ನೀಡಿರುವ ಕೊಡುಗೆಗಳ ಬಗ್ಗೆ ತಜ್ಞರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದರಲ್ಲಿ ರಾಜ್ಯ ಸರ್ಕಾರ ಮೇಕೆದಾಟು ಯೋಜನೆಗೆ 1 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿರುವುದನ್ನು ವಿರೋಧ ಪಕ್ಷ ಕಾಂಗ್ರೆಸ್ ಕೂಡ ಸ್ವಾಗತಿಸಿದೆ.
ಮಹದಾಯಿ ವಿಚಾರದಲ್ಲಿ ಸರ್ಕಾರ ಈಗಾಗಲೇ ಸಾಕಷ್ಟು ಹಣ ಮೀಸಲಿಟ್ಟಿದ್ದರೂ ಈ ಕುರಿತಾಗಿ ಈವರೆಗೂ ಯಾವುದೇ ಕೆಲಸವಾಗಿಲ್ಲ. ಇನ್ನು ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ ಮಾಡುತ್ತಿರುವುದು ಅಪ್ಪಟ ರಾಜಕೀಯ ಎಂದು ಹೇಳಿದೆ. ಮೇಕೆದಾಟು ಯೋಜನೆಗೆ ಪರಿಸರ ಸಚಿವಾಲಯದ ಅನುಮತಿ ಬೇಕಿದೆ. ಈ ಅನುಮತಿ ಪಡೆಯುವ ನಿಟ್ಟಿನಲ್ಲಿ ಸರ್ಕಾರ ಈವರೆಗೂ ಯಾವ ಪ್ರಯತ್ನವನ್ನು ಮಾಡಿದೆ. ರಾಜ್ಯಕ್ಕೆ ಅನುಮತಿ ನೀಡಲು ಕೇಂದ್ರಕ್ಕೆ ಇರುವ ಸಮಸ್ಯೆಯಾದರೂ ಏನು? ಎಂದು ತಜ್ಞರು ಪ್ರಶ್ನಿಸಿದ್ದಾರೆ. ತಮಿಳುನಾಡು ರಾಜಕಾರಣವನ್ನು ತಮ್ಮ ಮರ್ಜಿಗೆ ತಕ್ಕಂತೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಎರಡೂ ರಾಜಕೀಯ ಪಕ್ಷಗಳು ಪ್ರಯತ್ನ ಮಾಡುತ್ತಿವೆ ಎಂದು ಹೇಳಿದ್ದಾರೆ.
ಈ ವರ್ಷ ಒಟ್ಟು 2.60 ಲಕ್ಷ ಕೋಟಿ ರೂಪಾಯಿಯ ಬಜೆಟ್ ಅನ್ನು ಬಸವರಾಜ ಬೊಮ್ಮಾಯಿ ಮಂಡನೆ ಮಾಡಿದ್ದಾರೆ. ಎಲ್ಲಾ ದಿಕ್ಕುಗಳಲ್ಲೂ, ಎಲ್ಲಾ ವಿಚಾರಗಳನ್ನು ತಲುಪಿರುವ ಬಜೆಟ್ ಇದಾಗಿದೆ ಎಂದು ಹೇಳಬಹುದಷ್ಟೇ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.