ಕಾಂಗ್ರೆಸ್​ ಸರ್ಕಾರಕ್ಕೂ ಕಮಿಷನ್ ಕಳಂಕ: ಸರ್ಕಾರದ ವಿರುದ್ಧ ಸಿಡಿದೆದ್ದ ಗುತ್ತಿಗೆದಾರರ ಸಂಘ

Jan 14, 2025, 11:40 AM IST

ಬೆಂಗಳೂರು(ಜ.14): ಬಾಕಿ ಬಿಲ್​​ಗಾಗಿ ಗುತ್ತಿಗೆದಾರರ ಸಂಘ ಪತ್ರ ಸಮರಕ್ಕಿಳಿದಿದೆ. ಹಣ ಬಿಡುಗಡೆಗೆ 7 ದಿನಗಳ ಡೆಡ್​​ಲೈನ್​ ನೀಡಿದೆ. ಇನ್ನು ಕಾಂಗ್ರೆಸ್​ ಸರ್ಕಾರಕ್ಕೂ ಕಮಿಷನ್ ಕಳಂಕ ಅಂಟಿಕೊಂಡಿದೆ. 

ಅನುದಾನ ಬಿಡುಗಡೆಗೆ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಮತ್ತೊಂದೆಡೆ ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘ ನಿರ್ಣಾಯಕ ಹೋರಾಟಕ್ಕೆ ಮುನ್ನಡಿ ಬರೆದಿದೆ. ಬಾಕಿ ಬಿಲ್​ ಬಿಡುಗಡೆಗಾಗಿ ಪತ್ರ ಸಮರದ ಕಹಳೆ ಮೊಳಗಿಸಿದೆ. ಬಾಕಿ ಬಿಲ್ ಬಗ್ಗೆ ಗಮನಕ್ಕೆ ತಂದರೂ ಕ್ರಮ ಆಗಿಲ್ಲವೆಂದು ಗುತ್ತಿಗೆದಾರರು ಆಕ್ರೋಶ ಹೊರಹಾಕಿದ್ದಾರೆ. ಸರ್ಕಾರದ ಸಪ್ತ ಸಚಿವರಿಗೆ ಪತ್ರ ಬರೆದಿರೋ ಗುತ್ತಿಗೆದಾರರ ಸಂಘ ಬಿಲ್​ ಬಿಡುಗಡೆಗಾಗಿ 7 ದಿನಗಳ ಡೆಡ್​ಲೈನ್​ ನೀಡಿದೆ. 7 ದಿನದೊಳಗೆ ಸಭೆ ಕರೆದು ನ್ಯಾಯ ಒದಗಿಸಬೇಕು. ಇಲ್ಲವಾದ್ರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತೆ ಅಂತಾ ಎಚ್ಚರಿಸಿದೆ. 

ಮೈ ಝುಂ ಎನ್ನಿಸೋ ಜಾದೂಗಳ ಹಿಂದಿರೋ ಗುಟ್ಟೆಲ್ಲಾ ರಟ್ಟು: ನೀವು ಮಾಡ್ಬೋದು ಸಖತ್ ಮ್ಯಾಜಿಕ್

ಜಲಸಂಪನ್ಮೂಲ, ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರೋ ಡಿಸಿಎಂ ಡಿಕೆ ಶಿವಕುಮಾರ್​,  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್​ ಖರ್ಗೆ, ವಸತಿ ಸಚಿವ ಜಮೀರ್ ಅಹ್ಮದ್, ಸಣ್ಣ ನೀರಾವರಿ ಸಚಿವ ಎನ್​.ಎಸ್ ಬೋಸರಾಜುಗೆ ಪತ್ರ ಬರೆಯಲಾಗಿದೆ. ಹಾಗೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್​ ಗುಂಡೂರಾವ್​, ಸಮಾಜ ಕಲ್ಯಾಣ ಸಚಿವ ಎಚ್​.ಸಿ ಮಹದೇವಪ್ಪ, ಪೌರಾಡಳಿತ ಸಚಿವ ರಹೀಂ ಖಾನ್​​ಗೂ ಗುತ್ತಿಗೆದಾರರ ಸಂಘ ಪತ್ರ ಬರೆದಿದೆ

ಬಾಕಿ ಬಿಲ್​ಗಾಗಿ ಜಟಾಪಟಿಗಿಳಿದಿರೋ ಗುತ್ತಿಗೆದಾರರ ಸಂಘ ಸರ್ಕಾರದ ವಿರುದ್ಧ ಕಮಿಷನ್​ ಆರೋಪವನ್ನೂ ಮಾಡಿದೆ. 32 ಸಾವಿರ ಕೋಟಿ ಬಾಕಿ ಹಣ ಬರಬೇಕಿದೆ. ಒಡವೆ ಮಾರಾಟ ಮಾಡಿ ಕಾಂಟ್ರಾಕ್ಟ್ ಕೆಲಸ ಮಾಡಿದ್ದೇವೆ. ಹಣ ಬಿಡುಗಡೆಯಾಗದಿದ್ರೆ ನಮ್ಮ ಗತಿಯೇನು? ಗುತ್ತಿಗೆ ನೀಡಲು ಶಾಸಕರು ಶೇ. 15ರಷ್ಟು ಕಮಿಷನ್ ನೇರವಾಗಿ ಕೇಳುತ್ತಿದ್ದಾರೆ ಅಂತಾ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಗನ್ನಾಥ್​ ಗಂಭೀರ ಆರೋಪ ಮಾಡಿದ್ದಾರೆ. 

ಮೈಸೂರಿನ ಫಾರ್ಮ್​ಹೌಸ್​ನಲ್ಲಿ ಸುಗ್ಗಿ ಸಂಭ್ರಮ: ಕಿಚ್ಚು ಹಾಯಿಸಿ ಹೊಸದಾರಿ ಹಿಡಿಲು ದರ್ಶನ್ ಪ್ಲಾನ್

ಗುತ್ತಿಗೆದಾರರ ಬಾಕಿ ಬಿಲ್​ ಪಾವತಿ ವಿಚಾರವಾಗಿ ಕಾಂಗ್ರೆಸ್​-ಬಿಜೆಪಿ ನಾಯಕರ ಮಧ್ಯೆ ವಾಗ್ಯುದ್ಧ ಜೋರಾಗಿದೆ. ಬಿಜೆಪಿ ತನ್ನ ಅವಧಿಯಲ್ಲಿ ಅನುದಾನವಿಲ್ಲದಿದ್ರೂ ಕಾಮಗಾರಿ ಮಾಡಿದೆ. ಸಾಲ ಮಾಡಿ ತುಪ್ಪ ತಿಂದಿದೆ ಅಂತಾ ಸಚಿವ ಪ್ರಿಯಾಂಕ್​ ಖರ್ಗೆ ಚಾಟಿ ಬೀಸಿದ್ರೆ, ಬಿಲ್​ ಬಿಡುಗಡೆಗೆ ಸರ್ಕಾರದ ಬಳಿ ಹಣವೇ ಇಲ್ಲ ಅಂತಾ ಮಾಜಿ ಸಚಿವ ಅಶ್ವತ್ಥ್​ ನಾರಾಯಣ್​ ವ್ಯಂಗ್ಯವಾಡಿದ್ದಾರೆ. 

ಬಾಕಿ ಬಿಲ್ ಬಿಡುಗಡೆ​ ಸರ್ಕಾರ ಹಾಗೂ ಗುತ್ತಿಗೆದಾರರ ನಡುವೆ ನಾ ಕೋಡೆ ನೀ ಬಿಡೆ ಎನ್ನುವಂತಾಗಿದೆ. 32 ಸಾವಿರ ಕೋಟಿ ಬಾಕಿ ಬಿಲ್​ಗಾಗಿ ಗುತ್ತಿಗೆದಾರರು ಲೆಟರ್​ ವಾರ್​ ಆರಂಭಿಸಿದ್ದಾರೆ. ಸಚಿವರ ಸ್ಪಂದಿಸದಿದ್ರೆ ಸಿಎಂಗೆ, ಸಿಎಂ ಸ್ಪಂದಿಸದಿದ್ರೆ ಪ್ರಧಾನಿಗೂ ಪತ್ರ ಬರೆಯುವುದಾಗಿ ಹೇಳಿದ್ದಾರೆ. ಸಾಲು ಸಾಲು ಹಗರಣಗಳಿಂದ ಕುಂದಿದ್ದ ಸರ್ಕಾರದ ವರ್ಚಸ್ಸಿಗೆ ಸದ್ಯ ಬಿಲ್ ಬಾಕಿ ಹಾಗೂ ಕಮಿಷನ್ ಆರೋಪ ಮತ್ತಷ್ಟು ಪೆಟ್ಟು ನೀಡಿವೆ.