ಬಿಬಿಎಂಪಿ ಚುನಾವಣೆ: 243 ವಾರ್ಡ್ ಮೀಸಲಾತಿ ಕರಡುಪಟ್ಟಿಗೆ ಹೆಚ್ಚಿದ ವಿರೋಧ

Aug 10, 2022, 10:07 AM IST

ಬೆಂಗಳೂರು (ಆ.10): ರಾಜ್ಯ ಸರ್ಕಾರ ಅಗಸ್ಟ್‌ 3ರಂದು ಪ್ರಕಟಿಸಿದ್ದ ಬಿಬಿಎಂಪಿ ಮೀಸಲಾತಿ ಕರಡು ಪಟ್ಟಿಗೆ ಆಕ್ಷೇಪಣೆ ಸಲ್ಲಿಸುವ ಅವಧಿ ಇಂದಿಗೆ ಪೂರ್ಣಗೊಳ್ಳಲಿದೆ. ಈವರೆಗೆ 2 ಸಾವಿರಕ್ಕೂ ಅಧಿಕ ಆಕ್ಷೇಪಣೆ ಸಲ್ಲಿಕೆಯಾಗಿವೆ ಎಂದು ತಿಳಿದು ಬಂದಿದೆ.

ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಕೆಯಾಗಿರುವ ಆಕ್ಷೇಪಣೆಗಳನ್ನು ಗುರುವಾರದಿಂದ ಪರಿಶೀಲನಾ ಕಾರ್ಯ ಮಾಡಲಾಗುತ್ತದೆ. ಅಗತ್ಯವಿದ್ದರೆ, ಆಕ್ಷೇಪಣೆ ಸಮರ್ಥನೀಯವಾಗಿದ್ದರೆ ಮೀಸಲಾತಿಯನ್ನು ಬದಲಿಸಲಾಗುತ್ತದೆ. ಒಂದು ವಾರದೊಳಗೆ ಈ ಕಾರ್ಯ ಪೂರ್ಣಗೊಳ್ಳಲಿದ್ದು, ಅದಾದ ನಂತರ ಅಂತಿಮ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಜತೆಗೆ ಚುನಾವಣಾ ಆಯೋಗಕ್ಕೆ ಅಂತಿಮ ಮೀಸಲಾತಿ ಪಟ್ಟಿಸಲ್ಲಿಸಲಾಗುತ್ತದೆ.

ಸುಪ್ರೀಂಕೋರ್ಚ್‌ನಲ್ಲಿ ಆ.26ರಂದು ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದ ಅರ್ಜಿ ವಿಚಾರಣೆ ಬರಲಿದೆ. ಅಷ್ಟರೊಳಗೆ ಚುನಾವಣಾ ಆಯೋಗಕ್ಕೆ ರಾಜ್ಯ ಸರ್ಕಾರ ಮೀಸಲಾತಿ ಅಂತಿಮ ಪಟ್ಟಿಸಲ್ಲಿಸಿ ಮುಂದಿನ ಪ್ರಕ್ರಿಯೆಗೆ ಅನುಕೂಲವಾಗುವಂತೆ ಮಾಡಬೇಕಿದೆ.